
kappatagudda| ಪರಿಸರ ಸೂಕ್ಷ್ಮ ವಲಯ ; ಗಣಿಗಾರಿಕೆ ತೂಗುಕತ್ತಿಯಿಂದ ಪಾರಾಯಿತು ಕಪ್ಪತಗುಡ್ಡ
ಕಪ್ಪತಗುಡ್ಡದ ವನ್ಯಜೀವಿಧಾಮ ಸುತ್ತಲಿನ 322 ಚದರ ಕಿಮೀ ಪ್ರದೇಶವನ್ನು ‘ಪರಿಸರ ಸೂಕ್ಷ್ಮವಲಯ’ ಎಂದು ಕೇಂದ್ರ ಅಂತಿಮ ಅಧಿಸೂಚನೆ ಹೊರಡಿಸಿದ್ದು, ಗಣಿಗಾರಿಕೆಯ ಕನಸು ಕಂಡವರಿಗೆ ನಿರಾಶೆ ಎದುರಾಗಿದೆ.
"ಎಪ್ಪತ್ತುಗಿರಿ ನೋಡುವುದಕ್ಕಿಂತ ಕಪ್ಪತಗಿರಿ ನೋಡುವುದು ಮೇಲು" ಎಂಬುದು ಜನಪದರ ಮಾತು.
ಉತ್ತರ ಕರ್ನಾಟಕದ ಸಹ್ಯಾದ್ರಿ ಎಂದೇ ಹೆಸರಾಗಿರುವ ಕಪ್ಪತಗುಡ್ಡ ಬೆಟ್ಟ ಸಾಲು ಅಪರೂಪದ ಆಯುರ್ವೇದ ಸಸ್ಯ, ಅದಿರು ಸಂಪತ್ತನ್ನು ತನ್ನ ಒಡಲಲ್ಲಿ ಅಡಗಿಸಿಕೊಂಡಿದೆ. ಈ ಪ್ರದೇಶವನ್ನು ರಾಜ್ಯ ಸರ್ಕಾರ ವನ್ಯಜೀವಿ ಅಭಯಾರಣ್ಯವಾಗಿ ಘೋಷಿಸಿದರೂ ಗಣಿಗಾರಿಕೆ ತೂಗುಗತ್ತಿ ಮಾತ್ರ ನೇತಾಡುತ್ತಲೇ ಇತ್ತು. ಆದರೆ, ಅದಕ್ಕೀಗ ಕೇಂದ್ರ ಸರ್ಕಾರವು ಪರಿಸರ ಸೂಕ್ಷ್ಮ ವಲಯ ಎಂಬ ಮುದ್ರೆಯೊತ್ತಿ ಅಧಿಸೂಚನೆ ಹೊರಡಿಸಿದೆ. ಹಾಗಾಗಿ ಗಣಿಗಾರಿಕೆ ತೂಗುಕತ್ತಿಯಿಂದ ಕಪ್ಪತಗುಡ್ಡ ಪಾರಾಗಿದೆ.
322 ಚ.ಕಿ.ಮೀ ಪರಿಸರ ಸೂಕ್ಷ್ಮ ವಲಯ
ಕಪ್ಪತಗುಡ್ಡದ ವನ್ಯಜೀವಿಧಾಮ ಸುತ್ತಲಿನ 322 ಚದರ ಕಿಮೀ ಪ್ರದೇಶವನ್ನು ‘ಪರಿಸರ ಸೂಕ್ಷ್ಮವಲಯ’ ಎಂದು ಕೇಂದ್ರ ಅಂತಿಮ ಅಧಿಸೂಚನೆ ಹೊರಡಿಸಿದ್ದು, ಗಣಿಗಾರಿಕೆಯ ಕನಸು ಕಂಡವರಿಗೆ ನಿರಾಶೆ ಎದುರಾಗಿದೆ.
ಒಟ್ಟು 17,872 ಹೆಕ್ಟೇರ್ ಇರುವ ಕಪ್ಪತಗುಡ್ಡ ಅರಣ್ಯ ಪ್ರದೇಶವು ಗದಗ ತಾಲೂಕಿನಲ್ಲಿ 401.811 ಹೆಕ್ಟೇರ್, ಮುಂಡರಗಿ ತಾಲೂಕಿನಲ್ಲಿ 15,433.673 ಹೆಕ್ಟೇರ್ ಮತ್ತು ಶಿರಹಟ್ಟಿ ತಾಲೂಕಿನಲ್ಲಿ 2016 ಹೆಕ್ಟೇರ್‌ಗಳಲ್ಲಿ ಚಾಚಿಕೊಂಡಿದೆ. ಇದರಲ್ಲಿ 89.92 ಹೆಕ್ಟೇರ್ ಔಷಧೀಯ ಸಸ್ಯಗಳ ಸಂಗ್ರಹಣೆಗೆ ಮೀಸಲಿಡಲಾಗಿದೆ. ಈ ಪ್ರದೇಶವನ್ನು ನೂರಾರು ವರ್ಷಗಳಿಂದ ಔಷಧೀಯ ಸಸ್ಯಗಳ ಆವಾಸಸ್ಥಾನ ಎಂದೇ ಕರೆಯಲಾಗಿದೆ.
ದಟ್ಟ ಕಾನನ ಹೊಂದಿರುವ ಬೆಟ್ಟದ ತುದಿಯಲ್ಲಿ ಸುಮಾರು 250 ವರ್ಷಗಳ ಹಿಂದೆ ನಿರ್ಮಾಣವಾಗಿರುವ ಅನ್ನ ಜ್ಞಾನ ದಾಸೋಹ ಮಠವಿದೆ. ದಕ್ಷಿಣ ಸಸ್ಯಕಾಶಿಯೆಂದು ಪ್ರಖ್ಯಾತವಾಗಿರುವ ಕಪ್ಪತ್ತಗುಡ್ಡದಲ್ಲಿರುವ ಡೋಣಿ ನಗರದಿಂದ 3 ಕಿ. ಮೀ. ದೂರದಲ್ಲಿದೆ. ಕಡಕೋಳದಿಂದ 5 ಕಿ. ಮೀ ಗಳಷ್ಟು ದೂರದಲ್ಲಿ ಇದೆ.
300ಕ್ಕೂ ಹೆಚ್ಚು ಔಷಧೀಯ ಸಸ್ಯಗಳು, 18ಕ್ಕೂ ಹೆಚ್ಚು ವನ್ಯಜೀವಿಗಳು, ನೂರಾರು ಬಗೆಯ ಪಕ್ಷಿಗಳಿಗೆ ಆಶ್ರಯ ನೀಡಿದೆ. 2019ರಲ್ಲಿ ರಾಜ್ಯ ಸರ್ಕಾರ ಕಪ್ಪತಗುಡ್ಡದ 24,415 ಹೆಕ್ಟೇರ್ ಪ್ರದೇಶವನ್ನು ವನ್ಯಜೀವಿಧಾಮ ಎಂದು ಈಗಾಗಲೇ ಘೋಷಣೆ ಮಾಡಿತ್ತು. ಆದರೆ, ಕಪ್ಪತಗುಡ್ಡದ ಅಂಚಿನಲ್ಲಿನ ಪ್ರದೇಶದ ಮೇಲೆ ಭೂಗಳ್ಳರು ಕಣ್ಣಿಟ್ಟಿದ್ದರು. ವನ್ಯಜೀವಿ ಧಾಮದ ಅಂಚಿನಿಂದ 10 ಕಿ.ಮೀ ವ್ಯಾಪ್ತಿಯನ್ನು ‘ಸೂಕ್ಷ್ಮ ವಲಯ’ಎಂದು ಘೋಷಣೆ ಮಾಡಬೇಕು ಎಂಬ ಕೂಗು ಬಹಳ ವರ್ಷಗಳಿಂದ ಕೇಳಿಬಂದಿತ್ತು. ಏಕೆಂದರೆ, ಕಪ್ಪತಗುಡ್ಡದಲ್ಲಿ ಮ್ಯಾಂಗನೀಸ್, ಚಿನ್ನ ಸೇರಿದಂತೆ ಹಲವು ಲೋಹದ ಕಚ್ಚಾ ವಸ್ತು ಸಿಗುವ ಹಿನ್ನೆಲೆಯಲ್ಲಿ ಗಣಿಗಾರಿಕೆಗೆ ಪ್ರಸ್ತಾವನೆ ಸಲ್ಲಿಕೆ ಆಗಿದ್ದವು.
ಕಪ್ಪತಗುಡ್ಡವನ್ನು ವನ್ಯಜೀವಿಧಾಮ ಎಂದು ರಾಜ್ಯ ಸರ್ಕಾರ ಘೋಷಣೆ ನಂತರವೂ ಸುತ್ತಲಿನ ಪ್ರದೇಶದಲ್ಲಿ ಗಣಿಗಾರಿಕೆಗೆ ಅವಕಾಶ ಕೋರಿ ಅನೇಕ ಕಂಪನಿಗಳು ಪ್ರಸ್ತಾವ ಸಲ್ಲಿಸಿದ್ದವು.
62 ಗ್ರಾಮಗಳ ವ್ಯಾಪ್ತಿ
ಸೂಕ್ಷ್ಮಪರಿಸರ ವಲಯದಲ್ಲಿ 298.89 ಚದರ ಕಿ.ಮೀ ಕಂದಾಯ ಗ್ರಾಮಗಳ ಪ್ರದೇಶ ಮತ್ತು 23.80 ಚದರ ಕಿ.ಮೀ ಅರಣ್ಯ ಪ್ರದೇಶ ಸೇರಿದೆ. ಈ ಪ್ರದೇಶದಲ್ಲಿ ಒಟ್ಟು 62 ಗ್ರಾಮಗಳಿವೆ. ವನ್ಯಜೀವಿಧಾಮದ ಅಂಚಿನಿಂದ ಕನಿಷ್ಠ 1 ಕಿ.ಮೀನಿಂದ ಗರಿಷ್ಠ 4.30 ಕಿ.ಮೀವರೆಗೆ ‘ಪರಿಸರ ಸೂಕ್ಷ್ಮ್ಮ ವಲಯ’ ಎಂದು ಗುರುತಿಸಲಾಗಿದೆ. ಉತ್ತರ ದಿಕ್ಕಿನಲ್ಲಿ 1 ಕಿ.ಮೀ. ನಿಂದ 3.25 ಕಿ.ಮೀ., ಪಶ್ಚಿಮದಲ್ಲಿ 4.30 ಕಿ.ಮೀ., ವಾಯವ್ಯ ದಿಕ್ಕಿನಲ್ಲಿ 1.96 ಕಿ.ಮೀ., ಇನ್ನುಳಿದ ದಿಕ್ಕುಗಳಲ್ಲಿ 1 ಕಿ.ಮೀ ಎಂದು ನಿಗದಿ ಮಾಡಲಾಗಿದೆ.
ಪರಿಸರಕ್ಕೆ ಮಾರಕ ಚಟುವಟಿಕೆಗೆ ನಿರ್ಬಂಧ
ಕಪ್ಪತಗುಡ್ಡದ ಪರಿಸರ ಸೂಕ್ಷ್ಮ ವಲಯದಲ್ಲಿ ಎಲ್ಲ ರೀತಿಯ ಗಣಿಗಾರಿಕೆಗೆ ಬ್ರೇಕ್ ಬಿದ್ದಿದೆ. ಪರಿಸರಕ್ಕೆ ಹಾನಿ ಮಾಡುವ ಕೈಗಾರಿಕೆಗಳ ಸ್ಥಾಪನೆ ಮಾಡುವಂತಿಲ್ಲ. ಹೊಸ ಉಷ್ಣ ವಿದ್ಯುತ್ ಯೋಜನೆಗಳು, ನೈಸರ್ಗಿಕ ಜಲಮೂಲಗಳಿಗೆ ಸಂಸ್ಕರಿಸದ ತ್ಯಾಜ್ಯಗಳನ್ನು ಹರಿಸುವಂತಿಲ್ಲ, ಹೊಸ ಘನತ್ಯಾಜ್ಯ ಸ್ಥಾಪನೆ, ತ್ಯಾಜ್ಯ ವಿಲೇವಾರಿ ಮಾಡುವಂತಿಲ್ಲ. ಜೈವಿಕ ಮತ್ತು ವೈದ್ಯಕೀಯ ತ್ಯಾಜ್ಯ ಸುಡುವುದರ ಮೇಲೆ ಅರಣ್ಯ ಇಲಾಖೆ ಕಣ್ಣಿಡಲಿದ್ದು, ಕೃತ್ಯ ಎಸಗಿದರ ಮೇಲೆ ಕಠಿಣ ಕ್ರಮ ಜರುಗಿಸಲಿದೆ. ಇನ್ನೊಂದೆಡೆ ನಿರ್ಮಾಣ ಮತ್ತು ವಾಣಿಜ್ಯ ಚಟುವಟಿಕೆಯನ್ನೂ ನಿರ್ಬಂಧಿಸಲಾಗಿದೆ.
ಮರಗೆಲಸ ಆಧಾರಿತ ಕೈಗಾರಿಕೆಗಳ ಸ್ಥಾಪನೆಗೆ ನಿಷೇಧವಿದೆ. ದೊಡ್ಡ ಪ್ರಮಾಣದ ಜಾನುವಾರು ಹಾಗೂ ಕೋಳಿ ಫಾರ್ಮಗಳಿಗೆ ಅವಕಾಶವಿಲ್ಲ.
ಮುಂದಿನ ಕ್ರಮವೇನು?
ಕಂದಾಯ, ಅರಣ್ಯ ಇಲಾಖೆ, ಜಿಲ್ಲಾಡಳಿತ ಮತ್ತು ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳನ್ನು ಒಳಗೊಂಡ ಸಮಿತಿ ರಚಿಸಲಾಗುವುದು ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.
ಅಧಿಸೂಚಿತ ಕಪ್ಪತಗುಡ್ಡ ವನ್ಯಜೀವಿ ಧಾಮದ ಸುತ್ತಲಿನ 322 ಚ.ಕಿಮೀ ಪ್ರದೇಶವನ್ನು ಆಯಾ ಗ್ರಾಮ ನಕ್ಷೆಯಲ್ಲಿ ಅಳವಡಿಸುವ ಕುರಿತು ಅರಣ್ಯ ಇಲಾಖೆಯಲ್ಲಿ ಚಿಂತನೆ ನಡೆದಿದೆ ಎಂದು ತಿಳಿದು ಬಂದಿದೆ.
ಕೇಂದ್ರ ಸರ್ಕಾರದ ಈ ಷೋಷಣೆಯಿಂದ ಇಲ್ಲಿನ ಮುಂಡರಗಿ ತಾಲೂಕಿನ ವ್ಯಾಪ್ತಿಯಲ್ಲಿರುವ ಹಾಗೂ ಕಪ್ಪತಗುಡ್ಡದ ಅಂಚಿನಲ್ಲಿರುವ ಗ್ರಾಮಸ್ಥರಿಗೆ ಯಾವುದೇ ತೊಂದರೆ ಇಲ್ಲ. ವಾಣಿಜ್ಯ, ಕೈಗಾರಿಕೆ ಸೇರಿದಂತೆ ಪರಿಸರ ನಾಶದ ಚಟುವಟಿಕೆ ಕೈಗೊಳ್ಳುವುದನ್ನು ನಿಷೇಧಿಸಲಾಗಿದೆ. ವನ್ಯಜೀವಿಧಾಮದ ಘೋಷಣೆಯ ನಂತರ ಗುಡ್ಡದಲ್ಲಿನ ಪ್ರಾಣಿ-ಪಕ್ಷಿಗಳ ಸಂತತಿ ಹೆಚ್ಚಾಗಿದೆ. ಈಗ ಸೂಕ್ಷ್ಮವಲಯ ಪಟ್ಟ ದೊರೆತಿರುವುದು ಅವುಗಳಿಗೆ ಮತ್ತಷ್ಟು ರಕ್ಷಣೆ ಒದಗಿಸಲಿದೆ ಎಂದು ಮುಂಡರಗಿ ವಲಯ ಅರಣ್ಯಾಧಿಕಾರಿ ಮಂಜುನಾಥ ಮೇಗಲಮನಿ ತಿಳಿಸಿದ್ದಾರೆ.
ಕರಗಿಲ್ಲ ಕಾರ್ಮೋಡ, ತೆರೆಮರೆಯಲ್ಲೇ ಹುನ್ನಾರ
ಕೇಂದ್ರದ ಅಧಿಸೂಚನೆ ನಂತರವೂ ಸ್ಥಳೀಯ ಸಂಸ್ಥೆಗಳು ಅಧಿಸೂಚನೆ ಉಲ್ಲಂಘಿಸಿ ನಿಯಮ ಬಾಹಿರ ಚಟುವಟಿಕೆಗೆ ಅನುಮತಿ ನೀಡುವ ಭೀತಿ ಇದೆ. ಸ್ಥಳೀಯ ಸಂಸ್ಥೆಗಳ ಅಧಿಕಾರವನ್ನು ಎಚ್ಚರಗೊಳಿಸುವ ನಿಟ್ಟಿನಲ್ಲಿ ಗ್ರಾಮ ನಕ್ಷೆಗಳಲ್ಲಿ ಸೂಕ್ಷ್ಮ ಪರಿಸರ ವಲಯವನ್ನು ನಮೂದಿಸಬೇಕು ಎಂಬ ಕೂಗು ಕೇಳಿ ಬಂದಿದೆ.
ಭವಿಷ್ಯದಲ್ಲಿ ಖಾಸಗಿ ಮತ್ತು ಸರ್ಕಾರಿ ಸಂಸ್ಥೆಗಳು ಯಾವುದೇ ಚಟುವಟಿಕೆಗೆ ಸ್ಥಳೀಯ ಸಂಸ್ಥೆಗಳಿಂದ ಅನುಮತಿ ಪಡೆಯಲು ಮುಂದಾದಾಗ, ಪರಿಸರ ಸೂಕ್ಷ್ಮ ವಲಯ ಯಾವುದು ಎನ್ನಲು ಗ್ರಾಮ ನಕ್ಷೆಯೇ ಮುಖ್ಯ ಆಧಾರವಾಗುತ್ತದೆ. ಇದರಿಂದಾಗಿ, ನಿಯಮಬಾಹಿರವಾಗಿ ಅನುಮತಿ ನೀಡಲು ಸಂಬಂಧಪಟ್ಟವರು ಹಿಂಜರಿಯುತ್ತಾರೆ ಎಂದು ಭಾವಿಸಲಾಗಿದೆ.
ಪ್ರವಾಸೋದ್ಯಮಕ್ಕೆ ಉತ್ತೇಜನ
ಕಪ್ಪತಗುಡ್ಡದಲ್ಲಿ ಪರಿಸರ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಗದಗ ಅರಣ್ಯ ಇಲಾಖೆ 18.26 ಕೋಟಿ ರೂ. ಮೊತ್ತದ ಯೊಜನೆ ಸಿದ್ಧಪಡಿಸಿದೆ.
ಕಳೆದ ಸಾಲಿನ ಬಜೆಟ್‌ನಲ್ಲಿ ಕಪ್ಪತಗುಡ್ಡದಲ್ಲಿ ಪರಿಸರ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವುದಾಗಿ ಸರ್ಕಾರ ಘೋಷಿಸಿತ್ತು. ಅದರಂತೆ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ, ಪ್ರವಾಸಿಗರಿಗೆ ಮೂಲಸೌಕರ್ಯ ಕಲ್ಪಿಸಲು ಕೈಗೊಳ್ಳಬೇಕಾದ ಕಾಮಗಾರಿ ಪಟ್ಟಿ ಹಾಗೂ ವಿಸ್ತೃತ ಯೋಜನಾ ವರದಿಗೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅನುಮೋದನೆ ನೀಡಿದ್ದಾರೆ.
ಕಪ್ಪತಗುಡ್ಡದ ವನ್ಯಜೀವಿಧಾಮ ಸುತ್ತಲಿನ 322 ಚದರ ಕಿ.ಮೀ. ಪ್ರದೇಶವನ್ನು ಪರಿಸರ ಸೂಕ್ಷ್ಮವಲಯ ಎಂದು ಕೇಂದ್ರ ಅರಣ್ಯ, ಪರಿಸರ ಹಾಗೂ ತಾಪಮಾನ ಬದಲಾವಣೆ ಇಲಾಖೆ ಅಂತಿಮ ಅಧಿಸೂಚನೆ ಹೊರಡಿಸಿದೆ. ಈಗ ಸೂಕ್ಷ್ಮ ಪರಿಸರ ರಕ್ಷಣೆಯ ಮುಂದಿನ ಪ್ರಕ್ರಿಯೆ ಕುರಿತು ಆ ಪ್ರದೇಶದ ವ್ಯಾಪ್ತಿಯ ಗ್ರಾಮಗಳಲ್ಲಿ ಮತ್ತು ಇಲಾಖೆ ವ್ಯಾಪ್ತಿಯಲ್ಲಿ ಚರ್ಚೆಗಳು ಶುರುವಾಗಿವೆ. ಪರಿಸರ ಸೂಕ್ಷ್ಮವಲಯ ಎಂದು ಘೋಷಿಸಿದ ಹಿನ್ನೆಲೆಯಲ್ಲಿ ಇಲ್ಲಿನ ಗ್ರಾಮಸ್ಥರಿಗೆ ಮತ್ತು ಕೃಷಿ ಚಟುವಟಿಕೆಗಳಿಗೆ ಯಾವುದೇ ತೊಂದರೆ ಇಲ್ಲ. ಮೇಲಾಗಿ ಇಲ್ಲಿನ ಕೃಷಿ ಮತ್ತು ಪರಿಸರ ರಕ್ಷಣೆಗೆ ಈ ಆದೇಶ ಪೂರಕವಾಗಲಿದೆ. ವದಂತಿಗಳಿಗೆ ಗ್ರಾಮಸ್ಥರು ಕಿವಿಗೊಡಬಾರದು. ಪ್ರವಾಸೋದ್ಯಮ ಅಭಿವೃದ್ಧಿ ಪಡಿಸಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ತಿಳಿಸಿದ್ದಾರೆ.
ಕಪ್ಪತಗುಡ್ಡದ ಹಸಿರು ಉಳಿದರೆ ಆ ಭಾಗದಲ್ಲಿ ಮಳೆಯಾಗಲಿದೆ. ಪವನ ವಿದ್ಯುತ್ ಹೆಸರಿನಲ್ಲಿ ಈಗಾಗಲೇ ಪರಿಸರವನ್ನು ಸಾಕಷ್ಟು ಹಾಳು ಮಾಡಲಾಗಿದೆ. ಅಂತಿಮ ಅಧಿಸೂಚನೆ ಸ್ವಾಗತಾರ್ಹ ಕ್ರಮವಾಗಿದೆ. ಪರಿಸರ ರಕ್ಷಣೆಗೆ ದಿಟ್ಟ ನಿರ್ಧಾರ ಕೈಗೊಳ್ಳಲಾಗಿದೆ. ಆದರೆ, ವನ್ಯಜೀವಿಧಾಮದಿಂದ 10 ಕಿ.ಮೀ ವ್ಯಾಪ್ತಿಯಲ್ಲಿ ಎಲ್ಲ ಚಟುವಟಿಕೆಗೆ ನಿರ್ಬಂಧ ಹೇರಿದ್ದರೆ ಒಳ್ಳೆಯದಿತ್ತು. ಈ ಕುರಿತು ನಾವು ಆಕ್ಷೇಪಣೆ ಸಲ್ಲಿಸಿದ್ದರೂ ಪರಿಗಣಿಸಿಲ್ಲ ಎಂದು ಗದಗಿನ ವನ್ಯಜೀವಿ ತಜ್ಞ ಮಂಜುನಾಥ ರಾಠೋಡ ತಿಳಿಸಿದ್ದಾರೆ.
ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಯಾವುದಕ್ಕೆ ನಿರ್ಬಂಧ?
*ಈಗಿರುವ ಹಾಗೂ ಹೊಸ ವಾಣಿಜ್ಯ ಗಣಿಗಾರಿಕೆ, ಕಲ್ಲು ಗಣಿಗಾರಿಕೆ, ಕಲ್ಲುಪುಡಿ ಮಾಡುವ ಘಟಕಗಳಿಗೆ ಸಂಪೂರ್ಣ ನಿಷೇಧ.
* ಮಾಲಿನ್ಯಕ್ಕೆ ಕಾರಣವಾಗುವ ಕೈಗಾರಿಕೆಗಳ ಸ್ಥಾಪನೆಗೆ ನಿರ್ಬಂಧ.
*ಪರಿಸರ ಸೂಕ್ಷ್ಮ ಪ್ರದೇಶದ 1 ಕಿ.ಮೀ. ವ್ಯಾಪ್ತಿಯೊಳಗೆ ಹೋಟೆಲ್ ರೆಸಾರ್ಟ್ ತೆರೆಯುವಂತಿಲ್ಲ.
*ಇಟ್ಟಿಗೆ ಗೂಡುಗಳ ಸ್ಥಾಪನೆ ಮರದ ಮಿಲ್‌ಗಳಿಗೆ ನಿರ್ಬಂಧ.
* ಮರ ಆಧಾರಿತ ಕೈಗಾರಿಕೆಗಳ ಆರಂಭಿಸುವಂತಿಲ್ಲ.
ಯಾವುದಕ್ಕೆ ನಿರ್ಬಂಧವಿಲ್ಲ
* ಮಳೆನೀರು ಸಂಗ್ರಹ, ಸಾವಯವ ಕೃಷಿಗೆ ಉತ್ತೇಜನ.
*ಎಲ್ಲ ಚಟುವಟಿಕೆಗಳಿಗೆ ಹಸಿರು ತಂತ್ರಜ್ಞಾನದ ಅಳವಡಿಕೆ.
*ಪರಿಸರ ಸ್ನೇಹಿ ಸಾರಿಗೆಯ ಬಳಕೆ ಮತ್ತು ಪ್ರಚಾರ.
* ಕ್ಷೀಣಿಸಿದ ಭೂಮಿ ಅರಣ್ಯ ಆವಾಸಸ್ಥಾನದ ಪುನರ್‌ಸ್ಥಾಪನೆಗೆ ಸಕ್ರಿಯ ಪ್ರಚಾರ.