
ಕಾಂತಾರಾ-2 ಚಿತ್ರ ಬಿಡುಗಡೆ: ನಿರ್ಮಾಪಕ ವಿಜಯ್ ಕಿರಂಗದೂರು ಏನಂದರು?
ಕಾಂತಾರ-2 ರ ಪ್ರಿಕ್ವೆಲ್ ಚಿತ್ರೀಕರಣ ನಡೆಯುತ್ತಿದೆ. ಈ ಚಿತ್ರ ಕದಂಬರ ಕಾಲದ ಕಥಾ ಹಂದರ ಹೊಂದಿದೆ ಎಂದು ಚಿತ್ರದ ನಿರ್ಮಾಪಕ ವಿಜಯ್ ಕಿರಂಗದೂರು ತಿಳಿಸಿದ್ದಾರೆ
ನಟ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸುತ್ತಿರುವ ಬಹುನಿರೀಕ್ಷಿತ ಕಾಂತಾರಾ-2 ಚಿತ್ರ 2025 ಆಗಸ್ಟ್ ತಿಂಗಳಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರದ ನಿರ್ಮಾಪಕ ವಿಜಯ್ ಕಿರಂಗದೂರು ತಿಳಿಸಿದ್ದಾರೆ.
ನವದೆಹಲಿಯಲ್ಲಿ ಈಚೆಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಅತ್ಯುತ್ತಮ ಮನರಂಜನಾ ಪ್ರಶಸ್ತಿ ಪಡೆದ ʼಕಾಂತಾರʼದ ನಿರ್ಮಾಪಕರಾಗಿ ಅವರು ಪ್ರಶಸ್ತಿ ಸ್ವೀಕರಿಸಲು ಆಗಮಿಸಿದ್ದರು. ಜೊತೆಗೆ ಅತ್ಯುತ್ತಮ ನಟನೆಗಾಗಿ ಪ್ರಶಸ್ತಿ ಸ್ವೀಕರಿಸಲು ರಿಷಬ್ ಶೆಟ್ಟಿ ಕೂಡ ಬಂದಿದ್ದರು.
ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ವಿಜಯ್ ಕಿರಂಗದೂರು, ಕಾಂತಾರ-2 ರ ಪ್ರಿಕ್ವೆಲ್ ಚಿತ್ರೀಕರಣ ನಡೆಯುತ್ತಿದೆ. ಈ ಚಿತ್ರ ಕದಂಬರ ಕಾಲದ ಕಥಾ ಹಂದರ ಹೊಂದಿದೆ. ಇಡೀ ಚಿತ್ರತಂಡ ಕುಂದಾಪುರದಲ್ಲೇ ಉಳಿದು ಚಿತ್ರೀಕರಣ ನಡೆಸುತ್ತಿದೆ. 2025 ಆಗಸ್ಟ್ ತಿಂಗಳಲ್ಲಿ ಚಿತ್ರ ಬಿಡುಗಡೆಯಾಗುವ ನಿರೀಕ್ಷೆ ಇದೆ. ಅದೇ ರೀತಿ ಕೆಜಿಎಫ್-3 ಕುರಿತು ನಾಲ್ಕೈದು ತಿಂಗಳಲ್ಲಿ ಅಪ್‌ಡೇಟ್ ನೀಡಲಾಗುವುದು ಎಂದು ಹೇಳಿದರು.
ಕಾಂತಾರಾ-2 ಚಿತ್ರದ ಪ್ವಿಕ್ವೆಲ್ ಗಾಗಿ ರಿಷಬ್ ಶೆಟ್ಟಿ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ಅವರು 10ಕೆ.ಜಿ. ತೂಕ ಹೆಚ್ಚಿಸಿಕೊಂಡು, 8ಕೆ.ಜಿ. ತೂಕ ಇಳಿಸಿಕೊಂಡಿದ್ದಾರೆ. ಚಿತ್ರದಲ್ಲಿ ಬಹುತೇಕ ಆಕ್ಷನ್ ಇದ್ದು, ಕಳರಿಪಯಟ್ಟು ತರಬೇತಿ ಕೂಡ ಪಡೆದಿದ್ದಾರೆ. ಈಗಾಗಲೇ ಚಿತ್ರದ ಪ್ರಿಕ್ವೆಲ್ ಹಕ್ಕನ್ನು ಪ್ರೈಂ ವಿಡಿಯೋದವರು ದೊಡ್ಡ ಮೊತ್ತಕ್ಕೆ ಖರೀದಿಸಿದ್ದಾರೆ ಎಂದು ಕಿರಂಗದೂರು ತಿಳಿಸಿದರು.