ಲೈಂಗಿಕ ದೌರ್ಜನ್ಯ ಪ್ರಕರಣ ಜೆಡಿಎಸ್ ಎಂಎಲ್ ಸಿ ಸೂರಜ್ ರೇವಣ್ಣ ಅವರಿಗೆ ಷರತ್ತುಬದ್ಧ ಜಾಮೀನು
x
ಸೂರಜ್‌ ರೇವಣ್ಣ

ಲೈಂಗಿಕ ದೌರ್ಜನ್ಯ ಪ್ರಕರಣ ಜೆಡಿಎಸ್ ಎಂಎಲ್ ಸಿ ಸೂರಜ್ ರೇವಣ್ಣ ಅವರಿಗೆ ಷರತ್ತುಬದ್ಧ ಜಾಮೀನು

ಪಕ್ಷದ ಪುರುಷ ಕಾರ್ಯಕರ್ತನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪಿ ಸೂರಜ್‌ನನ್ನು ಕಳೆದ ತಿಂಗಳು ಬಂಧಿಸಲಾಗಿತ್ತು.


ತಮ್ಮದೇ ಪಕ್ಷದ ಪುರುಷ ಕಾರ್ಯಕರ್ತನ ಮೇಲೆ ಹಾಸನ ಹಾಗೂ ಹೊಳೆ ನರಸೀಪುರದಲ್ಲಿ ಅಸಹಜ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಕಳೆದ ತಿಂಗಳು ಜೂನ್‌ನಲ್ಲಿ ಬಂಧನಕ್ಕೆ ಒಳಗಾಗಿದ್ದ ಜೆಡಿಎಸ್‌ ಎಂಎಲ್‌ಸಿ ಡಾ. ಸೂರಜ್‌ ರೇವಣ್ಣ ಅವರಿಗೆ ಸೋಮವಾರ ಷರತ್ತುಬದ್ಧ ಜಾಮೀನು ಮಂಜೂರು ಮಾಡಲಾಗಿದೆ.

ಬೆಂಗಳೂರಿನ ವಿಶೇಷ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿದ ನ್ಯಾಯಾಧೀಶರು ಸೂರಜ್‌ ರೇವಣ್ಣ ಪರ ವಕೀಲರು ಹಾಗೂ ಸರ್ಕಾರದ ವಿಶೇಷ ಅಭಿಯೋಜಕರ ಅಭಿಪ್ರಾಯ, ವಾದವನ್ನು ಆಲಿಸಿದೆ. ಜಾಮೀನು ಮಂಜೂರು ಮಾಡುವಂತೆ ಸೂರಜ್‌ ಪರ ವಕೀಲರು ಕೋರಿದರೆ, ವಿಶೇಷ ಅಭಿಯೋಜಕರು ಜಾಮೀನು ನೀಡದಂತೆ ನ್ಯಾಯಾಲಯವನ್ನು ಕೋರಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರು ಷರತ್ತು ಬದ್ದ ಜಾಮೀನು ಮಂಜೂರು ಮಾಡಿದ್ದಾರೆ.

ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಡಾ.ಸೂರಜ್‌ ರೇವಣ್ಣ ಅವರಿಗೆ ಜಾಮೀನು ದೊರೆತಿರುವುದರಿಂದ ಮಂಗಳವಾರದ ಮಧ್ಯಾಹ್ನದ ಹೊತ್ತಿಗೆ ಬಿಡುಗಡೆಯಾಗಬಹುದು ಎನ್ನಲಾಗುತ್ತಿದೆ. ಸಂತ್ರಸ್ತನಿಗೆ ಯಾವುದೇ ರೀತಿಯ ಬೆದರಿಕೆಯೊಡ್ಡಬಾರದು, ಸೂರಜ್ ತನಿಖೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಮತ್ತು ತನಿಖೆಯ ಉದ್ದೇಶಕ್ಕಾಗಿ ಕರೆದಾಗಲೆಲ್ಲಾ ಬರಬೇಕು. ಪ್ರತಿ ತಿಂಗಳ ಎರಡನೇ ಭಾನುವಾರದಂದು ತನಿಖಾಧಿಕಾರಿಯ ಮುಂದೆ ಹಾಜರಾಗಬೇಕು. ಆರು ತಿಂಗಳವರೆಗೆ ಅಥವಾ ಚಾರ್ಜ್ ಶೀಟ್ ಸಲ್ಲಿಸುವವರೆಗೆ ಬೆಳಿಗ್ಗೆ 9 ರಿಂದ ಸಂಜೆ 5 ರ ನಡುವೆ ಅವರ ‘ಹಾಜರಾತಿ’ಯನ್ನು ನೀಡುವಂತೆ ನ್ಯಾಯಾಲಯ ಷರತ್ತುಗಳನ್ನು ವಿಧಿಸಿದೆ. ಹೆಚ್ಚುವರಿಯಾಗಿ ಬೆಂಗಳೂರು ನ್ಯಾಯಾಲಯವು ತನ್ನ ಪಾಸ್‌ಪೋರ್ಟ್ ಅನ್ನು ನ್ಯಾಯಾಲಯಕ್ಕೆ ಒಪ್ಪಿಸುವಂತೆ ಮತ್ತು ಬೇರೆ ರಾಜ್ಯಕ್ಕೆ ಹೋಗಲು ಅದರ ಲಿಖಿತ ಅನುಮತಿಯನ್ನು ತೆಗೆದುಕೊಳ್ಳುವಂತೆ ಸೂರಜ್‌ಗೆ ಸೂಚಿಸಿದೆ.

ಜೆಡಿಎಸ್‌ ಕಾರ್ಯಕರ್ತನೊಬ್ಬ ಸೂರಜ್‌ ರೇವಣ್ಣ ಅವರು ತನ್ನ ಮೇಲೆ ಅಸಹಜ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಹೊಳೆ ನರಸೀಪುರ ಪೊಲೀಸರಿಗೆ ದೂರು ನೀಡಿದ್ದರು. ವಿಚಾರಣೆ ನಡೆಸಿದ ಪೊಲೀಸರು ಜೂನ್ 23 ರಂದು ಸೂರಜ್ ರೇವಣ್ಣ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದರು. ಹೊಳೆನರಸೀಪುರ, ಹಾಸನದಲ್ಲಿ ಪೊಲೀಸರು ಮಾಹಿತಿ ಕಲೆ ಹಾಕಿದ್ದರು.

Read More
Next Story