Mahakumbh Stampede | ಕಾಲ್ತುಳಿತಕ್ಕೆ ಸಿಲುಕಿದ ಕನ್ನಡಿಗರು: ಬೆಳಗಾವಿಯ ನಾಲ್ವರು ಕಣ್ಮರೆ?
x
ಮಹಾಕುಂಭಮೇಳ ದುರಂತ

Mahakumbh Stampede | ಕಾಲ್ತುಳಿತಕ್ಕೆ ಸಿಲುಕಿದ ಕನ್ನಡಿಗರು: ಬೆಳಗಾವಿಯ ನಾಲ್ವರು ಕಣ್ಮರೆ?

Mahakumbh Stampede| ಮಹಾಕುಂಭ ಮೇಳದ ಪವಿತ್ರ ಸ್ನಾನದಲ್ಲಿ ಪಾಲ್ಗೊಳ್ಳಲೆಂದು ಬೆಳಗಾವಿಯಿಂದ ಸುಮಾರು 60 ಜನರ ತಂಡ ಎರಡು ಬಸ್‌ನಲ್ಲಿ ತೆರಳಿತ್ತು ಎನ್ನಲಾಗಿದೆ. ಆ ಗುಂಪಿನ ನಾಲ್ವರು ಕಾಲ್ತುಳಿತ ಘಟನೆಯ ಬಳಿಕ ಯಾರ ಸಂಪರ್ಕಕ್ಕೂ ಸಿಕ್ಕಿಲ್ಲ.


ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಸಂಭವಿಸಿದ ಕಾಲ್ತುಳಿತದ ವೇಳೆ ಮೇಳದಲ್ಲಿ ರಾಜ್ಯದ ಬೆಳಗಾವಿ, ಚಿಕ್ಕಮಗಳೂರು, ಕಲಬುರಗಿ ಸೇರಿದಂತೆ ಹಲವು ಜಿಲ್ಲೆಗಳ ಯಾತ್ರಾರ್ಥಿಗಳು ಇದ್ದರು. ಆ ಪೈಕಿ ಬೆಳಗಾವಿಯ ನಾಲ್ವರು ಯಾರ ಸಂಪರ್ಕಕ್ಕೆ ಬರದೇ ಕಾಣೆಯಾಗಿದ್ದು, ಉಳಿದಂತೆ ಕೆಲವರು ಗಾಯಗೊಂಡಿದ್ದಾರೆ.

ಮಹಾಕುಂಭ ಮೇಳದ ಪವಿತ್ರ ಸ್ನಾನದಲ್ಲಿ ಪಾಲ್ಗೊಳ್ಳಲೆಂದು ಬೆಳಗಾವಿಯಿಂದ ಸುಮಾರು 60 ಜನರ ತಂಡ ಎರಡು ಬಸ್‌ನಲ್ಲಿ ತೆರಳಿತ್ತು ಎನ್ನಲಾಗಿದೆ. ಆ ಗುಂಪಿನ ನಾಲ್ವರು ಕಾಲ್ತುಳಿತ ಘಟನೆಯ ಬಳಿಕ ಯಾರ ಸಂಪರ್ಕಕ್ಕೂ ಸಿಗದೇ ಕಾಣೆಯಾಗಿದ್ದಾರೆ. ಇತರೆ ನಾಲ್ವರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಘಟನೆಯ ಪ್ರತ್ಯಕ್ಷದರ್ಶಿ ಸರೋಜಿನಿ ನಡುವಿನಹಳ್ಳಿ ಹೇಳಿದ್ದಾರೆ.

ಘಟನೆಯ ಕುರಿತು ವಿಡಿಯೋ ಮೂಲಕ ಮಾಹಿತಿ ನೀಡಿರುವ ಅವರು, "ನಾವು ಎರಡು ಬಸ್‌ನಲ್ಲಿ 60 ಜನರು ಮಹಾಕುಂಭ ಮೇಳಕ್ಕೆ ಬಂದಿದ್ದೇವೆ. ಇದ್ದಕ್ಕಿದ್ದಂತೆ ಕಾಲ್ತುಳಿತ ಉಂಟಾಯಿತು. ನಮ್ಮ ಜೊತೆ ಬಂದವರಲ್ಲಿ ನಾಲ್ಕೈದು ಜನ ಕಾಣುತ್ತಿಲ್ಲ. ನಮ್ಮದು ಒಂಭತ್ತು ಜನರ ಗುಂಪು ಇತ್ತು. ಇದರಲ್ಲಿ ಮೂರ್ನಾಲ್ಕು ಜನರು ಇಲ್ಲೇ ಇದ್ದಾರೆ. ಉಳಿದವರು ಕಾಣುತ್ತಿಲ್ಲ" ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಆದರೆ, ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಬೆಳಗಾವಿ ಜಿಲ್ಲಾಧಿಕಾರಿಗಳು, "ಈವರೆಗೆ ಬೆಳಗಾವಿಯ ಯಾವುದೇ ಯಾತ್ರಾರ್ಥಿಗಳ ಸಾವು ಸಂಭಿಸಿದ ಬಗ್ಗೆ ಮಾಹಿತಿ ಬಂದಿಲ್ಲ. ಕಾಣೆಯದವರ ಕುರಿತ ಮಾಹಿತಿ ಕಲೆಹಾಕಲಾಗುತ್ತಿದೆ. ಈಗಲೇ ಏನನ್ನೂ ಹೇಳಲಾಗದು" ಎಂದು ಹೇಳಿದ್ದಾರೆ.

ಕಾಲ್ತುಳಿತ ಘಟನೆಯ ಕುರಿತು ಟ್ವೀಟ್‌ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ರಾಜ್ಯದ ಯಾತ್ರಾರ್ಥಿಗಳನ್ನು ಸುರಕ್ಷಿತವಾಗಿ ಕರೆತರುವ ನಿಟ್ಟಿನಲ್ಲಿ ಮತ್ತು ಅಲ್ಲಿನ ರಾಜ್ಯದ ಜನರ ಸ್ಥಿತಿಗತಿ ಮೇಲ್ವಿಚಾರಣೆಗಾಗಿ ಅಧಿಕಾರಿಗಳ ತಂಡವನ್ನು ಕಳುಹಿಸಿಕೊಡಲಾಗಿದೆ ಎಂದು ಹೇಳಿದ್ದಾರೆ.

ಬೆಳಗಾವಿ ದಂಪತಿಗೆ ಗಾಯ

ಬೆಳಗಾವಿ ನಗರದ ಶೆಟ್ಟಿಗಲ್ಲಿಯ ದಂಪತಿ ಅರುಣ್ ಕೋಪರ್ಡೆ, ಕಾಂಚನಾ ಕೋಪರ್ಡೆ ಕಾಲ್ತುಳಿತದಲ್ಲಿ ಗಾಯಗೊಂಡಿದ್ದಾರೆ. ಚದುರಿ ಹೋಗಿದ್ದ ಇಬ್ಬರಿಗೂ ಬೇರೆ ಬೇರೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.

ಬೆಳಗಾವಿಯ ದಂಪತಿ ಗಾಯಗೊಂಡಿದ್ದು, ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೂದಲೆಳೆಯಲ್ಲಿ ಪಾರಾದ ಯುವಕರು

ಚಿಕ್ಕಬಳ್ಳಾಪುರದ ನಾಲ್ವರು ಹಾಗೂ ನೆಲಮಂಗಲದ ಓರ್ವ ಸೇರಿ ಒಟ್ಟು ಐದು ಮಂದಿ ಕನ್ನಡಿಗರು ತ್ರಿವೇಣಿ ಸಂಗಮದಲ್ಲಿ ಅಮೃತಸ್ನಾನಕ್ಕೆಂದು ತೆರಳಿದ್ದರು. ಆದರೆ ದಿಢೀರ್ ಸಂಭವಿಸಿದ ಕಾಲ್ತುಳಿತಕ್ಕೆ ಸಿಲುಕಿದ ಸಂದರ್ಭದಲ್ಲಿ ಆ ಐದೂ ಮಂದಿ ಕೂದಲೆಳೆ ಅಂತರದಿಂದ ಪಾರಾಗಿದ್ದಾರೆ ಎನ್ನಲಾಗಿದೆ.

ಕೂದಲೆಳೆ ಅಂತರದಿಂದ ಪಾರಾದ ಕನ್ನಡಿಗರು

ಯಾರೂ ಭಯ, ಆತಂಕ ಪಡಬೇಕಾಗಿಲ್ಲ: ರಘು ಸಕಲೇಶಪುರ

ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಭಾಗವಹಿಸಲು ತೆರಳಿರುವ ಭಜರಂಗದಳದ ಮುಖಂಡ ರಘು ಸಕಲೇಶಪುರ ಅವರು ಪ್ರಯಾಗ್ ರಾಜ್ ನಿಂದ ವಿಡಿಯೋ ಮೂಲಕ ಮನವಿಯೊಂದು ಮಾಡಿದ್ದು, "ಕುಂಭಮೇಳಕ್ಕೆ ಕೋಟ್ಯಾಂತರ ಜನರು ಆಗಮಿಸಿದ್ದಾರೆ. ಆದರೆ ಮಂಗಳವಾರ ರಾತ್ರಿ ನಡೆದ ಕಾಲ್ತುಳಿತ ದರಂತದಲ್ಲಿ ಅನೇಕ ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ತ್ರಿವೇಣಿ ಸಂಗಮದಲ್ಲಿ ಯಾರಿಗೆ ಸ್ನಾನ ಮಾಡಲು ಅವಕಾಶ ಸಿಕ್ಕಿಲ್ಲವೋ ಅವರಿಗೆ ಗಂಗಾ ತಟದಲ್ಲಿ ಸ್ನಾನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಯಾರೂ ಭಯ, ಆತಂಕ ಪಡಬೇಕಾಗಿಲ್ಲ" ಎಂದು ಮನವಿ ಮಾಡಿದ್ದಾರೆ.

ಭಜರಂಗದಳದ ಮುಖಂಡ ರಘು ಸಕಲೇಶಪುರ

ಸುರಕ್ಷಿತರಾಗಿ ಮರಳುತ್ತಿರುವ ಕಲಬುರಗಿಯ ಯಾತ್ರಿಗಳು

ಪ್ರಯಾಗರಾಜ್‌ಗೆ ತೆರಳಿದ್ದ ಕಲಬುರಗಿಯ ಯಾತ್ರಿಗಳು ಸುರಕ್ಷಿತರಾಗಿದ್ದು, ಅಮೃತ ಸ್ನಾನ ಮಾಡಿ ಸುರಕ್ಷಿತವಾಗಿ ವಾಪಾಸ್ಸು ಬರುತ್ತಿದ್ದಾರೆ. ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಯಲಕಪಳ್ಳಿ ಗ್ರಾಮಸ್ಥರು ಕುಂಭಮೇಳಕ್ಕೆ ತೆರಳಿದ್ದರು. ಮೌನಿ ಅಮಾವಾಸ್ಯೆ ಹಿನ್ನಲೆ ಅಮೃತ ಸ್ನಾನದ ವೇಳೆ ಕಾಲ್ತುಳಿತ ಘಟನೆ ಜರುಗಿತ್ತು.

ಪುಣ್ಯಸ್ನಾನ ಮಾಡಿ ಸುರಕ್ಷಿತವಾಗಿ ಮರಳುತ್ತಿರುವ ಯಲಕಪಳ್ಳಿ ಗ್ರಾಮಸ್ಥರು

ಯಲಕಪಳ್ಳಿ ಗ್ರಾಮಸ್ಥರು ಅಮೃತ ಸ್ನಾನ ಮಾಡಿದ ಸ್ಥಳದಿಂದ 5 ಕಿಮೀ ದೂರದಲ್ಲಿ ಕಾಲ್ತುಳಿತ ಘಟನೆ ಜರುಗಿದೆ. ಆದರೆ ಯಲಕಪಳ್ಳಿ ಗ್ರಾಮಸ್ಥರು ಸುರಕ್ಷಿತರಾಗಿದ್ದು, ಪುಣ್ಯಸ್ನಾನ ಮಾಡಿ ಸುರಕ್ಷಿತವಾಗಿ ಮರಳುತ್ತಿದ್ದಾರೆ ಎನ್ನಲಾಗಿದೆ.

Read More
Next Story