
ಕಾಂಗ್ರೆಸ್ ಹಿರಿಯ ಶಾಸಕ ಆರ್.ವಿ. ದೇಶಪಾಂಡೆ
ಶಾಸಕ ಆರ್.ವಿ. ದೇಶಪಾಂಡೆ ಹೇಳಿಕೆಗೆ ಪತ್ರಕರ್ತೆಯರ ಸಂಘ ತೀವ್ರ ಖಂಡನೆ
ಹಿರಿಯ ರಾಜಕಾರಣಿಯಾಗಿ, ಮಾಜಿ ಸಚಿವರಾಗಿ ಮತ್ತು ಜವಾಬ್ದಾರಿಯುತ ಸ್ಥಾನದಲ್ಲಿರುವ ದೇಶಪಾಂಡೆ ಅವರಿಂದ ಇಂತಹ ಉಡಾಫೆಯ ಹೇಳಿಕೆಯನ್ನು ನಿರೀಕ್ಷಿಸಿರಲಿಲ್ಲ ಎಂದು ಪತ್ರಕರ್ತೆಯರ ಸಂಘ ತಿಳಿಸಿದೆ.
"ಹೆಣ್ಣುಮಕ್ಕಳ ಹೆರಿಗೆಗೆ ಅಗತ್ಯವಿರುವ ಆಸ್ಪತ್ರೆ ಸೌಲಭ್ಯವನ್ನು ಯಾವಾಗ ಕಲ್ಪಿಸುತ್ತೀರಿ?" ಎಂದು ಕೇಳಿದ ಪತ್ರಕರ್ತೆಯೊಬ್ಬರಿಗೆ ಮಾಜಿ ಸಚಿವ ಆರ್.ವಿ. ದೇಶಪಾಂಡೆ ಅವರು ನೀಡಿದ ಬೇಜವಾಬ್ದಾರಿಯುತ ಉತ್ತರಕ್ಕೆ ಕರ್ನಾಟಕ ಪತ್ರಕರ್ತೆಯರ ಸಂಘ ತೀವ್ರ ಖಂಡನೆ ವ್ಯಕ್ತಪಡಿಸಿದೆ.
ಹಿರಿಯ ರಾಜಕಾರಣಿಯಾಗಿ, ಮಾಜಿ ಸಚಿವರಾಗಿ ಮತ್ತು ಜವಾಬ್ದಾರಿಯುತ ಸ್ಥಾನದಲ್ಲಿರುವ ದೇಶಪಾಂಡೆ ಅವರಿಂದ ಇಂತಹ ಉಡಾಫೆಯ ಹೇಳಿಕೆಯನ್ನು ನಿರೀಕ್ಷಿಸಿರಲಿಲ್ಲ. ಸಮಾಜದ ಪರವಾಗಿ ಪ್ರಶ್ನೆ ಎತ್ತಿದ ಪತ್ರಕರ್ತೆಯೊಬ್ಬರಿಗೆ ಜವಾಬ್ದಾರಿಯಿಂದ ಉತ್ತರಿಸುವ ಬದಲು, ಲಘುವಾಗಿ ಮಾತನಾಡಿರುವುದು ಸರಿಯಲ್ಲ ಎಂದು ಸಂಘವು ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
"ಸಮಾಜದಲ್ಲಿ ಹೆಣ್ಣುಮಕ್ಕಳ ಮೂಲಭೂತ ಸೌಲಭ್ಯಗಳ ಕೊರತೆಯನ್ನು ಗಂಭೀರವಾಗಿ ಪರಿಗಣಿಸಬೇಕು. ರಾಜಕಾರಣಿಗಳು ಪತ್ರಕರ್ತೆಯರನ್ನು ಹಗುರವಾಗಿ ಪರಿಗಣಿಸಬಾರದು ಮತ್ತು ಹೆಣ್ಣುಮಕ್ಕಳ ಮೂಲಭೂತ ಸೌಲಭ್ಯಗಳ ಬಗ್ಗೆ ಉಡಾಫೆಯ ಮಾತು ಸಲ್ಲದು," ಎಂದು ಸಂಘವು ಅಭಿಪ್ರಾಯಪಟ್ಟಿದೆ.
ಆರ್.ವಿ. ದೇಶಪಾಂಡೆ ಅವರ ಈ ಹೇಳಿಕೆಗೆ ರಾಜ್ಯದ ಪತ್ರಕರ್ತೆಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಅವರ ಹಗುರವಾದ ಮಾತನ್ನು ಒಕ್ಕೊರಲಿನಿಂದ ಖಂಡಿಸಿದ್ದಾರೆ ಎಂದು ಕರ್ನಾಟಕ ಪತ್ರಕರ್ತೆಯರ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ತಿಳಿಸಿದ್ದಾರೆ.