Tungabhadra Dam Gate Break|  ಜಲಾಶಯ ತಜ್ಞ ಕನ್ನಯ್ಯ ನಾಯ್ಡು ತಂಡದಿಂದ ಕ್ರೆಸ್ಟ್‌ಗೇಟ್‌ ಅಳವಡಿಕೆ ಯಶಸ್ವಿ;  ರೈತರ ಆತಂಕ ದೂರ
x

Tungabhadra Dam Gate Break| ಜಲಾಶಯ ತಜ್ಞ ಕನ್ನಯ್ಯ ನಾಯ್ಡು ತಂಡದಿಂದ ಕ್ರೆಸ್ಟ್‌ಗೇಟ್‌ ಅಳವಡಿಕೆ ಯಶಸ್ವಿ; ರೈತರ ಆತಂಕ ದೂರ

ಭಾರೀ ಪ್ರಮಾಣದ ನೀರಿನ ಹೊರಹರಿವಿದ್ದರೂ ಗೇಟ್ ಅಳವಡಿಕೆಯಂತಹ ಕಷ್ಟಸಾಧ್ಯವಾದ ಕಾರ್ಯವನ್ನು ತಜ್ಞ ಎಂಜಿನಿಯರ್‌ ಕನ್ನಯ್ಯ ನಾಯ್ಡು ಮತ್ತವರ ತಂಡ ಸಾಧಿಸಿದ್ದು, ರೈತರನ್ನು ಆತಂಕದಿಂದ ಮುಕ್ತಗೊಳಿಸಿದ್ದಾರೆ


ತುಂಗಭದ್ರಾ ಅಣೆಕಟ್ಟಿನ 19 ನೇ ಕ್ರಸ್ಟ್ ಗೇಟ್ ಚೈನ್ ಲಿಂಕ್‌ ಗೆ ಧಕ್ಕೆಯಾಗಿದ್ದು, ಈಗ ಆ ಆತಂಕ ವಾತಾವರಣವನ್ನು ನಿವಾರಿಸಲಾಗಿದೆ.. ತುಂಗಭದ್ರಾ ಜಲಾಶಯದ ಕ್ರಸ್ಟ್‌ಗೇಟ್‌ ಇದ್ದ ಸ್ಥಳದಲ್ಲಿ ತಾತ್ಕಾಲಿಕ ಗೇಟ್ (ಸ್ಟಾಪ್‌ಲಾಗ್ ಗೇಟ್) ಅಳವಡಿಸುವ ಕಾರ್ಯ ಯಶಸ್ವಿಯಾಗಿದೆ.

ಪ್ರಸ್ತುತ ಸ್ಟಾಪ್ ಗೇಟ್ ಗಳನ್ನು ಅಳವಡಿಸಲಾಗಿದೆ. ಭಾರಿ ಪ್ರಮಾಣದಲ್ಲಿ ನೀರು ಹೊರಗೆ ಹೋಗುವುದು ನಿಂತಿದೆ. ಅಣೆಕಟ್ಟಿಗೆ ಸುಮಾರು 65 ಸಾವಿರ ಕ್ಯೂಸೆಕ್ಸ್ ನೀರಿನ ಒಳಹರಿವಿದೆ. ಭಾರೀ ಪ್ರಮಾಣದ ನೀರಿನ ಹೊರಹರಿವಿದ್ದರೂ ಗೇಟ್ ಅಳವಡಿಕೆಯಂತಹ ಕಷ್ಟಸಾಧ್ಯವಾದ ಕಾರ್ಯವನ್ನು ತಜ್ಞ ಎಂಜಿನಿಯರ್‌ ಕನ್ನಯ್ಯ ನಾಯ್ಡು ಮತ್ತವರ ತಂಡ ಸಾಧಿಸಿದ್ದು, ರೈತರನ್ನು ಆತಂಕದಿಂದ ಮುಕ್ತಗೊಳಿಸಿದ್ದಾರೆ. ತುಂಗಭದ್ರಾ ಜಲಾಶಯದ ನೀರನ್ನು ಆಧರಿಸಿ ಎರಡು ಬೆಳೆ ಬೆಳೆಯುವ ರೈತರು ಇನ್ನು ನಿಶ್ಚಿಂತರಾಗಿ ಕೃಷಿ ಕಾರ್ಯದಲ್ಲಿ ತೊಡಗಿಕೊಳ್ಳಬಹುದು.

ತುಂಗಭದ್ರಾ ಜಲಾಶಯದಲ್ಲಿ ಮುರಿದಿದ್ದ ಗೇಟ್ ನಂಬರ್ 19 ಕ್ಕೆ ಬದಲಿಯಾಗಿ 5 ತಡೆ ಗೇಟುಗಳ (ತಾತ್ಕಾಲಿಕ) ಅಳವಡಿಕೆ ಕಾರ್ಯ ಯಶಸ್ವಿಯಾಗಿದ್ದು, ಈ ಸವಾಲಿನ ಕಾರ್ಯಕ್ಕೆ ಸ್ಥಳದಲ್ಲೇ ಮೊಕ್ಕಾಂಹೂಡಿದ ಡ್ಯಾಂ ಗೇಟ್ ನಿರ್ಮಾಣ ಹಾಗೂ ಸುರಕ್ಷತೆ ತಜ್ಞ ನಿವೃತ್ತ ಇಂಜಿನಿಯರ್ ಕನ್ನಯ್ಯ ನಾಯ್ಡು ಸೂಕ್ತ ಮಾರ್ಗದರ್ಶನ ನೀಡಿ ಈ ಕಾರ್ಯ ಯಶಸ್ವಿಗೊಳಿಸಿದ್ದಾರೆ. ಈ ಕಾರ್ಯದಲ್ಲಿ‌ ಅವಿರತ ಶ್ರಮಿಸಿದ ಎಲ್ಲಾ ಇಂಜಿನಿಯರರಿಗೆ, ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗೆ, ಕಾರ್ಮಿಕರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್‌ ಅಭಿನಂದಿಸಿದ್ದಾರೆ.

ಜಲಸಂಪನ್ಮೂಲ ಸಚಿವರೂ ಆಗಿರುವ ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರು ಮಾತನಾಡಿ, ಕ್ರೆಸ್ಟ್‌ ಗೇಟ್‌ ಮುರಿದಿದ್ದರಿಂದ 35 ಟಿಎಂಸಿಯಷ್ಟು ನೀರು ಕರ್ನಾಟಕಕ್ಕೆ ನಷ್ಟವಾಗಿದೆ. ಈ ಘಟನೆ ನಡೆದ ನಂತರ ತಕ್ಷಣ ಅಧಿಕಾರಿಗಳು ಎಚ್ಚೆತ್ತುಕೊಂಡರು. ಅಣೆಕಟ್ಟು ಕೇಂದ್ರ ಸರ್ಕಾರದ ವಶದಲ್ಲಿ ಇದ್ದರೂ ಸಹ ನಮ್ಮ ಬಳಿಯೂ ನಕ್ಷೆಯಿತ್ತು. ಇದನ್ನು ತಂತ್ರಜ್ಞರಾದ ಕನ್ನಯ್ಯ ನಾಯ್ಡು ಅವರನ್ನು ಸಂಪರ್ಕಿಸಿ ಗೇಟ್ ಅನ್ನು ಮತ್ತೆ ನಿರ್ಮಿಸಿ ಅಳವಡಿಸುವ ಕೆಲಸ ಮಾಡಲಾಯಿತು. ಜಿಂದಾಲ್, ನಾರಾಯಣ ಇಂಜಿನಿಯರಿಂಗ್ ಮತ್ತು ಹಿಂದುಸ್ಥಾನ್ ಇಂಜಿನಿಯರಿಂಗ್ ಕಂಪನಿ ಅವರು ಸೇರಿ ಕೆಲಸ ಮಾಡಿದರು ಎಂದು ಹೇಳಿದ್ದಾರೆ.

ಇಡೀ ದೇಶವೇ ಏನಾಗಬಹುದು ಎಂದು ಕಾತರದಿಂದ ಕಾಯುತ್ತಿತ್ತು. ಇತರೇ ಅಣೆಕಟ್ಟುಗಳಲ್ಲಿ ರೋಪ್ ಹಾಗೂ ಚೈನ್ ವ್ಯವಸ್ಥೆ ಇರುತ್ತದೆ. ಇದು ಹಳೆಯ ಅಣೆಕಟ್ಟು ಆದ ಕಾರಣಕ್ಕೆ ಈ ರೀತಿಯ ವ್ಯವಸ್ಥೆ ಇರಲಿಲ್ಲ. ಮುಂದಿನ ದಿನಗಳಲ್ಲಿ ಯಾವ ರೀತಿಯ ವ್ಯವಸ್ಥೆ ಮಾಡಬಹುದು ಎಂದು ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದವರು ಹೇಳಿದ್ದಾರೆ.

ಕನ್ನಯ್ಯ ನಾಯ್ಡು ಏನು ಹೇಳುತ್ತಾರೆ?

ಕ್ರೆಸ್ಟ್ ಗೇಟ್ ತಜ್ಞ ಕನ್ನಯ್ಯ ನಾಯ್ಡು ಅವರು ಮಾಧ್ಯಮಗಳಿಗೆ ಮಾತನಾಡಿ, ಈ ಅಣೆಕಟ್ಟಿನ ಎಲ್ಲಾ 33 ಕ್ರೆಸ್ಟ್ ಗೇಟ್‌ಗಳನ್ನು ತಕ್ಷಣವೇ ಬದಲಾಯಿಸಿದರೆ ಇನ್ನೂ 30 ವರ್ಷಗಳವರೆಗೆ ಕಾರ್ಯನಿರ್ವಹಿಸಬಹುದು. ಅಣೆಕಟ್ಟು ನಿರ್ಮಾಣವಾಗಿ 45 ವರ್ಷಗಳ ನಂತರ ಕ್ರೆಸ್ಟ್ ಗೇಟ್‌ಗಳನ್ನು ಬದಲಾಯಿಸಬೇಕಾಗಿತ್ತು. ಕಲ್ಲಿನ ಚಪ್ಪಡಿಗಳು ಸಡಿಲಗೊಂಡು ಅಣೆಕಟ್ಟು ಅದರ ಸಾಮರ್ಥ್ಯ ಕುಸಿದಾಗ ಅವಘಡ ಸಂಭವಿಸಬಹುದು. ಆದ್ದರಿಂದ 30 ವರ್ಷಗಳ ನಂತರ ಹೊಸ ಅಣೆಕಟ್ಟು ನಿರ್ಮಿಸಬೇಕು ಎಂದು ಹೇಳಿದರು.

ಜಲಾಶಯ ತಜ್ಷ ಕನ್ನಯ್ಯ ನಾಯ್ಡು ಯಾರು?

ಜಲಾಶಯ ತಜ್ಞ ಕನ್ನಯ್ಯ ನಾಯ್ಡು (77) ಅವರ ಪೂರ್ತಿ ಹೆಸರು ನಾಗಿಂಡಯ್ಯ ಕನ್ನಯ್ಯ ನಾಯ್ಡು. ಇವರು ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಗುಡಿಪಾಲ ಮಂಡಲ್​ನ ದಾಸನಪಲ್ಲಿ ಗ್ರಾಮದವರು. ತಿರುಪತಿಯಲ್ಲಿನ ವೆಂಕಟೇಶ್ವರ ಇಂಜಿನಿಯರಿಂಗ್​ ಕಾಲೇಜಿನಲ್ಲಿ ತಮ್ಮ ಮೆಕ್ಯಾನಿಕಲ್​ ಇಂಜಿನಿಯರಿಂಗ್​ ಮುಗಿಸಿದ ಅವರು ದಿವಾನ್ ಸಿ. ರಂಗಚಾರಿ ಜತೆ 5 ವರ್ಷ ತರಬೇತಿ ಪಡೆದಿದ್ದರು. ಬಳಿಕ ತುಂಗಭದ್ರಾ ಅಣೆಕಟ್ಟು ಯೋಜನೆಯಲ್ಲಿ 1976 ಜನವರಿ 16ರಂದು ಕೆಲಸಕ್ಕೆ ಸೇರಿದರು. ಅಂದಿನಿಂದ ಇಂಜಿನಿಯರಿಂಗ್ ಕೆಲಸ ಮಾಡಿ 2002 ರಲ್ಲಿ ಸ್ವಯಂ ನಿವೃತ್ತಿ ಪಡೆದರು. ಜಲಾಶಯಗಳಿಗೆ ಬೇಕಾದ ಕ್ರಸ್ಟ್​ ಗೇಟ್​, ಪವರ್​ ಜನರೇಷನ್ ಗೇಟ್​, ರೈತರಿಗೆ ಬೇಕಾಗಿದ್ದ ರೆಗುಲೇಟರ್ಸ್​ ಎಲ್ಲವನ್ನು ಕನ್ನಯ್ಯ ಅವರ ನಿರ್ದೇಶನದಲ್ಲಿ ಮಾಡಲಾಗುತ್ತಿದೆ. ಕನ್ನಯ್ಯ ಅವರು ಆಂಧ್ರಪ್ರದೇಶದಲ್ಲಿ ಹುಟ್ಟಿದರೂ ತಮಿಳುನಾಡಿನಲ್ಲಿ ಕೆಲ ವರ್ಷ ಕಾರ್ಯನಿರ್ವಹಿಸಿದರು. ಆದರೆ ಅವರ ಜೀವನದ ಅತಿ ಹೆಚ್ಚು ಕಾಲ ಕರ್ನಾಟಕದಲ್ಲಿ ಕೆಲಸ ಮಾಡಿದ್ದಾರೆ. 2002ರಿಂದ ಒಟ್ಟು 170 ಜಲಾಶಯಗಳ ದುರಸ್ತಿ ಮಾಡಿದ್ದಾರೆ. 500 ಜಲಾಶಯಗಳಿಗೆ ತಂತ್ರಜ್ಞರಾಗಿ ದುಡಿದಿದ್ದಾರೆ.

ಘಟನೆ ಸಂಭವಿಸಿದ್ದು ಯಾವಾಗ?

ಆಗಸ್ಟ್‌ 11 ರ ಮುಂಜಾವ 19 ನೇ ಗೇಟ್ ಒಡೆದಿರುವುದರಿಂದ ನದಿ ನೀರಿನ ರಭಸ ಹೆಚ್ಕಾಗಿದೆ. ಹೆಚ್ಚಿನ ಅನಾಹುತ ತಪ್ಪಿಸುವ ದೃಷ್ಟಿಯಿಂದ ಮುನ್ನೆಚ್ಚರಿಕೆ ಕ್ರಮವಾಗಿ ಅಧಿಕಾರಿಗಳು ಇತರ ಗೇಟ್‌ಗಳನ್ನು ತೆರೆದು ನೀರಿನ ಒತ್ತಡ ಕಡಿಮೆ ಮಾಡಲು ಪ್ರಯತ್ನಿಸಿದ್ದಾರೆ. ಪ್ರಸ್ತುತ ಜಲಾಶಯದ ಹೊರಹರಿವು 1 ಲಕ್ಷ ಕ್ಯೂಸೆಕ್ ದಾಟಿದೆ.

ರಾಜ್ಯದ ಬೃಹತ್ ಜಲಾಶಯಗಲ್ಲಿ ಒಂದಾಗಿರುವ ಹೊಸಪೇಟೆಯ ತುಂಗಭದ್ರಾ ಜಲಾಶಯದಲ್ಲಿ ಆಗಸ್ಟ್‌ 11 ರ ಮುಂಜಾವ ಅವಘಡ ಸಂಭವಿಸಿದ್ದು, ನಂಬರ್ 19 ನೇ ಕ್ರೆಸ್ಟ್‌ಗೇಟ್ ನದಿ ರಭಸಕ್ಕೆ ಕೊಚ್ಚಿ ಹೋಗಿತ್ತು. ತುಂಗಭದ್ರಾ ಅಣೆಕಟ್ಟಿನ ಗೇಟ್ ಒಡೆದು, ಪ್ರವಾಹದ ನೀರು ಕೆಳ ಪ್ರದೇಶಗಳಿಗೆ ಹರಿಯುತ್ತಿದ್ದು, ಪ್ರವಾಹದ ಭೀತಿ ಎದುರಾಗಿತ್ತು. ನದಿಗೆ 1 ಲಕ್ಷ ಕ್ಯೂಸೆಕ್‌ಗೂ ಅಧಿಕ ಪ್ರಮಾಣದ ನೀರು ಹರಿಸಲಾಗುತ್ತಿದ್ದು, ಪ್ರವಾಹ ಎಚ್ಚರಿಕೆ ನೀಡಲಾಗಿತ್ತು.

70 ವರ್ಷಗಳ ಅಸ್ತಿತ್ವದಲ್ಲಿ ತುಂಗಭದ್ರಾ ಅಣೆಕಟ್ಟು ಅನುಭವಿಸಿದ ಮೊದಲ ಹಾನಿ ಇದಾಗಿದೆ. ತುಂಗಭದ್ರಾ ಜಲಾಶಯ ಯೋಜನೆಯು 1953 ರಲ್ಲಿ ನಿರ್ಮಾಣಗೊಂಡಿದ್ದು, ಕರ್ನಾಟಕ ಮತ್ತು ಆಂಧ್ರ ಪ್ರದೇಶ ಸರ್ಕಾರಗಳು ಜಂಟಿಯಾಗಿ ಜಲಾಶಯದ ಆಡಳಿತ ಮತ್ತು ನಿರ್ವಹಣೆಯ ಜವಾವ್ದಾರಿ ಹೊತ್ತುಕೊಂಡಿವೆ. ಇದೀಗ ತುಂಡಾಗಿರುವ ಚೈನ್‌ಲಿಂಕ್‌ ಗೇಟ್‌ ಅನ್ನು 70 ವರ್ಷಗಳ ಹಿಂದೆ ಅಳವಡಿಸಲಾಗಿತ್ತು. ಒಂದು ಕಬ್ಬಿಣದ ಹಲಗೆಯನ್ನು ಮತ್ತೊಂದು ಕಬ್ಬಿಣದ ಹಲಗೆಗೆ ಬೆಸುಗೆ (ವೆಲ್ಡಿಂಗ್) ಹಾಕಿ ಚೈನ್‌ ಲಿಂಕ್ ಗೇಟ್ ರೂಪಿಸಲಾಗುತ್ತದೆ. ಇಂಥ ಬೆಸುಗೆ ಸಡಿಲವಾದ ಕಾರಣ ಈ ಅನಾಹುತ ಸಂಭವಿಸಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Read More
Next Story