
'ಮ್ಯಾಕ್ಸ್' ಚಿತ್ರದ ಮೂಲಕ ಗಮನ ಸೆಳೆದಿದ್ದ ನಟ ಶ್ರೀಧರ್ ಇನ್ನಿಲ್ಲ
ಕಿರುತೆರೆಯಲ್ಲಿ 'ವಧು', 'ಪಾರು' ಸೇರಿದಂತೆ ಹಲವು ಜನಪ್ರಿಯ ಸೀರಿಯಲ್‌ಗಳಲ್ಲಿ ಶ್ರೀಧರ್ ನಟಿಸಿದ್ದರು. ಜೊತೆಗೆ, ಅನೇಕ ಕನ್ನಡ ಚಲನಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಅವರ 'ಮ್ಯಾಕ್ಸ್' ಚಿತ್ರದ ಪಾತ್ರವು ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿತ್ತು.
ಸುದೀಪ್ ಅಭಿನಯದ ಮ್ಯಾಕ್ಸ್' (Max fame) ಚಿತ್ರದಲ್ಲಿನ ಅಭಿನಯಿಸುವ ಮೂಲಕ ಗುರುತಿಸಿಕೊಂಡಿದ್ದ ನಟ ಶ್ರೀಧರ್ ಅವರು ಅನಾರೋಗ್ಯದಿಂದ ನಿಧನರಾಗಿದ್ದಾರೆ. ಕಳೆದ ಒಂದು ತಿಂಗಳಿನಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಹೆಬ್ಬಾಳದಲ್ಲಿರುವ ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.
ಕಿರುತೆರೆಯಲ್ಲಿ 'ವಧು', 'ಪಾರು' ಸೇರಿದಂತೆ ಹಲವು ಜನಪ್ರಿಯ ಸೀರಿಯಲ್‌ಗಳಲ್ಲಿ ಶ್ರೀಧರ್ ನಟಿಸಿದ್ದರು. ಜೊತೆಗೆ, ಅನೇಕ ಕನ್ನಡ ಚಲನಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಅವರ 'ಮ್ಯಾಕ್ಸ್' ಚಿತ್ರದ ಪಾತ್ರವು ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿತ್ತು.
ಆರ್ಥಿಕ ನೆರವಿಗಾಗಿ ಮನವಿ ಮಾಡಿದ್ದರು
ಒಂದು ತಿಂಗಳ ಹಿಂದೆಯೇ ಶ್ರೀಧರ್ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದರು. ಸೋಂಕಿನಿಂದಾಗಿ ತೀವ್ರ ಅಸ್ವಸ್ಥರಾಗಿದ್ದ ಅವರನ್ನು ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆ ಸಮಯದಲ್ಲಿ ಅವರು ತಮ್ಮ ಚಿಕಿತ್ಸೆಯ ವೆಚ್ಚ ಭರಿಸಲು ಆರ್ಥಿಕ ಸಹಾಯಕ್ಕಾಗಿ ಸಾರ್ವಜನಿಕವಾಗಿ ಮನವಿ ಮಾಡಿಕೊಂಡಿದ್ದರು. "ನಮಸ್ತೆ ನಾನು ಶ್ರೀಧರ... ಇದ್ದಕ್ಕಿದ್ದ ಹಾಗೆ ಅನಾರೋಗ್ಯಕ್ಕೆ ತುತ್ತಾಗಿ ಬಹಳಷ್ಟು ಸಂಕಷ್ಟದಲ್ಲಿದ್ದೇನೆ. ಆಸ್ಪತ್ರೆಯ ಖರ್ಚನ್ನು ಭರಿಸಲಾಗದಷ್ಟು ತೊಂದರೆಯಾಗಿದೆ. ಒಂದು ದಿನಕ್ಕೆ ಆಸ್ಪತ್ರೆಯ ಖರ್ಚು, ಮಾತ್ರೆಯ ಖರ್ಚು ಹತ್ತರಿಂದ ಹದಿನೈದು ಸಾವಿರ ಆಗುತ್ತಿದೆ. ಇದ್ದ ಉಳಿತಾಯದ ಹಣ, ಸಹಾಯದ ಹಣ. ಎಲ್ಲವೂ ಮುಗಿದುಹೋಗಿದೆ. ದಯಮಾಡಿ ತಾವೆಲ್ಲರೂ ಶ್ರೀಧರನಿಗೆ ಕೈಲಾದ ಹಣದ ಸಹಾಯ ಮಾಡಬೇಕೆಂದು ಅಂಗಲಾಚಿ ಬೇಡಿಕೊಳ್ಳುತ್ತಿದ್ದೇನೆ. ಶ್ರೀಧರನನ್ನು ಕಾಪಾಡಿ... ನನ್ನನ್ನು ಬದುಕಿಸಲು ಪ್ರಯತ್ನಿಸಿ... ಕೈಲಾದಷ್ಟು ಹಣದ ಸಹಾಯ ಮಾಡಿ" ಎಂದು ಅವರು ಸಾಮಾಜಿಕ ಜಾಲತಾಣಗಳಲ್ಲಿ ಮನವಿ ಮಾಡಿದ್ದರು. ಅವರ ತಾಯಿ ಮತ್ತು ಕೆಲವು ಕಿರುತೆರೆ ಸ್ನೇಹಿತರು ಅವರಿಗೆ ಈ ಕಷ್ಟದ ಸಮಯದಲ್ಲಿ ನೆರವಾಗಿದ್ದರು.
ಶ್ರೀಧರ್ ಅವರ ನಿಧನಕ್ಕೆ ಕನ್ನಡ ಚಿತ್ರರಂಗ ಮತ್ತು ಕಿರುತೆರೆ ವಲಯ ಸಂತಾಪ ಸೂಚಿಸಿದೆ.