ಕಲಬುರಗಿ: ಕೆಎಸ್‌ಆರ್‌ಟಿಸಿ ಬಸ್-‌ಬೈಕ್‌ ಮಧ್ಯೆ ಭೀಕರ ಅಪಘಾತ, ಮೂವರ ಸಾವು
x

ಕಲಬುರಗಿ: ಕೆಎಸ್‌ಆರ್‌ಟಿಸಿ ಬಸ್-‌ಬೈಕ್‌ ಮಧ್ಯೆ ಭೀಕರ ಅಪಘಾತ, ಮೂವರ ಸಾವು


ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಡೊಂಗರಗಾಂವ ಕ್ರಾಸ್ ಸಮೀಪದ ರಸ್ತೆಯಲ್ಲಿ ಸೋಮವಾರ ಬೆಳಿಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ದುರ್ಮರಣ ಹೊಂದಿದ್ದಾರೆ. ಕೆಎಸ್‌ಆರ್‌ಟಿಸಿ ಬಸ್ ಮತ್ತು ಬೈಕ್ ಡಿಕ್ಕಿಯಾಗಿ ಕಿಣ್ಣಿ ಸಡಕ್ ಗ್ರಾಮದ ಮೂವರು ಬೈಕ್​​ ಸವಾರರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಕಿಣ್ಣಿಸಡಕ್ ಗ್ರಾಮದ ಸಮೀ‌ ಜಮೀರ್ ಸಾಬ್ (22), ವಿಶಾಲ ಸಂಜಯಕುಮಾರ ಜಾಧವ (20) ಮತ್ತು ಚಂದ್ರಕಾಂತ ನಿಂಗಪ್ಪ ಹೊಳಕುಂದಿ (23) ಮೃತ ಯುವಕರು. ಈ ಮೂವರು ಸೇರಿ ಬೈಕ್‌ ಮೇಲೆ

ಕಲಬುರಗಿಗೆ ತೆರಳುತ್ತಿದ್ದರು. ಇದೇ ವೇಳೆ ಕಲಬುರಗಿಯಿಂದ ಹುಮನಾಬಾದ್‌ಗೆ ತೆರಳುತ್ತಿದ್ದ ಬಸ್‌ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯಿಂದ ತೀವ್ರವಾಗಿ ಗಾಯಗೊಂಡು ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಚಂದ್ರಕಾಂತ ಅವರು ಇತ್ತೀಚೆಗೆ ಎಲ್ ಅಂಡ್ ಟಿ ಫೈನಾನ್ಸ್‌ನಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದರು. ಮೇ 28ರಂದು ಹುಬ್ಬಳಿಯಲ್ಲಿ ದಾಖಲಾತಿ ಪರಿಶೀಲನೆ ಹಾಗೂ ಸಂದರ್ಶನಕ್ಕೆ ತೆರಳುತ್ತಿದ್ದರು. ಸ್ನೇಹಿತರಾದ ಸಮೀರ್ ಹಾಗೂ ವಿಶಾಲ ಸೇರಿ ಚಂದ್ರಕಾಂತನನ್ನು ಕಮಲಾಪುರವರೆಗೆ ಬಿಟ್ಟುಬರಲು ಬೈಕ್‌ ಮೇಲೆ ಹೊರಟಿದ್ದರು. ಎದುರಿಗೆ ಬಂದ ಬಸ್‌ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಹೇಳಿದ್ದಾರೆ.

ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಕಮಲಾಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಶವಗಳನ್ನು ಸಾಗಿಸಲಾಗಿದೆ. ಕಮಲಾಪುರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದರು.

ಭಾನುವಾರ ಬೆಳಗ್ಗೆ ಕೊನೆಗೊಂಡಂತೆ 24 ಗಂಟೆ ಅವಧಿಯಲ್ಲಿ ರಾಜ್ಯದಲ್ಲಿ ಸಂಭವಿಸಿದ ರಸ್ತೆ ಅಪಘತಗಳಲ್ಲಿ 51 ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಸಂಚಾರ ಹಾಗೂ ರಸ್ತೆ ಸುರಕ್ಷತಾ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಭಾನುವಾರ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿ ಆತಂಕ ವ್ಯಕ್ತಪಡಿಸಿದ್ದರು.

ಭಾನುವಾರ ಹಾಸನದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ 6 ಜನ ಮೃತಪಟ್ಟಿದ್ದರು. ವಾರಾಂತ್ಯದಲ್ಲಿ ಹೆಚ್ಚಿನ ಅಪಘಾತಗಳು ವರದಿಯಾಗಿದ್ದವು. ಅಜಾಗರೂಕತೆಯ ಚಾಲನೆ, ಮದ್ಯಪಾನ ಮಾಡಿ ವಾಹನ ಚಲಾಯಿಸುವುದು ಹಾಗೂ ಸಂಚಾರ ನಿಯಮಗಳ ಉಲ್ಲಂಘನೆ ಹೆಚ್ಚುತ್ತಿರುವ ಬಗ್ಗೆ ಸಂಚಾರ ಪೊಲೀಸರು ಕಳವಳ ವ್ಯಕ್ತಪಡಿಸಿದ್ದಾರೆ.

Read More
Next Story