
ರಿಷಭ್ ಶೆಟ್ಟಿ
ಗೆದ್ದು ಬೀಗಿದ ʼಕಾಂತಾರ: ಚಾಪ್ಟರ್-1ʼ: ದೃಶ್ಯಕಾವ್ಯಕ್ಕೆ ಸಿನಿಪ್ರಿಯರು ಫಿದಾ
ಕ್ರಿ.ಶ.4-5 ನೇ ಶತಮಾನದ ಕದಂಬರ ಆಳ್ವಿಕೆ ಅವಧಿಯಲ್ಲಿ ತುಳುನಾಡಿನ ದೈವಗಳ ಮಾಯಾವಿ ಲೋಕವನ್ನೇ ತೆರೆಯ ಮೇಲೆ ಮರು ಸೃಷ್ಟಿಸಲಾಗಿದೆ.
ನಟ, ನಿರ್ದೇಶಕ ರಿಷಬ್ ಶೆಟ್ಟಿ ಅಭಿನಯಿಸಿ ನಿರ್ದೇಶಿಸಿರುವ ಬಹು ನಿರೀಕ್ಷಿತ ʼಕಾಂತಾರ: ಚಾಪ್ಟರ್-1 ಚಿತ್ರ ಗುರುವಾರ ವಿಶ್ವದೆಲ್ಲೆಡೆ ಅದ್ಧೂರಿಯಾಗಿ ತೆರೆ ಕಂಡಿದೆ. ಚಿತ್ರದ ಮೊದಲ ಪ್ರದರ್ಶನದಲ್ಲೇ ಸಿನಿ ಪ್ರಿಯರು ಫುಲ್ ಫಿದಾ ಆಗಿದ್ದಾರೆ.
ಸಾಹಸಮಯ ದೃಶ್ಯ, ದೈವಗಳ ಅವತಾರ, ಅತ್ಯುತ್ತಮ ವಿಶುವಲ್ ಎಫೆಕ್ಟ್‌ನೊಂದಿಗೆ ಆಧ್ಯಾತ್ಮಿಕತೆಯ ಅನುಭೂತಿಯೊಂದಿಗೆ ದೈವಿಕ ದರ್ಶನ ಒದಗಿಸಿದೆ. ಕ್ರಿ.ಶ.4-5 ನೇ ಶತಮಾನದ ಕದಂಬರ ಆಳ್ವಿಕೆ ಅವಧಿಯಲ್ಲಿ ದೈವಗಳ ಮಾಯಾವಿ ಲೋಕವನ್ನು ತೆರೆಯ ಮೇಲೆ ಮರುಸೃಷ್ಟಿಸಲಾಗಿದೆ.
2022 ಅಕ್ಟೋಬರ್ ತಿಂಗಳಲ್ಲಿ ಕಾಂತಾರ ಚಿತ್ರ ಬಿಡುಗಡೆಯದಾಗ ಗಲ್ಲಾಪೆಟ್ಟಿಗೆಯಲ್ಲಿ ದೂಳೆಬ್ಬಿಸಿತ್ತು. ಈಗ ಕಾಂತಾರ: ಚಾಪ್ಟರ್-1 ಕೂಡ ಅದೇ ಹಾದಿಯಲ್ಲಿ ಮುನ್ನಡೆಯುತ್ತಿದೆ. ಕಾಂತಾರ: ಚಾಪ್ಟರ್-1 ಚಿತ್ರಕ್ಕೆ ಸಿನಿ ಪ್ರೇಕ್ಷಕರು ಮನಸೋತಿದ್ದಾರೆ, ಕಾಂತಾರ ತಂಡದಲ್ಲಿ ಗೆಲುವಿನ ಸಂಭ್ರಮ ಹೆಚ್ಚಿದೆ.
ರಿಷಬ್ ಶೆಟ್ಟಿ ಅವರು ಬೆರ್ಮೆ ಹೆಸರಿನ ಪಾತ್ರದಲ್ಲಿ ಕಾಣಿಸಿಕೊಂಡು, ಕಾಂತಾರ (ಕಾಡು) ಕಾಯುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ. ದೈವವ ಅವತಾರಗಳಲ್ಲಿ ಕಾಣಿಸಿಕೊಂಡಾಗ ಎಲ್ಲಿಯೂ ಹಾವಭಾವಗಳಿಗೆ ಚ್ಯುತಿ ಬಾರದಂತೆ ನಟಿಸಿದ್ದು, ಪ್ರೇಕ್ಷಕರನ್ನು ಚಿತ್ರ ಹಿಡಿದಿಟ್ಟುಕೊಳ್ಳಲಿದೆ.
ರುಕ್ಮಿಣಿ ವಸಂತ್ ಅವರು ಯುವ ರಾಣಿಯ ಪಾತ್ರದಲ್ಲಿ ನಟಿಸಿದ್ದು, ಪ್ರಬುದ್ಧ ನಟನೆಯ ಮೂಲಕ ಇಷ್ಟವಾಗುತ್ತಾರೆ. ಗುಲ್ಶನ್ ದೇವಯ್ಯ, ಜಯರಾಮ್, ಪ್ರಮೋದ್ ಶೆಟ್ಟಿ ಮೊದಲಾವರು ತಮಗೆ ಕೊಟ್ಟ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಪ್ರಕಾಶ್ ತುಮಿನಾಡ್, ದೀಪಕ್ ರೈ ಪಣಜೆ ನಗುವಿನ ಕಚಗುಳಿ ಸಿನಿಮಾದ ಉದ್ದಕ್ಕೂ ಇದೆ.
ಇತ್ತೀಚೆಗೆ ಹೃದಯಾಘಾತದಿಂದ ಮೃತಪಟ್ಟ ಕಾಮಿಡಿ ಕಿಲಾಡಿಗಳು ಖ್ಯಾತಿಯ ರಾಕೇಶ್ ಪೂಜಾರಿ ಪಾತ್ರ ಹೈಲೈಟ್ ಆಗಿದೆ. ಸಿನಿಮಾದಲ್ಲಿ ಅದ್ಧೂರಿತನಕ್ಕೆ ಎಲ್ಲಿಯೂ ಕೊರತೆಯಾಗದಂತೆ ‘ಹೊಂಬಾಳೆ ಫಿಲ್ಮ್ಸ್’ ನೋಡಿಕೊಂಡಿದೆ.
‘ಕಾಂತಾರ’ ಚಿತ್ರದ ಎರಡು ಹಾಡುಗಳನ್ನೇ ಇಲ್ಲಿಯೂ ಬಳಕೆ ಮಾಡಿಕೊಳ್ಳಲಾಗಿದೆ. ಇನ್ನು ಸಾಹಸಮಯ ದೃಶ್ಯಗಳೇ ಹೆಚ್ಚು ಕಾಣಲಿದ್ದು, ಯುದ್ಧದ ದೃಶ್ಯವು ರಾಜಮೌಳಿಯ ‘ಬಾಹುಬಲಿ’ ಸಿನಿಮಾನ ನೆನಪಿಸುವಂತಿದೆ.
ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ‘ಕಾಂತಾರ: ಚಾಪ್ಟರ್ -2’ ಆರಂಭಿಸುವ ಬಗ್ಗೆಯೂ ಮಾಹಿತಿ ನೀಡಲಾಗಿದೆ.
ಕೊರಗಜ್ಜ ಪಾತ್ರದ ಆಗಮನ
‘ಕಾಂತಾರ: ಚಾಪ್ಟರ್-1’ ಚಿತ್ರದ ಕ್ಲೈಮ್ಯಾಕ್ಸ್ ಅದ್ಭುತವಾಗಿ ಮೂಡಿಬಂದಿದೆ. ಚಾವುಂಡಿ (ಒಂದು ದೈವ) ಆಗಮನದ ಬಳಿಕ ಕೊರಗ್ಗಜ್ಜನನ್ನೂ ತೋರಿಸಲಾಗಿದೆ. ಕೊನೆಯಲ್ಲಿ ಮತ್ತೊಂದು ದಂತ ಕಥೆಯೂ ಇದೆ ಎಂದು ಹೇಳಲಾಗುತ್ತದೆ. ಅದನ್ನೇ ‘ಕಾಂತಾರ: ಚಾಪ್ಟರ್ -2’ ಚಿತ್ರದ ಕಥಾವಸ್ತು ಎಂದು ಹೇಳುವ ಮೂಲಕ ಕುತೂಹಲ ಹೆಚ್ಚಿಸಲಾಗಿದೆ.
ಕಳೆದ ಮೂರು ವರ್ಷಗಳಿಂದ ಶ್ರಮ ಹಾಕಿದ್ದ ರಿಷಬ್ ಶೆಟ್ಟಿ ಅವರ ಕೈಯಲ್ಲಿ ಸಾಕಷ್ಟು ಚಿತ್ರಗಳಿದ್ದು, ಸದ್ಯ ಎಲ್ಲವನ್ನು ಮುಗಿಸಿದ ಬಳಿಕ ಹೊಸ ಚಿತ್ರಕ್ಕೆ ಕೈ ಹಾಕಲಿದ್ದಾರೆ ಎನ್ನಲಾಗಿದೆ.
ಕಾಡುವ ರಾಕೇಶ್ ಪೂಜಾರಿ
ಚಿತ್ರದಲ್ಲಿ ಕಾಮಿಡಿ ಕಿಲಾಡಿಗಳು ಖ್ಯಾತಿಯ ರಾಕೇಶ್ ಪೂಜಾರಿ ಯೋಧನ ದೃಶ್ಯದಲ್ಲಿ ಕಾಣಿಸಿಕೊಂಡು ಅಭಿಮಾನಿಗಳ ಮನಗೆದ್ದಿದ್ದಾರೆ. ಚಿತ್ರದಲ್ಲಿ ʼಬಂದರುʼ ನೋಡಿಕೊಳ್ಳುವ ವ್ಯಕ್ತಿಯ ಮಗನ ಪಾತ್ರದಲ್ಲಿ ಕಾಣಿಸಿಕೊಂಡಿರುವ ರಾಕೇಶ್, ಈಗ ಇಲ್ಲದಿರುವುದು ಅಭಿಮಾನಿಗಳನ್ನು ಕಾಡುತ್ತದೆ. ಚಿತ್ರದ ಸೆಕೆಂಡ್ ಹಾಫ್ ನಲ್ಲಿ ಆಗಾಗ ಕಾಣಿಸಿಕೊಳ್ಳುವುದರೊಂದಿಗೆ ಒಳ್ಳೆಯ ಅವಕಾಶ ಪಡೆದಿದ್ದಾರೆ.
ರಿಷಬ್ ಅಪ್ಪಿಕೊಂಡು ಭಾವುಕ
ಕಾಂತಾರ: ಚಾಪ್ಟರ್-1 ಚಿತ್ರಕ್ಕೆ ಅತ್ಯುತ್ತಮ ಪ್ರತಿಕ್ರಿಯೆ ಬರುತ್ತಿದ್ದಂತೆ ರಿಷಬ್ ಶೆಟ್ಟಿ ಅವರನ್ನು ಪತ್ನಿ ಪ್ರಗತಿ ಶೆಟ್ಟಿ ಅಪ್ಪಿಕೊಂಡು ಭಾವುಕರಾದರು.
ಚಿತ್ರದಲ್ಲಿ ಕಾರ್ಯ ನಿರ್ವಹಿಸಿದ ತಾಂತ್ರಿಕ ವರ್ಗದ ಕುಟುಂಬದವರಿಗಾಗಿ ಪ್ರೀಮಿಯರ್ ಶೋ ಏರ್ಪಡಿಸಲಾಗಿತ್ತು. ಈ ಶೋನಲ್ಲಿ ರಿಷಬ್ ಹಾಗೂ ಪ್ರಗತಿ ಶೆಟ್ಟಿ ಕೂಡ ಭಾಗವಹಿಸಿದ್ದಾಗ ಚಿತ್ರವನ್ನು ನೋಡಿ ಖುಷಿಯಿಂದ ಪ್ರಗತಿ ಶೆಟ್ಟಿ ಭಾವುಕರಾದರು.