
ಕಾಂತಾರದ ಅಪ್ಪು ಕೋಣ ಇನ್ನಿಲ್ಲ
'ಕಾಂತಾರ' ಚಿತ್ರದ ಕಂಬಳ ಹೀರೋ 'ಅಪ್ಪು' ಕೋಣ ಇನ್ನಿಲ್ಲ
‘ಕಾಂತಾರ’ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಹೀರೋ ಹಾಗೂ ನಿರ್ದೇಶನ ಕೂಡ ಮಾಡಿದ್ದರು. ಈ ಸಿನಿಮಾಗಾಗಿ ಅವರು ಕಷ್ಟಪಟ್ಟು ಕಂಬಳ ಕೋಣ ಓಡಿಸುವುದನ್ನು ಕಲಿತಿದ್ದರು.
ಕನ್ನಡ ಚಿತ್ರರಂಗದ ಹೆಮ್ಮೆಯ 'ಕಾಂತಾರ' ಸಿನಿಮಾದ ರೋಚಕ ಕಂಬಳ ದೃಶ್ಯದ ಮೂಲಕ ನಾಡಿನ ಮನೆಮಾತಾಗಿದ್ದ ಚಾಂಪಿಯನ್ ಕೋಣ 'ಅಪ್ಪು' ಮೃತಪಟ್ಟಿದೆ. ಈ ಸುದ್ದಿಯು ಕಂಬಳ ಪ್ರೇಮಿಗಳು ಮತ್ತು ಸಿನಿಮಾ ಅಭಿಮಾನಿಗಳಲ್ಲಿ ತೀವ್ರ ಬೇಸರ ಮೂಡಿಸಿದೆ. ತೆರೆಯ ಮೇಲೆ ರಿಷಬ್ ಶೆಟ್ಟಿಯವರೊಂದಿಗೆ ಮಿಂಚಿದ್ದಲ್ಲದೆ, ಕಂಬಳದ ಅಂಗಳದಲ್ಲಿ ತನ್ನ ವೇಗದ ಓಟದಿಂದ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದ 'ಅಪ್ಪು'ವಿನ ಅಗಲಿಕೆ ಕರಾವಳಿಯ ಜಾನಪದ ಕ್ರೀಡಾಲೋಕಕ್ಕೆ ದೊಡ್ಡ ನಷ್ಟವೆಂದೇ ಬಣ್ಣಿಸಲಾಗುತ್ತಿದೆ.
ಬೈಂದೂರಿನ ಬೊಳಂಬಳ್ಳಿಯ ಕಂಬಳ ಪ್ರೇಮಿ ಪರಮೇಶ್ವರ ಭಟ್ ಅವರು 'ಅಪ್ಪು' ಮತ್ತು 'ಕಾಲಾ' ಎಂಬ ಹೆಸರಿನ ಕೋಣಗಳ ಜೋಡಿಯನ್ನು ಸಾಕಿದ್ದರು. 'ಕಾಂತಾರ' ಸಿನಿಮಾದ ನಿರ್ದೇಶಕ ಹಾಗೂ ನಾಯಕ ನಟ ರಿಷಬ್ ಶೆಟ್ಟಿ, ಚಿತ್ರದ ಕಂಬಳ ದೃಶ್ಯಗಳಿಗಾಗಿ ವಿಶೇಷ ತರಬೇತಿ ಪಡೆಯಲು ಇದೇ ಕೋಣಗಳನ್ನು ಬಳಸಿಕೊಂಡಿದ್ದರು. ಚಿತ್ರೀಕರಣಕ್ಕೂ ಮುನ್ನ ಹಲವು ದಿನಗಳ ಕಾಲ 'ಅಪ್ಪು' ಮತ್ತು 'ಕಾಲಾ' ಜೊತೆ ಕಾಲ ಕಳೆದು, ಅವುಗಳೊಂದಿಗೆ ವಿಶೇಷ ಬಾಂಧವ್ಯ ಬೆಳೆಸಿಕೊಂಡಿದ್ದ ರಿಷಬ್, ಕಷ್ಟಕರವಾದ ಕಂಬಳ ಓಡಿಸುವುದನ್ನು ಕಲಿತಿದ್ದರು. ಸಿನಿಮಾದಲ್ಲಿ ಈ ಕೋಣಗಳ ಸಹಜ ಪ್ರದರ್ಶನವು ದೃಶ್ಯಗಳಿಗೆ ಜೀವ ತುಂಬಿತ್ತು.
ಕಂಬಳದ ಸ್ಟಾರ್
'ಅಪ್ಪು' ಕೇವಲ ಸಿನಿಮಾ ಸ್ಟಾರ್ ಆಗಿರಲಿಲ್ಲ, ನಿಜವಾದ ಕಂಬಳದ ಹೀರೋ ಆಗಿತ್ತು. ತನ್ನ ಜೋಡಿ 'ಕಾಲಾ' ಜೊತೆಗೂಡಿ, 'ಅಪ್ಪು' ನೇಗಿಲು ಜೂನಿಯರ್ ವಿಭಾಗದಲ್ಲಿ ಎರಡು ಬಾರಿ ಸರಣಿಶ್ರೇಷ್ಠ ಪ್ರಶಸ್ತಿ ಗೆದ್ದಿತ್ತು. ಕುಂದಾಪುರ ಭಾಗದಲ್ಲಿ ನಡೆಯುವ ಕಂಬಳಗಳಲ್ಲಿ ಸತತ ಐದು ವರ್ಷಗಳ ಕಾಲ ಚಾಂಪಿಯನ್ ಆಗಿ ಮೆರೆದಿತ್ತು. ಅಲ್ಲದೆ, ಐತಿಹಾಸಿಕ ಬೆಂಗಳೂರು ಕಂಬಳದಲ್ಲೂ ಕನೆಹಲಗೆ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿ, ಕರಾವಳಿಯ ಗಂಡು ಕಲೆಯ ಕೀರ್ತಿಯನ್ನು ರಾಜಧಾನಿಯಲ್ಲಿ ಪಸರಿಸಿತ್ತು.
2022ರಲ್ಲಿ ಬಿಡುಗಡೆಯಾಗಿ, ಕನ್ನಡ ಮಾತ್ರವಲ್ಲದೆ ಜಾಗತಿಕ ಮಟ್ಟದಲ್ಲಿ ಯಶಸ್ಸು ಕಂಡ 'ಕಾಂತಾರ' ಚಿತ್ರವು, ಕರಾವಳಿಯ ದೈವಾರಾಧನೆ, ಕಂಬಳದಂತಹ ವಿಶಿಷ್ಟ ಸಂಸ್ಕೃತಿಯನ್ನು ಜಗತ್ತಿಗೆ ಪರಿಚಯಿಸಿತ್ತು. ಈ ಸಿನಿಮಾದ ಯಶಸ್ಸಿನಲ್ಲಿ 'ಅಪ್ಪು'ವಿನ ಪಾತ್ರವೂ ಮಹತ್ವದ್ದಾಗಿತ್ತು. ಸದ್ಯ ರಿಷಬ್ ಶೆಟ್ಟಿ 'ಕಾಂತಾರ: ಚಾಪ್ಟರ್ 1' ಸಿನಿಮಾದ ಕೆಲಸಗಳಲ್ಲಿ ನಿರತರಾಗಿದ್ದು, ತಮ್ಮ ನೆಚ್ಚಿನ 'ಅಪ್ಪು'ವಿನ ಅಗಲಿಕೆಗೆ ಕಂಬನಿ ಮಿಡಿದಿದ್ದಾರೆ ಎಂದು ತಿಳಿದುಬಂದಿದೆ.