ತಾಕತ್ತು, ದಮ್ಮು ಇದ್ರೆ ಬಚಾವ್ ಆಗು: ಸಂಸದ ಕೆ.ಸುಧಾಕರ್ ವಿರುದ್ಧ ಶಾಸಕ ಪ್ರದೀಪ್ ಈಶ್ವರ್ ಸವಾಲು
ಸುಧಾಕರ್ ಅಲ್ಲ, ಅವರ ಅಪ್ಪನ ಕೈಯಲ್ಲೂ ನನ್ನ ಏನೂ ಮಾಡೋಕೆ ಆಗಲ್ಲ ಎಂದ ಶಾಸಕ ಪ್ರದೀಪ್
ನಗರಸಭೆ ಚುನಾವಣೆಗೆ ಸಂಸದ ಕೆ.ಸುಧಾಕರ್ 7 ರಿಂದ 8 ಕೋಟಿ ರೂಪಾಯಿ ಖರ್ಚು ಮಾಡಿ ಕಾಂಗ್ರೆಸ್ ಸದಸ್ಯರನ್ನು ಖರೀದಿ ಮಾಡಿದ್ದಾರೆ ಎಂದು ಶಾಸಕ ಪ್ರದೀಪ್ ಈಶ್ವರ್ ಅವರು ಸಂಸದ ಡಾ ಸುಧಾಕರ್ ವಿರುದ್ದ ವಾಗ್ದಾಳಿ ನಡೆಸಿದರು.
ಗುರುವಾರ(ಸೆ.12) ನಡೆದ ಚಿಕ್ಕಬಳ್ಳಾಪುರ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿ ಗೆದ್ದಿದೆ. ಈ ಬಗ್ಗೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಶಾಸಕ ಪ್ರದೀಪ್ ಈಶ್ವರ್, ಕೋಟಿ ರೂಪಾಯಿ ಖರ್ಚು ಮಾಡಿ ಕಾಂಗ್ರೆಸ್ ಸದಸ್ಯರನ್ನು ಖರೀದಿ ಮಾಡಿದ್ದಾರೆ. ಅಷ್ಟೇ ಅಲ್ಲ, ಅವರು ಹೆಣಗಳ ಮೇಲೆ ದುಡ್ಡು ಮಾಡಿ ನಗರಸಭೆ ಚುನಾವಣೆಗೆ ಹಾಕಿದ್ದಾರೆ. ನಮ್ಮ ಬಳಿ ಹಣ ಇಲ್ಲ. ಮುಂದಿನ ನಗರಸಭೆ ಚುನಾವಣೆಯಲ್ಲಿ ‘ಕೈ’ ಬಾವುಟ ಹಾರಿಸುತ್ತೇನೆ ಎಂದು ಪ್ರದೀಪ್ ಈಶ್ವರ್ ಕಿಡಿಕಾರಿದರು.
ಜೊತೆಗೆ ಕೆ.ಸುಧಾಕರ್ ಅಲ್ಲ, ಅವರ ಅಪ್ಪನ ಕೈಯಲ್ಲೂ ನನ್ನ ಏನೂ ಮಾಡೋಕೆ ಆಗಲ್ಲ. ಆತ ಒಬ್ಬ ಕೋವಿಡ್ ಕಳ್ಳ. ಅವನನ್ನು ಜೈಲಿಗೆ ಹಾಕುವವರೆಗೂ ಬೀಡಲ್ಲ. ತಾಕತ್ತು, ದಮ್ಮು ಇದ್ರೆ ಬಚಾವ್ ಆಗು ನೊಡೋಣ ಎಂದು ಸವಾಲ್ ಹಾಕಿದರು.
ಇನ್ನು ಈ ಬಾರಿ ಚಿಕ್ಕಬಳ್ಳಾಪುರ ನಗರಸಭೆ ಚುನಾವಣೆ ತೀವ್ರ ಕುತೂಹಲಕ್ಕೆ ಕಾರಣವಾಗಿತ್ತು. ಜೊತೆಗೆ ಸಂಸದ ಡಾ.ಕೆ.ಸುಧಾಕರ್ ಹಾಗೂ ಶಾಸಕ ಪ್ರದೀಪ್ ಈಶ್ವರ್ ಮಧ್ಯೆ ಜಿದ್ದಾಜಿದ್ದಿ ಏರ್ಪಟ್ಟಿತ್ತು. ಈ ಹಿನ್ನಲೆ ಡಿ.ವೈ.ಎಸ್ಪಿ ಶಿವಕುಮಾರ್ ನೇತೃತ್ವದಲ್ಲಿ 150ಕ್ಕೂ ಹೆಚ್ಚು ಪೊಲೀಸರಿಂದ ಬಂದೋಬಸ್ತ್ ಕೂಡ ಮಾಡಲಾಗಿತ್ತು. ಬುಧವಾರ(ಸೆ.11) ಜೆಡಿಎಸ್ನ ಇಬ್ಬರು ನಗರಸಭೆ ಸದಸ್ಯರಾದ ಮಟಮಪ್ಪ ಹಾಗೂ ವೀಣಾ ರಾಮು ಎನ್ನುವವರು ನಾಪತ್ತೆಯಾಗಿದ್ದರು. ಆ ಮೂಲಕ ತೀವ್ರ ಹಣಾಹಣಿಗೆ ಚಿಕ್ಕಬಳ್ಳಾಪುರ ನಗರಸಭೆ ಚುನಾವಣೆ ಕಾರಣವಾಗಿತ್ತು. ಇದೀಗ ಶಥಾಯಗತಾಯವಾಗಿ ಬಿಜೆಪಿಗೆ ನಗರಸಭೆ ಚುಕ್ಕಾಣಿ ಹಿಡಿದಿದೆ.