‌ಧ್ವಜ ವಿವಾದ | ಕನ್ನಡ ರಾಜ್ಯೋತ್ಸವಕ್ಕೆ ಧ್ವಜಾರೋಹಣದ ಗೊಂದಲ?
x

‌ಧ್ವಜ ವಿವಾದ | ಕನ್ನಡ ರಾಜ್ಯೋತ್ಸವಕ್ಕೆ ಧ್ವಜಾರೋಹಣದ ಗೊಂದಲ?

ಅರವತ್ತು ವರ್ಷಗಳ ಹಿಂದೆ ಕನ್ನಡದ ಅಸ್ಮಿತೆಯನ್ನು ಎತ್ತಿ ಹಿಡಿಯುವ ದ್ವಿವರ್ಣದ ಧ್ವಜ ಅಸ್ತಿತ್ವಕ್ಕೆ ಬಂದು. ಆ ಧ್ವಜಕ್ಕೆ ಕಾನೂನಾತ್ಮಕ, ಸಾಂವಿಧಾನಾತ್ಮಕ ಸಿಂಧುವಾದ ಅಧಿಕೃತತೆ ಇಲ್ಲ. ಈ ಕಾನೂನಾತ್ಮಕ, ಸಾಂವಿಧಾನಾತ್ಮಕ ಸಿಂಧುವಾದ ಅಧಿಕೃತತೆಗಾಗಿ ಕರ್ನಾಟಕ ಸರ್ಕಾರ ರೂಪಿಸಿದ ತ್ರಿವರ್ಣದ ನಡುವಿನ ಗಂಡಭೇರುಂಡ ಚಿನ್ಹೆಯ ಧ್ವಜಕ್ಕೆ ಕೇಂದ್ರದ ಒಪ್ಪಿಗೆ ಇಲ್ಲ. ಜೊತೆಯಲ್ಲಿ ನ್ಯಾಯಾಲಯ ಕೂಡ ಮಧ್ಯ ಪ್ರವೇಶವನ್ನು ನಿರಾಕರಿಸಿದೆ. ಹಾಗಿದ್ದಾಗ ಹಾರಿಸಲು ಅರ್ಹವಾದ ಧ್ವಜ ಯಾವುದು ಎಂಬುದು ಈಗಿನ ಪ್ರಶ್ನೆ


ಕರ್ನಾಟಕ ತನ್ನ ಹುಟ್ಟುಹಬ್ಬ ಕನ್ನಡ ರಾಜ್ಯೋತ್ಸವ ಆಚರಿಸಿಕೊಳ್ಳಲು ಇನ್ನು ಒಂದು ದಿನ ಉಳಿದಿದೆ. ನಾಳೆ(ನ.1) ಎಲ್ಲ ಸರ್ಕಾರಿ ಕಚೇರಿಗಳು, ಖಾಸಗಿ ಸಂಸ್ಥೆಗಳು ಹಾಗೂ ಐಟಿ-ಬಿಟಿ ಕಂಪನಿಗಳ ಮೇಲೆ ಕನ್ನಡದ ಭಾವುಟ ಹಾರಿಸುವುದು ಕಡ್ಡಾಯ ಎಂದು ಸರ್ಕಾರದ ಆದೇಶವಿದೆ. ಆದರೆ, ಕರ್ನಾಟಕ ರಾಜ್ಯಕ್ಕೆ ಪ್ರತ್ಯೇಕ ಧ್ವಜ ಹೊಂದಲು ಸಂಬಂಧಿತ ಪ್ರಾಧಿಕಾರಗಳಿಗೆ ನಿರ್ದೇಶನ ನೀಡಬೇಕೆಂದು ಕೋರಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್‌ ಇತ್ತೀಚೆಗೆ "ಈ ವಿಚಾರ ನ್ಯಾಯಾಲಯದ ವ್ಯಾಪ್ತಿಗೆ ಬರುವುದಿಲ್ಲ” ಎಂಬ ಅಭಿಪ್ರಾಯ ನೀಡಿ, ವಜಾಗೊಳಿಸಿರುವ ಹಿನ್ನೆಲೆಯಲ್ಲಿ ಧ್ವಜಾರೋಹಣ ಗೊಂದಲಮಯವಾಗಿದೆ.

ಧ್ವಜ ಕುರಿತ ಗೊಂದಲ

ಕನ್ನಡ ಧ್ವಜವನ್ನು ಹಾರಿಸಬೇಕೆಂಬುದು ಸರ್ಕಾರದ ನಿರ್ದೇಶನ ಸರಿ. ಆದರೆ, ಯಾವ ಕನ್ನಡ ಧ್ವಜವನ್ನು ಹಾರಿಸಬೇಕು? ಇತ್ತೀಚೆಗೆ ಹೈಕೋರ್ಟ್‌ ವಜಾಗೊಳಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಕರ್ನಾಟಕ ಸರ್ಕಾರ ರೂಪಿಸಿರುವ ಕರ್ನಾಟಕದ ಧ್ವಜವನ್ನೇ? ಅಥವಾ ಕಳೆದ ಆರು ದಶಕಗಳಿಂದ ಹಾರಿಸಲಾಗುತ್ತಿರುವ ಹಳದಿ ಹಾಗೂ ಕೆಂಪು ಬಣ್ಣಗಳ ದ್ವಿವರ್ಣ ಧ್ವಜವನ್ನೇ? ಎಂಬ ಗೊಂದಲ ಎಲ್ಲರನ್ನೂ ಕಾಡುತ್ತಿದೆ.

ಇದುವರೆಗೂ ನವೆಂಬರ್‌ 1 ರಂದು ಸರ್ಕಾರಿ ಕಚೇರಿಗಳ, ಖಾಸಗಿ ಕಂಪನಿಗಳ ಮೇಲೆ ಹಾರಿಸುತ್ತಾ ಬಂದಿರುವ ದ್ವಿವರ್ಣ ಧ್ವಜ ಕರ್ನಾಟಕದ ಧ್ವಜಕ್ಕೆ ಕಾನೂನಿನ ಮಾನ್ಯತೆ ಇಲ್ಲ. ಅದು ಸುಮಾರು ಅರವತ್ತು ವರ್ಷಗಳ ಹಿಂದೆ ರೂಪುಗೊಂಡ ಕನ್ನಡ ಪಕ್ಷದ ಧ್ವಜ. ಅದನ್ನು ಕರ್ನಾಟಕ ಸರ್ಕಾರದ ಅಧಿಕೃತ ಧ್ವಜವೆಂದು ಪರಿಗಣಿಸಲಾಗುವುದಿಲ್ಲ. ಹಾಗಾದರೆ, 2018ರಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಶಿಫಾರಸು ಮಾಡಿದ ತ್ರಿವರ್ಣದ (ಹಳದಿ, ಬಿಳಿ ಹಾಗೂ ಕೆಂಪು ಮತ್ತು ಮಧ್ಯಭಾಗದಲ್ಲಿ ಕರ್ನಾಟಕ ಸರ್ಕಾರದ ಚಿಹ್ನೆಯಾಗಿರುವ ಗಂಡಭೇರುಂಡ ಚಿತ್ರವಿರುವ ಧ್ವಜ ಇನ್ನೂ ಕಾನೂನಾತ್ಮಕ ಹಾಗೂ ಸಾಂವಿಧಾನಾತ್ಮಕ ಅಧಿಕೃತತೆಯನ್ನು ಪಡೆದುಕೊಂಡಿಲ್ಲ. ಹಾಗಾಗಿ ಯಾವ ಧ್ವಜವನ್ನು ಹಾರಿಸಬೇಕೆಂದು ತಿಳಿಯದೆ ಕನ್ನಡಿಗರು, ಕಂಗಾಲಾಗಿದ್ದಾರೆ.


ಅಧಿಕೃತ ಧ್ವಜ?

ಹಾಗಾದರೆ ಕನ್ನಡದ ಅಧಿಕೃತ ಧ್ವಜ ಯಾವುದು? ಯಾವ ಕಾರಣಕ್ಕೆ ಕನ್ನಡದ, ಕನ್ನಡ ನಾಡಿನ ಧ್ವಜ ವಿವಾದಾಸ್ಪದವಾಗಿದೆ ಎಂಬ ಪ್ರಶ್ನೆ ಉದ್ಭವವಾಗುವುದು ಸಹಜ. ಈ ಪ್ರಶ್ನೆಗೆ ಉತ್ತರ ಹುಡುಕುವ ಯತ್ನ ಇಲ್ಲಿದೆ;

ಕನ್ನಡದ ಕಣ್ಮಣಿ , ಡಾ. ರಾಜ್‌ ಕುಮಾರ್‌ ಅವರು ʻಅಕಸ್ಮಿಕʼ ಚಲನಚಿತ್ರದಲ್ಲಿ ದ್ವಿವರ್ಣದ ಕನ್ನಡ ಧ್ವಜವನ್ನು ಹಿಡಿದು, ತಲೆಗೆ ಈ ಬಣ್ಣದ ರುಮಾಲು ತೊಟ್ಟು, “ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು…” ಎಂದು ಹಾಡಿ, ನಾಡ ಧ್ವಜಕ್ಕೆ ಗೌರವ ತಂದುಕೊಟ್ಟಿದ್ದನ್ನು ಕನ್ನಡಿಗರು ಇನ್ನೊಂದು ಶತಮಾನ ಮರೆಯಲಾರರು ಎಂಬ ನಂಬಿಕೆ ಇದೆ.

ಮೊದಲ ನಾಡಧ್ವಜ

ಕನ್ನಡ ಬರಹಗಾರ ಮತ್ತು ಕನ್ನಡ ಚಳವಳಿಯ ಹೋರಾಟಗಾರ ರಾ. ನಂ ಚಂದ್ರಶೇಖರ್‌ ಅವರ ಪ್ರಕಾರ; ಈ ಧ್ವಜವನ್ನು ಮೊದಲು ರೂಪಿಸಿದವರು, ಕನ್ನಡದ ವೀರ ಸೇನಾನಿ ಎಂದೇ ಖ್ಯಾತಿಗಳಿಸಿದ ಬರಹಗಾರ ಸಾಹಿತಿ, ಮದ್ದೂರು ಸೀತಾರಾಮಶಾಸ್ತ್ರಿ ರಾಮಮೂರ್ತಿ. ಈ ದ್ವಿವರ್ಣದ ಧ್ವಜವನ್ನು ವಿನ್ಯಾಸಗೊಳಿಸಿದ್ದು ಅವರೇ. 1965ರಲ್ಲಿ ಕನ್ನಡ ಹೋರಾಟಗಾರರು ರೂಪಿಸಿದ ಈ ಧ್ವಜವನ್ನು ಮೊದಲಬಾರಿಗೆ ಅಖಿಲ ಭಾರತ ಕನ್ನಡಿಗರ ಬೃಹತ್‌ ಸಮಾವೇಶದಲ್ಲಿ ಆರೋಹಣ ಮಾಡಲಾಯಿತು. ಅಂದಿನಿಂದ ಇಂದಿನವರೆಗೂ ಇದು ಕನ್ನಡಿಗರ ಅಧಿಕೃತ ʻನಾಡಧ್ವಜʼವಾಗಿ ಕನ್ನಡಿಗರ ಅಸ್ಮಿತೆಯ ಹೆಗ್ಗುರುತಾಗಿದೆ.

ಮೈಸೂರು-ಕರ್ನಾಟಕವಾದದ್ದು

1956ರಲ್ಲಿ ಭಾಷಾವಾರು ಪ್ರಾಂತ್ಯ ರಚನೆಯಾದಾಗ, ಕನ್ನಡ ಭಾಷಿಗರೆಲ್ಲ ಒಂದಾದ ನವೆಂಬರ್‌ 1 ರಂದು ಮೈಸೂರು ಪ್ರಾಂತ್ಯ ರಚನೆಯಾದಾಗಿನಿಂದ ಕನ್ನಡ ನಾಡಿಗೆ ಪ್ರತ್ಯೇಕವಾದ ಧ್ವಜವೊಂದು ಇರಬೇಕೆಂಬ ಬೇಡಿಕೆ ಜೀವಂತವಾಗಿದೆ. 1973ರಲ್ಲಿ ಅಂದಿನ ಮುಖ್ಯಮಂತ್ರಿ ದೇವರಾಜ ಅರಸು ಅವರು, ಅಖಂಡ ಕರ್ನಾಟಕದ ಆಶಯಗಳನ್ನು ಧ್ವನಿಸುವ ಉದ್ದೇಶದಿಂದ ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಮರುನಾಮಕರಣ ಮಾಡಿ, ಕನ್ನಡಿಗರ ಮನಸ್ಸನ್ನು ಗೆದ್ದುಕೊಂಡರು. 2015ರಲ್ಲಿ ಮುಖ್ಯಮಂತ್ರಿಯಾದ ಸಿದ್ದರಾಮಯ್ಯ, ತಾವು ರಾಜಕಾರಣಕ್ಕೆ ಬಂದ ಸಂದರ್ಭದಲ್ಲಿ ಕನ್ನಡ ಕಾವಲು ಸಮಿತಿಯ ಅಧ್ಯಕ್ಷರಾಗಿದ್ದವರು. ತಾವು ಮುಖ್ಯಮಂತ್ರಿಯಾದಾಗ ಕನ್ನಡದ ಅಸ್ಮಿತೆಯನ್ನು ಕಾಯುವ ಉದ್ದೇಶದಿಂದ ಕನ್ನಡಿಗರಿಗೊಂದು ಪ್ರತ್ಯೇಕ ಕಾನೂನಾತ್ಮಕ ಮತ್ತು ಸಾಂವಿಧಾನಾತ್ಮಕ ಅಧಿಕೃತತೆಯಿರುವ ಧ್ವಜ ಬೇಕೆಂಬ ಒತ್ತಾಯಕ್ಕೆ ಮಣಿದರು.

ಎಂಇಎಸ್‌ ಆಕ್ಷೇಪ

ಒತ್ತಾಯ ತಂದವರು ಯಾರು? ಇಲ್ಲಿಯೂ ಸರ್ಕಾರದ ಮೇಲೆ ಒತ್ತಡ ತಂದವರು ಉತ್ತರ ಕರ್ನಾಟಕದ ಮಂದಿಯೇ ಎಂಬುದು ಇಲ್ಲಿ ಮುಖ್ಯವಾಗುತ್ತದೆ. ಖ್ಯಾತ ಪತ್ರಕರ್ತ, ಬರಹಗಾರ ಹಾಗೂ ಕನ್ನಡ ಚಳವಳಿಯ ಹಿರಿಯರಾದ ಪಾಟೀಲ್‌ ಪುಟ್ಟಪ್ಪ ಕರ್ನಾಟಕಕ್ಕೆ ಕನ್ನಡದ್ದೇ ಆದ ನಾಡಧ್ವಜವಿರಬೇಕೆಂದು ಮನವಿ ಸಲ್ಲಿಸಿದರು. ಅವರಿಗೆ ಒತ್ತಾಸೆ ನೀಡಿದವರು ಬೆಳಗಾವಿಯ ಕನ್ನಡ ಹೋರಾಟಗಾರ ಭೀಮಪ್ಪ ಗುಂಡಪ್ಪ ಗಡದ. ಇದಕ್ಕೂ ಒಂದು ಕಾರಣವಿದೆ. 2004ರಲ್ಲಿ ಬೆಳಗಾವಿಯ ಜಿಲ್ಲಾಧಿಕಾರಿ ಕಛೇರಿ ಮತ್ತು ಪ್ರಾಂತೀಯ ಆಯುಕ್ತರ ಕಛೇರಿಯ ಮೇಲೆ ಕನ್ನಡ ಧ್ವಜವನ್ನು ಹಾರಿಸಲು ಮಹಾರಾಷ್ಟ್ರ ಏಕೀಕರಣ ಸಮಿತಿ ಆಕ್ಷೇಪವೆತ್ತಿತ್ತು. ಇದರಿಂದ ಕೆರಳಿದ ಗಡಿನಾಡ ಕನ್ನಡಿಗರು, ಕನ್ನಡ ಧ್ವಜಕ್ಕೆ ಒತ್ತಾಯಿಸಿದರು.

ಅಧಿಕೃತ ಕನ್ನಡ ಧ್ವಜದ ಕಲ್ಪನೆ

ಪಾಟೀಲ ಪುಟ್ಟಪ್ಪ ಅವರ ಒತ್ತಾಯಕ್ಕೆ ಮಣಿದ ಕನ್ನಡ ಪರ ಮುಖ್ಯಮಂತ್ರಿ ಸಿದ್ದರಾಮಯ್ಯ ಕನ್ನಡದ ಅಸ್ಮಿತೆಯನ್ನು ಕಾಣಿಸುವಂಥ ಧ್ವಜವೊಂದನ್ನು ರೂಪಿಸಲು ಲೇಖಕರ, ಬರಹಗಾರರ, ಕನ್ನಡ ಹೋರಾಟಗಾರರ, ಸಮಿತಿಯೊಂದನ್ನು ಕನ್ನಡ ಅಭಿವೃದ್ಧಿ ಪಾಧಿಕಾರದ ಅಧ್ಯಕ್ಷರ ನೇತೃತ್ವದಲ್ಲಿ ರಚಿಸಿದರು. ಈ ಸಮಿತಿಯ ಶಿಫಾರಸ್ಸನ್ನು ಆಧರಿಸಿ, ಹಳದಿ ಬಿಳಿ ಕೆಂಪು ತ್ರಿವರ್ಣ ನಡುವೆ ಕನ್ನಡ ನಾಡಿನ ಸರ್ಕಾರದ ಗಂಡಭೇರುಂಡ ಲಾಂಛನದ ಧ್ವಜವನ್ನು ವಿನ್ಯಾಸಗೊಳಿಸಿ, ಅದಕ್ಕೆ ಸಂಪುಟ ಸಭೆಯ ಒಪ್ಪಿಗೆ ನೀಡಿ, 2018ರಲ್ಲಿ ಅಧಿಕೃತ ಒಪ್ಪಿಗೆಗಾಗಿ ಬಿಜೆಪಿ ನೇತೃತ್ವದ ಕೇಂದ್ರದ ಎನ್‌ ಡಿ ಎ ಸರ್ಕಾರಕ್ಕೆ ಕಳುಹಿಸಿದರು. ಆದರೆ, ಕೇಂದ್ರ ಸರ್ಕಾರ ಇದಕ್ಕೆ ಸಾಂವಿಧಾನಾತ್ಮಕ ಒಪ್ಪಿಗೆ ನೀಡಲು ಸಾಧ್ಯವಿಲ್ಲ ಎಂದು ನಿರಾಕರಿಸಿತು. ಕಾರಣವಿಷ್ಟೇ. ಈ ದೇಶದಲ್ಲಿ ಜಮ್ಮು-ಕಾಶ್ಮೀರದ ಹೊರತಾಗಿ ಯಾವುದೇ ರಾಜ್ಯಕ್ಕೂ ಸ್ವಂತ ಅಧಿಕೃತ ಧ್ವಜವನ್ನು ಹೊಂದುವ ಅವಕಾಶವಿಲ್ಲ. ಅದು ಸಂವಿಧಾನ ವಿರೋಧಿ ಕ್ರಮ ಎಂಬುದು ಸಂವಿಧಾನ ತಜ್ಞರ ತಿಳುವಳಿಕೆ. ರಾಜ್ಯದಲ್ಲಿ ಅನಂತರ ಅಧಿಕಾರಕ್ಕೆ ಬಂದ ಜೆಡಿಎಸ್‌—ಕಾಂಗ್ರೆಸ್‌ ನ ಮೈತ್ರಿ ಸರ್ಕಾರ ಈ ಧ್ವಜದ ಪ್ರಶ್ನೆಯನ್ನು ಕೇಂದ್ರ ಮಟ್ಟದಲ್ಲಿ ಎತ್ತಲೇ ಇಲ್ಲ. ನಂತರ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರಕ್ಕಂತೂ ಕರ್ನಾಟಕಕ್ಕೊಂದು ಪ್ರತ್ಯೇಕ ಧ್ವಜವೆಂಬ ಸಂಗತಿಯೇ ಬೆಚ್ಚಿಬೀಳಿಸುವಂತಿತ್ತು. ಹಾಗಾಗಿ ಅಂದಿನಿಂದ ಇಂದಿನವರೆಗೂ, ಪ್ರತ್ಯೇಕ ಧ್ವಜದ ಪ್ರಶ್ನೆ ಇತ್ಯರ್ಥವಾಗದೇ ಉಳಿದಿದೆ.

ಸಂವಿಧಾನದ ನೆಲೆಯಲ್ಲಿ ಅಸಾಧ್ಯ

ಇಲ್ಲೊಂದು ಪ್ರಮುಖ ಸಂಗತಿಯನ್ನು ಗಮನಿಸಬೇಕು. ಕರ್ನಾಟಕ ಸರ್ಕಾರದ ಪ್ರತ್ಯೇಕ ಧ್ವಜದ ಪ್ರಸ್ತಾವನೆಯನ್ನು ಕಾಂಗ್ರೆಸ್‌ ಹೈ ಕಮಾಂಡ್‌ 2018ರಲ್ಲಿ ವಿರೋಧಿಸಿತ್ತು. ಆದರೆ, 2008ರಿಂದ 2013ರ ವರೆಗೆ ರಾಜ್ಯದಲ್ಲಿದ್ದ ಬಿಜೆಪಿ ಸರ್ಕಾರ ಕನ್ನಡ ಧ್ವಜದ ಗೌರವವನ್ನು ಎತ್ತಿ ಹಿಡಿದಿತ್ತು. ಸರ್ಕಾರಿ ಕಛೇರಿಗಳ ಮೇಲೆ ಕನ್ನಡ ಧ್ವಜವನ್ನು ಹಾರಿಸಲು ಇದ್ದ ಕಾನೂನಾತ್ಮಕ ಅಡ್ಡಿ-ಆತಂಕಗಳನ್ನು ಅಂದಿನ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ನಿವಾರಿಸಿದ್ದರು. ಅವರ ನಂತರ ಅಧಿಕಾರಕ್ಕೆ ಬಂದ ಡಿ. ವಿ. ಸದಾನಂದ ಗೌಡರು ನವೆಂಬರ್‌ 1ರಂದು ಎಲ್ಲ ಸರ್ಕಾರಿ ಕಛೇರಿಗಳ ಮೇಲೆ, ಖಾಸಗಿ ಸಂಸ್ಥೆಗಳ ಮೇಲೆ ಹಾಗೂ ಐಟಿ-ಬಿಟಿ ಕಂಪನಿಗಳ ಮೇಲೆ ಕನ್ನಡ ಧ್ವಜ ಹಾರಿಸುವುದನ್ನು ಕಡ್ಡಾಯಗೊಳಿಸಿದರು.

ಈಗ ಅಧಿಕೃತ ಕನ್ನಡ ಧ್ವಜದ ಪ್ರಶ್ನೆ ಮುನ್ನಲೆಗೆ ಬರಲು ಕಾರಣ, ನಾಲ್ಕು ದಿನಗಳ ಹಿಂದಿನ ಹೈಕೋರ್ಟಿನ ತೀರ್ಪು. ಬೆಳಗಾವಿಯ ಸಾಮಾಜಿಕ ಕಾರ್ಯಕರ್ತ ಭೀಮಪ್ಪ ಗಡಾದ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್.‌ ವಿ. ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ.ವಿ. ಅರವಿಂದ್‌ ಅವರುಗಳ ವಿಭಾಗೀಯ ಪೀಠ ವಜಾಗೊಳಿಸಿತು. ಈ ಹಿನ್ನೆಲೆಯಲ್ಲಿ ಸರ್ಕಾರಿ ಕಛೇರಿಗಳ ಮೇಲೆ ಈ ಎರಡರಲ್ಲಿ (ಸರ್ಕಾರದ್ದು ಹಾಗೂ ಕನ್ನಡ ಹೋರಾಟಗಾರರ ರೂಪಸಿದ್ದು) ಯಾವ ಧ್ವಜವನ್ನು ಹಾರಿಸಬೇಕೆಂಬುದು ಸದ್ಯಕ್ಕೆ ಎಲ್ಲರನ್ನೂ ಕಾಡುತ್ತಿರುವ ಪ್ರಶ್ನೆ.

Read More
Next Story