
40% Commission | ನ್ಯಾ.ನಾಗಮೋಹನ ದಾಸ್ ವಿಚಾರಣಾ ವರದಿ ಸಲ್ಲಿಕೆ: ಪ್ರತಿಪಕ್ಷಗಳ ವಿರುದ್ಧ ಸರ್ಕಾರಕ್ಕೆ ಹೊಸ ಅಸ್ತ್ರ
ಸಾವಿರದ ಎಂಟನೂರು ಪುಟಗಳಿರುವ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್ ನೀಡಿದರು
ಸರ್ಕಾರದ ಗುತ್ತಿಗೆ ಕಾಮಗಾರಿಗಳಲ್ಲಿ ಶೇ.40ಕ್ಕಿಂತ ಹೆಚ್ಚು ಕಮಿಷನ್ ಪಡೆಯುತ್ತಿರುವ ಬಗ್ಗೆ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘ ಮಾಡಿದ್ದ ಆರೋಪಗಳಿಗೆ ಸಂಬಂಧಿಸಿ ತನಿಖೆ ನಡೆಸಿರುವ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ನೇತೃತ್ವದ ವಿಚಾರಣಾ ಆಯೋಗವು ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತನ್ನ ವಿಚಾರಣಾ ವರದಿ ಸಲ್ಲಿಸಿದೆ.
ಗುತ್ತಿಗೆದಾರರ ಆರೋಪಗಳು ಹಾಗೂ ನಾರಾಯಣಪುರ ಬಲದಂಡೆ ಮುಖ್ಯ ಕಾಲುವೆಗೆ ಅಡ್ಡಲಾಗಿ ನಿರ್ಮಿಸಿರುವ 1ರಿಂದ 18 ಉಪ ಕಾಲುವೆಗಳ ಆಧುನೀಕರಣ ವೆಚ್ಚಕ್ಕೆ ಸಂಬಂಧಿಸಿ ಆಯೋಗ ತನಿಖೆ ನಡೆಸಿದೆ. ಗುತ್ತಿಗೆದಾರರ ಶೇ40 ಕಮಿಷನ್ ಆರೋಪಕ್ಕೆ ಸಂಬಂಧಿಸಿ 20ಸಾವಿರ ಪುಟಗಳ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಸಲ್ಲಿಸಿದರು.
ಪ್ಯಾಕೇಜ್ ಪದ್ಧತಿ ಕೈಬಿಡುವುದು, ಎಸ್.ಆರ್. ದರಪಟ್ಟಿ ನಿಗದಿ, ಸ್ಟಾರ್ ರೇಟ್ ಪದ್ಧತಿಯ ಜಾರಿ, ಪಾರದರ್ಶಕತೆ ಕಾಪಾಡಿಕೊಳ್ಳುವಿಕೆ, ಹಿರಿತನದ ಮೇಲೆ ಬಿಲ್ ಪಾವತಿ, ಕೆಆರ್‌ಐಡಿಎಲ್ ನಿಂದ ಗುತ್ತಿಗೆದಾರರಿಗೆ ನೇರವಾಗಿ ಕಾಮಗಾರಿಗಳ ನೀಡುವುದನ್ನು ತಪ್ಪಿಸುವುದು ಮೊದಲಾದ ವಿಷಯಗಳಿಗೆ ಸಂಬಂಧಿಸಿ ತನಿಖೆ ನಡೆಸಲು ಗುತ್ತಿಗೆದಾರರ ಸಂಘ ಮನವಿ ಮಾಡಿತ್ತು. ಆರೋಪಗಳಿಗೆ ಸಂಬಂಧಿಸಿ ರಾಜ್ಯ ಸರ್ಕಾರವು ವಿಚಾರಣಾ ಆಯೋಗ ರಚಿಸಿ, ತನಿಖೆಗೆ ಸೂಚಿಸಿತ್ತು.
ಸಾರ್ವಜನಿಕ ಕಾಮಗಾರಿಗೆ ಸಂಬಂಧಿಸಿದ ಆರೋಪವಾಗಿರುವುದರಿಂದ ಸಾರ್ವಜನಿಕರ ಹೇಳಿಕೆ ಮತ್ತು ವಿವರಗಳು ಬಹು ಮುಖ್ಯ ಎಂಬುದನ್ನು ಮನಗಂಡು ಆಯೋಗವು ಕೂಲಂಕಷವಾಗಿ ತನಿಖೆ ನಡೆಸಿ ಸಲಹೆ ಮತ್ತು ಅಭಿಪ್ರಾಯಗಳೊಂದಿಗೆ ವರದಿ ಸಿದ್ಧಪಡಿಸಿದೆ.
ಪ್ರಮುಖ ಐದು ಇಲಾಖೆಗಳಲ್ಲಿ 2019 ಜುಲೈ 26 ರಿಂದ 2023 ಮಾ.31ರ ವರೆಗಿನ ಎಲ್ಲಾ ಕಾಮಗಾರಿಗಳ ತನಿಖೆ ನಡೆಸಿದ್ದು, ಆಯೋಗವು ವೈಜ್ಞಾನಿಕವಾಗಿ ರ್ಯಾಂಡಮ್ ಮಾದರಿಯಲ್ಲಿ ಪೂರ್ಣಗೊಂಡ ಕಾಮಗಾರಿಗಳನ್ನು ತನಿಖೆಗೆ ಆಯ್ಕೆ ಮಾಡಿಕೊಂಡಿತ್ತು. ಕಾಮಗಾರಿಗಳ ತನಿಖೆಯು ಕಡತಗಳ ಪರಿಶೀಲನೆ, ಸ್ಥಳ ಪರಿಶೀಲನೆ ಮತ್ತು ಲೆಕ್ಕಪತ್ರಗಳ ಪರಿಶೀಲನೆ ಅಂಶಗಳನ್ನು ಒಳಗೊಂಡಿದೆ.
ಇನ್ನು ರಾಯಚೂರು ಜಿಲ್ಲೆಯ ನಾರಾಯಣಪುರ ಬಲದಂಡೆ ಮುಖ್ಯ ಕಾಲುವೆಗೆ ಅಡ್ಡಲಾಗಿ ನಿರ್ಮಿಸಿರುವ 1 ರಿಂದ 18 ರವರೆಗಿನ ಉಪ ಕಾಲುವೆಯ ಆಧುನೀಕರಣ ಪ್ಯಾಕೇಜ್ ಕಾಮಗಾರಿಗಳಿಗೆ ಸಂಬಂಧಿಸಿ ಸಾವಿರ ಎಂಟನೂರು ಪುಟಗಳ ವರದಿ ಸಲ್ಲಿಸಿದೆ.
ಈ ಹಿಂದೆ ಕಾಮಗಾರಿಗೆ ಮಂಜೂರಾದ ಅಂದಾಜು ವೆಚ್ಚ, ಲೆಕ್ಕಪತ್ರಗಳನ್ನು ಪರಿಶೀಲಿಸಿ ತಾಂತ್ರಿಕ ನ್ಯೂನತೆಗಳ ಬಗ್ಗೆ ತನಿಖೆ ನಡೆಸಲು ಸರ್ಕಾರದ ನಿವೃತ್ತ ಕಾರ್ಯದರ್ಶಿ ಸಿದ್ದಗಂಗಪ್ಪ ಅಧ್ಯಕ್ಷತೆಯಲ್ಲಿ ತಾಂತ್ರಿಕ ತಜ್ಞರ ಸಮಿತಿ ರಚಿಸಲಾಗಿತ್ತು. ವಿಚಾರಣಾ ಆಯೋಗ ನೇಮಕವಾದ ಬಳಿಕ ತಾಂತ್ರಿಕ ಸಮಿತಿಯನ್ನು ಕೈಬಿಡಲಾಗಿತ್ತು.
ಸರ್ಕಾರದ ಗುತ್ತಿಗೆ ಕಾಮಗಾರಿಗಳಲ್ಲಿ ಶೇ.40 ರಷ್ಟು ಕಮಿಷನ್, ಕಾಮಗಾರಿ ನಡೆಸಿದ ಹಣ ನೀಡದ ಹಿನ್ನೆಲೆಯಲ್ಲಿ ಕೆಲವು ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಂಡಿದ್ದರು. ಅಂದಿನ ಬಿಜೆಪಿ ಸರ್ಕಾರದ ವಿರುದ್ಧ ಹೋರಾಟ ರೂಪಿಸಲು ಕಾಂಗ್ರೆಸ್ ಪಕ್ಷಕ್ಕೆ ಈ ಅಕ್ರಮ ಆರೋಪಗಳು ಪ್ರಮುಖ ಅಸ್ತ್ರವಾಗಿ ಬಳಕೆಯಾಗಿದ್ದವು.
ಬಜೆಟ್ ಅಧಿವೇಶನದ ಸಂದರ್ಭದಲ್ಲೇ ಕಮಿಷನ್ ಆರೋಪದ ವಿಚಾರಣಾ ವರದಿ ಸರ್ಕಾರದ ಕೈ ಸೇರಿದ್ದು, ಪ್ರತಿಪಕ್ಷಗಳ ವಿರುದ್ಧ ದೊಡ್ಡ ಅಸ್ತ್ರ ಸಿಕ್ಕಂತಾಗಿದೆ. ವರದಿಯಲ್ಲಿ ಕಮಿಷನ್ ಆರೋಪದ ಸತ್ಯಾಸತ್ಯತೆ ತಿಳಿಯಲಿದ್ದು, ಕುತೂಹಲ ಮೂಡಿಸಿದೆ.