ʼಕನ್ನಡ ಬರುವುದಿಲ್ಲʼ ಹೇಳಿಕೆ ವಿವಾದ: ಮಾಧ್ಯಮಗಳ ಮೇಲೆ ಹರಿಹಾಯ್ದ ಸಚಿವ ಮಧು ಬಂಗಾರಪ್ಪ
x

ʼಕನ್ನಡ ಬರುವುದಿಲ್ಲʼ ಹೇಳಿಕೆ ವಿವಾದ: ಮಾಧ್ಯಮಗಳ ಮೇಲೆ ಹರಿಹಾಯ್ದ ಸಚಿವ ಮಧು ಬಂಗಾರಪ್ಪ


ಕನ್ನಡ ಮಾತನಾಡಲು ಬರುವುದಿಲ್ಲ ಎಂಬ ವಿಷಯದಲ್ಲಿ ಸದಾ ಟ್ರೋಲ್ ಆಗುವ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಇದೀಗ, ಇದೇ ವಿಷಯದಲ್ಲಿ ಮಾಧ್ಯಮಗಳ ಮೇಲೆ ಹರಿಹಾಯ್ದು ಸುದ್ದಿಯಾಗಿದ್ದಾರೆ.

ನೀಟ್ ಕೋಚಿಂಗ್ ತರಬೇಟಿ ಉದ್ಘಾಟನೆ ಆನ್ಲೈನ್ ಸಂವಾದದ ವೇಳೆ ವಿದ್ಯಾರ್ಥಿಯೊಬ್ಬರು ʼಸಚಿವರಿಗೆ ಕನ್ನಡ ಬರೋಲ್ಲʼ ಎಂದು ಕೂಗಿ ಹೇಳಿದ್ದ. ಆ ಕುರಿತು ಕೆರಳಿದ್ದ ಸಚಿವ ಮಧು ಬಂಗಾರಪ್ಪ, ವಿದ್ಯಾರ್ಥಿಯ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಆನ್ಲೈನ್ ಸಂವಾದದ ವೇಳೆಯೇ ಸಾರ್ವಜನಿಕವಾಗಿ ತಾಕೀತು ಮಾಡಿದ್ದ ಘಟನೆ ನಡೆದಿತ್ತು. ಆ ಘಟನೆಯ ವಿಡಿಯೋ ವೈರಲ್ ಆಗಿತ್ತು.

ಆ ಬಗ್ಗೆ ಪ್ರತಿಕ್ರಿಯೆ ಕೇಳಿದ ಮಾಧ್ಯಮಗಳ ವಿರುದ್ಧವೇ ಸಚಿವರು ಹರಿಹಾಯ್ದು ಮತ್ತೊಮ್ಮೆ ಟ್ರೋಲ್ ಆಗಿದ್ದಾರೆ. ಮಾಧ್ಯಮಗಳನ್ನು ಉದ್ದೇಶಿಸಿ, ನೀವೇಷ್ಟೇ ಟ್ರೋಲ್ ಮಾಡಿದ್ರೂ ನಾನು ತಲೆಕೆಡಿಸಿಕೊಳ್ಳಲ್ಲ. ಪದೇಪದೆ ಆ ವಿಷಯವನ್ನೇ ನನ್ನ ಮುಂದೆ ತರೋದನ್ನು ಮಾಧ್ಯಮಗಳು ಮೊದಲು ನಿಲ್ಲಿಸಬೇಕು. ನಿಮ್ಮ ಟ್ರೋಲ್ಗೆಲ್ಲಾ ಹೆದರೋನಲ್ಲ ಈ ಮಧು ಬಂಗಾರಪ್ಪ ಎಂದು ಗರಂ ಆಗಿದ್ದಾರೆ.

ವಿದ್ಯಾರ್ಥಿ ವಿರುದ್ಧ ಕ್ರಮಕೈಗೊಳ್ಳಿ ಎಂದಿಲ್ಲ

ನೀಟ್ ಕೋಚಿಂಗ್ ಆನ್ಲೈನ್ ಸಂವಾದದ ವೇಳೆ ಹಾಗೆ ಹೇಳಿದ ವಿದ್ಯಾರ್ಥಿ ವಿರುದ್ದ ಕ್ರಮ ತೆಗೆದುಕೊಳ್ಳಿ ಎಂದು ನಾನು ಹೇಳಿಲ್ಲ. ಆ ವಿದ್ಯಾರ್ಥಿಗೆ ಸಾವಿರಾರು ವಿದ್ಯಾರ್ಥಿಗಳು, ಅಧಿಕಾರಿಗಳು ಭಾಗವಹಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ಕಲಿಸದ ಆತನ ಶಾಲೆಯ ಹೆಡ್ ಮಾಸ್ಟರ್, ಬಿಇಒ ವಿರುದ್ಧ ಕ್ರಮ ತೆಗೆದುಕೊಳ್ಳಿ ಎಂದು ಹೇಳಿದ್ದೆ. ಮಕ್ಕಳ ಮೇಲೆ ಆಕ್ಷನ್ ತಗೊಳ್ಳೋಕೆ ನಮಗೆ ಅಧಿಕಾರ ಇಲ್ಲ. ನಿಮ್ಮ ಮಕ್ಕಳನ್ನು ಹತೋಟಿಯಲ್ಲಿ ಇಡಬೇಕು ಅಂತಾ ಹೆಡ್ ಮಾಸ್ಟರ್, ಬಿಇಒಗೆ ಸೂಚನೆ ನೀಡಿದ್ದೇನೆ ಅಷ್ಟೇ ಎಂದು ಸಚಿವರು ಮಾಧ್ಯಮಗಳ ಎದುರು ಸ್ಪಷ್ಟನೆ ನೀಡಿದ್ದಾರೆ.

ಮಾಧ್ಯಮಗಳಿಗೆ ಪಾಠ ಮಾಡಿದ ಶಿಕ್ಷಣ ಸಚಿವರು

ಆ ಘಟನೆಯ ಕುರಿತು ಮತ್ತೆ ಮತ್ತೆ ಕೆದಕಲು ಮುಂದಾದ ಮಾಧ್ಯಮಗಳಿಗೆ ಅಲ್ಲಿಯೇ ಪಾಠ ಮಾಡಿದ ಸಚಿವರು, “ನಿಮ್ಮ ಮಗ ಹಾಗೆ ಮಾತಾಡಿದ್ರೆ ನೀವು ಏನ್ ಮಾಡ್ತಿದ್ರಿ? 60-70 ಸಾವಿರ ಮಕ್ಕಳು ಇದ್ದಾಗ ಮಕ್ಕಳು ಆ ರೀತಿ ಮಾತಾಡೋದು ಸರಿಯಲ್ಲ. ಶಾಲೆಯಲ್ಲಿ ಡಿಸಿಪ್ಲೀನ್ ತರೋಕೆ ಆಗುತ್ತಾ ಹೀಗೆ ಮಾತಾಡಿದ್ರೆ? ನಾನೊಬ್ಬ ತಂದೆಯಾಗಿ ಇದನ್ನ ಹೇಳುತ್ತಿದ್ದೇನೆ. ಮಕ್ಕಳಿಗೆ ಮೊಟ್ಟೆ ಕೊಟ್ಟಿರೋ ವಿಚಾರ ಹೇಳೊಲ್ಲ. ಆದರೆ ಶಿಕ್ಷಣ ಸಚಿವರಿಗೆ ಕನ್ನಡ ಬರೊಲ್ಲ ಅನ್ನೋದನ್ನ ದೊಡ್ಡದಾಗಿ ಹಾಕ್ತೀರಾ?..” ಎಂದು ಮಾಧ್ಯಮಗಳ ಮೇಲೆ ಹರಿಹಾಯ್ದರು.

ಈ ಹಿಂದೆ ನನಗೆ ಕನ್ನಡ ಓದಲು ಬರೆಯಲು ಬರಲ್ಲ ಎಂದು ಸ್ವತಃ ಹೇಳಿಕೆ ನೀಡಿ ಟ್ರೋಲ್ ಆಗಿದ್ದ ಸಚಿವ ಮಧು ಬಂಗಾರಪ್ಪ, ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲೇ ತಪ್ಪು ತಪ್ಪು ಕನ್ನಡ ಭಾಷಣ ಮಾಡಿ ಭಾರೀ ಅಪಹಾಸ್ಯಕ್ಕೆ ಗುರಿಯಾಗಿದ್ದರು. ಇದೀಗ ಆನ್ಲೈನ್ ಸಂವಾದದ ವೇಳೆ ವಿದ್ಯಾರ್ಥಿಯೊಬ್ಬ ನೇರವಾಗಿ ಸಚಿವರಿಗೆ ಕನ್ನಡ ಬರುವುದಿಲ್ಲ ಎಂದು ಹೇಳಿರುವುದು ಟ್ರೋಲ್ ಮಾಡುವವರಿಗೆ ಹಬ್ಬವಾಗಿದೆ.

Read More
Next Story