
ಕಾರ್ಯಕ್ರಮದಲ್ಲಿ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಸೇರಿದಂತೆ ಇತರ ನಾಯಕರು ಪಾಲ್ಗೊಂಡಿದ್ದರು.
25 ವಸಂತ ಪೂರೈಸಿದ ತೆನೆ ಹೊತ್ತ ಮಹಿಳೆ: ಜೆಪಿ ಭವನದಲ್ಲಿ ಸಂಭ್ರಮ
ಜೆಡಿಎಸ್ ವರಿಷ್ಠ ಮತ್ತು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಹಾಗೂ ಕೇಂದ್ರ ಸಚಿವ ಮತ್ತು ಪಕ್ಷದ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ನಡೆದ ಈ ಸಮಾರಂಭದಲ್ಲಿ ಪಕ್ಷದ ಒಗ್ಗಟ್ಟು ಸಾರಲಾಯಿತು.
ರಾಜ್ಯ ರಾಜಕಾರಣದಲ್ಲಿ ದಶಕಗಳಿಂದ ತನ್ನದೇ ಆದ ಛಾಪು ಮೂಡಿಸಿರುವ ಪ್ರಾದೇಶಿಕ ಪಕ್ಷ ಜಾತ್ಯತೀತ ಜನತಾ ದಳ (ಜೆಡಿಎಸ್) 25 ವರ್ಷಗಳನ್ನು ಪೂರೈಸಿ ರಜತ ಮಹೋತ್ಸವದ ಸಂಭ್ರಮದಲ್ಲಿದೆ. ಈ ವಿಶೇಷ ಸಂದರ್ಭದಲ್ಲಿ ಶುಕ್ರವಾರದಿಂದ ಬೆಂಗಳೂರಿನ ಶೇಷಾದ್ರಿಪುರಂನಲ್ಲಿರುವ ಪಕ್ಷದ ಕೇಂದ್ರ ಕಚೇರಿ ಜೆಪಿ ಭವನದಲ್ಲಿ ಅದ್ದೂರಿ ಕಾರ್ಯಕ್ರಮ ಆಯೋಜಿಸಲಾಗಿದೆ.
ಜೆಡಿಎಸ್ ವರಿಷ್ಠ ಮತ್ತು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಹಾಗೂ ಕೇಂದ್ರ ಸಚಿವ ಮತ್ತು ಪಕ್ಷದ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ನಡೆದ ಈ ಸಮಾರಂಭದಲ್ಲಿ ಪಕ್ಷದ ಒಗ್ಗಟ್ಟು ಸಾರಲಾಯಿತು. ಪಕ್ಷದ ರಜತ ಮಹೋತ್ಸವದ ನೆನಪಿಗಾಗಿ ವಿಶೇಷ ವಿನ್ಯಾಸದ 'ಬೆಳ್ಳಿ ನಾಣ್ಯ'ವನ್ನು ಬಿಡುಗಡೆ ಮಾಡಿದ್ದು ಶನಿವಾರದ ಕಾರ್ಯಕ್ರಮದ ಪ್ರಮುಖ ಆಕರ್ಷಣೆ ಎನಿಸಿತು.
ನಿಖಿಲ್ ಕುಮಾರಸ್ವಾಮಿ ಜತೆಗೆ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ (ಜೆಡಿಎಲ್‌ಪಿ) ಸಿ.ಬಿ. ಸುರೇಶ್ ಬಾಬು, ಸಂಸದ ಮಲ್ಲೇಶ್ ಬಾಬು ಸೇರಿದಂತೆ ಹಲವು ಶಾಸಕರು, ಪರಿಷತ್ ಸದಸ್ಯರು ಮತ್ತು ಮಾಜಿ ಶಾಸಕರು ಭಾಗವಹಿಸಿದ್ದರು. ರಾಷ್ಟ್ರೀಯ ಕಾರ್ಯಕಾರಣಿ ಸದಸ್ಯರು ಮತ್ತು ರಾಜ್ಯದ ಮೂಲೆ ಮೂಲೆಗಳಿಂದ ಬಂದಿದ್ದ ಪ್ರಮುಖ ಮುಖಂಡರು ಸಮಾರಂಭಕ್ಕೆ ಸಾಕ್ಷಿಯಾದರು.
1999ರಲ್ಲಿ ಎಚ್.ಡಿ. ದೇವೇಗೌಡರ ನೇತೃತ್ವದಲ್ಲಿ ಸ್ಥಾಪನೆಯಾದ ಜೆಡಿಎಸ್, ಕಳೆದ ಎರಡೂವರೆ ದಶಕಗಳಲ್ಲಿ ರಾಜ್ಯ ರಾಜಕಾರಣದಲ್ಲಿ ಕಿಂಗ್ ಮೇಕರ್ ಆಗಿ, ಕೆಲವೊಮ್ಮೆ ಕಿಂಗ್ ಆಗಿ ಮೆರೆದಿದೆ. ರೈತರ ಪರವಾದ ಹೋರಾಟಗಳು, ನೀರಾವರಿ ಯೋಜನೆಗಳು ಮತ್ತು ಜನಪರ ನಿಲುವುಗಳ ಮೂಲಕ ಪಕ್ಷ ಬೆಳೆದು ಬಂದ ಹಾದಿಯನ್ನು ನಾಯಕರು ಈ ವೇಳೆ ಸ್ಮರಿಸಿದರು. ರಾಷ್ಟ್ರೀಯ ಪಕ್ಷಗಳ ಪೈಪೋಟಿಯ ನಡುವೆಯೂ ಪ್ರಾದೇಶಿಕ ಅಸ್ಮಿತೆಯನ್ನು ಉಳಿಸಿಕೊಂಡು ಬಂದಿರುವ ಜೆಡಿಎಸ್, ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿ ಮತ್ತೆ ಸ್ವತಂತ್ರವಾಗಿ ಅಧಿಕಾರ ಹಿಡಿಯುವ ಸಂಕಲ್ಪ ತೊಟ್ಟಿದೆ.
'ತೆನೆ' ಬಲಪಡಿಸುವ ಪಣ
ಮಾಜಿ ಪ್ರಧಾನಿ ದೇವೇಗೌಡರು ಪಕ್ಷದ ಕಾರ್ಯಕರ್ತರಿಗೆ ಮಾರ್ಗದರ್ಶನ ನೀಡುತ್ತಾ, ಪ್ರಾದೇಶಿಕ ಪಕ್ಷದ ಮಹತ್ವ ಮತ್ತು ಸಂಘಟನೆಯ ಅಗತ್ಯವನ್ನು ಪ್ರತಿಪಾದಿಸಿದರು. ಕುಮಾರಸ್ವಾಮಿ ಅವರು ಮಾತನಾಡಿ, ಪಕ್ಷದ ಮುಂದಿನ ಕಾರ್ಯತಂತ್ರಗಳು ಮತ್ತು ಸಂಘಟನೆಯನ್ನು ತಳಮಟ್ಟದಿಂದ ಬಲಪಡಿಸುವ ಬಗ್ಗೆ ಕಾರ್ಯಕರ್ತರಿಗೆ ಕರೆ ನೀಡಿದರು.
2028ಕ್ಕೆ ರಾಜ್ಯದಲ್ಲಿ ಹೆಚ್‌ಡಿಕೆ ಸಿಎಂ
ಜೆಡಿಎಸ್ ರೈತರ ಪರ ಹೋರಾಟ ಮಾಡುತ್ತಿದೆ. ಸಿಂಧನೂರಿನಲ್ಲಿ ರೈತರಿಗೆ ನೀರು ಬಿಡುಗಡೆಗೆ ಆಗ್ರಹಿಸಿ ಜೆಡಿಎಸ್ ಹೋರಾಟ ಮಾಡಲಿದ್ದೇವೆ. ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಸಿಎಂ ಆಗಿದ್ದಾಗ ಲಾಟರಿ, ಸಾರಾಯಿ ನಿಷೇಧ , ರೈತರ ಸಾಲಮನ್ನಾ ಮಾಡಿದ್ದರು. ಮುಂದೆ ರಾಜ್ಯದಲ್ಲಿ ಎನ್‌ಡಿಎ ಅಧಿಕಾರಕ್ಕೆ ಬರಲಿದ್ದು ಹೆಚ್.ಡಿ. ಕುಮಾರಸ್ವಾಮಿ ಸಿಎಂ ಆಗಲಿದ್ದಾರೆ ಎಂದು ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಕೃಷ್ಣಾರೆಡ್ಡಿ ತಿಳಿಸಿದರು.

