Sonu Nigam Controversy |ಗಾಯಕ ಸೋನು ನಿಗಮ್‌ಗೆ ನಿರ್ಬಂಧ ಹೇರಿದ ಕನ್ನಡ ಚಿತ್ರರಂಗ
x

ಗಾಯಕ ಸೋನು 

Sonu Nigam Controversy |ಗಾಯಕ ಸೋನು ನಿಗಮ್‌ಗೆ ನಿರ್ಬಂಧ ಹೇರಿದ ಕನ್ನಡ ಚಿತ್ರರಂಗ

ಸೋನು ನಿಗಮ್‌ರನ್ನು ಯಾರೂ ಕರೆಸಿ, ಹಾಡು ಹಾಡಿಸಬಾರದು. ಯಾರಾದರೂ ಅವರನ್ನು ಕರೆದು ಹಾಡಿಸಿದರೆ ಕ್ರಮ ಕೈಗೊಳ್ಳುತ್ತೇವೆ. ಯಾವ ರೀತಿ ಕ್ರಮ ಕೈಗೊಳ್ಳಬೇಕು ಎಂದು ಚರ್ಚೆ ಮಾಡಿ ತೀರ್ಮಾನಿಸಲಾಗುವುದು ಎಂದು ಚಲನಚಿತ್ರ ವಾಣಿಜ್ಯ ಮಂಡಳಿ ತಿಳಿಸಿದೆ.


ಗಾಯಕ ಸೋನು ನಿಗಮ್‌ ಅವರಿಂದ ಕನ್ನಡ ಹಾಡುಗಳನ್ನು ಹಾಡಿಸದಿರಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಒಕ್ಕೊರಲ ನಿರ್ಣಯ ಕೈಗೊಂಡಿದೆ.

ಸೋನು ನಿಗಮ್‌ ಬೆಂಗಳೂರಿನ ಕಾಲೇಜೊಂದರ ಕಾರ್ಯಕ್ರಮಕ್ಕೆ ಬಂದಿದ್ದ ವೇಳೆ ಕನ್ನಡ ಹಾಡುಗಳನ್ನು ಹೇಳುವಂತೆ ವಿದ್ಯಾರ್ಥಿಯೊಬ್ಬರು ಒತ್ತಾಯಿಸಿದ್ದರು. ಆಗ ಕೆರಳಿದ ಸೋನು ನಿಗಮ್, ಇದರಿಂದಲೇ ಪೆಹಲ್ಗಾಮ್ ಉಗ್ರರ ದಾಳಿ ನಡೆಯಿತು ಎಂದು ಹೇಳಿದ್ದರು.

ಸೋನು ನಿಗಮ್‌ ಈ ಹೇಳಿಕೆಗೆ ಕನ್ನಡಪರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದವು. ಈ ಸಂಬಂಧ ಪೊಲೀಸ್‌ ಠಾಣೆಯಲ್ಲಿ ದೂರುಗಳುಯ ದಾಖಲಾಗಿದ್ದವು. ತಮ್ಮ ಹೇಳಿಕೆಗೆ ಕ್ಷಮೆ ಕೇಳುವ ಬದಲು ಕನ್ನಡಿಗರದ್ದೇ ತಪ್ಪು ಎಂಬಂತೆ ವಿಡಿಯೊ ಮೂಲಕ ಸ್ಪಷ್ಟನೆ ನೀಡಿದ್ದರು.

ಕನ್ನಡ ಚಿತ್ರರಂಗದಿಂದ ಬ್ಯಾನ್‌

ಬೆಂಗಳೂರಿನಲ್ಲಿ ಸೋಮವಾರ ಚಲನಚಿತ್ರ ವಾಣಿಜ್ಯ ಮಂಡಳಿ ಮಹತ್ವದ ಸಭೆ ನಡೆಸಿತು. ಸಭೆಯಲ್ಲಿ ಗಾಯಕ ಸೋನು ನಿಗಮ್‌ ವಿವಾದ ಕುರಿತಂತೆ ಚರ್ಚೆ ನಡೆದು, ಆ ಬಳಿಕ ಕನ್ನಡ ಚಿತ್ರರಂಗದಿಂದ ಸೋನು ನಿಗಮ್‌ ಅವರನ್ನು ಬ್ಯಾನ್‌ ಮಾಡುವ ನಿರ್ಧಾರ ತೆಗೆದುಕೊಳ್ಳಲಾಯಿತು.

ಸಭೆಯ ಬಳಿಕ ಮಾತನಾಡಿರುವ ವಾಣಿಜ್ಯ ಮಂಡಳಿ ಅಧ್ಯಕ್ಷ ನರಸಿಂಹಲು, ‘ಘಟನೆ ಬಳಿಕ ಈವರೆಗೂ ಸೋನು ನಿಗಮ್​ ಕನ್ನಡಿಗರ ಬಳಿ ಕ್ಷಮೆ‌ ಕೇಳಿಲ್ಲ. ಇನ್ನು ಮುಂದೆ ಸೋನು ನಿಗಮ್ ಅವರಿಂದ ಚಿತ್ರರಂಗದವರು ಯಾವುದೇ ಮ್ಯೂಸಿಕಲ್ ನೈಟ್ಸ್ ಮಾಡಿಸುವಂತಿಲ್ಲ. ಚಿತ್ರಗಳಿಗೆ ಅವರ ಬಳಿ ಹಾಡನ್ನೂ ಹಾಡಿಸುವಂತಿಲ್ಲ. ಈ ಕ್ಷಣದಿಂದಲೇ ಸೋನು ನಿಗಮ್‌ ಅವರಿಗೆ ಅಸಹಕಾರ ತೋರಬೇಕು ಎಂಬ ನಿರ್ಣಯ ತೆಗೆದುಕೊಳ್ಳಲಾಗಿದೆʼ ಎಂದು ತಿಳಿಸಿದ್ದಾರೆ.

ಗಾಯಕ ಸೋನು ನಿಗಮ್‌ ಅವರನ್ನು ಯಾರು ಕರೆಸಿ ಹಾಡಿಸಬಾರದು. ಆಗೊಮ್ಮೆ ಯಾರಾದರೂ ಕರೆಸಿ, ಹಾಡಿಸಿದರೆ ಕ್ರಮ ಕೈಗೊಳ್ಳಲಾಗುವುದು. ಯಾವ ರೀತಿ ಕ್ರಮ ಕೈಗೊಳ್ಳಬೇಕು ಎಂಬುದರ ಬಗ್ಗೆ ಚರ್ಚಿಸಿ ತೀರ್ಮಾನಿಸಲಾಗುವುದು. ಸದ್ಯಕ್ಕೆ ಅಸಹಕಾರ ಎಂದು ತೀರ್ಮಾನ ಮಾಡಿದ್ದೇವೆ. ಇದೇ ವಿಚಾರದ ಕುರಿತು ಚರ್ಚಿಸಲು ಮುಂದಿನ ದಿನಗಳಲ್ಲಿ ಎಲ್ಲರನ್ನೂ ಆಹ್ವಾನಿಸಿ, ಸಭೆ ನಡೆಸಲಾಗುವುದು. ಅಂದು ಅವರನ್ನು ಬ್ಯಾನ್ ಮಾಡಬೇಕಾ?, ಮಾಡಿದರೆ ಎಷ್ಟು ದಿನ ಬ್ಯಾನ್ ಮಾಡಬೇಕು?, ಯಾವ ರೀತಿ ಕ್ರಮಕೈಗೊಳ್ಳಬೇಕು ಎಂದು ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

ವಾಣಿಜ್ಯ ಮಂಡಳಿ ನಿರ್ಧಾರ ಸ್ವಾಗತಿಸಿದ ಸಚಿವರು

ಗಾಯಕ ಸೋನು ನಿಗಮ್‌ ಅವರನ್ನು ಕನ್ನಡಚಲನ ಚಿತ್ರರಂಗ ಬ್ಯಾನ್ ಮಾಡಿರುವುದು ಸ್ವಾಗತ ಎಂದು ಕನ್ನಡ ಮತ್ತು ಸಂಸ್ಕೃತ ಇಲಾಖೆ ಸಚಿವ ಶಿವರಾಜ್‌ ತಂಗಡಗಿ ಹೇಳಿದ್ದಾರೆ.

ʼದ ಫೆಡರಲ್‌ ಕರ್ನಾಟಕʼಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ಸೋನು ನಿಗಮ್ ಅವರು ಕನ್ನಡಕ್ಕೆ ಅಮಮಾನ ಮಾಡಿದ್ದು ಸರಿಯಲ್ಲ. ಕನ್ನಡಕ್ಕೆ ಅವಮಾನ ಮಾಡಿದರೆ ಏನಾಗಲಿದೆ ಎಂಬ ಸಂದೇಶ ನೀಡಿರುವುದು ಶ್ಲಾಘನೀಯ. ಇನ್ನು ಮುಂದೆ ಯಾವುದೇ ನಟ ನಟಿಯರು ಕನ್ನಡಕ್ಕೆ ಅವಮಾನ ಮಾಡಿದರೆ ಸರ್ಕಾರ ಸಹಿಸುವುದಿಲ್ಲ ಎಂದು ಸಚಿವ ಶಿವರಾಜ್ ತಂಗಡಗಿ ಎಚ್ಚರಿಕೆ ನೀಡಿದ್ದಾರೆ.

ಸೋನು ನಿಗಮ್‌ಗೆ ನೋಟಿಸ್‌ ಜಾರಿ

ಕನ್ನಡಿಗರ ಬಗ್ಗೆ ಸೋನು ನಿಗಮ್‌ ವಿವಾದಾತ್ಮಕ ಹೇಳಿಕೆ ನೀಡುವ ವಿಚಾರಕ್ಕೆ ಸಂಬಂಧಿಸಿ ಆವಲಹಳ್ಳಿ ಠಾಣೆ ಪೊಲೀಸರು ಇ-ಮೇಲ್‌ ಮೂಲಕ ನೋಟಿಸ್‌ ನೀಡಿದ್ದಾರೆ. ನೋಟಿಸ್ ತಲುಪಿದ 1 ವಾರದೊಳಗೆ ವಿವರಣೆ ನೀಡಲು ಸೂಚನೆ ನೀಡಿದ್ದಾರೆ.

ವಿವಿಧ ಪೊಲೀಸ್‌ ಠಾಣೆಗಳಲ್ಲಿ ಕನ್ನಡ ಪರ ಹೋರಾಟಗಾರರು ಸೋನು ನಿಗಮ್‌ ವಿರುದ್ಧ ದೂರು ದಾಖಲಿಸಿದ್ದರು.

Read More
Next Story