ʻಘಟಶ್ರಾದ್ಧʼ ಚಿತ್ರಕಥೆಯನ್ನು ಕಾರ್ನಾಡ್‌ ತಿರಸ್ಕರಿಸಿದ್ದರು: ಗಿರೀಶ್‌ ಕಾಸರವಳ್ಳಿ
x
ಗಿರೀಶ್‌ ಕಾಸರವಳ್ಳಿ

ʻಘಟಶ್ರಾದ್ಧʼ ಚಿತ್ರಕಥೆಯನ್ನು ಕಾರ್ನಾಡ್‌ ತಿರಸ್ಕರಿಸಿದ್ದರು: ಗಿರೀಶ್‌ ಕಾಸರವಳ್ಳಿ

ಪುಣೆಯ Film and Television Institute of India (FTII) ನಲ್ಲಿ ಕಲಿಯುತ್ತಿದ್ದಾಗ, ಕಲಿಕೆಯ ಒಂದು ಭಾಗವಾಗಿ ಸಲ್ಲಿಸಬೇಕಾದ ಚಿತ್ರಕಥೆಗಾಗಿ ಗಿರೀಶ್‌ ಕಾಸರವಳ್ಳಿ ʻಘಟಶ್ರಾದ್ಧʼ ಚಿತ್ರಕಥೆಯನ್ನು ಸಲ್ಲಿಸಿದ್ದರು. ಆಗ FTIIನ ನಿರ್ದೇಶಕರಾಗಿದ್ದ ಕನ್ನಡದ ಖ್ಯಾತ ನಟ ನಿರ್ದೇಶಕ, ನಾಟಕಕಾರ ಗಿರೀಶ್‌ ಕಾರ್ನಾಡ್‌ ಆ ಚಿತ್ರಕಥೆಯನ್ನು ʻಗುಣಾತ್ಮಕʼ ಕಾರಣಕ್ಕಾಗಿ ತಿರಸ್ಕರಿಸಿದ್ದರು. ಈ ಕುರಿತ ಹಿನ್ನೆಲೆಯನ್ನು ಗಿರೀಶ್‌ ಕಾಸರವಳ್ಳಿʻದ ಫೆಡರಲ್-ಕರ್ನಾಟಕʼದೊಂದಿಗೆ ಹಂಚಿಕೊಂಡಿದ್ದಾರೆ.


Click the Play button to hear this message in audio format

ತಲೆಯ ಮೇಲೆ ದಟ್ಟವಾದ ತುಸು ಕಪ್ಪು ಹೆಚ್ಚು ಬಿಳುಪಿನ ಕೂದಲು ತಲೆಯೊಳಗೆ ಸದಾ ವಿಚಾರಗಳ ಸಂವಾದ, ಎದುರಿಗೆ ಕುಳಿತವರ ಕಣ್ಣಲ್ಲಿ ಕಣ್ಣಿಟ್ಟು ಪ್ರಶ್ನಿಸುವ ಕುತೂಹಲದ ಗಿರೀಶ್‌ ಒಂದು ರೀತಿಯಲ್ಲಿ ಅಂತರ್ಮುಖಿ. ಆದರೆ, ಸಿನಿಮಾ, ಸಾಹಿತ್ಯ, ನಾಟಕ ಮತ್ತು ಎಲ್ಲ ಸೃಜನಶೀಲ ಕಲೆಗಳ ಪ್ರಶ್ನೆಗಳೆದ್ದರೆ, ಒಂದು ರೀತಿ ರೊಚ್ಚಿಗೆದ್ದವರಂತೆ ಚರ್ಚಿಸುತ್ತಾ, ತಮ್ಮ ಅಭಿಪ್ರಾಯಗಳನ್ನು ಮಂಡಿಸುವ ಗಿರೀಶ್‌ ಅವರೊಂದಿಗೆ ಮಾತನಾಡುವುದೆಂದರೆ, ಒಂದು ಚಲನಚಿತ್ರ ವಿಶ್ವವಿದ್ಯಾಲಯದೊಂದಿಗೆ ಮಾತನಾಡಿದಂತೆ. ಗಿರೀಶ್‌ ಕಾಸರವಳ್ಳಿ ಅವರನ್ನು ಅವರಷ್ಟೇ ಕಲಾತ್ಮಕವಾದ ಅವರ ಮನೆಯಲ್ಲಿ ಭೇಟಿಯಾಗಿ ಮಾತನಾಡಿಸಿದರೆ, ಎಷ್ಟೋ ವರ್ಷದ ಹಳೆಯ ಗೆಳೆಯರನ್ನು ಭೇಟಿ ಮಾಡಿನ ಅನುಭವ. ಇತ್ತೀಚೆಗೆ ಗಿರೀಶ್‌ ʻದ ಫೆಡರಲ್‌- ಕರ್ನಾಟಕಕ್ಕಾಗಿ ಮಾತನಾಡಿದ್ದು. ನಮಗೆ ಸಿಕ್ಕ ಹೊಸ ಅನುಭವ. ಅವರ ಮಾತುಗಳ ನಡುವೆ ಬರುವ ಉಪಕತೆಗಳೇ ಹಲವು ಚಿತ್ರದ ವಸ್ತುಗಳೇನೋ ಎನ್ನಿಸಿಬಿಡುತ್ತದೆ. ಅವರೊಂದಿಗೆ ಮೂಲತಃ ಮಾತನಾಡಲು ಹೋಗಿದ್ದು, ಅವರ ನಿರ್ದೇಶಿಸುತ್ತಿರುವ ಅನಂತಮೂರ್ತಿ ಅವರ ʻಆಕಾಶ ಮತ್ತು ಬೆಕ್ಕುʼ ಕಥೆಯನ್ನಾಧರಿಸಿದ ಚಿತ್ರವನ್ನು ಕುರಿತು. ಆದರೆ ಮಾತು ಮಾತಿಗೆ ಮಥಿಸಿದಾಗ ದಕ್ಕಿದ್ದು ಈಗ ʻದ ಫೆಡರಲ್-ಕರ್ನಾಟಕʼದ ಓದುಗರ ಪಾಲಿಗೆ……

ಗಿರೀಶ್‌ ʻಆಕಾಶ ಮತ್ತು ಬೆಕ್ಕುʼ ಕಥೆಯನ್ನು ಆಯ್ಕೆ ಮಾಡಿಕೊಳ್ಳಲು ಕಾರಣ ಅದರ ವಿವರಗಳ ಚಿತ್ರಕ ಶಕ್ತಿ ಮತ್ತು ಅಂತರಾಳದಲ್ಲಿ ಅಡಗಿರುವ ಬದುಕಿನ ಅನಂತ-ಅಂತರಾಳದ ನೋಟವೆನ್ನುವುದು ಸುಳ್ಳಲ್ಲ.

ಕಾರ್ನಾಡ್‌ ತಿರಸ್ಕರಿಸಿದ ಚಿತ್ರಕಥೆ

ಪುಣೆಯ Film and Television Institute of India (FTII) ನಲ್ಲಿ ಕಲಿಯುತ್ತಿದ್ದಾಗ, ಕಲಿಕೆಯ ಒಂದು ಭಾಗವಾಗಿ ಸಲ್ಲಿಸಬೇಕಾದ ಚಿತ್ರಕಥೆಗಾಗಿ ಗಿರೀಶ್‌ ಕಾಸರವಳ್ಳಿ ʻಘಟಶ್ರಾದ್ಧʼ ಚಿತ್ರಕಥೆಯನ್ನು ಸಲ್ಲಿಸಿದ್ದರು. ಆಗ FTIIನ ನಿರ್ದೇಶಕರಾಗಿದ್ದ ಕನ್ನಡದ ಖ್ಯಾತ ನಟ ನಿರ್ದೇಶಕ, ನಾಟಕಕಾರ ಗಿರೀಶ್‌ ಕಾರ್ನಾಡ್‌ ಆ ಚಿತ್ರಕಥೆಯನ್ನು ʻಗುಣಾತ್ಮಕʼ ಕಾರಣಕ್ಕಾಗಿ ತಿರಸ್ಕರಿಸಿದ್ದರು. ಈ ಕುರಿತ ಹಿನ್ನೆಲೆಯನ್ನು ಗಿರೀಶ್‌ ಕಾಸರವಳ್ಳಿʻದ ಫೆಡರಲ್-ಕರ್ನಾಟಕʼದೊಂದಿಗೆ ಹಂಚಿಕೊಂಡಿದ್ದಾರೆ.

“ನಾನು ಆಗ ಎರಡು ʻಕೆʼ ಗಳ (ಗಿರೀಶ್‌ ಕಾರ್ನಾಡ್‌ ಮತ್ತು ಬಿ.ವಿ. ಕಾರಂತ) ಅವರ ನಡುವೆ ಸಿಕ್ಕು ಅಪ್ಪಚ್ಚಿಯಾಗಿಬಿಟ್ಟೆ” ಎಂದು ಗಿರೀಶ್‌ ಮುಗುಳ್ನಕ್ಕರು. ಕೇವಲ ಘಟಶ್ರಾದ್ಧ ಮಾತ್ರವಲ್ಲ. ಇನ್ಸ್ಟಿಟ್ಯೂಟ್‌ ನ ಕಲಿಕೆ ಚಿತ್ರವಾದ ʼಅವಶೇಷ್‌ʼ ಚಿತ್ರದ ಕಥೆಯ ಬಗ್ಗೆ ಕೂಡ ಗಿರೀಶ್‌ ಕಾರ್ನಾಡ್ ಗೆ ಅಸಮಾಧಾನವಿತ್ತು. ಕಾರಣ ಇಷ್ಟೆ: ಇನ್ಸ್ಟಿಟ್ಯೂಟ್‌ ನಲ್ಲಿ ಕಲಿಯುತ್ತಿರುವಾಗ ಬೇರೆ ಕೆಲಸ ಮಾಡುವುದು ಸಂಸ್ಥೆಯ ನಿಯಮಕ್ಕೆ ವಿರುದ್ಧವಾದದ್ದು. ಆದರೆ ಬಿ.ವಿ. ಕಾರಂತರ ಕರೆಯ ಮೇರೆಗೆ, ಆಗ ಅವರು ನಿರ್ದೇಶಿಸುತ್ತಿದ್ದ ʻಚೋಮನದುಡಿʼ ಚಿತ್ರಕ್ಕೆ ಸಹಾಯಕನಾಗಿ ತೆರಳಿದೆ. ಅದಕ್ಕೆ ಅನುಮತಿ ಪಡೆದಿರಲಿಲ್ಲ. ಶಿಸ್ತನ್ನು ಗೌರವಿಸುವ ಗಿರೀಶ್‌ ಕಾರ್ನಾಡ್‌ ಗೆ ಈ ನನ್ನ ವರ್ತನೆಯಿಂದ ಸಿಟ್ಟು ಬಂತೆಂದು ಕಾಣುತ್ತದೆ. ಅದರ ಪರಿಣಾಮ ಈ ಎರಡೂ ಚಿತ್ರ ಕಥೆಗಳ ತಿರಸ್ಕಾರ” ಎಂದು ಗಿರೀಶ್‌ ಕಾಸರವಳ್ಳಿ ನೆನಪಿಸಿಕೊಂಡರು. ಆದರೆ ಆ ಎರಡೂ ಚಿತ್ರಗಳಿಗೆ ನಂತರ ರಾಷ್ಟ್ರ ಪ್ರಶಸ್ತಿ ಬಂತು. ಆದರೆ, ಇನ್ಸ್ಟಿಟ್ಯೂಟ್‌ ನ ಕಲಿಕೆ ಚಿತ್ರವಾದ ʼಅವಶೇಷ್‌ʼ ಚಿತ್ರದ ಪ್ರಶಸ್ತಿಯನ್ನು ಅವರು ಸ್ವೀಕರಿಸಲು ಆಗಲೇ ಇಲ್ಲ. ಅಷ್ಟೇ ಅಲ್ಲ. FTII ನಲ್ಲಿ ಕಲಿತಾಗ ದೊರೆಯುವ Diploma ಪದವಿಯ ಪತ್ರವನ್ನು ಕಾಸರವಳ್ಳಿ ಪಡೆದುಕೊಳ್ಳಲಿಲ್ಲ. “ಅದು ಈಗಲೂ FTIIನಲ್ಲಿಯೇ ಇದೆ” ಎನ್ನುತ್ತಾರೆ ಗಿರೀಶ್.‌

ಮಾತು ಕತೆ ಮತ್ತೆ ʻಘಟಶ್ರಾದ್ಧʼದತ್ತ ತಿರುಗಿದಾಗ, ಕಲಕಿದ ಅವರ ಅವರ ಚಿತ್ತ ಮತ್ತೆ ಸ್ಥಿರವಾಯಿತು. “ನಾನು ಚಿಕ್ಕ ಹುಡುಗನಾಗಿದ್ದಾಗ ಓದಿದ ʻಘಟಶ್ರಾದ್ಧʼದ ಕಥೆ ನನ್ನನ್ನು ಬಹುವಾಗಿ ಕಲುಕಿತ್ತು. ಖ್ಯಾತ ಬರಹಗಾರ, ಲೇಖಕ, ನಾಟಕಕಾರ, ʻನೀನಾಸಂʼ ನ ಸ್ಥಾಪಕರಾಗಿದ್ದ ಕೆ.ವಿ. ಸುಬ್ಭಣ್ಣ ನನ್ನ ಚಿಕ್ಕಪ್ಪ. ಅವರಿಂದಲೇ ಕನ್ನಡ ಸಾಹಿತ್ಯ ಲೋಕಕ್ಕೆ ನನಗೆ ಪ್ರವೇಶ ಸಿಕ್ಕಿದ್ದು. ನಾನು ಫಾರ್ಮೆಸಿ ಕಲಿಯುತ್ತಿದ್ದಾಗ, ಪತ್ರಿಕೆಯಲ್ಲಿ FTII ಪ್ರವೇಶ ಕುರಿತಾದ ಜಾಹಿರಾತು ಬಂದಿತ್ತು. ನಾನು ಅರ್ಜಿ ಹಾಕಿದೆ. ನನಗೆ ಸೀಟು ಸಿಕ್ಕಿದ್ದು, ನನ್ನ ಬದುಕಿನ ಒಂದು ಮಹಾ ತಿರುವು. FTIIನಿಂದ ನನ್ನ ಲೋಕವೇ ಬದಲಾಯಿತು. ಗಿರೀಶ್‌ ಕಾರ್ನಾಡ್‌ ʻಘಟಶ್ರಾದ್ಧʼದ ಚಿತ್ರಕತೆಯನ್ನು ತಿರಸ್ಕರಿಸಿದ ಸಂದರ್ಭದಲ್ಲಿಯೇ, ಆಗಿನ ಬಾಂಬೆ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ನಡೆಯುತ್ತಿತ್ತು. ನಾನು ಅಲ್ಲಿ ಚಿತ್ರ ನೋಡಲು ಹೋಗಿದ್ದೆ. ಆಗ ತರಂಗ ವಾರ ಪತ್ರಿಕೆಯ ಸಂಪಾದಕರಾಗಿದ್ದ ಸಂತೋಷ್‌ ಕುಮಾರ್‌ ಗುಲ್ವಾಡಿಯವರು, ʼಯಾರೋ ಒಬ್ಬರು ನಿಮ್ಮನ್ನು ಹುಡುಕುತ್ತಿದ್ದಾರೆʼ ಎಂದರು. ಆಗ ನನ್ನ ಎದುರಾಗಿ ಕೈ ಕುಲುಕಿದವರು ಸದಾನಂದ ಸುವರ್ಣ. ಅವರಿಗೆ FTIIನ ವಿವರಗಳು ದಕ್ಕಿತ್ತು. ಅವರು ಚಿತ್ರಕತೆಯನ್ನು ಕೊಡುವಂತೆ ಕೇಳಿದರು. ಒಂದೇ ವಾರದಲ್ಲಿ ಆ ಚಿತ್ರವನ್ನು ತಾವು ನಿರ್ಮಿಸುವುದಾಗಿ ಹೇಳಿದರು. ನಂತರದ್ದು ಇತಿಹಾಸ” ಎಂದು ಮಾತಿನಿಂದ ದಣಿದ ಗಿರೀಶ್‌ ತುಸು ಬಿಡುವು ಕೇಳಿದರು.

ನಾನು ಅದೃಷ್ಟವಂತ

ಕನ್ನಡ ಚಿತ್ರರಂಗದ ಹೊಸ ಅಲೆಯ ಚಿತ್ರ ನಿರ್ದೇಶಕರಿಗೆ ಹೋಲಿಸಿದರೆ ತಾವು ಅದೃಷ್ಟವಂತರೆಂದು ಕಾಸರವಳ್ಳಿ ಒಪ್ಪಿಕೊಳ್ಳುತ್ತಾರೆ. “ಆ ನಿಟ್ಟಿನಲ್ಲಿ ನಾನು ಬಹಳ ಅದೃಷ್ಟವಂತ. ನಾನು ಚಿತ್ರರಂಗಕ್ಕೆ ಬರುವಾಗ ವೇದಿಕೆ ಸಿದ್ಧವಿತ್ತು. ಕನ್ನಡದಲ್ಲಿ ‘ಸಂಸ್ಕಾರ’, ‘ವಂಶವೃಕ್ಷ’, ‘ಕಾಡು’, ‘ಚೋಮನ ದುಡಿ’ಯಂತಹ ಹೊಸ ಅಲೆಯ ಚಿತ್ರಗಳು ಬಂದವು. ಅವೆಲ್ಲವೂ ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುವುದರ ಜೊತೆಗೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದ್ದವು. ಆಗಿನ ಚಿತ್ರ ನಿರ್ದೇಶಕರು ನವ್ಯ ಪರಂಪರೆಯಿಂದ ಸಾಕಷ್ಟು ಪ್ರಭಾವಿತರಾಗಿದ್ದರು. ಅದನ್ನು ಅವರ ಚಿತ್ರಗಳಲ್ಲೂ ಕಾಣಬಹುದು. ಆ ಚಿತ್ರಗಳಲ್ಲಿ ಒಂದು ರೀತಿಯ ಪ್ರಾಮಾಣಿಕತೆ ಇತ್ತು. ಆ ನಂತರ ಬಂದ ಚಿತ್ರಗಳಲ್ಲಿ ಕಥೆ ಚೆನ್ನಾಗಿದ್ದರೂ, ಕಲೆ ಮಾಯವಾಗಿತ್ತು. ಸಂಗೀತ, ಛಾಯಾಗ್ರಹಣ ಕಥೆಗೆ ಪೂರಕವಾಗಿರಲಿಲ್ಲ.

ಕಲಿತದ್ದು ಬಹಳ

ನಾನು ಕುವೆಂಪು ಮತ್ತು ಶಿವರಾಮ ಕಾರಂತರ ಸಾಹಿತ್ಯದಿಂದ ಸಾಕಷ್ಟು ಪ್ರಭಾವಕ್ಕೊಳಗಾದವನು. ಕುರುಸೋವಾ, ಬರ್ಗ್‍ಮನ್‍, ಬ್ರೆಸ್ಸೋ ಮುಂತಾದ ನಿರ್ದೇಶಕರಿಂದ ಒಂದು ವಿಷಯವನ್ನು ಹೇಗೆ ತೆರೆಯ ಮೇಲೆ ತರಬೇಕು ಎಂಬುದನ್ನು ನಾನು ಲಿತೆ. ಈ ವಿಷಯವಾಗಿ FTIIನಲ್ಲಿ ಇರುವಾಗ ಸಾಕಷ್ಟು ಓದಿದೆ. ಅಲ್ಲಿ ಸಾಕಷ್ಟು ವಿಷಯಗಳನ್ನು ಕಲಿಗೆ. ಬರೀ ನಮ್ಮ ಚಿತ್ರಗಳನ್ನು ಮಾಡುವುದಷ್ಟೇ ಅಲ್ಲ, ಅಲ್ಲಿ ಬೇರೆಯವರ ಚಿತ್ರಗಳಿಗೂ ಕೆಲಸ ಮಾಡಬಹುದು.

70 ರ ದಶಕ ಸುವರ್ಣಯುಗವೇ?

“ನಿಜ ಹೇಳಬೇಕೆಂದರೆ, ಆಗಿನದ ಸುವರ್ಣ ಯುಗ ಅಲ್ಲ, ಈಗಿನದು ಸುವರ್ಣ ಯುಗ. ಈಗ ಬಹಳ ಒಳ್ಳೆಯ ಚಿತ್ರಗಳು ಬರುತ್ತಿವೆ. ಈಗಿನವರಿಗೆ ಸಿನಿಮಾ ವ್ಯಾಕರಣ ಗೊತ್ತಿದೆ. ಕ್ಯಾಮೆರಾ, ಸಂಗೀತ ಹೇಗೆ ಬಳಸಿಕೊಳ್ಳಬೇಕು ಎಂದು ಗೊತ್ತಿದೆ. ಯುವಕರು ಒಳ್ಳೆಯ ಚಿತ್ರಗಳನ್ನು ಮಾಡುತ್ತಿದ್ದಾರೆ. ನಮ್ಮಲ್ಲಿ ಈ ಹಿಂದೆ ಬಂದ ಕೆಲವು ‘ಅದ್ಭುತ’ ಚಿತ್ರಗಳನ್ನು ಈಗ ನೋಡುವುದಕ್ಕೆ ಸಾಧ್ಯವಾಗುವುದಿಲ್ಲ. ಆ ಚಿತ್ರಗಳಿಗೆ ಹೋಲಿಸಿದರೆ, ಈಗ ಬರುವ ಚಿತ್ರಗಳು ಬಹಳ ಚೆನ್ನಾಗಿವೆ. ಆದರೆ, ಯಾರೂ ಆ ಬಗ್ಗೆ ಮಾತನಾಡುತ್ತಿಲ್ಲ ಅಷ್ಟೇ.” ಎಂದು ಕಾಸರವಳ್ಳಿ ಅಸಮಾಧಾನ ವ್ಯಕ್ತಪಡಿಸುತ್ತಾರೆ.

ಜನಪ್ರಿಯ ನಿರ್ದೇಶಕರಿಂದ ಹೊಸ ಅಲೆ ನಿರ್ದೇಶಕರು ಏನನ್ನೂ ಕಲಿಯಲಿಲ್ಲ

“ಹೊಸ ಅಲೆಯ ಕೆಲವು ನಿರ್ದೇಶಕರು ಜನಪ್ರಿಯ ಮಾದರಿಯ ಚಿತ್ರಗಳಿಂದ ಕಲಿಯಬೇಕಿತ್ತು. ಎನ್‍. ಲಕ್ಷ್ಮೀನಾರಾಯಣ್‍, ಪುಟ್ಟಣ್ಣ ಕಣಗಾಲ್, ಸಿದ್ಧಲಿಂಗಯ್ಯನವರಿಗೆ ಒಂದು ಮಾಧ್ಯಮವನ್ನು ಹೇಗೆ ಬಳಸಿಕೊಳ್ಳಬೇಕು ಎಂದು ಚೆನ್ನಾಗಿ ಗೊತ್ತಿತ್ತು. ಆದರೆ, ಆ ನಂತರ ಬಂದವರಿಗೆ ಏನು ಹೇಳಬೇಕು ಎಂದು ಗೊತ್ತಿತ್ತೇ ಹೊರತು, ಹೇಗೆ ಹೇಳಬೇಕು ಎಂದು ಗೊತ್ತಿರಲಿಲ್ಲ. ಒಂದೊಳ್ಳೆಯ ವಿಷಯವನ್ನು ಹೇಳುವುದಷ್ಟೇ ಅಲ್ಲ, ಅದನ್ನು ಪರಿಣಾಮಕಾರಿಯಾಗಿ ಹೇಳುವುದು ಸಹ ಬಹಳ ಮುಖ್ಯ. ಆದರೆ, ಅವರು ಅರ್ಥ ಮಾಡಿಕೊಳ್ಳುವುದಕ್ಕೂ ಹೋಗಲಿಲ್ಲ. ಈ ಮಾಧ್ಯಮದ ತಿಳವಳಿಕೆ ಇಲ್ಲದಿದ್ದರಿಂದ ಕ್ರಮೇಣ ಹಾಗಾಯಿತು. ಬರೀ ನೈಜ ಪರಿಸರದಲ್ಲಿ ಮತ್ತು ನೈಜ ಕಥೇ ಹೇಳುವುದಷ್ಟೇ ಮುಖ್ಯವಲ್ಲ. ಏನು ಹೇಳುತ್ತಿದ್ದೇವೆ ಎಂಬುದು ಸಹ ಮುಖ್ಯವಾಗಬೇಕು. ಆದರೆ, ಈ ಕುರಿತು ಗಮನಹರಿಸಲಿಲ್” ಎಂದು ಅವರು ಹೇಳುತ್ತಾರೆ.

ಸಾಹಿತ್ಯ ಕೃತಿಯನ್ನು ಆಧರಿಸಿದ ಚಿತ್ರಗಳೇ ಹೆಚ್ಚು

“ನಾನು ನಿರ್ದೇಶನ ಮಾಡಿರುವ ಚಿತ್ರಗಳಲ್ಲಿ ಕಥೆ-ಕಾದಂಬರಿಗಳನ್ನು ಆಧರಿಸಿದ ಚಿತ್ರಗಳೇ ಹೆಚ್ಚು. ಸ್ವತಂತ್ರವಾಗಿ ಬರೆದ ಕಥೆಗಳು ಕಡಿಮೆ. ಒಂದು ಕಥೆ ಓದಿದಾಗ ಒಂದು ಕಥೆಯ ಜೊತೆಗೆ ಅದು ಈ ಕಾಲಕ್ಕೆ ಹೇಗೆ ಮತ್ತು ಎಷ್ಟು ಸೂಕ್ತ ಎಂಬುದರ ವಿಷಯವನ್ನೂ ನಾನು ಯೋಚಿಸುತ್ತೇನೆ. ಸಮಾಜ ಎದುರಿಸುತ್ತಿರುವ ಸಮಸ್ಯೆ ಮತ್ತು ಒತ್ತಡಗಳನ್ನು ಸಹ ಹೇಳುವ ಪ್ರಯತ್ನ ಮಾಡುತ್ತೇನೆ. ಒಂದು ಕಥೆ ಓದಿದಾಗ ಏನೋ ಪ್ರೇರಣೆಯಾಗುತ್ತದೆ. ಪುಸ್ತಕವನ್ನು ಪಕ್ಕಕ್ಕಿಟ್ಟು, ಕಥೆಯನ್ನು ನನ್ನ ದೃಷ್ಠಿಕೋನದಲ್ಲಿ ಹೇಳುವ ಪ್ರಯತ್ನ ಮಾಡುತ್ತೇನೆ. ನಾನು ಓದಿದ, ಕೇಳಿದ, ನನ್ನ ಗ್ರಹಿಕೆಯ ವಿಷಯಗಳನ್ನು ಸೇರಿಸಿ ಸಿನಿಮಾ ಮಾಡುತ್ತೇನೆ. ಹಾಗಾಗಿ, ನಾನು ಮಾಡಿದ ಚಿತ್ರಗಳಲ್ಲಿ ಮೂಲ ಕಥೆ ಬೇರೆಯದ್ದಾಗಿದ್ದರೂ, ನನ್ನದೇ ರೀತಿಯಲ್ಲಿ ಹೇಳುವ ಪ್ರಯತ್ನ ಮಾಡುತ್ತೇನೆ” ಎನ್ನುತ್ತಾರೆ ಕಾಸರವಳ್ಳಿ.

“ಇವತ್ತಿನ ದಿನಗಳಲ್ಲಿ ಸಾಕಷ್ಟು ಸಾಮಾಜಿಕ ಮತ್ತು ಸಮಾಕಾಲೀನ ವಿಷಯಗಳನ್ನು ಹೇಳುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಅವೆಲ್ಲವೂ ವೈಯಕ್ತಿಕ ನೆಲೆಗಟ್ಟಿನಲ್ಲಿ ಮುಗಿದ ಹೋಗುತ್ತಿವೆ. ಒಬ್ಬ ಹೀರೋ ಬಂದು ಸೇಡು ತೀರಿಸಿಕೊಳ್ಳುವುದೇ ಪರಿಹಾರವಲ್ಲ. ಅದಕ್ಕೊಂದು ಬೇರೆ ದೃಷ್ಟಿಕೋನ ಬೇಕು. ಆ ಸಮಸ್ಯೆಯ ಹಿಂದಿನ ಸಾಮಾಜಿಕ, ರಾಜಕೀಯ ಅಥವಾ ಸಾಂಸ್ಕೃತಿಕ ಪರಿಸರವನ್ನು ಅರ್ಥ ಮಾಡಿಕೊಳ್ಳಬೇಕು. ಆ ವಿಷಯವಾಗಿ ಯಾರೂ ಆಳವಾಗಿ ಯೋಚಿಸುವುದಿಲ್ಲ. ವೈಯಕ್ತಿಕ ಅಥವಾ ಜನಪ್ರಿಯ ಮಾದರಿಯಾಗಿಯೇ ಉಳಿದುಬಿಡುತ್ತದೆ ಹೊರತು, ಬೇರೆ ದೃಷ್ಟಿಕೋನ ಮುಖ್ಯ” ಎಂಬುದು ಅವರ ಅಭಿಪ್ರಾಯ.

ಯಾರು, ಯಾಕೆ ಹೇಗೆ ಗೆದ್ದರು?

“ನಾವು ಸತ್ಯಜಿತ್‍ ರೇ ಅಥವಾ ಬೇರೆ ಭಾಷೆಯ ನಿರ್ದೇಶಕರುಗಳನ್ನು ಹೆಚ್ಚು ಅಧ್ಯಯನ ಮಾಡುವ ಬದಲು ಪುಟ್ಟಣ್ಣ ಕಣಗಾಲ್‍, ಸಿದ್ಧಲಿಂಗಯ್ಯ ಮುಂತಾದವರು ಯಾಕೆ ಮತ್ತು ಹೇಗೆ ಗೆದ್ದರು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಿತ್ತು. ಅವರೆಲ್ಲರೂ ನಮ್ಮ ಸೊಗಡಿನ ಚಿತ್ರಗಳನ್ನು ಮಾಡಿದರು. ನಮ್ಮ ಜನ ಸಹ ಆ ಕಥೆಗಳೊಂದಿಗೆ ಗುರುತಿಸಿಕೊಳ್ಳುತ್ತಿದ್ದರು. ಅದು ಈಗ ಆಗುತ್ತಿಲ್ಲ. ಇವತ್ತಿನ ಹಲವು ವಿಷಯಗಳೊಂದಿಗೆ ಜನ ತಮ್ಮನ್ನು ನೋಡಿಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ. ಹಾಗಾಗಿ, ಕನ್ನಡ ಚಿತ್ರಗಳನ್ನು ಯಾವತ್ತಿಗೂ ಪ್ರೋತ್ಸಾಹಿಸಿಕೊಂಡು ಬರುತ್ತಿದ್ದ ಮಧ್ಯಮ ವರ್ಗದ ಜನ ವಿಮುಖರಾಗುತ್ತಿದ್ದಾರೆ. ಈ ವಿಷಯದಲ್ಲಿ ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕು. ಅಕ್ಕಪಕ್ಕದಲ್ಲಿ ಇಣುಕುವುದನ್ನು ಬಿಡಬೇಕು. ಪರಭಾಷೆಗಳ ಚಿತ್ರಗಳ ಅನುಕರಣೆ ಹೆಚ್ಚಾಗುತ್ತಿದೆ. ಒಂದು ಚಿತ್ರದ ಸೌಂಡ್‍ ತೆಗೆದರೆ ಅದು ಕನ್ನಡ ಚಿತ್ರವೋ, ತೆಲುಗು ಚಿತ್ರವೋ ಗೊತ್ತಾಗದಂತಾಗಿದೆ. ನಾವು ತೆಲುಗು, ತಮಿಳು ಚಿತ್ರಗಳ ಸ್ಪರ್ಧೆ ಮಾಡುವುದು ಕಷ್ಟ. ಏಕೆಂದರೆ, ಅವರಿಗೆ ಬಜೆಟ್‍ ಹೆಚ್ಚಿರುತ್ತದೆ. ನಾವು ಅವರೊಂದಿಗೆ ಹೋಲಿಕೆ ಮಾಡಿಕೊಳ್ಳುವುದು ಕಷ್ಟ. ಹಾಗಾಗಿ, ಪಕ್ಕ ನೋಡುವ ಬದಲು ಹಿಂದಕ್ಕೆ ನೋಡಿಕೊಳ್ಳಬೇಕು. ಬೇರೆ ಭಾಷೆಯ ಯಾವುದೋ ಚಿತ್ರಕ್ಕಿಂತ, ‘ಬಂಗಾರದ ಮನುಷ್ಯ’, ‘ಭೂತಯ್ಯನ ಮಗ ಅಯ್ಯು’ ಚಿತ್ರಗಳು ಹೇಗೆ ಮತ್ತು ಯಾಕೆ ಗೆದ್ದವು ಎಂದು ಹುಡುಗಿದರೆ ನಮ್ಗೆ ಉತ್ತರ ಸಿಗುತ್ತದೆ”.

ಕಿತ್ತಳೆ ಹಣ್ಣು ಮತ್ತು ಕಾರುಗಳು

ಎನ್‍ ಲಕ್ಷ್ಮೀನಾರಾಯಣ್‍ ಅವರು , ‘ಶರಪಂಜರ’ ಚಿತ್ರ ನೋಡಿ ಒಂದು ಮಾತು ಹೇಳಿದ್ದರು. ಬೆಟ್ಟದಿಂದ ಕಿತ್ತಳೆ ಹಣ್ಣು ಬೀಳುವುದು ಅಸಹ ಎಂದಿದ್ದರು. ಆ ಕಾಲಕ್ಕೆ ಅವರು ಹೇಳಿದ್ದರ ಬಗ್ಗೆ ಅದು ಸಿನಿಕತನದ ಮಾತು ಅಂತನಿಸಿದರೂ, ಈಗ ಅದೆಷ್ಟು ನಿಜ ಅಂತನಿಸುತ್ತದೆ. ಅವರು ನಿಜಕ್ಕೂ ಒಬ್ಬ ದಾರ್ಶನಿಕರಾಗಿದ್ದರು. ಅವರು ಹೇಳಿದ್ದು ಅಪ್ಪಟ ನಿಜ. ಆಗ ದೃಶ್ಯ ವೈಭವೀಕರಣಕ್ಕೆ ಕಿತ್ತಳೆ ಸುರಿಯಲಾಗಿತ್ತು, ಈಗ ಕಾರುಗಳನ್ನು ಸುಡಲಾಗುತ್ತಿದೆ. ನಾವು ಈ ನಿಟ್ಟಿನಲ್ಲಿ ಆತ್ಮಾವಲೋಕನ ಮಾಡಿಕೊಳ್ಳಬೇಕು. ಸಾಮಾಜಿಕ ಜವಾಬ್ದಾರಿ ಅರ್ಥ ಮಾಡಿಕೊಳ್ಳಬೇಕು. ಶರಪಂಜರ, ನಾಗರಹಾವು, ಭೂತಯ್ಯನ ಮಗ ಅಯ್ಯು ಚಿತ್ರಗಳು ಯಾಕೆ ಗೆದ್ದವು ಎಂದು ಅರ್ಥ ಮಾಡಿಕೊಳ್ಳಬೇಕು. ಕಾಂತಾರ ಸುಮ್ಮಸುಮ್ಮನೆ ಗೆಲ್ಲಲಿಲ್ಲ. ಈ ಮಣ್ಣ ಸೊಗಡಿನ ಜೊತೆಗೆ ಒಂದು ನೈತಿಕತೆ ಇತ್ತು. ಹಿಂದೆ 10 ರೂ ಹಾಕಿ, 11 ರೂ ಬಂದರೆ ಅದು ಲಾಭ. ಈಗ 10 ರೂ ಹಾಕಿ 100 ರೂ ಬಂದರೂ ಸಾಲುವುದಿಲ್ಲ. ಹಿಂದೆ ನಿರ್ದೇಶಕರು ಜವಾಬ್ದಾರಿಯುತ ಸ್ಥಾನದಲ್ಲಿದ್ದರು. ಇಂಥಾ ಸಿನಿಮಾ ಮಾಡುವುದಿಲ್ಲ ಎಂದು ಹೇಳುತ್ತಿದ್ದರು. ಆದರೆ, ಈಗ ಎಲ್ಲರಿಗೂ ಹಣ ಬೇಕಾಗಿರುವುದರಿಂದ ಹೀಗಾಗುತ್ತಿದೆ.

ಹೇಮಾ ಸಮಿತಿ ಉಂಟು ಮಾಡಿದ ಜಾಗೃತಿ

“ನ್ಯಾಯಮೂರ್ತಿ ಹೇಮಾ ಸಮಿತಿ ವರದಿಯನ್ನು ಬರೀ ಚಿತ್ರರಂಗಕ್ಕಷ್ಟೇ ಅಲ್ಲ, ಎಲ್ಲಾ ಕ್ಷೇತ್ರಗಳಿಗೂ ಜಾರಿಗೆ ತರಬೇಕು. ಏಕೆಂದರೆ, ಎಲ್ಲಾ ಕ್ಷೇತ್ರಗಳಲ್ಲೂ ಸಾಮಾನ್ಯವಾಗಿದೆ. ಹಾಗಾಗಿ, ಸರ್ಕಾರ ಇದನ್ನೂ ಬೇರೆ ಕ್ಷೇತ್ರಗಳಿಗೂ ವಿಸ್ತರಿಸಬೇಕು. ಈ ರೀತಿ ಹಿಂದಿಯ ಮುಖ್ಯವಾಹಿನಿ ಸಿನಿಮಾದಲ್ಲಾಗುತ್ತದೆ ಎಂದು ಕೇಳಿದ್ದೆ. ಆದರೆ, ಸುಶಿಕ್ಷಿತವೆಂದೇ ಜನಪ್ರಿಯವಾಗಿರುವ ಮಲಯಾಳಂ ಚಿತ್ರರಂಗದಲ್ಲೂ ಇವೆಲ್ಲಾ ಜಾರಿ ಇದೆ ಎಂದರೆ ಆಶ್ಚರ್ಯವಾಗುತ್ತದೆ. ಸಂಘಟಿತ ವಲಯದಲ್ಲೂ ಹೆಚ್ಚುತ್ತಿದೆ. ಆದರೆ, ಎಷ್ಟೋ ಬಾರಿ ಬೆಳಕಿಗೆ ಬರುವುದಿಲ್ಲ ಅಷ್ಟೇ. ಇನ್ನು, ರಾಜಕೀಯದಲ್ಲೂ ಶೋಷಣೆಯ ಬಗ್ಗೆ ಸಾಕಷ್ಟು ಮಾತುಗಳು ಕೇಳಿ ಬರುತ್ತಿದೆ. ಈ ನಿಟ್ಟಿನಲ್ಲಿ ಈ ಕುರಿತು ಇನ್ನಷ್ಟು ಜಾಗೃತಿ ಮೂಡಿಸಬೇಕು. ಅನೈತಿಕ ಎಂದು ಮನವರಿಕೆಯಾಗಬೇಕು……” ಎಂದು ಹೇಳಿದಾಗ ಅವರ ಮುಖದಲ್ಲಿ ಆಯಾಸ ಎದ್ದು ಕಾಣುತ್ತಿತ್ತು.

ಕೇಳುವುದು, ಕೇಳಸಿಕೊಳ್ಳುವುದು ಇನ್ನು ಎಷ್ಟೋ ಇತ್ತು. ಆದರೆ, ಅವರ ಆಯಾಸ ನಮ್ಮ ಉತ್ಸಾಹವನ್ನು ತಡೆಯಿತು. ಮತ್ತೆ ಭೇಟಿಯಾಗುತ್ತೇವೆ. ಮತ್ತಷ್ಟು ಮಾತನಾಡೋಣ ಎಂದು ಕಾಸರವಳ್ಳಿ ಆಯಾಸ ಮರೆತು ಮುಗುಳ್ನಕ್ಕರು. ಅವರಿಂದ ಬೀಳ್ಕೊಂಡು ಹೊರಗೆ ಬಂದಾಗ, ಮನಸ್ಸು ಕೆಲವು ವರ್ಷಗಳ ಹಿಂದಕ್ಕೆ ಚಲಿಸಿತು. ಆಗ ʼಒಂಟಿಯಾಗಿದ್ದಂತೆʼ ಕಾಣುತ್ತಿದ್ದ ಅವರ ಮನೆ ಇದ್ದ ಜಾಗ ಸಂಪೂರ್ಣ ಬದಲಾಗಿದೆ. ಎಷ್ಟೋ ದೂರದಿಂ ಅವರ ಮನೆಯನ್ನು ಗುರುತಿಸಬಹುದಿತ್ತು. ಅಂಥ ಆಕರ್ಷಕ ಕಲಾತ್ಮಕವಾಗಿ ಕಟ್ಟಿದ ಮನೆಯದು. ವಾಹನಗಳ ಓಡಾಟದ ಭರಾಟೆಯಲ್ಲಿ ಬೀದಿಯಲ್ಲಿನ ಧೂಳು ಅವರ ಮನೆಯನ್ನು ಪ್ರವೇಶಿಸುವುದನ್ನು ನೋಡಿ ಸಂಕಟವಾಯಿತು.

Read More
Next Story