ರಾಜ್ಯದಲ್ಲಿ ಹುಕ್ಕಾ ಬಳಕೆ ಮತ್ತು ಮಾರಾಟ ಸಂಪೂರ್ಣ ನಿಷೇಧ
x
ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ (Photo: x/dineshgrao)

ರಾಜ್ಯದಲ್ಲಿ ಹುಕ್ಕಾ ಬಳಕೆ ಮತ್ತು ಮಾರಾಟ ಸಂಪೂರ್ಣ ನಿಷೇಧ

ಜನರ ಆರೋಗ್ಯವನ್ನು ಕಾಪಾಡಲು ಮತ್ತು ತಂಬಾಕು ಸಂಬಂಧಿತ ರೋಗಗಳನ್ನು ತಡೆಗಟ್ಟಲು ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲಾ ರೀತಿಯ ಹುಕ್ಕಾ ಬಳಕೆ ಮತ್ತು ಮಾರಾಟವನ್ನು ಕರ್ನಾಟಕ ಸರ್ಕಾರ ನಿಷೇಧಿಸಿದೆ.


ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಮತ್ತು ತಂಬಾಕು ರಹಿತ ಹುಕ್ಕಾ ಬಳಕೆ ಮತ್ತು ಮಾರಾಟವನ್ನು ಸಂಪೂರ್ಣ ನಿಷೇಧಿಸಿ ಕರ್ನಾಟಕ ಸರ್ಕಾರ ಗುರುವಾರ ಆದೇಶ ಹೊರಡಿಸಿದೆ.

ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಈ ಆದೇಶ ಹೊರಡಿಸಿದ್ದು, ತನ್ನ ಜನರ ಆರೋಗ್ಯದ ಕಾಳಜಿ ವಹಿಸುವುದು ಮತ್ತು ಆರೋಗ್ಯದ ಅಪಾಯಗಳನ್ನು ತೊಡೆದುಹಾಕುವ ಜವಾಬ್ದಾರಿಯನ್ನು ರಾಜ್ಯವು ಹೊಂದಿದೆ. ಆ ನಿಟ್ಟಿನಲ್ಲಿ ಈ ನಿಷೇಧ ಕ್ರಮ ಜರುಗಿಸಲಾಗಿದೆ ಎಂದು ಹೇಳಿದ್ದಾರೆ.

"ಹೋಟೆಲ್‌, ರೆಸ್ಟೋರೆಂಟ್‌, ಪಬ್‌, ಬಾರ್‌, ಲಾಂಜ್‌, ಕೆಫೆ, ಕ್ಲಬ್‌ ಮೊದಲಾದ ಸಂಸ್ಥೆಗಳಲ್ಲಿ ಹುಕ್ಕಾ ಬಳಕೆ, ಮಾರಾಟ ಮತ್ತು ಸೇವೆಯ ನಿಷೇಧವು ಯುವಜನರನ್ನು ಮಾದಕ ವ್ಯಸನ ಮತ್ತು ತಂಬಾಕಿನ ಹಾನಿಕಾರಕ ಪರಿಣಾಮಗಳಿಂದ ರಕ್ಷಿಸುವಲ್ಲಿ ನಿರ್ಣಾಯಕ ಹೆಜ್ಜೆಯಾಗಿದೆ" ಎಂದು ಆರೋಗ್ಯ ಸಚಿವರ ಕಚೇರಿ ತಿಳಿಸಿದೆ.

WHO ಎಚ್ಚರಿಕೆ

ವಿಶ್ವ ಆರೋಗ್ಯ ಸಂಸ್ಥೆ- WHO ಗ್ಲೋಬಲ್ ಅಡಲ್ಟ್ ಟೊಬ್ಯಾಕೊ ಸಮೀಕ್ಷೆ-2016-17 (GATS-2)ರಲ್ಲಿ ನೀಡಿದ ʼಕಳವಳಕಾರಿ ದತ್ತಾಂಶʼವನ್ನು ಗಮನದಲ್ಲಿಟ್ಟುಕೊಂಡು ಈ ಕ್ರಮವನ್ನು ಅನುಸರಿಸಲಾಗಿದೆ. ಕರ್ನಾಟಕದಲ್ಲಿ 22.8 ರಷ್ಟು ವಯಸ್ಕರು ತಂಬಾಕು ಬಳಸುತ್ತಿದ್ದು, ಅವರಲ್ಲಿ ಶೇಕಡಾ 8.8 ರಷ್ಟು ಮಂದಿ ಧೂಮಪಾನಿಗಳು ಎಂದು ಸಮೀಕ್ಷೆ ಹೇಳಿತ್ತು.

23.9 ರಷ್ಟು ವಯಸ್ಕರು ಸಾರ್ವಜನಿಕ ಸ್ಥಳಗಳಲ್ಲಿ ಸೆಕೆಂಡ್ ಹ್ಯಾಂಡ್ ಹೊಗೆಗೆ ಒಡ್ಡಿಕೊಳ್ಳುತ್ತಾರೆ ಎಂದು ವರದಿ ಹೇಳಿದ್ದು, ಇದು ರಾಜ್ಯದಲ್ಲಿ ತಂಬಾಕು ಸೇವನೆಯ ವ್ಯಾಪಕ ಅಪಾಯದ ಕಡೆಗೆ ಬೊಟ್ಟು ಮಾಡಿದೆ. ಇದಲ್ಲದೆ, ತಂಬಾಕು ಆಧಾರಿತ ಶಿಶಾ ಮತ್ತು ʼಹರ್ಬಲ್ʼ ಶಿಶಾ ಎರಡೂ ವಿಷಕಾರಿ ಹೊಗೆಯನ್ನು ಹೊರಸೂಸುತ್ತವೆ, ಇದು ಕ್ಯಾನ್ಸರ್, ಹೃದ್ರೋಗ ಮತ್ತು ಶ್ವಾಸಕೋಶದ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತವೆ ಎಂದು ಸಂಶೋಧನೆ ತೋರಿಸಿದೆ.

35-69 ವರ್ಷ ವಯಸ್ಸಿನ ವ್ಯಕ್ತಿಗಳಲ್ಲಿ ತಂಬಾಕು ಸಂಬಂಧಿತ ಕಾಯಿಲೆಗಳಿಂದಾಗಿ ಕರ್ನಾಟಕವು 2011 ರಲ್ಲಿ 983 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ, ಇದು ತಂಬಾಕು ತಡೆಗಟ್ಟುವ ಕ್ರಮಗಳ ತುರ್ತು ಅಗತ್ಯವನ್ನು ಎತ್ತಿ ತೋರಿಸುತ್ತದೆ ಎಂದು ಸಚಿವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಹುಕ್ಕಾ ಹೊಗೆಯು ನಿಕೋಟಿನ್, ಟಾರ್ ಮತ್ತು ಹೆವಿ ಮೆಟಲ್‌ಗಳನ್ನು ಒಳಗೊಂಡಂತೆ ಅದೇ ರೀತಿಯ ಹಾನಿಕಾರಕ ವಸ್ತುಗಳನ್ನು ಒಳಗೊಂಡಿದೆ ಎಂದು ಹೇಳಿಕೆ ತಿಳಿಸಿದೆ.

Read More
Next Story