ಕಡಕೋಳ ಕಲ್ಲುತೂರಾಟ | ಪೊಲೀಸ್ ಠಾಣೆ ಎದುರು ಬಿಜೆಪಿ ಪ್ರತಿಭಟನೆ; ಸರ್ಕಾರದ ವಿರುದ್ಧ ಬೊಮ್ಮಾಯಿ ಆಕ್ರೋಶ
ಕಡಕೋಳ ಗ್ರಾಮದ ಗರಡಿಮನೆ ಸೇರಿದಂತೆ ವಿವಿಧ ಖಾಸಗಿ ನಿವೇಶನಗಳನ್ನು ವಕ್ಫ್ ಬೋರ್ಡ್‌ಗೆ ಸೇರಿಸುವ ವದಂತಿ ಹಿನ್ನೆಲೆಯಲ್ಲಿ ಮುಸ್ಲಿಮರ ಮನೆಗಳ ಮೇಲೆ ಉದ್ರಿಕ್ತರ ಗುಂಪು ಕಲ್ಲುತೂರಾಟ ನಡೆಸಿತ್ತು. ಪ್ರಕರಣದಲ್ಲಿ ಪೊಲೀಸರು 30ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದಿದ್ದಾರೆ.
ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಕಡಕೋಳ ಗ್ರಾಮದಲ್ಲಿ ಬುಧವಾರ ರಾತ್ರಿ ನಡೆದ ಕಲ್ಲೂತೂರಾಟ ಘಟನೆಗೆ ಸಂಬಂಧಿಸಿದಂತೆ ಹಿಂದೂಗಳನ್ನು ಬಂಧಿಸುತ್ತಿರುವ ಪೊಲೀಸರ ಕ್ರಮ ಖಂಡಿಸಿ ಬಿಜೆಪಿ ನೇತೃತ್ವದಲ್ಲಿ ಹಿಂದೂಪರ ಸಂಘಟನೆಗಳು ಗುರುವಾರ ಪ್ರತಿಭಟನೆ ನಡೆಸಿದವು.
ಗ್ರಾಮದ ಗರಡಿಮನೆ ಸೇರಿದಂತೆ ವಿವಿಧ ಖಾಸಗಿ ನಿವೇಶನಗಳನ್ನು ವಕ್ಫ್ ಬೋರ್ಡ್‌ಗೆ ಸೇರಿಸುವ ವದಂತಿ ಹಿನ್ನೆಲೆಯಲ್ಲಿ ಮುಸ್ಲಿಮರ ಮನೆಗಳ ಮೇಲೆ ಉದ್ರಿಕ್ತರ ಗುಂಪು ಕಲ್ಲುತೂರಾಟ ನಡೆಸಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 30ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದಿದ್ದಾರೆ.
ಇದರಿಂದ ಆಕ್ರೋಶಗೊಂಡ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಹಾಗೂ ಬಿಜೆಪಿ ಪದಾಧಿಕಾರಿಗಳು ಸವಣೂರ ಪೋಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದರು. ಪ್ರಕರಣದಲ್ಲಿ ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ, ಪೊಲೀಸರೊಂದಿಗೆ ವಾಗ್ವಾದ ನಡೆಸಿದರು.
ಕಡಕೋಳ ಗ್ರಾಮದ ಘಟನೆಯಲ್ಲಿ ಭಾಗಿಯಾಗದವರ ಮನೆಯಲ್ಲಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಹಿಂದೂಗಳನ್ನು ಮಾತ್ರ ಬಂಧಿಸಲಾಗುತ್ತಿದೆ. ಕೆಲ ಮುಸ್ಲಿಮರು ಘರ್ಷಣೆಯಲ್ಲಿ ತೊಡಗಿದ್ದು, ಅವರ ವಿರುದ್ಧವೂ ಪ್ರಕರಣ ದಾಖಲಿಸಿ ಬಂಧಿಸಬೇಕು ಎಂದು ಪಟ್ಟು ಹಿಡಿದರು.
ಸರ್ಕಾರದ ವಿರುದ್ಧ ಬೊಮ್ಮಾಯಿ ವಾಗ್ದಾಳಿ
ರಾಜ್ಯ ಸರ್ಕಾರದ ಆಜ್ಞೆಗಳಿಂದಾಗಿ ಕೋಮು ಸೌಹಾರ್ದತೆ ಕದಡುತ್ತಿದೆ. ಕಾನೂನು ಸುವ್ಯವಸ್ಥೆ ಕೆಡದಂತೆ ಕಾನೂನು ಜಾರಿ ಮಾಡಬೇಕೆಂಬ ಕನಿಷ್ಠ ತಿಳಿವಳಿಕೆ ರಾಜ್ಯ ಸರ್ಕಾರಕ್ಕಿಲ್ಲ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆರೋಪಿಸಿದರು.
ಶಿಗ್ಗಾವಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ವಕ್ಫ್ ಆಸ್ತಿ ನೋಟಿಸ್ ನೀಡುವುದನ್ನು ಸರ್ಕಾರ ಕೂಡಲೇ ನಿಲ್ಲಿಸಬೇಕು. ಕಂದಾಯ ಕಾಯ್ದೆಯಡಿ ಇಂಡೀಕರಣ ಪ್ರಕ್ರಿಯೆ ನಡೆಸಬೇಕು. ರೈತರಿಗೆ ನೀಡಿರುವ ನೋಟಿಸನ್ನು ಹಿಂಪಡೆಬೇಕು ಎಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.
ರಾಜ್ಯ ಸರ್ಕಾರ ತುಷ್ಟೀಕರಣ ರಾಜಕಾರಣ ಮಾಡುತ್ತಿದೆ. ವಿರೋಧ ಪಕ್ಷಗಳ ಮೇಲೆ ಮೇಲೆ ಗೂಬೆ ಕೂರಿಸುವ ಯತ್ನ ನಡೆಯುತ್ತಿದೆ. ತಾವೇ ಸಮಸ್ಯೆ ಸೃಷ್ಟಿ ಮಾಡಿ ವಿರೋಧ ಪಕ್ಷದ ಮೇಲೆ ಹಾಕುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಸಮಸ್ಯೆ ಎತ್ತಿಹಿಡಿಯುವುದು ವಿರೋಧ ಪಕ್ಷದ ಕೆಲಸ. ಅದನ್ನು ಸರಿಪಡಿಸಬೇಕಾದದು ಯಾರ ಕೆಲಸ ಎಂದು ವಾಗ್ದಾಳಿ ನಡೆಸಿದರು.
ಸರ್ಕಾರದ ನೀತಿಯಿಂದಾಗಿ ಗ್ರಾಮಗಳಲ್ಲಿ ಘರ್ಷಣೆ ನಡೆಯುವಂತಾಗಿದೆ. ಇನ್ನಾದರೂ ಸಿಎಂ ಸಿದ್ದರಾಮಯ್ಯ ಅವರು ಭಂಡತನ ಬಿಟ್ಟು, ಕಾನೂನು ಸುವ್ಯವಸ್ಥೆ ಕೆಡದಂತೆ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.