Mahakumbh Stampede | ದಕ್ಷಿಣದಿಂದ ಬಂದವರಿಗೆ ಊಟವೂ ಇಲ್ಲ; ಇಲ್ಲಿ ಬಂದು ಪ್ರಾಣ ಕಳೆದುಕೊಳ್ಳಬೇಡಿ ಎಂದ ಕನ್ನಡಿಗ
ಕಾಲ್ತುಳಿತ ದುರ್ಘಟನೆಯಿಂದ ಕೂದಲೆಳೆ ಅಂತರದಿಂದ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾದ ಕಬ್ಬನ್ ಪಾರ್ಕ್ ನಡಿಗೆದಾರರ ಸಂಘದ ಅಧ್ಯಕ್ಷ ಉಮೇಶ್ ಕುಮಾರ್ ಅವರು ದಕ್ಷಿಣ ರಾಜ್ಯಗಳಿಂದ ಬಂದವರಿಗೆ ಸರಿಯಾದ ಊಟದ ವ್ಯವಸ್ಥೆಯೂ ಇಲ್ಲʼಎಂದು ಅವ್ಯವಸ್ಥೆ ಬಗ್ಗೆ ಹೇಳಿದ್ದಾರೆ.
ಪ್ರಯಾಗ್ರಾಜ್ ಸಂಗಮದಲ್ಲಿ ಪುಣ್ಯಸ್ನಾನ ಮಾಡಲು ಕೋಟ್ಯಂತರ ಭಕ್ತರು ಉತ್ತರ ಪ್ರದೇಶದ ಪ್ರಯಾಗ್ ರಾಜ್ಗೆ ಆಗಮಿಸಿದ್ದಾರೆ. ಅಧಿಕ ಜನದಟ್ಟಣೆಯಿಂದ ಬುಧವಾರ ಕಾಲ್ತುಳಿತ ಸಂಭವಿಸಿದ ಮೇಲೆ ಅಲ್ಲಿನ ಪರಿಸ್ಥಿತಿ ಅಯೋಯಮವಾಗಿದೆ. ವಿವಿಧ ರಾಜ್ಯಗಳಿಂದ ಸಂಗಮ ಸ್ನಾನಕ್ಕೆ ಆಗಮಿಸಿದ್ದ ಭಕ್ತರು ಸ್ನಾನಕ್ಕೂ ಅವಕಾಶ ಸಿಗದೇ ವಾಪಸಾಗಿದ್ದಾರೆ.
ಮಹಾಕುಂಭ ಮೇಳದಲ್ಲಿ ಸಂಗಮ ಸ್ನಾನಕ್ಕಾಗಿ ಬೆಂಗಳೂರಿನ ವಕೀಲರೂ ಆಗಿರುವ ಕಬ್ಬನ್ ಪಾರ್ಕ್ ನಡಿಗೆದಾರರ ಸಂಘದ ಅಧ್ಯಕ್ಷ ಉಮೇಶ್ ಕುಮಾರ್ ತೆರಳಿದ್ದಾಗ ಅವರು ಕಣ್ಣಾರೆ ಕಂಡ ವಸ್ತುಸ್ಥಿತಿಯನ್ನು ʼದ ಫೆಡರಲ್ ಕರ್ನಾಟಕʼದ ಜೊತೆ ಹಂಚಿಕೊಂಡಿದ್ದಾರೆ. ಅವರು ಕೂದಲೆಳೆ ಅಂತರದಿಂದ ಕಾಲ್ತುಳಿತ ದುರ್ಘಟನೆಯಿಂದ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.
ʼʼಕುಂಭ ಮೇಳದಲ್ಲಿ ಸಂಗಮ ಸ್ನಾನಕ್ಕಾಗಿ ನನ್ನ ಸಹೋದರಿಯೊಂದಿಗೆ ಬಂದಿದ್ದೆ. ಆದರೆ, ಇಲ್ಲಿನ ಜನದಟ್ಟಣೆ ನೋಡಿ ಗಾಬರಿಯಾಯಿತು. ಹೃದಯ ಸಂಬಂಧ ಕಾಯಿಲೆ ಇರುವ ಕಾರಣ ಸಹೋದರಿಯನ್ನು ನಾವು ಉಳಿದುಕೊಂಡಿದ್ದ ಹೋಟೆಲ್ ಕೊಠಡಿಯಲ್ಲೇ ಬಿಟ್ಟು ಒಬ್ಬನೇ ಹೋಗಿ ಸಂಗಮ ಸ್ನಾನ ಮುಗಿಸಿ ಬರುತ್ತಿದ್ದೆ. ಇದಕ್ಕಿದ್ದಂತೆ ಕಾಲ್ತುಳಿತ ಸಂಭವಿಸಿತು. ಈ ವೇಳೆ ನನ್ನ ಕಾಲಿಗೂ ಗಾಯವಾಯಿತು. ಪ್ರಯಾಗ್ ರಾಜ್ಗೆ ತೆರಳಲು ಯಾವುದೇ ವಾಹನ ವ್ಯವಸ್ಥೆ ಇರಲಿಲ್ಲ. ಸುಮಾರು 20 ಕಿ.ಮೀ. ನಡೆದುಕೊಂಡು ಬರಬೇಕಾಯಿತು. ದಕ್ಷಿಣ ರಾಜ್ಯಗಳಿಂದ ಬಂದವರಿಗೆ ಸರಿಯಾದ ಊಟದ ವ್ಯವಸ್ಥೆಯೂ ಇಲ್ಲʼʼ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ʼʼಸ್ಥಳೀಯ ಪೊಲೀಸರೊಬ್ಬರ ತಪ್ಪು ಮಾಹಿತಿಯಿಂದ ಪ್ರಯಾಗ್ರಾಜ್ಗೆ 15ಕಿ.ಮೀ. ದೂರದಲ್ಲಿರುವ ರೈಲು ನಿಲ್ದಾಣಕ್ಕೆ ಬಂದೆವು. ಆಗ ಸ್ಥಳೀಯರು ಸರಿಯಾದ ವಿಳಾಸ ನೀಡಿ ಪ್ರಯಾಗ್ ರಾಜ್ಗೆ ವಾಪಸ್ ಕಳುಹಿಸಿಕೊಟ್ಟರು. ಆದರೆ, ಅಲ್ಲಿ ರೈಲುಗಳ ಕಾರ್ಯಾಚರಣೆ ರದ್ದುಗೊಳಿಸಲಾಗಿತ್ತು. ರೈಲು, ಬಸ್ಗಳು ಇಲ್ಲದಿರುವ ಕಾರಣ ಇಂದು ಪ್ರಯಾಗ್ರಾಜ್ನಲ್ಲೇ ಉಳಿದುಕೊಂಡು ನಾಳೆ ಕಾಶಿಗೆ ಪ್ರಯಾಣಿಸಲು ತೀರ್ಮಾನಿಸಿದ್ದೇವೆʼʼ ಎಂದು ಹೇಳಿದರು.
ಕುಂಭಮೇಳಕ್ಕೆ ಬರಬೇಡಿ
ಕುಂಭ ಮೇಳದಲ್ಲಿ ಕೋಟ್ಯಂತರ ಭಕ್ತರು ಭಾಗವಹಿಸಿದ್ದಾರೆ. ವೃದ್ಧರು, ಮಹಿಳೆಯರಿಗೆ ಪುಣ್ಯ ಸ್ನಾನಕ್ಕೂ ಸಮಸ್ಯೆಯಾಗಿದೆ. ಕಾಲ್ತುಳಿತ ಸಂಭವಿಸಿದೆ. ಹಾಗಾಗಿ ಯಾರೂ ಕೂಡ ವೃಥಾ ಇಲ್ಲಿಗೆ ಬಂದು ಪ್ರಾಣ ಕಳೆದುಕೊಳ್ಳಬೇಡಿ. ನೀವು ಎಲ್ಲಿದ್ದೀರೋ ಅಲ್ಲಿಂದಲೇ ಪ್ರಾರ್ಥಿಸಿʼʼ ಎಂದು ಉಮೇಶ್ ಕುಮಾರ್ ಮನವಿ ಮಾಡಿದರು.
ನಾಗಸಾಧುಗಳ ಮೆರವಣಿಗೆ ನೋಡುವಾಗ ಕಾಲ್ತುಳಿತ
ʼʼಮಹಾಸಂಗಮದಲ್ಲಿ ರಾಜಸ್ನಾನ ಮಾಡಲು ನಾಗಸಾಧುಗಳು ಮೆರವಣಿಗೆ ಮೂಲಕ ಹೊರಟಿದ್ದಾಗ ಅವರನ್ನು ನೋಡಲು ಜನ ಮುಗಿಬಿದ್ದರು. ಆಗ ತಳ್ಳಾಟ-ನೂಕಾಟ ಸಂಭವಿಸಿ ಕಾಲ್ತುಳಿತ ಉಂಟಾಯಿತುʼʼ ಎಂದು ಪ್ರತ್ಯಕ್ಷದರ್ಶಿ ಸಕಲೇಶಪುರದ ಧರ್ಮೇಶ್ ಅವರು ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದ್ದಾರೆ.
ʼಮಹಾಸಂಗಮಕ್ಕೆ ತೆರಳು ಮೂರು ಕಡೆ ಪ್ರವೇಶಾವಕಾಶ ನೀಡಲಾಗಿತ್ತು. ನಿರೀಕ್ಷೆಗೂ ಮೀರಿ ಜನರು ಬಂದಿದ್ದರಿಂದ ೨೦ ಕಿ.ಮೀ. ದೂರದಲ್ಲೇ ವಾಹನ ಸಂಚಾರ ನಿರ್ಬಂಧಿಸಲಾಗಿತ್ತು. ಆದರೆ, ಸಂಗಮ ಸ್ಥಳದಿಂದ ಮೂರು ಕಿ.ಮೀ. ದೂರದವರೆಗೆ ಸರ್ಕಾರಿ ಬಸ್ಗಳನ್ನು ಬಿಡಲಾಗಿತ್ತು. ಕಾಲ್ತುಳಿತ ಉಂಟಾಗಿದ್ದರಿಂದ ಮಹಾಸಂಗಮದ ಕಡೆ ಹೋಗಲು ಪೊಲೀಸರು ಬಿಡಲಿಲ್ಲ. ಪರಿಸ್ಥಿತಿ ನಿಯಂತ್ರಣಕ್ಕೆ ಬಂದ ನಂತರ ಪುಣ್ಯಸ್ನಾನಕ್ಕೆ ಬಿಡಲಾಯಿತುʼ ಎಂದು ವಿವರಿಸಿದರು.
ಸಕಲೇಶಪುರದ ರಘು, ಧರ್ಮೇಶ್ ಸೇರಿದಂತೆ ಒಟ್ಟು ಐವರು ಮಹಾಕುಂಭದಲ್ಲಿ ಭಾಗವಹಿಸಲು ತೆರಳಿದ್ದರು.