Waqf Asset Issue | ಹುಬ್ಬಳ್ಳಿ, ವಿಜಯಪುರಕ್ಕೆ ಕೇಂದ್ರ ಜೆಪಿಸಿ ಅಧ್ಯಕ್ಷರ ಭೇಟಿ, ಅಹವಾಲು ಸ್ವೀಕಾರ
ಆಡಳಿತ ವ್ಯವಸ್ಥೆಯ ಕೈವಾಡ ಇಲ್ಲದೆ ವಕ್ಫ್ ಆಸ್ತಿ ಎಂಬ ನೊಟೀಸ್ ನೀಡಲು ಸಾಧ್ಯವಿಲ್ಲ. ರಾಜ್ಯ ಸರ್ಕಾರದ ಸೂಚನೆಯ ಮೇರೆಗೆ ರೈತರ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದಿಸಲಾಗಿದೆ ಎಂದು ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ಆರೋಪಿಸಿದರು.
ಕರ್ನಾಟಕದಲ್ಲಿ ವಕ್ಫ್ ಆಸ್ತಿ ಇಂಡೀಕರಣ ವಿವಾದ ತೀವ್ರಗೊಂಡಿರುವ ನಡುವೆಯೇ ಕೇಂದ್ರ ವಕ್ಫ್ ತಿದ್ದುಪಡಿ ಮಸೂದೆಯ ಜಂಟಿ ಸಂಸದೀಯ ಸಮಿತಿ(ಜೆಪಿಸಿ) ಅಧ್ಯಕ್ಷ ಜಗದಾಂಬಿಕಾ ಪಾಲ್ ಅವರು ಗುರುವಾರ ಹುಬ್ಬಳ್ಳಿ ಹಾಗೂ ವಿಜಯಪುರಕ್ಕೆ ಭೇಟಿ ನೀಡಿ ರೈತರ ಸಮಸ್ಯೆ ಆಲಿಸಿದರು.
ಕೇಂದ್ರ ಸರ್ಕಾರ ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ನಿರ್ಧರಿಸಿ, ಜಂಟಿ ಸಂಸದೀಯ ಸಮಿತಿ ರಚಿಸಿದೆ. ಈ ನಡುವೆ ಕರ್ನಾಟಕದಲ್ಲಿ ವಕ್ಫ್ ಬೋರ್ಡ್ ಆಸ್ತಿ ಎಂದು ರೈತರಿಗೆ ನೊಟೀಸ್ ನೀಡುತ್ತಿರುವ ಕುರಿತು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಜೆಪಿಸಿ ಅಧ್ಯಕ್ಷರಿಗೆ ಪತ್ರ ಬರೆದು ಗಮನ ಸೆಳೆದಿದ್ದರು. ಆ ಹಿನ್ನೆಲೆಯಲ್ಲಿ ಗುರುವಾರ ಬೆಳಿಗ್ಗೆ ಹುಬ್ಬಳ್ಳಿಗೆ ಆಗಮಿಸಿದ ಜಗದಾಂಬಿಕಾ ಪಾಲ್ ಹಲವು ರೈತರ ಸಮಸ್ಯೆ ಆಲಿಸಿದರು.
ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಆಡಳಿತ ವ್ಯವಸ್ಥೆಯ ಕೈವಾಡ ಇಲ್ಲದೆ ವಕ್ಫ್ ಆಸ್ತಿ ಎಂಬ ನೊಟೀಸ್ ನೀಡಲು ಸಾಧ್ಯವಿಲ್ಲ. ರಾಜ್ಯ ಸರ್ಕಾರದ ಸೂಚನೆಯ ಮೇರೆಗೆ ರೈತರ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದಿಸಲಾಗಿದೆ ಎಂದು ಆರೋಪಿಸಿದರು.
ರೈತರ ಜಮೀನು, ದೇಗುಲ ಸೇರಿದಂತೆ ಪಾರಂಪರಿಕ ತಾಣಗಳ ದಾಖಲೆಗಳಲ್ಲೂ ವಕ್ಫ್ ಆಸ್ತಿ ಎಂದು ನಮೂದಿಸಲಾಗಿದೆ. ಒಟ್ಟು 70ಕ್ಕೂ ಹೆಚ್ಚು ರೈತರಿಂದ ಅಹವಾಲು ಬಂದಿದೆ. ಅಧಿಕಾರಿಗಳ ತಪ್ಪಿನಿಂದ ರೈತರಿಗೆ ನೊಟೀಸ್ ಹೋಗಿದೆ. ಅದನ್ನು ಹಿಂಪಡೆಯಲಾಗುವುದು ಎಂದು ಸರ್ಕಾರ ಹೇಳುತ್ತಿದೆ. ಸರ್ಕಾರದ ಸೂಚನೆ ಇಲ್ಲದೆ ಅಧಿಕಾರಿಗಳು ಹೇಗೆ ಕೆಲಸ ಮಾಡುತ್ತಾರೆ ಎಂದು ಪ್ರಶ್ನಿಸಿದ ಅವರು, ಇದು ಅತ್ಯಂತ ಗಂಭೀರ ವಿಚಾರ. ದೆಹಲಿ ಮಾದರಿಯಲ್ಲಿ ರಾಜ್ಯದ ರೈತರು ಕೂಡ ವಕ್ಫ್ ಬೋರ್ಡ್‌ನಿಂದ ಸಮಸ್ಯೆ ಅನುಭವಿಸುತ್ತಿದ್ದಾರೆ ಎಂದು ಹೇಳಿದರು.
ವಕ್ಫ್ ವಿವಾದ ವಿಜಯಪುರದಿಂದ ಆರಂಭವಾಗಿ ಬಹಳಷ್ಟು ಜಿಲ್ಲೆಗಳಿಗೆ ವ್ಯಾಪಿಸಿ ಹೆಮ್ಮರವಾಗಿ ಬೆಳೆದಿದೆ ಎಂಬುದನ್ನು ಗಮನಿಸಿದ್ದೇನೆ. ದಶಕಗಳಿಂದ ಕೃಷಿ ಮಾಡುತ್ತಿರುವ ಭೂಮಿಯ ಮೇಲೆ ವಕ್ಫ್ ಬೋರ್ಡ್ ಹಕ್ಕು ಸಾಧಿಸಲು ಹೊರಟಿದೆ. ಪುರಾತತ್ವ ಇಲಾಖೆಯ ಪಾರಂಪರಿಕ ತಾಣಗಳ ಮೇಲೂ ಹಕ್ಕು ಪ್ರತಿಪಾದಿಸುತ್ತಿದೆ. ಈ ಕುರಿತಂತೆಯೂ ಮಾಹಿತಿ ಪಡೆಯಲಿದ್ದೇನೆ. ಕರ್ನಾಟಕದಲ್ಲಿ ನಡೆಯುತ್ತಿರುವ ಎಲ್ಲ ಬೆಳವಣಿಗೆಗಳ ಬಗ್ಗೆ ಸತ್ಯಾಸತ್ಯತೆ ಪರಿಶೀಲಿಸಿ ವರದಿ ಸಲ್ಲಿಸಲಾಗುವುದು ಎಂದು ಹೇಳಿದರು.
ಬಳಿಕ ವಿಜಯಪುರಕ್ಕೆ ತೆರಳಿದರು. ವಿಜಯಪುರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ರೈತರು ನಡೆಸುತ್ತಿರುವ ಅಹೋರಾತ್ರಿ ಧರಣಿ ಸ್ಥಳಕ್ಕೆ ತೆರಳಿ ಸಮಸ್ಯೆ ಆಲಿಸಿದರು. ಈ ವೇಳೆ ಮಠ-ಮಂದಿರಗಳಿಗೂ ವಕ್ಫ್ ಆಸ್ತಿ ಎಂಬ ನೊಟೀಸ್ ಬಂದಿರುವ ಕುರಿತು ಶಾಸಕ ಯತ್ನಾಳ್, ಕೇಂದ್ರ ಸಚಿವೆ ಶೋಭ ಕರಂದ್ಲಾಜೆ ಅವರು ಜೆಪಿಸಿ ಅಧ್ಯಕ್ಷರ ಗಮನ ಸೆಳೆದರು.
ಬಿಜೆಪಿ ನಿಯೋಗದಿಂದ ಜೆಪಿಸಿಗೆ ಮಾಹಿತಿ
ರೈತರಿಗೆ ವಕ್ಫ್ ಆಸ್ತಿ ಎಂಬ ನೊಟೀಸ್ ನೀಡಿರುವ ಮಾಹಿತಿಯನ್ನು ವಕ್ಪ್ ಕಾಯ್ದೆ ತಿದ್ದುಪಡಿ ಕುರಿತ ಸಂಸತ್ತಿನ ಜಂಟಿ ಸದನ ಸಮಿತಿ ಗಮನಕ್ಕೆ ತಂದಿದ್ದೇವೆ ಎಂದು ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಹುಬ್ಬಳ್ಳಿಯಲ್ಲಿ ಬಿಜೆಪಿ ನಾಯಕರ ನಿಯೋಗದೊಂದಿಗೆ ತೆರಳಿ ಮಾಹಿತಿ ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದರು. ಹಾವೇರಿ ಜಿಲ್ಲೆಯ ಶಿಗ್ಗಾವಿ ಸವಣೂರು ಸೇರಿದಂತೆ ಎಲ್ಲ ತಾಲೂಕುಗಳಲ್ಲಿ ವಕ್ಪ್ ಬೋರ್ಡ್ ನಿಂದ ರೈತರು, ಆಸ್ಪತ್ರೆ, ಶಾಲೆ, ಕಾಗಿನೆಲೆ ಮಠಕ್ಕೆ ನೊಟೀಸ್ ನೀಡಲಾಗಿದೆ. ಇದನ್ನು ಜೆಪಿಸಿ ಅಧ್ಯಕ್ಷ ಗಮನಕ್ಕೆ ತಂದಿದ್ದೇವೆ. ಧಾರವಾಡ, ಬಿಜಾಪುರ, ಕೊಪ್ಪಳ, ಗದಗ, ಹಳೆ ಮೈಸೂರಿನ ಮಂಡ್ಯ, ಮೈಸೂರು ಜಿಲ್ಲೆ ಸೇರಿದಂತೆ ಎಲ್ಲ ಜಿಲ್ಲೆಗಳಲ್ಲಿ ರೈತರಿಗೆ ನೊಟೀಸ್ ಕೊಡಲಾಗಿದೆ. ವಕ್ಪ್ ಕಾಯ್ದೆ ದುರ್ಬಳಕೆಯ ಪರಿಣಾಮ ಇಷ್ಟೆಲ್ಲಾ ಅವಾಂತರ ನಡೆದಿದೆ ಎಂದು ಹೇಳಿದರು.
ರಾಜ್ಯದಲ್ಲಿ ತರಾತುರಿಯಲ್ಲಿ ವಕ್ಪ್ ಅದಾಲತ್ ಮಾಡಿ, ಕೇಂದ್ರದಲ್ಲಿ ವಕ್ಪ್ ಕಾಯ್ದೆ ತಿದ್ದುಪಡಿಯಾಗುವ ಮೊದಲೇ ರೈತರ ಭೂಮಿಯನ್ನು ವಕ್ಪ್ ಆಸ್ತಿಯನ್ನಾಗಿ ಮಾಡಿಕೊಳ್ಳುವ ಹುನ್ನಾರ ನಡೆಸಲಾಗಿದೆ. ಕೇವಲ ಹಿಂದುಗಳಲ್ಲ, ಮುಸ್ಲಿಂ ಸಮುದಾಯದ ರೈತರ ಜಮೀನಿಗೂ ನೊಟಿಸ್ ನೀಡಲಾಗಿದೆ. ಇದರಿಂದ ಇಡೀ ರೈತ ಸಮುದಾಯ ಆಕ್ರೋಶಗೊಂಡಿದೆ ಎಂದರು.
ಈ ಸಂದರ್ಭದಲ್ಲಿ ಕೇಂದ್ರ ಸಚಿವ ವಿ. ಸೋಮಣ್ಣ, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ವಿಧಾನಸಭೆ ವಿರೋಧ ಪಕ್ಷದ ಉಪ ನಾಯಕ ಅರವಿಂದ ಬೆಲ್ಲದ, ಶಾಸಕ ಮಹೇಶ್ ಟೆಂಗಿನಕಾಯಿ, ಮಾಜಿ ಸಂಸದ ಪ್ರತಾಪ್ ಸಿಂಹ ಸೇರಿದಂತೆ ಅನೇಕ ನಾಯಕರು ಹಾಜರಿದ್ದರು.