
ಆನೆ ಕಾರಿಡಾರಿನಲ್ಲಿ ಆಫ್‌ರೋಡ್ ರ‍್ಯಾಲಿ | ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಏನು ಶಿಕ್ಷೆ?
ಅರಣ್ಯ ಇಲಾಖೆಯ ದಿವ್ಯ ನಿರ್ಲಕ್ಷ್ಯಕ್ಕೆ ಚಿಕ್ಕಮಗಳೂರಿನಲ್ಲಿ ಆಗಸ್ಟ್ 31 ರಂದು ನಡೆದ ಜೀಪ್ ರ‍್ಯಾಲಿಯೇ ಸಾಕ್ಷಿ. ಆದರೆ ಅಷ್ಟೊಂದು ಸದ್ದು ಮಾಡುತ್ತಾ, ಧೂಳೆಬ್ಬಿಸುತ್ತಾ ಆನೆ ಕಾರಿಡಾರಿನಲ್ಲೇ ಸಾಗಿದ ತರಹೇವಾರಿ ಜೀಪ್‌ಗಳು ಅರಣ್ಯ ಇಲಾಖೆ ಅಧಿಕಾರಿಗಳ ಕಣ್ಣಿಗೆ ಬಿದ್ದಿಲ್ಲ ಎನ್ನುವುದೇ ಇಲಾಖೆಯ ಜಾಣ ಕುರುಡಿಗೆ ಒಂದು ನಿದರ್ಶನ.
ಚಿಕ್ಕಮಗಳೂರು ಮತ್ತು ಕೊಡಗು ಪ್ರದೇಶಗಳಲ್ಲಿ ಆಗಿಂದಾಗ ಜೀಪ್‌ಗಳ ರ‍್ಯಾಲಿಗಳನ್ನು ಸ್ಥಳೀಯ ಯುವಕರು, ಸಂಘಟನೆಗಳು ನಡೆಸುವುದು ಸಾಮಾನ್ಯ. ಎರಡು ದಿನಗಳ ಹಿಂದೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯ ಆನೆ ಕಾರಿಡಾರ್ ಬಳಿ ನಡೆದ ಜೀಪ್ ರ‍್ಯಾಲಿ ಸದ್ದು-ಗದ್ದಲ ಎಬ್ಬಿಸಿದ್ದರೂ, ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ಬಾರದೇ ಇರುವುದು ಅಚ್ಚರಿಮೂಡಿಸಿದೆ ಎಂದು ಮನ್ಯಜೀವಿ ಪ್ರಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಂತೂ ಮಾಧ್ಯಮಗಳಲ್ಲಿ ವರದಿ ಪ್ರಕಟವಾದ ಬಳಿಕ ಇಲಾಖೆ ನಿದ್ದೆಯಿಂದ ಎಚ್ಚರಗೊಂಡಿದೆ.
ಇಲಾಖೆಯ ಅಧಿಕಾರಿಗಳ ಮೂಗಿನಡಿಯಲ್ಲೇ ಇಂತಹ ಜೀಪ್ ಸ್ಪರ್ಧೆಗಳು ನಡೆಯುತ್ತಿದ್ದರೂ, ತಮ್ಮ ಗಮನಕ್ಕೆ ತರದೇ ಇರುವ ಬಗ್ಗೆ ಇಲಾಖೆಯ ಸಚಿವ ಈಶ್ವರ ಖಂಡ್ರೆ ಸಿಟ್ಟಾಗಿದ್ದಾರೆ ಎನ್ನಲಾಗಿದೆ. ಮೂಡಿಗೆರೆಯ ಬಾಳೂರು ಅರಣ್ಯ ಪ್ರದೇಶದ ನಿಷೇಧಿತ ಆನೆ ಕಾರಿಡಾರ್ ಬಳಿ ಆಫ್ ರೋಡಿಂಗ್ ರ‍್ಯಾಲಿ ನಡೆಸಿದವರ ವಿರುದ್ಧ ಪ್ರಕರಣ ದಾಖಲಿಸಲು ಸಚಿವರು ಆದೇಶಿಸಿದ್ದಾರೆ. ಆದರೆ, ಅವರ ಆದೇಶದಲ್ಲಿ ಕರ್ತವ್ಯಲೋಪ ಮೆರೆದ, ಕಣ್ಣಿದ್ದೂ ಕುರುಡಾದ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯ ಮೇಲೆ ಹೊಣೆಗಾರಿಕೆ ನಿಗದಿ ಮಾಡುವ ಯಾವ ಪ್ರಸ್ತಾಪವೂ ಇಲ್ಲ!
ಅರಣ್ಯ ಇಲಾಖೆ ಹೊಣೆ
"ಪಶ್ಚಿಮಘಟ್ಟ ಮತ್ತು ಅರಣ್ಯ, ಮೋಜು ಮಸ್ತಿಯ ತಾಣಗಳಲ್ಲ. ಈ ಪ್ರದೇಶಗಳಲ್ಲಿ ನೂರಾರು ಪ್ರಬೇಧದ ಜೀವ ಸಂಕುಲ ಇರುತ್ತದೆ. ಇವುಗಳ ಸಂರಕ್ಷಣೆಯ ಹೊಣೆ ಅರಣ್ಯ ಇಲಾಖೆ ಮೇಲಿದೆ," ಎಂದು ತಮ್ಮ ಟಿಪ್ಪಣಿಯಲ್ಲಿ ಖಾತೆ ಸಚಿವ ಈಶ್ವರ ಖಂಡ್ರೆ ಒಪ್ಪಿಕೊಂಡಿದ್ದಾರೆ.
"31/8/2024 ರಂದು ಮೂಡಿಗೆರೆ ತಾಲೂಕು ಬಾಳೂರು ಸಮೀಪದ ಬೈರಾಪುರ ಹೊಸಕೆರೆಯ ಒಂಭತ್ತು ಗುಡ್ಡಗಳ ಆನೆ ಕಾರಿಡಾರ್ ವ್ಯಾಪ್ತಿಯಲ್ಲಿ ಅಕ್ರಮವಾಗಿ ಕಾಡಿನೊಳಗೆ ಪ್ರವೇಶಿಸಿ ಫೋರ್ ವ್ಹೀಲ್ ಡ್ರೈವ್ ವಾಹನಗಳ ರ‍್ಯಾಲಿ ನಡೆಸಲಾಗಿದೆ ಎಂದು ಮಾಧ್ಯಮಗಳಲ್ಲಿ ವರದಿಗಳು ಪ್ರಕಟವಾಗಿದ್ದು ಸರ್ಕಾರ ಗಂಭಿರವಾಗಿ ಪರಿಗಣಿಸಿದೆ," ಎಂದು ಹೇಳಿದ್ದಾರೆ.
"ಈ ರ‍್ಯಾಲಿಯಲ್ಲಿ ಸುಮಾರು 52 ವಾಹನಗಳು ಭಾಗಿಯಾಗಿದ್ದವು ಎಂಬ ಮಾಹಿತಿಯಿದ್ದು, ಇದರಿಂದ ಪರಿಸರಕ್ಕಾದ ಹಾಣಿ ಬಗ್ಗೆ ಸಿಸಿಎಫ್ ದರ್ಜೆ ಅಧಿಕಾರಿಯಿಂದ ಪರಿಶೀಲನೆ ನಡೆಸಿ ಅರಣ್ಯದೊಳಗೆ ರ‍್ಯಾಲಿ ನಡೆಸಿದ್ದಲ್ಲಿ ಅರಣ್ಯ ಸಂರಕ್ಷಣಾ ಕಾಯಿದೆ ಮತ್ತು ವನ್ಯಜೀವಿ ಸಂರಕ್ಷಣಾ ಕಾಯಿದೆಯಡಿ ಪ್ರಕರಣ ದಾಖಲಿಸಲು ಮತ್ತು ಪರಿಸರ ಸಂರಕ್ಷಣಾ ಕಾಯಿದೆಯಡಿ ಸಾರ್ವಜನಿಕರ ನೆಮ್ಮದಿ ಭಂಗ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ," ಎಂದು ಸಚಿವರು ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿಗೆ ಸೂಚಿಸಿದ್ದಾರೆ.
ಈ ಹಿಂದೆಯೂ ನಡೆದಿತ್ತು
ಚಿಕ್ಕಮಗಳೂರು ಜಿಲ್ಲೆಯಲ್ಲಿ ಜೂನ್ ಮೊದಲ ವಾರದಲ್ಲೂ ಜೀಪ್ ರೇಸ್ ನಡೆದಿತ್ತು. ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರದ ಅಡ್ವೆಂಚರ್ಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಮಡ್ ರೇಸನ್ನು ಆ ಸಂದರ್ಭದಲ್ಲಿ ಆಯೋಜಿಸಲಾಗಿತ್ತು. ಕೇರಳ, ಚೆನ್ನೈ, ತಮಿಳುನಾಡಿನ ಡ್ರೈವರ್‌ಗಳಿಗೆ ರಾಜ್ಯದ ಚಿಕ್ಕಮಗಳೂರು, ಬೆಂಗಳೂರು, ಮೈಸೂರು, ಬೆಳಗಾವಿ, ಹಾಸನ, ಮಂಗಳೂರು, ಕೊಡಗು, ತುಮಕೂರಿನ ಸ್ಪರ್ಧಾಳುಗಳೂ ಭಾಗವಹಿಸಿದ್ದರು. ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಲ್ಲಿ ಆಗಿಂದಾಗ ಇಂತಹ ಜೀಪ್ ರೇಸ್‌ಗಳು ನಡೆಯುತ್ತಿರುವುದು ಸಾಮಾನ್ಯವಾಗಿದೆ.