ಜೆಡಿಎಸ್ ಗಂಡಸ್ತನ ಪೆನ್ ಡ್ರೈವ್ ಮೂಲಕ ಎಲ್ಲೆಡೆ ಪ್ರದರ್ಶನವಾಯ್ತಲ್ವಾ? ಹೆಚ್‌ಡಿಕೆಗೆ ಪ್ರಿಯಾಂಕ್ ಖರ್ಗೆ ತಿರುಗೇಟು
ʻʻಜೆಡಿಎಸ್ ಗಂಡಸ್ತನ ಪೆನ್ ಡ್ರೈವ್ ಮೂಲಕ ಎಲ್ಲಾ ಕಡೆ ಪ್ರದರ್ಶನವಾಯ್ತಲ್ವಾʼʼ ಎಂದು ಹೆಚ್ ಡಿ ಕುಮಾರಸ್ವಾಮಿ ಅವರ ʼಗಂಡಸ್ತನದʼ ಹೇಳಿಕೆಗೆ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ʻʻಪ್ರಜ್ವಲ್ ರೇವಣ್ಣ ಅವರ ಕೃತ್ಯ ಮುಚ್ಚಿ ಹಾಕುವ ಪ್ರಯತ್ನ ನಡೀತಿದೆ. ಪ್ರಜ್ವಲ್ ಕೃತ್ಯ ಮುಚ್ಚಿ ಹಾಕಲು ಕುಮಾರಸ್ವಾಮಿ ಇದನ್ನು ಮಾಡುತ್ತಿದ್ದಾರೆ" ಎಂದು ಪ್ರಿಯಾಂಕ್ ಹೇಳಿದ್ದಾರೆ.
"ಶನಿವಾರ ಮೈಸೂರು ಸಮಾವೇಶದಲ್ಲಿ ಗಂಡಸ್ತನದ ಬಗ್ಗೆ ಮಾತಾಡಬೇಕಿತ್ತು, ಫೋಕ್ಸೊ ಪ್ರಕರಣ, ಪ್ರಜ್ವಲ್ ಪ್ರಕರಣದ ಬಗ್ಗೆ ಮಾತನಾಡಬೇಕಿತ್ತು. ಆಗ ನಿಮ್ಮ ಗಂಡಸ್ತನವನ್ನು ನಾವೂ ಒಪ್ಪುತ್ತಿದ್ದೆವುʼʼ ಎಂದು ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದ್ದಾರೆ.
ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿರುದ್ದ ಲೋಕಾಯುಕ್ತ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡದೇ ಇರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ʻʻರಾಜ್ಯಪಾಲರು ಸಿಎಂ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ಕೊಡೋದಕ್ಕೆ ಆಸಕ್ತಿ ತೋರುತ್ತಿದ್ದಾರೆ. ಆದರೆ ಯಾಕೆ ಕುಮಾರಸ್ವಾಮಿ ವಿರುದ್ಧ ಪ್ರಾಸಿಕ್ಯೂಷನ್‌ಗೆ ವರ್ಷವಾದರೂ ಅನುಮತಿ ಕೊಡುತ್ತಿಲ್ಲ? ಇನ್ನು ಜೊಲ್ಲೆ, ನಿರಾಣಿ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಡುತ್ತಿಲ್ಲ ಯಾಕೆ? ಅವೆಲ್ಲವನ್ನೂ ಬೇರೆ ಯಾರೂ ದೂರು ಕೊಟ್ಟಿದ್ದಲ್ಲ, ತನಿಖಾ ತಂಡಗಳು ಮನವಿ ಕೊಟ್ಟಿರುವುದು. ಆದರೂ ರಾಜ್ಯಪಾಲರು ಒಪ್ಪಿಗೆ ಕೊಡುತ್ತಿಲ್ಲ ಯಾಕೆ?" ಎಂದು ಕಿಡಿಕಾರಿದ್ದಾರೆ.