
'ವಿಬಿ ಜಿ ರಾಮ್ ಜಿ' ಕಾಯ್ದೆಯ ಕುರಿತು ಚರ್ಚಿಸಲು ಕರ್ನಾಟಕ ವಿಧಾನ ಮಂಡಲದ ಅಧಿವೇಶನವನ್ನು ಫೆಬ್ರವರಿ 3ರವರೆಗೆ ವಿಸ್ತರಿಸಲಾಗಿದೆ.
ನರೇಗಾ ಚರ್ಚೆಗಾಗಿ ಅಧಿವೇಶನ ಫೆ.3ರವರೆಗೆ ವಿಸ್ತರಣೆ
ಮನರೇಗಾ ಬದಲಿಗೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ 'ವಿಬಿ ಜಿ ರಾಮ್ ಜಿ' ಕಾಯ್ದೆಯ ಕುರಿತು ಚರ್ಚಿಸಲು ಕರ್ನಾಟಕ ವಿಧಾನ ಮಂಡಲದ ಅಧಿವೇಶನವನ್ನು ಫೆಬ್ರವರಿ 3ರವರೆಗೆ ವಿಸ್ತರಿಸಲಾಗಿದೆ.
ರಾಜ್ಯ ವಿಧಾನ ಮಂಡಲದ ಅಧಿವೇಶನವನ್ನು ಫೆಬ್ರವರಿ 3ರವರೆಗೆ ವಿಸ್ತರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಬುಧವಾರ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಈ ಕುರಿತು ಸುದೀರ್ಘ ಚರ್ಚೆ ನಡೆದಿದ್ದು, ಅಂತಿಮವಾಗಿ ಅಧಿವೇಶನವನ್ನು ಎರಡು ದಿನಗಳ ಕಾಲ ವಿಸ್ತರಿಸಲು ತೀರ್ಮಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಕೇಂದ್ರ ಸರ್ಕಾರವು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ಮನರೇಗಾ) ಕಾಯ್ದೆಯ ಬದಲಿಗೆ ಜಾರಿಗೆ ತಂದಿರುವ ಹೊಸ 'ವಿಬಿ ಜಿ ರಾಮ್ ಜಿ'ಕಾಯ್ದೆಯ ಕುರಿತು ಅಧಿವೇಶನದಲ್ಲಿ ಸಮಗ್ರ ಚರ್ಚೆ ನಡೆಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.
ಈ ಹೊಸ ಕಾಯ್ದೆಯ ಬಗ್ಗೆ ಸಭೆಯಲ್ಲಿ ವಿವರಣೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಈ ವಿಷಯದ ಕುರಿತು ವಿಶೇಷವಾಗಿ ಚರ್ಚಿಸಲು ಅಧಿವೇಶನವನ್ನು ಸೋಮವಾರ ಮತ್ತು ಮಂಗಳವಾರದವರೆಗೆ ವಿಸ್ತರಿಸಲಾಗುವುದು ಎಂದು ತಿಳಿಸಿದ್ದಾರೆ. ನರೇಗಾ ವಿಷಯಕ್ಕಾಗಿಯೇ ಈ ವಿಶೇಷ ಅಧಿವೇಶನ ಕರೆಯಲಾಗಿತ್ತು, ಆದರೆ ಈವರೆಗೆ ಸಮರ್ಪಕ ಚರ್ಚೆಗೆ ಅವಕಾಶ ಸಿಕ್ಕಿಲ್ಲ. ಹೀಗಾಗಿ ಎರಡು ದಿನಗಳ ಕಾಲ ಈ ಬಗ್ಗೆ ಚರ್ಚಿಸಿ, ಸದನದಲ್ಲಿ ಕಾಯ್ದೆಯ ವಿರುದ್ಧ ನಿರ್ಣಯ ಕೈಗೊಂಡು ಕೇಂದ್ರಕ್ಕೆ ಕಳುಹಿಸಲಾಗುವುದು. ಕಾಂಗ್ರೆಸ್‌ನ ಎಲ್ಲಾ ಶಾಸಕರು ಈ ಚರ್ಚೆಯಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕೆಂದು ಸಭೆಯಲ್ಲಿ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಸಚಿವರ ಗೈರುಹಾಜರಿಗೆ ಸಿಎಂ ಅಸಮಾಧಾನ
ಇದೇ ಸಭೆಯಲ್ಲಿ ಅಧಿವೇಶನದ ವೇಳೆ ಸಚಿವರು ಸದನಕ್ಕೆ ಗೈರಾಗುತ್ತಿರುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. "ಸಚಿವರು ಸದನದಲ್ಲಿ ಇರುವುದಿಲ್ಲ ಎಂಬ ಬಗ್ಗೆ ಪ್ರತಿಪಕ್ಷಗಳು ಟೀಕೆ ಮಾಡುತ್ತಿವೆ. ಅಧಿವೇಶನ ನಡೆಯುವ ಸಂದರ್ಭದಲ್ಲಿ ಸಚಿವರು ಯಾವುದೇ ಅಧಿಕೃತ ಸಭೆಗಳನ್ನು ನಡೆಸಬಾರದು ಮತ್ತು ಕಡ್ಡಾಯವಾಗಿ ಸದನದಲ್ಲಿ ಹಾಜರಿರಬೇಕು," ಎಂದು ಅವರು ಸಚಿವರಿಗೆ ತಾಕೀತು ಮಾಡಿದ್ದಾರೆ.
ಇನ್ಸ್‌ಪೆಕ್ಟರ್‌ಗಳ ವರ್ಗಾವಣೆ ವಿಳಂಬಕ್ಕೆ ಶಾಸಕರ ಆಕ್ಷೇಪ
ಇನ್ನೊಂದೆಡೆ, ಪೊಲೀಸ್ ಇನ್ಸ್‌ಪೆಕ್ಟರ್‌ಗಳ ವರ್ಗಾವಣೆ ಪ್ರಕ್ರಿಯೆ ವಿಳಂಬವಾಗುತ್ತಿರುವ ಬಗ್ಗೆ ಹಲವು ಶಾಸಕರು ಸಭೆಯಲ್ಲಿ ಅಸಮಾಧಾನ ಹೊರಹಾಕಿದ್ದಾರೆ. ವರ್ಗಾವಣೆಗಾಗಿ ಮನವಿ ಪತ್ರ ನೀಡಿ ತಿಂಗಳುಗಳೇ ಕಳೆದಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಎರಡು ವರ್ಷಗಳ ಅವಧಿ ಮುಗಿದರೂ ಅಧಿಕಾರಿಗಳು ಒಂದೇ ಸ್ಥಳದಲ್ಲಿ ಮುಂದುವರಿಯುತ್ತಿದ್ದಾರೆ. ಆದ್ದರಿಂದ ವರ್ಗಾವಣೆ ಅವಧಿಯನ್ನು ಒಂದು ವರ್ಷಕ್ಕೆ ಸೀಮಿತಗೊಳಿಸಬೇಕು ಮತ್ತು ಬಾಕಿ ಇರುವ ವರ್ಗಾವಣೆಗಳನ್ನು ಶೀಘ್ರವಾಗಿ ಮಾಡಬೇಕು ಎಂದು ಶಾಸಕರು ಒತ್ತಾಯಿಸಿದ್ದಾರೆ ಎಂದು ತಿಳಿದುಬಂದಿದೆ.

