
ಕೆಲಸ ಮಾಡುವವರ ಗುಂಪಿಗೆ ಸೇರಿ: ಇಂದಿರಾ ಮಾತನ್ನು ಉಲ್ಲೇಖಿಸಿ, ತ್ಯಾಗದ ಸಂದೇಶ ಸಾರಿದ ಡಿಕೆಶಿ
ಡಿಸಿಎಂ ಆದ ತಕ್ಷಣವೇ ಈ ಸ್ಥಾನವನ್ನು ಬಿಡಬೇಕೆಂದು ಯೋಚಿಸಿದ್ದೆ. ಆದರೆ, ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಅವರೇ ಮುಂದುವರಿಯಿರಿ ಎಂದಿದ್ದಕ್ಕೆ ಮುಂದುವರಿದ್ದೇನೆ ಎಂದು ಹೇಳಿದರು.
"ಜಗತ್ತಿನಲ್ಲಿ ಎರಡು ಬಗೆಯ ಜನರಿದ್ದಾರೆ. ಒಬ್ಬರು ಕೆಲಸ ಮಾಡುವವರು, ಇನ್ನೊಬ್ಬರು ಅದರ ಲಾಭ ಪಡೆಯುವವರು. ನೀವು ಯಾವಾಗಲೂ ಮೊದಲ ಗುಂಪಿಗೆ ಸೇರಿ, ಏಕೆಂದರೆ ಅಲ್ಲಿ ಸ್ಪರ್ಧೆ ಕಡಿಮೆ ಇರುತ್ತದೆ," ಎಂಬ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಮಾತನ್ನು ಸ್ಮರಿಸುವ ಮೂಲಕ ಉಪಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಪಕ್ಷದೊಳಗಿನ ಕೆಲ ನಾಯಕರಿಗೆ ಮಾರ್ಮಿಕವಾಗಿ ಸಂದೇಶ ರವಾನಿಸಿದ್ದಾರೆ.
ಇಂದಿರಾಗಾಂಧಿ ಅವರ ಜನ್ಮದಿನದ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಮ್ಮ ಅಧ್ಯಕ್ಷ ಸ್ಥಾನದ ಬಗ್ಗೆಯೂ ತ್ಯಾಗದ ಮಾತುಗಳನ್ನಾಡಿದ್ದು, "ನಾನು ಶಾಶ್ವತವಾಗಿ ಈ ಸ್ಥಾನದಲ್ಲಿರಲು ಸಾಧ್ಯವಿಲ್ಲ, ಬೇರೆಯವರಿಗೂ ಅವಕಾಶ ಮಾಡಿಕೊಡಬೇಕು," ಎಂದು ಹೇಳುವ ಮೂಲಕ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದ್ದಾರೆ.
ಪಕ್ಷದ ಕಚೇರಿ ನಿರ್ಮಾಣದ ಬಗ್ಗೆ ಅಸಮಾಧಾನ
"ನನ್ನ ಕಾಲದಲ್ಲಿ ಏನಾದರೂ ಆಗಬೇಕು, ಇಲ್ಲಿ ಏನಾದರೂ ಬಿಟ್ಟು ಹೋಗಬೇಕು ಎಂಬ ಉದ್ದೇಶದಿಂದ ರಾಜ್ಯದಲ್ಲಿ 100 ಹೊಸ ಕಾಂಗ್ರೆಸ್ ಕಚೇರಿಗಳನ್ನು ನಿರ್ಮಿಸಲು ಹೊರಟಿದ್ದೇವೆ. ಆದರೆ, ಕೆಲವರು ಪಕ್ಷದ ಕಚೇರಿಯನ್ನೇ ಮರೆತಿದ್ದಾರೆ. ಪಕ್ಷ ಎಂದರೆ ದೇವಸ್ಥಾನ ಎಂಬುದನ್ನೂ ಮರೆತಿದ್ದಾರೆ," ಎಂದು ಅಸಮಾಧಾನ ವ್ಯಕ್ತಪಡಿಸಿದರು.
"ಯಾರ್ಯಾರು ಕಚೇರಿ ನಿರ್ಮಾಣಕ್ಕೆ ಆಸಕ್ತಿ ತೋರಿಸಿಲ್ಲವೋ ಅವರ ಪಟ್ಟಿಯನ್ನು ಹೈಕಮಾಂಡ್ ಕೇಳಿದೆ. ಆ ಮಾಹಿತಿಯನ್ನು ನಾನು ಕಳುಹಿಸಿಕೊಡುತ್ತೇನೆ. ಅವರಿಗೆಲ್ಲ ನಾನು ಉತ್ತರ ನೀಡುವುದಿಲ್ಲ, ದೆಹಲಿಯವರೇ ಉತ್ತರ ಕೊಡುತ್ತಾರೆ. ಕೆಲವರಿಗೆ ಅಧಿಕಾರ ಮಾತ್ರ ಬೇಕು, ಪಕ್ಷದ ಕೆಲಸ ಬೇಕಿಲ್ಲ," ಎಂದು ಸ್ವಪಕ್ಷೀಯ ನಾಯಕರ ವಿರುದ್ಧವೇ ಪರೋಕ್ಷವಾಗಿ ಹರಿಹಾಯ್ದರು.
ತ್ಯಾಗದ ಮಾತನಾಡಿದ ಡಿಕೆಶಿ
ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಮಾತನಾಡಿದ ಅವರು, "ನಾನು ಕೆಪಿಸಿಸಿ ಅಧ್ಯಕ್ಷನಾಗಿ ಈಗಾಗಲೇ ಐದೂವರೆ ವರ್ಷಗಳಾಗಿವೆ, ಇನ್ನು ಕೆಲವೇ ದಿನಗಳಲ್ಲಿ ಆರು ವರ್ಷಗಳಾಗುತ್ತವೆ. ಡಿಸಿಎಂ ಆದ ತಕ್ಷಣವೇ ಈ ಸ್ಥಾನವನ್ನು ಬಿಡಬೇಕೆಂದು ಯೋಚಿಸಿದ್ದೆ. ಆದರೆ, ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಅವರೇ ಮುಂದುವರಿಯಿರಿ ಎಂದು ಹೇಳಿದರು. ನಾನು ಶಾಶ್ವತವಾಗಿರಲು ಸಾಧ್ಯವಿಲ್ಲ, ಬೇರೆಯವರಿಗೆ ಅವಕಾಶ ಮಾಡಿಕೊಡಬೇಕು," ಎಂದು ಸ್ಪಷ್ಟಪಡಿಸಿದರು.
"ನಾನು ಅಧಿಕಾರದಲ್ಲಿ ಇರುತ್ತೇನೋ, ಇಲ್ಲವೋ ಎನ್ನುವುದು ಮುಖ್ಯವಲ್ಲ. 2028ಕ್ಕೆ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು ಎಂಬುದೇ ನಮ್ಮ ಗುರಿ. ಎಲ್ಲಿ ಮನಸ್ಸಿದೆಯೋ ಅಲ್ಲಿ ಮಾರ್ಗವಿದೆ, ಎಲ್ಲಿ ಭಕ್ತಿ ಇದೆಯೋ ಅಲ್ಲಿ ಫಲವಿದೆ. ಕಾರ್ಯಕರ್ತರ ಶ್ರಮಕ್ಕೆ ತಕ್ಕ ಫಲ ಸಿಗುತ್ತದೆ," ಎಂದು ಹೇಳುವ ಮೂಲಕ ಕಾರ್ಯಕರ್ತರಲ್ಲಿ ವಿಶ್ವಾಸ ತುಂಬುವ ಪ್ರಯತ್ನ ಮಾಡಿದರು.

