
ಬಳ್ಳಾರಿಯ ಮಾಡೆಲ್ ಹೌಸ್‌ಗೆ ಬೆಂಕಿ ಬಿದ್ದಿರುವುದು.
ಬೆಂಕಿ ಬಿದ್ದ ಗಣಿ ಧಣಿ ರೆಡ್ಡಿ 'ಮಾಡೆಲ್ ಹೌಸ್' ವಿಶೇಷತೆ ಏನು? ಇಬ್ಬರು ಅಪ್ರಾಪ್ತರ ಬಂಧನವಾಗಿದ್ದೇಕೆ?
ಪ್ರಾಥಮಿಕ ತನಿಖೆಯ ಪ್ರಕಾರ, ಯಾವುದೇ ರಾಜಕೀಯ ಉದ್ದೇಶದಿಂದ ಈ ಕೃತ್ಯ ಎಸಗಿಲ್ಲ. ರೀಲ್ಸ್ ಮಾಡುವುದು ಮತ್ತು ಫೋಟೋ ಶೂಟ್‌ಗಾಗಿ ಮೊದಲ ಮಹಡಿಗೆ ಹೋದಾಗ ಸಿಗರೇಟ್ ಸೇದಿದ ಕಿಡಿ ತಗುಲಿ ಬೆಂಕಿ ಹೊತ್ತಿಕೊಂಡಿರುವ ಶಂಕೆ ಇದೆ ಎಂದು ಎಸ್‌ಪಿ ತಿಳಿಸಿದ್ದಾರೆ.
ಬಳ್ಳಾರಿ ನಗರದ ಹೊರವಲಯದ ಕಂಟೋನ್‌ಮೆಂಟ್ ಬಳಿ ಇರುವ ಪಾಳುಬಿದ್ದ ಜಿ-ಸ್ಕ್ವಾಯರ್ ಲೇಔಟ್‌ನ 'ಮಾಡೆಲ್ ಹೌಸ್'ಗೆ ಶುಕ್ರವಾರ ರಾತ್ರಿ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಇಬ್ಬರು ಅಪ್ರಾಪ್ತರು ಸೇರಿ ಎಂಟು ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಗಂಗಾವತಿ ಶಾಸಕ ಜಿ. ಜನಾರ್ದನ ರೆಡ್ಡಿ ಹಾಗೂ ಮಾಜಿ ಸಚಿವ ಬಿ. ಶ್ರೀರಾಮುಲು ಅವರಿಗೆ ಸೇರಿದ ಜಿ-ಸ್ಕ್ವಾಯರ್ ಲೇಔಟ್‌ನಲ್ಲಿ ಗ್ರಾಹಕರನ್ನು ಆಕರ್ಷಿಸಲು ಈ ಮಾದರಿ ಮನೆಯನ್ನು ನಿರ್ಮಿಸಲಾಗಿತ್ತು. ಹಲವು ವರ್ಷಗಳಿಂದ ಈ ಲೇಔಟ್ ಪಾಳುಬಿದ್ದಿದ್ದು, ಯಾರೂ ವಾಸವಿರಲಿಲ್ಲ. ಶುಕ್ರವಾರ ರಾತ್ರಿ ಸುಮಾರು 10 ಗಂಟೆ ಸುಮಾರಿಗೆ ಅಪರಿಚಿತರು ಈ ಮನೆಗೆ ಬೆಂಕಿ ಹಚ್ಚಿದ್ದಾರೆ ಎಂದು ದೂರು ದಾಖಲಾಗಿತ್ತು.
ಘಟನೆ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಎಸ್‌ಪಿ ಡಾ. ಸುಮನ್ ಪನ್ನೇಕರ್, "ಘಟನೆಗೆ ಸಂಬಂಧಿಸಿದಂತೆ ಒಟ್ಟು 8 ಜನರನ್ನು ವಶಕ್ಕೆ ಪಡೆಯಲಾಗಿದೆ. ಇವರಲ್ಲಿ ಇಬ್ಬರು ಅಪ್ರಾಪ್ತರು ಹಾಗೂ ಇಬ್ಬರು ಮುಂಬೈನಿಂದ ಬಂದವರಾಗಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ, ಇವರು ಯಾವುದೇ ರಾಜಕೀಯ ಉದ್ದೇಶದಿಂದ ಈ ಕೃತ್ಯ ಎಸಗಿಲ್ಲ. ರೀಲ್ಸ್ ಮಾಡುವುದು ಮತ್ತು ಫೋಟೋ ಶೂಟ್‌ಗಾಗಿ ಮೊದಲ ಮಹಡಿಗೆ ಹೋದಾಗ, ಸಿಗರೇಟ್ ಸೇದಿದ ಕಿಡಿ ತಗುಲಿ ಬೆಂಕಿ ಹೊತ್ತಿಕೊಂಡಿರುವ ಶಂಕೆ ಇದೆ" ಎಂದು ತಿಳಿಸಿದ್ದಾರೆ.
ಸಿಸಿಟಿವಿ, ಭದ್ರತಾ ಸಿಬ್ಬಂದಿ ಇಲ್ಲ
ದೂರಿನಲ್ಲಿ ತಿಳಿಸಿರುವಂತೆ ಯಾವುದೇ ಬೆಲೆಬಾಳುವ ವಸ್ತುಗಳು ಸುಟ್ಟಿರುವ ಕುರುಹುಗಳು ಕಂಡುಬಂದಿಲ್ಲ. ಆ ಮನೆಯಲ್ಲಿ ಅಂತಹ ವಸ್ತುಗಳೇ ಇರಲಿಲ್ಲ ಎಂಬುದು ಮೇಲ್ನೋಟಕ್ಕೆ ತಿಳಿದುಬಂದಿದೆ. ಲೇಔಟ್ ಪಾಳುಬಿದ್ದಿದ್ದರಿಂದ ಅಲ್ಲಿ ಯಾವುದೇ ಸಿಸಿಟಿವಿ ಕ್ಯಾಮೆರಾಗಳು ಅಥವಾ ಭದ್ರತಾ ಸಿಬ್ಬಂದಿ ಇರಲಿಲ್ಲ. ಈ ಜಾಗಕ್ಕೆ ನಿರಂತರವಾಗಿ ಜನರು ಬಂದು ಹೋಗುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಶೀಘ್ರದಲ್ಲೇ ಎಫ್‌ಎಸ್‌ಎಲ್ (FSL) ತಂಡ ಸ್ಥಳಕ್ಕೆ ಭೇಟಿ ನೀಡಿ ವೈಜ್ಞಾನಿಕ ಪರಿಶೀಲನೆ ನಡೆಸಲಿದೆ. ನಗರದ ಖಾಲಿ ಲೇಔಟ್‌ಗಳಲ್ಲಿ ಯಾವುದೇ ಅನೈತಿಕ ಚಟುವಟಿಕೆಗಳು ನಡೆಯದಂತೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಎಸ್‌ಪಿ-ಜನಾರ್ದನರೆಡ್ಡಿ ಮಾತುಕತೆ
ಮಾಹಿತಿ ತಿಳಿದ ತಕ್ಷಣ ಅಗ್ನಿ ಶಾಮಕ ದಳ ಸ್ಥಳಕ್ಕೆ ಭೇಟಿ ನೀಡಿ ಬೆಂಕಿ ನಂದಿಸಿದ್ದು, ಬಳ್ಳಾರಿ ಗ್ರಾಮೀಣ ಠಾಣೆಯ ಪೊಲೀಸರು ಅವಘಡ ಪರಿಶೀಲಿಸಿದ್ದಾರೆ. ವಿಧಾನಸಭೆ ಅಧಿವೇಶನ ನಿಮಿತ್ತ ಬೆಂಗಳೂರಿನಲ್ಲಿದ್ದ ಜಿ.ಜನಾರ್ದನರೆಡ್ಡಿ ಅವರು, ಬಳ್ಳಾರಿ ಎಸ್ಪಿ ಡಾ.ಸುಮನ್ ಡಿ ಪೆನ್ನೇಕರ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದು, ಮನೆಗೆ ಬೆಂಕಿ ಬಿದ್ದ ಘಟನೆಯ ವಿಷಯ ಹಂಚಿಕೊಂಡಿದ್ದಾರೆ.
ಏನಿದು ಮಾಡೆಲ್ ಹೌಸ್ ?
ಗ್ರಾಹಕರನ್ನು ಆಕರ್ಷಿಸಲು ಕಟ್ಟಡವನ್ನು ಕೇವಲ ಇಟ್ಟಿಗೆ ಸಿಮೆಂಟ್‌ನಲ್ಲಿ ನಿರ್ಮಿಸದೆ ಬಳ್ಳಾರಿಯಂಹ ಕಠಿಣ ಹವಾಮಾನಕ್ಕೆ ಸವಾಲೆಸೆಯುವಂತಹ ಶೈಲಿಯಲ್ಲಿ ನಿರ್ಮಾಣ ಮಾಡಲಾಗಿತ್ತು.
ಮೈಕ್ರೋ-ಕ್ಲೈಮೇಟ್ ತಂತ್ರಜ್ಞಾನ
ಬಳ್ಳಾರಿಯ ತೀವ್ರವಾದ ಬಿಸಿಲು ಮತ್ತು ಶುಷ್ಕ ಹವಾಮಾನವನ್ನು ಎದುರಿಸಲು ಇಲ್ಲಿ 'ಕನ್ವೆಕ್ಷನಲ್ ಮೈಕ್ರೋ-ಕ್ಲೈಮೇಟ್' ತಂತ್ರಜ್ಞಾನ ಬಳಸಲಾಗಿದ್ದು, ಇದು ಹೊರಗಿನ ಉಷ್ಣಾಂಶ ಎಷ್ಟೇ ಇದ್ದರೂ ಮನೆಯೊಳಗೆ ನೈಸರ್ಗಿಕವಾಗಿ ತಂಪಾದ ವಾತಾವರಣ ಇರುವಂತೆ ನೋಡಿಕೊಳ್ಳುತ್ತಿತ್ತು.
ದಪ್ಪ ಗೋಡೆಗಳು
ಮನೆಯ ಹೊರಗೋಡೆಗಳನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದ್ದು, ಇವು ಹೆಚ್ಚಿನ ಶಾಖವನ್ನು ಒಳಬಿಡದಂತೆ ತಡೆದು ತಂಪಾಗಿರುವಂತೆ ನಿರ್ಮಿಸಲಾಗಿತ್ತು.
ಸನ್-ಶೇಡ್‌ಗಳು
ಕಿಟಕಿಗಳ ಮೇಲೆ ದಪ್ಪವಾದ ಸನ್ ಶೇಡ್‌ಗಳನ್ನು ಅಳವಡಿಸಲಾಗಿದ್ದು, ಸೂರ್ಯನ ನೇರ ಕಿರಣಗಳು ಒಳಗೆ ಬೀಳದಂತೆ ತಡೆದು ತಂಪು ನೀಡುತ್ತಿದ್ದವು.
ನೈಸರ್ಗಿಕ ಎಸಿ ವ್ಯವಸ್ಥೆ
ಮನೆಯ ಈಶಾನ್ಯ ಮೂಲೆಯಲ್ಲಿ ವಿಶೇಷವಾಗಿ ಎತ್ತರಿಸಿದ ಉದ್ಯಾನವನವನ್ನು ನಿರ್ಮಿಸಲಾಗಿದೆ. ಇದು ಇಡೀ ಮನೆಗೆ ನೈಸರ್ಗಿಕ ಬೆಳಕನ್ನು ನೀಡುವುದಲ್ಲದೆ, ಬೀಸುವ ಬಿಸಿ ಗಾಳಿಯನ್ನು ತಂಪುಗೊಳಿಸಿ ಒಳಕ್ಕೆ ಹರಿಬಿಡುವ 'ಏರ್ ಫಿಲ್ಟರ್'ನಂತೆ ಕೆಲಸ ಮಾಡುತ್ತಿತ್ತು.

