ಕುಡಿದು ಎರ್ರಾಬಿರ್ರಿ ವಾಹನ ಚಾಲನೆ ಮಾಡಿ ಸರಣಿ ಅಪಘಾತ: ನಟ ಮಯೂರ್ ಪಟೇಲ್‌ ಪೊಲೀಸ್ ವಶಕ್ಕೆ
x

ಪೊಲೀಸರು ನಡೆಸಿದ ವೈದ್ಯಕೀಯ ತಪಾಸಣೆಯಲ್ಲಿ ನಟ ಮಯೂರ್ ಪಟೇಲ್ ಕಾನೂನು ಮಿತಿಗಿಂತ ಹೆಚ್ಚು ಮದ್ಯಪಾನ ಮಾಡಿರುವುದು ದೃಢಪಟ್ಟಿದೆ.

ಕುಡಿದು ಎರ್ರಾಬಿರ್ರಿ ವಾಹನ ಚಾಲನೆ ಮಾಡಿ ಸರಣಿ ಅಪಘಾತ: ನಟ ಮಯೂರ್ ಪಟೇಲ್‌ ಪೊಲೀಸ್ ವಶಕ್ಕೆ

ಬುಧವಾರ ತಡರಾತ್ರಿ ಬೆಂಗಳೂರಿನ ದೊಮ್ಮಲೂರು ಬಳಿ ನಟ ಮಯೂರ್ ಪಟೇಲ್ ತಮ್ಮ ಟೊಯೊಟಾ ಫಾರ್ಚೂನರ್ ಕಾರಿನಿಂದ ಸರಣಿ ಅಪಘಾತ ಎಸಗಿದ್ದಾರೆ.


Click the Play button to hear this message in audio format

ವಾಹನ ಚಲಾಯಿಸಿ ಸರಣಿ ಅಪಘಾತ ಎಸಗಿದ ಆರೋಪದ ಮೇಲೆ ಕನ್ನಡದ ನಟ ಮಯೂರ್ ಪಟೇಲ್ ವಿರುದ್ಧ ಹಲಸೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಬುಧವಾರ ತಡರಾತ್ರಿ ದೊಮ್ಮಲೂರು ಸಮೀಪದ ಕಮಾಂಡೋ ಆಸ್ಪತ್ರೆ ಸಿಗ್ನಲ್ ಬಳಿ ಈ ಘಟನೆ ನಡೆದಿದೆ.

ನಟ ಮಯೂರ್ ಪಟೇಲ್ ಅವರು ತಮ್ಮ ಟೊಯೊಟಾ ಫಾರ್ಚೂನರ್ ಕಾರನ್ನು ಅತಿ ವೇಗವಾಗಿ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬರುತ್ತಿದ್ದರು ಎನ್ನಲಾಗಿದೆ. ಈ ವೇಳೆ ನಿಯಂತ್ರಣ ತಪ್ಪಿದ ಕಾರು, ಸಿಗ್ನಲ್‌ನಲ್ಲಿ ನಿಂತಿದ್ದ ಶ್ರೀನಿವಾಸ್ ಮತ್ತು ಅಭಿಷೇಕ್ ಎಂಬುವವರಿಗೆ ಸೇರಿದ ಕಾರುಗಳು ಹಾಗೂ ಒಂದು ಸರ್ಕಾರಿ ವಾಹನ ಸೇರಿದಂತೆ ಒಟ್ಟು ನಾಲ್ಕು ವಾಹನಗಳಿಗೆ ಸರಣಿ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ವಾಹನಗಳು ಗುಜ್ಜಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯ ಸಂಭವಿಸಿಲ್ಲ.

'ಬೆಳಿಗ್ಗೆ ನೋಡ್ಕೋತೀನಿ' ಎಂದ ನಟ

ಅಪಘಾತವಾದ ತಕ್ಷಣ ಕಾರಿನಿಂದ ಇಳಿದ ಮಯೂರ್ ಪಟೇಲ್, "ನಾನು ಸಿನಿಮಾ ನಟ ಮಯೂರ್ ಪಟೇಲ್, ಈಗ ಹೋಗಿ ಬೆಳಿಗ್ಗೆ ಎಲ್ಲ ಸರಿ ಮಾಡಿಕೊಡ್ತೀನಿ" ಎಂದು ಹೇಳಿ ಅಲ್ಲಿಂದ ಜಾರಿಕೊಳ್ಳಲು ಯತ್ನಿಸಿದ್ದಾರೆ. ಆದರೆ ಕಾರು ಜಖಂಗೊಂಡಿದ್ದರಿಂದ ಆಕ್ರೋಶಗೊಂಡಿದ್ದ ಇತರ ಚಾಲಕರು, "ಸೆಟಲ್ಮೆಂಟ್ ಏನಿದ್ದರೂ ಈಗಲೇ ಆಗಬೇಕು" ಎಂದು ಪಟ್ಟು ಹಿಡಿದಿದ್ದಾರೆ. ಈ ವೇಳೆ ಸಾರ್ವಜನಿಕರು ನಟನ ವರ್ತನೆಯನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದಾರೆ.

ತಪಾಸಣೆ ವೇಳೆ ಮದ್ಯಪಾನ ದೃಢ, ಕಾರಿಗೆ ವಿಮೆಯೂ ಇರಲಿಲ್ಲ

ಸ್ಥಳಕ್ಕೆ ಆಗಮಿಸಿದ ಹೊಯ್ಸಳ ಗಸ್ತು ಪಡೆಯ ಪೊಲೀಸರು ನಟನನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ, ಅವರು ಮದ್ಯಪಾನ ಮಾಡಿರುವುದು ದೃಢಪಟ್ಟಿದೆ. ಅಲ್ಲದೆ, ತನಿಖೆಯ ವೇಳೆ ಮಯೂರ್ ಪಟೇಲ್ ಅವರ ಫಾರ್ಚೂನರ್ ಕಾರಿಗೆ ವಿಮೆ ಇಲ್ಲದಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ವಾಹನವನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ.

ಸಂತ್ರಸ್ತನ ಕಣ್ಣೀರು

ಹೆಂಡತಿಯ ಒಡವೆ ಅಡವಿಟ್ಟು ಕಳೆದ ವಾರವಷ್ಟೇ ಹೊಸ ಕಾರು ಖರೀದಿಸಿದ್ದೆ. ಈಗ ಇಎಂಐ ಕಟ್ಟುವ ಮೊದಲೇ ಕಾರು ಹೀಗಾದರೆ ನನ್ನ ಬದುಕು ಹೇಗೆ? ಎಂದು ಸಂತ್ರಸ್ತ ಚಾಲಕ ಶ್ರೀನಿವಾಸ್ ಕಣ್ಣೀರಿಟ್ಟಿದ್ದಾರೆ.

ಯಾರು ಈ ಮಯೂರ್ ಪಟೇಲ್?

ಹಿರಿಯ ನಟ ಮದನ್ ಪಟೇಲ್ ಅವರ ಪುತ್ರ ಮಯೂರ್ ಪಟೇಲ್, 2000ರಲ್ಲಿ 'ಆಂಧ್ರ ಹೆಂಡ್ತಿ' ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದವರು. 'ಮಣಿ', 'ಗುನ್ನಾ', 'ಸ್ಲಮ್' ಮುಂತಾದ ಚಿತ್ರಗಳಲ್ಲಿ ನಟಿಸಿದ್ದರೂ, ಇತ್ತೀಚಿನ ವರ್ಷಗಳಲ್ಲಿ ಅವರು ಚಿತ್ರರಂಗದಿಂದ ದೂರವುಳಿದಿದ್ದರು. ಇದೀಗ ಕುಡಿದು ವಾಹನ ಚಲಾಯಿಸಿದ ಪ್ರಕರಣದಲ್ಲಿ ಸಿಲುಕುವ ಮೂಲಕ ಸುದ್ದಿಯಾಗಿದ್ದಾರೆ.

Read More
Next Story