ಎಡಿಜಿಪಿ ಚಂದ್ರಶೇಖರ್ ವಿರುದ್ಧ ಜೆಡಿಎಸ್ ಪ್ರತಿಭಟನೆ
x

ಎಡಿಜಿಪಿ ಚಂದ್ರಶೇಖರ್ ವಿರುದ್ಧ ಜೆಡಿಎಸ್ ಪ್ರತಿಭಟನೆ

ಓರ್ವ ಅಧಿಕಾರಿಯಾಗಿ ಚಂದ್ರಶೇಖರ್ ಅವರು ಕೇಂದ್ರ ಸಚಿವರ ಬಗ್ಗೆ ಬಳಕೆ ಮಾಡಿರುವ ಭಾಷೆ ಸರಿ ಇಲ್ಲ. ಅದಕ್ಕೆ ಕ್ಷಮೆ ಕೇಳಬೇಕು ಹಾಗೂ ಅವರ ಶಿಸ್ತು ಜರುಗಿಸಬೇಕು


ಕೇಂದ್ರದ ಉಕ್ಕು ಮತ್ತು ಭಾರೀ ಕೈಗಾರಿಕೆ ಸಚಿವ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರ ಬಗ್ಗೆ ಕೀಳು ಭಾಷೆ ಬಳಸಿದ್ದಾರೆ ಎಂದು ಆರೋಪಿಸಿ ಐಪಿಎಸ್ ಅಧಿಕಾರಿ, ಲೋಕಾಯುಕ್ತ ಎಸ್ಐಟಿ ಎಡಿಜಿಪಿ ಎಂ.ಚಂದ್ರಶೇಖರ್ ವಿರುದ್ಧ ಜೆಡಿಎಸ್ ಕಾರ್ಯಕರ್ತರು ಮಂಗಳವಾರ ಬೆಂಗಳೂರಿನಲ್ಲಿ ಭಾರೀ ಪ್ರತಿಭಟನೆ ನಡೆಸಿದರು.

ಪಕ್ಷದ ರಾಜ್ಯ ಕಚೇರಿ ಮುಂಭಾಗದಲ್ಲಿ ನಗರ ಘಟಕದ ಅಧ್ಯಕ್ಷ ಎಚ್.ಎಂ.ರಮೇಶ್ ಗೌಡ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಕೆ.ಎನ್.ತಿಪ್ಪೇಸ್ವಾಮಿ, ಟಿ.ಎ.ಶರವಣ, ಜವರಾಯಿ ಗೌಡ, ಜೆಡಿಎಸ್ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ರಶ್ಮಿ ರಾಮೇಗೌಡ ಸೇರಿದಂತೆ ಅನೇಕ ನಾಯಕರು, ನೂರಾರು ಕಾರ್ಯಕರ್ತರು ಭಾಗವಹಿಸಿ ಅಧಿಕಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ರಮೇಶ್ ಗೌಡ; ಓರ್ವ ಅಧಿಕಾರಿಯಾಗಿ ಚಂದ್ರಶೇಖರ್ ಅವರು ಕೇಂದ್ರ ಸಚಿವರ ಬಗ್ಗೆ ಬಳಕೆ ಮಾಡಿರುವ ಭಾಷೆ ಸರಿ ಇಲ್ಲ. ಅದಕ್ಕೆ ಕ್ಷಮೆ ಕೇಳಬೇಕು ಹಾಗೂ ಅವರ ಶಿಸ್ತು ಜರುಗಿಸಬೇಕು ಎಂದು ಒತ್ತಾಯ ಮಾಡಿದರು.

ಅವರ ಹೇಳಿಕೆಯಿಂದ ಕುಮಾರಸ್ವಾಮಿ ಅವರ ಅಭಿಮಾನಿಗಳು ಹಾಗೂ ಅಸಂಖ್ಯಾತ ಜೆಡಿಎಸ್ ಕಾರ್ಯಕರ್ತರ ಭಾವನೆಗಳಿಗೆ ಘಾಸಿ ಉಂಟಾಗಿದೆ. ಕಾಂಗ್ರೆಸ್ ಸರ್ಕಾರ ನಮ್ಮ ನಾಯಕರ ವಿರುದ್ಧ ಅಧಿಕಾರಿಗಳನ್ನು ಎತ್ತಿ ಕಟ್ಟುತ್ತಿದೆ ಎಂದು ಅವರು ಹೇಳಿದರು.

ಇದೇ ವೇಳೆ ಹಿರಿಯ ಶಾಸಕರಾದ ತಿಪ್ಪೇಸ್ವಾಮಿ, ಶರವಣ ಅವರು ಕೂಡಾ ಎಡಿಜಿಪಿ ಹೇಳಿಕೆಯನ್ನು ಉಗ್ರ ಶಬ್ದಗಳಲ್ಲಿ ಖಂಡಿಸಿದರು.

ಈ ಸಂದರ್ಭದಲ್ಲಿ ಕಾರ್ಯಕರ್ತರು ಪಕ್ಷದ ಕಚೇರಿಯಲ್ಲಿ ಮುಖ್ಯರಸ್ತೆಯವರೆಗೂ ಮೆರವಣಿಗೆ ನಡೆಸಿ ಅಧಿಕಾರಿ ಚಂದ್ರಶೇಖರ್ ವಿರುದ್ಧ ಧಿಕ್ಕಾರ ಕೂಗಿದರು ಹಾಗೂ ಅಧಿಕಾರಿ ಕೂಡಲೇ ಕೇಂದ್ರ ಸಚಿವರ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದರು. ಒಂದು ವೇಳೆ ಕ್ಷಮೆ ಕೇಳದಿದ್ದರೆ ನಗರದ ಎಲ್ಲೆಡೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಹಾಗೂ ಮುಂದೆ ಆಗಬಹುದಾದ ಪರಿಣಾಮಗಳಿಗೆ ಸರ್ಕಾರವೇ ಹೊಣೆ ಆಗಬೇಕಾಗುತ್ತದೆ ಎಚ್ಚರಿಕೆ ಕೊಟ್ಟರು.

Read More
Next Story