ತಮಿಳು ಭಾಷಿಗರು ಬ್ರಿಟಿಷರ ಗುಲಾಮರಾಗಿದ್ದರು: ನ್ಯಾ.ಎಂ.ಐ.ಅರುಣ್
ಬೆಂಗಳೂರಿನ ಕಂಟೋನ್ಮಂಟ್‌ನಂತಹ ಪ್ರದೇಶಗಳಲ್ಲಿ ಅತೀ ಹೆಚ್ಚು ತಮಿಳು ಭಾಷಿಗರು ನೆಲೆಸುತ್ತಿದ್ದು, ಅವರೆಲ್ಲ ಬ್ರಿಟಿಷರ ಗುಲಾಮರಾಗಿದ್ದರು. ಕನ್ನಡನಾಡಿನ ಯಾವ ಕನ್ನಡಿಗರೂ ಬ್ರಿಟಿಷರಿಗೆ ಗುಲಾಮರಾಗಿರಲಿಲ್ಲ ಎಂದು ಹೈಕೋರ್ಟ್ ನ್ಯಾಯಮೂರ್ತಿ ಎಂ.ಐ.ಅರುಣ್ ಹೇಳಿದ್ದಾರೆ.
"ಬೆಂಗಳೂರಿನ ಕಂಟೋನ್ಮಂಟ್‌ನಂತಹ ಪ್ರದೇಶಗಳಲ್ಲಿ ಅತೀ ಹೆಚ್ಚು ತಮಿಳು ಭಾಷಿಗರು ನೆಲೆಸಿದ್ದು, ಅವರೆಲ್ಲ ಬ್ರಿಟಿಷರ ಗುಲಾಮರಾಗಿದ್ದವರು. ಕನ್ನಡನಾಡಿನ ಯಾವ ಕನ್ನಡಿಗರೂ ಬ್ರಿಟಿಷರಿಗೆ ಗುಲಾಮರಾಗಿರಲಿಲ್ಲ" ಎಂದು ಹೈಕೋರ್ಟ್ ನ್ಯಾಯಮೂರ್ತಿ ಎಂ.ಐ.ಅರುಣ್ ಅಭಿಪ್ರಾಯಪಟ್ಟಿದ್ದಾರೆ.
ಅವರು ಮಂಗಳವಾರ 'ಬೆಂಗಳೂರು ವಕೀಲರ ಸಂಘ'ದ ವತಿಯಿಂದ ಹೈಕೋರ್ಟ್‌ನ ವಕೀಲರ ಸಭಾಂಗಣದಲ್ಲಿ ಏರ್ಪಡಿಸಿದ್ದ 'ಕನ್ನಡ ನುಡಿ ಹಬ್ಬ' ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
"ಇಂದು ಬೆಂಗಳೂರಿನ ಕೋರಮಂಗಲ ಸೇರಿದಂತೆ ಅನೇಕ ಕಡೆ ಅನ್ಯರೇ ತುಂಬಿಕೊಂಡಿದ್ದಾರೆ. ಈ ಪ್ರದೇಶಗಳಲ್ಲಿ ಕನ್ನಡ ಸೊಗಡೇ ಇಲ್ಲದಂತಾಗಿದೆ. ಹೊರಗಿನಿಂದ ಬಂದವರು ಇಲ್ಲಿಯ ಭಾಷೆ ಕಲಿಯದೆ ಹೋದರೆ ಅದು ದ್ರೋಹದ ಕೆಲಸ. ಅನ್ಯರು ತುಂಬಿಕೊಂಡಿರುವುದರಿಂದಲೇ ಇಂದು ಬೆಂಗಳೂರಿನ ಕೆರೆ ಕಟ್ಟೆಗಳೆಲ್ಲ ನಾಶವಾಗಿ ಹೋಗಿದೆ," ಎಂದು ನ್ಯಾಯಮೂರ್ತಿ ಅರುಣ್ ತಿಳಿಸಿದರು.
"ಭಾಷೆ ಅನ್ನುವುದು ಒಂದು ಭದ್ರ ಕೋಟೆ ಇದ್ದ ಹಾಗೆ. ಸಂವಿಧಾನದ ಎಲ್ಲಾ ಅಶಯಗಳನ್ನು ಕನ್ನಡ ಸಾಹಿತ್ಯ ಒಳಗೊಂಡಿದೆ. ತಮಿಳು, ಒಡಿಯಾ ಮತ್ತು ಕನ್ನಡ ಭಾಷೆ ಹೊರತುಪಡಿಸಿದರೆ ಬೇರೆ ಯಾವ ಭಾಷೆಗಳಿಗೂ ಸುದೀರ್ಘ ಇತಿಹಾಸವಿಲ್ಲ" ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ನ್ಯಾಯಮೂರ್ತಿ ಸಂಜೀವಕುಮಾರ ಹಂಚಾಟೆ, ಸಾಹಿತಿ ಗೊ.ರು.ಚನ್ನಬಸಪ್ಪ, ಸಂಘದ ಅಧ್ಯಕ್ಷ ವಿವೇಕ ಸುಬ್ಬಾರೆಡ್ಡಿ. ಪ್ರಧಾನ ಕಾರ್ಯದರ್ಶಿ ಟಿ.ಜಿ.ರವಿ, ಖಜಾಂಚಿ ಎಂ.ಟಿ ಹರೀಶ್ ಇತರರು ಉಪಸ್ಥಿತರಿದ್ದರು.