Railways Merger | ಭಾರತೀಯ ರೈಲ್ವೆಯೊಂದಿಗೆ ಕೊಂಕಣ ರೈಲ್ವೆ ವಿಲೀನಕ್ಕೆ ಕರ್ನಾಟಕ ಒಪ್ಪಿಗೆ
756 ಕಿ.ಮೀ.ಉದ್ದದ ರೈಲು ಮಾರ್ಗದ ಕೊಂಕಣ ರೈಲ್ವೆಯು ಮಹಾರಾಷ್ಟ್ರ, ಗೋವಾ, ಕೇರಳ ಹಾಗೂ ಕರ್ನಾಟಕ ನಡುವೆ ಸಂಪರ್ಕ ಸಾಧಿಸಿದ್ದು, ಇಲ್ಲಿಯವರೆಗೆ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿದೆ.
ಕೇಂದ್ರ ಸರ್ಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೊಂಕಣ ರೈಲ್ವೆ ಇದೀಗ ಭಾರತೀಯ ರೈಲ್ವೆಯೊಂದಿಗೆ ವಿಲೀನವಾಗಲು ಸಜ್ಜಾಗಿದೆ. ಕೊಂಕಣ ರೈಲ್ವೆಯನ್ನು ಆಧುನೀಕರಣಗೊಳಿಸಿ ಲಾಭದತ್ತ ಮುನ್ನಡೆಸುವ ಸಲುವಾಗಿ ಭಾರತೀಯ ರೈಲ್ವೆಯೊಂದಿಗೆ ವಿಲೀನಗೊಳಿಸಲು ಕರ್ನಾಟಕ ತಾತ್ವಿಕ ಒಪ್ಪಿಗೆ ನೀಡಿದೆ. ಕೊಂಕಣ ರೈಲ್ವೆ ನಿಗಮದಲ್ಲಿ ಕರ್ನಾಟಕ ಸರ್ಕಾರ ಶೇ.12.74 ರಷ್ಟು ಷೇರು ಹೊಂದಿದೆ.
756 ಕಿ.ಮೀ.ಉದ್ದದ ರೈಲು ಮಾರ್ಗದ ಕೊಂಕಣ ರೈಲ್ವೆಯು ಮಹಾರಾಷ್ಟ್ರ, ಗೋವಾ, ಕೇರಳ ಹಾಗೂ ಕರ್ನಾಟಕ ನಡುವೆ ಸಂಪರ್ಕ ಸಾಧಿಸಿದ್ದು, ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿದೆ. ಕೊಂಕಣ ರೈಲ್ವೆಯು 25 ವರ್ಷಗಳಷ್ಟು ಹಳೆಯ ವ್ಯವಸ್ಥೆ ಹೊಂದಿದ್ದು, ಆಧುನೀಕರಣದ ಅವಶ್ಯಕತೆ ಇರುವ ಕಾರಣ ಭಾರತೀಯ ರೈಲ್ವೆಯೊಂದಿಗೆ ವಿಲೀನಗೊಳಿಸಲು ತೀರ್ಮಾನಿಸಲಾಗಿದೆ.
ಕೊಂಕಣ ರೈಲ್ವೆ ಬೇಡಿಕೆ ಏನು?
ಕೊಂಕಣ ರೈಲ್ವೆಯನ್ನು ಆಧುನೀಕರಣ ಹಾಗೂ ಲಾಭದತ್ತ ಕೊಂಡೊಯ್ಯಲು 15 ವರ್ಷಗಳಿಗೆ 9,158 ಕೋಟಿ ರೂ. ಅಗತ್ಯವಿದೆ. ರಾಜ್ಯಗಳು ತಮ್ಮ ಪಾಲಿನ ಅನುದಾನ ನೀಡಬೇಕು. ಒಂದು ವೇಳೆ ಅನುದಾನ ನೀಡಲು ಆಗದಿದ್ದರೆ ತಮ್ಮ ಪಾಲಿನ ಷೇರುಗಳನ್ನು ಭಾರತೀಯ ರೈಲ್ವೆ ಸಚಿವಾಲಯಕ್ಕೆ ಬಿಟ್ಟುಕೊಡುವ ಬಗ್ಗೆ ಪರಿಶೀಲನೆ ನಡೆಸಬೇಕು ಎಂದು ಕೊಂಕಣ ರೈಲ್ವೆ ನಿಗಮ ಕರ್ನಾಟಕ ಸರ್ಕಾರಕ್ಕೆ ಪತ್ರ ಬರೆದಿತ್ತು. ಈಗಾಗಲೇ ಕೊಂಕಣ ರೈಲ್ವೆ ವಿಲೀನಕ್ಕೆ ಗೋವಾ ಹೊರತುಪಡಿಸಿ ಬೇರೆ ರಾಜ್ಯಗಳು ಒಪ್ಪಿಗೆ ಸೂಚಿಸಿರಲಲಿಲ್ಲ.
ಕೊಂಕಣ ರೈಲ್ವೆ ವಿಲೀನಕ್ಕೆ ಒಪ್ಪಿಗೆ
ಕೊಂಕಣ ರೈಲ್ವೆ ನಿಗಮ ಬರೆದ ಪತ್ರ ಸಂಬಂಧ ರಾಜ್ಯ ಹಣಕಾಸು ಇಲಾಖೆಯು ಈಕ್ವಿಟಿ ಷೇರುಗಳನ್ನು ಹಿಂಪಡೆಯುವ ಹಾಗೂ ಕೊಂಕಣ ರೈಲ್ವೆ ನಿಗಮದಿಂದ ಹೊರಬರಲು ಇರುವ ಉತ್ತಮ ಆಯ್ಕೆಗಳ ಬಗ್ಗೆ ಪತ್ರ ಬರೆಯುವಂತೆ ಮೂಲಸೌಲಭ್ಯ ಅಭಿವೃದ್ಧಿ ಇಲಾಖೆಗೆ ಸೂಚಿಸಿದೆ. ಆ ಮೂಲಕ ಭಾರತೀಯ ರೈಲ್ವೆಯೊಂದಿಗೆ ವಿಲೀನಕ್ಕೆ ತಾತ್ವಿಕ ಒಪ್ಪಿಗೆ ಸೂಚಿಸಿದೆ. ಈ ಹಿಂದೆ ಕೊಂಕಣ ರೈಲ್ವೆ ವಿಲೀನಕ್ಕೆ ಕರ್ನಾಟಕ ಒಪ್ಪಿಗೆ ಸೂಚಿಸಿರಲಿಲ್ಲ. ಗೋವಾ ಸಮ್ಮತಿ ಬಳಿಕ ಈಗ ಕರ್ನಾಟಕ ಕೂಡ ವಿಲೀನಕ್ಕೆ ಒಪ್ಪಿಗೆ ಸೂಚಿಸಿದೆ.
ಕೊಂಕಣ ರೈಲ್ವೆ ನಿಗಮದಿಂದ ಹೊರಬಂದು ಭಾರತೀಯ ರೈಲ್ವೆಯಲ್ಲಿ ವಿಲೀನಗೊಳಿಸುವ ವಿಚಾರವಾಗಿ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ ಇತ್ತೀಚೆಗೆ ವಿಧಾನಸಭೆಯಲ್ಲಿ ಮಾಹಿತಿ ನೀಡಿದ್ದರು.
ವಿಲೀನಕ್ಕೆ ಗೋವಾದ ಒಪ್ಪಿಗೆ
ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೆಯೊಂದಿಗೆ ವಿಲೀನಗೊಳಿಸಲು ಗೋವಾ ಸರ್ಕಾರ ಕೂಡ ಒಪ್ಪಿಗೆ ಸೂಚಿಸಿದೆ ಎಂದು ತಿಳಿದುಬಂದಿದೆ.
ಈ ಕುರಿತಂತೆ ಪ್ರತಿಕ್ರಿಯಿಸಿರುವ ಬಿಜೆಪಿ ಶಾಸಕ ವಿ.ಸುನಿಲ್ ಕುಮಾರ್, ಕೊಂಕಣ ರೈಲ್ವೆಯನ್ನು ವಿಲೀನಗೊಳಿಸುವ ಸಂಬಂಧ ಗೋವಾ ಒಪ್ಪಿಗೆ ನೀಡಿದೆ. ನಾವು ಕೂಡ ವಿಲೀನಕ್ಕೆ ಇರುವ ಅಡೆ ತಡೆಗಳನ್ನು ನಿವಾರಿಸಬೇಕು ಎಂದು ಹೇಳಿದ್ದಾರೆ.
ಕೊಂಕಣ ರೈಲ್ವೆಯಲ್ಲಿ ರಾಜ್ಯಗಳ ಪಾಲು ಎಷ್ಟು?
ಕೊಂಕಣ ರೈಲ್ವೆ ನಿಗಮದಲ್ಲಿ ರೈಲ್ವೆ ಸಚಿವಾಲಯವು 1,679.82 ಕೋಟಿ ರೂ. ಮೌಲ್ಯದ ಶೇ 65.97 ಈಕ್ವಿಟಿ ಷೇರುಗಳನ್ನು ಹೊಂದಿದೆ. ಮಹಾರಾಷ್ಟ್ರ ಸರ್ಕಾರ 396.54 ಕೋಟಿ ರೂ. ಮೌಲ್ಯದ ಶೇ 18.68 ಷೇರುಗಳನ್ನು ಹೊಂದಿದೆ. ಕರ್ನಾಟಕ 270.36 ಕೋಟಿ ರೂ. ಮೌಲ್ಯದ ಶೇ 12.74 ಷೇರುಗಳನ್ನು ಹೊಂದಿದೆ. ಅದೇ ರೀತಿ ಕೇರಳ ಸರ್ಕಾರ 108.14 ಕೋಟಿ ರೂ. ಮೌಲ್ಯದ ಶೇ 5.10 ರಷ್ಟು ಷೇರುಗಳನ್ನು ಹೊಂದಿದೆ.
ಕೊಂಕಣಿ ರೈಲ್ವೆ ಇತಿಹಾಸ
ಕೊಂಕಣಿ ರೈಲ್ವೆಯು 1998ರಲ್ಲಿ ರಾಷ್ಟ್ರಕ್ಕೆ ಸಮರ್ಪಣೆಯಾಯಿತು. ಭಾರತೀಯ ರೈಲ್ವೆಯ 17 ವಲಯಗಳಲ್ಲಿ ಇದು ಕೂಡ ಒಂದು. ಆದರೆ ಇತರ ರೈಲ್ವೆ ವಲಯಗಳಂತೆ ವಿಭಾಗ ಹೊಂದಿಲ್ಲ. ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿದೆ. ಮಂಗಳೂರು-ಮುಂಬೈ ನಡುವೆ ಪ್ರಮುಖ ಸಂಪರ್ಕ ಸಾಧನವಾಗಿ ಕೆಲಸ ಮಾಡುತ್ತಿದೆ. ಕೊಂಕಣ ರೈಲ್ವೆಯಲ್ಲಿ ಒಟ್ಟು 2000 ಸೇತುವೆಗಳು, 91 ಸುರಂಗಗಳನ್ನು ಒಳಗೊಂಡಿದೆ.