
ʻಜೋಶಿಯವರೇ, ನಿಮ್ಮ ಕುತಂತ್ರ ನಮ್ಮ ಮುಂದೆ ನಡೆಯಲ್ಲʼ: ದಿಂಗಾಲೇಶ್ವರ ಶ್ರೀ
ಪ್ರಲ್ಹಾದ್ ಜೋಶಿ ಅವರು ಅಧಿಕಾರದ ಮತ್ತು ಸಂಪತ್ತಿನ ಮದದಲ್ಲಿ ಬದುಕುತ್ತಿದ್ದಾರೆ. ಅವರ ಚೇಲಾಗಳು ಸಾಮಾಜಿಕ ಜಾಲತಾಣವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ನನ್ನ ವಿರುದ್ಧ ಷಡ್ಯಂತ್ರ ಮಾಡುತ್ತಿದ್ದಾರೆ. ಜೋಶಿಯವರೇ, ನಿಮ್ಮ ಯಾವುದೇ ಕುತಂತ್ರ ನಮ್ಮ ಮುಂದೆ ನಡೆಯಲ್ಲ' ಎಂದು ಫಕೀರ ದಿಂಗಾಲೇಶ್ವರ ಸ್ವಾಮೀಜಿ ಕಿಡಿಕಾರಿದ್ದಾರೆ.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದಲ್ಲಿ ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ದಿಂಗಾಲೇಶ್ವರ ಶ್ರೀ, ʻʻಜೋಶಿಯವರ ದುರಾಡಳಿತ ಬಗ್ಗೆ ಹೈಕಮಾಂಡ್ ನಾಯಕರು ಗಮನಹರಿಸುತ್ತಿಲ್ಲ. ಹೀಗಾಗಿ ಈ ದಿಂಗಾಲೇಶ್ವರ ರಾಜಕೀಯ ಪ್ರವೇಶ ಮಾಡಬೇಕಾಯಿತು. ಈ ಚುನಾವಣೆ ಎರಡು ರಾಷ್ಟ್ರೀಯ ಪಕ್ಷಗಳ ವಿರುದ್ಧ ಸ್ವಾಭಿಮಾನದ ಯುದ್ಧ ಆಗಿದೆ...ʼʼ ಎಂದು ಹೇಳಿದ್ದಾರೆ.
ಧಾರವಾಡ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಗದಗ ಜಿಲ್ಲೆಯ ಶಿರಹಟ್ಟಿಯ ಭಾವೈಕ್ಯ ಪೀಠದ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಹಾಲಿ ಸಂಸದ, ಕೇಂದ್ರ ಸಚಿವ ಪಲ್ಲಾದ ಜೋಶಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸೋಮವಾರ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸ್ವಾಮೀಜಿ, ಪ್ರಲ್ಹಾದ್ ಜೋಶಿ ಅವರು, ʻʻಅಧಿಕಾರದ ಮತ್ತು ಸಂಪತ್ತಿನ ಮದದಲ್ಲಿ ಬದುಕುತ್ತಿದ್ದಾರೆ. ಅವರ ಚೇಲಾಗಳು ಸಾಮಾಜಿಕ ಜಾಲತಾಣವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ನನ್ನ ವಿರುದ್ಧ ಷಡ್ಯಂತ್ರ ಮಾಡುತ್ತಿದ್ದಾರೆ. ಜೋಶಿಯವರೇ, ನಿಮ್ಮ ಯಾವುದೇ ಕುತಂತ್ರ ನಮ್ಮ ಮುಂದೆ ನಡೆಯಲ್ಲʼʼ ಎಂದು ಕಿಡಿಕಾರಿದ್ದಾರೆ.
ಕೆಲವರು ನನ್ನ ಸ್ಪರ್ಧೆ ಹಿಂದೆ ಯಡಿಯೂರಪ್ಪ ಹಾಗೂ ಜಗದೀಶ ಶೆಟ್ಟ ಕೈವಾಡ ಇದೆಯೆಂದು ಹೇಳುತ್ತಿದ್ದಾರೆ. ಇದೆಲ್ಲಾ ಸುಳ್ಳು, ಬಿ.ಎಸ್. ಯಡಿಯೂರಪ್ಪ ಮತ್ತು ಜಗದೀಶ ಶೆಟ್ಟರ್ ಅವರು ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ನನಗೆ ಮನವಿ ಮಾಡಿದ್ದಾರೆ. ನನ್ನ ವಿರುದ್ಧ ಯಾರೇ ಮಠಾಧೀಶರು ಹೇಳಿಕೆ ನೀಡಿದ್ದರೂ ಅದು ಜೋಶಿಯವರ ಭಯಕ್ಕಷ್ಟೇ ಕೊಟ್ಟ ಹೇಳಿಕೆಯಾಗಿರುತ್ತದೆ ಎಂದು ಸ್ವಾಮೀಜಿ ತಿಳಿಸಿದರು.
ʻʻರಾಜ್ಯದ ಬಿಜೆಪಿ ಸಂಸದರಿಗೆ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಲು ಅವಕಾಶ ಕೊಡಲಿಲ್ಲ ಏಕೆಂದರೆ ಮೋದಿ ಅವರಿಂದ ತಾನು ದೂರ ಆಗಬಹುದೆಂಬ ಭಯ ಜೋಶಿ ಅವರಿಗೆ ಇದೆ. ನನ್ನ ಗುರಿ ಮುಟ್ಟುವವರೆಗೂ ಇನ್ನು ಮುಂದೆ ಮಾಲೆಯನ್ನು ಧರಿಸಲ್ಲ. ಹೂ ಮಾಲೆ ಸ್ವೀಕರಿಸುವುದಿಲ್ಲʼʼ ಎಂದು ಶಪಥ ಮಾಡಿದರು.
ʻʻಎರಡೂ ರಾಷ್ಟ್ರೀಯ ಪಕ್ಷಗಳು ಲಿಂಗಾಯತರಿಗೆ ಅನ್ಯಾಯ ಮಾಡಿವೆ. ನಾನು ಬ್ರಾಹ್ಮಣ ವಿರೋಧಿಯಲ್ಲ, ನಾನು ಬ್ರಾಹ್ಮಣ ಸಮುದಾಯದ ಅಭಿಮಾನಿ. ನಾನು ಭಾವೈಕ್ಯತೆ ಪೀಠದ ಸ್ವಾಮೀಜಿ ಆಗಿರುವುದರಿಂದ ಯಾವುದೇ ಜಾತಿಯನ್ನು ನಾನು ಟೀಕಿಸುವುದಿಲ್ಲ. ಯಾವುದೇ ಜಾತಿಗೂ ಅಭಿಮಾನ ತೋರಿಸುವುದಿಲ್ಲʼʼ ಎಂದರು.