ರಾಜಕೀಯ ಗುರುವಿನ ಪಾಲಿಗೆ ʼಏಕಲವ್ಯʼನಾದ ಜೆ.ಸಿ. ಮಾಧುಸ್ವಾಮಿ!
x

ರಾಜಕೀಯ ಗುರುವಿನ ಪಾಲಿಗೆ ʼಏಕಲವ್ಯʼನಾದ ಜೆ.ಸಿ. ಮಾಧುಸ್ವಾಮಿ!

ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರಾಗಿದ್ದ ಮಾಧುಸ್ವಾಮಿ ಅವರು ತುಮಕೂರಿನಿಂದ ಟಿಕೆಟ್ ಆಕಾಂಕ್ಷಿಯಾಗಿದ್ದರು. ತುಮಕೂರಿನಿಂದ ತಾನೇ ಬಿಜೆಪಿ ಅಭ್ಯರ್ಥಿ ಎಂದು ಅವರು ಹೇಳಿಕೊಂಡಿದ್ದರು.


ಲೋಕಸಭಾ ಚುನಾವಣಾ ದಿನ ಸನ್ನಿಹಿತವಾಗುತ್ತಿದ್ದಂತೆ ಬಿಜೆಪಿಯ ಭಿನ್ನಮತ ಸಾರ್ವಜನಿಕವಾಗಿ ಬಯಲಾಗುತ್ತಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.‌ ಯಡಿಯೂರಪ್ಪ ಅವರ ವಿರುದ್ಧ ಅವರ ಆಪ್ತರೇ ಆದ ಎಂ.ಪಿ. ರೇಣುಕಾಚಾರ್ಯ ಸಹಿತ ಕೆಲವು ನಾಯಕರು ಬಂಡಾಯದ ಸೂಚನೆಯನ್ನು ನೀಡಿದ್ದಾರೆ. ಬಿಎಸ್‌ವೈ ಅವರ ತವರು ಜಿಲ್ಲೆಯ ನಾಯಕರಾದ, ಒಂದು ಕಾಲದಲ್ಲಿ ಜೋಡೆತ್ತಿನಂತೆ ಬಿಎಸ್‌ವೈ ಜತೆಗೆ ಪಕ್ಷ ಕಟ್ಟಲು ಟೊಂಕ ಕಟ್ಟಿದ್ದ ಕೆ.ಎಸ್‌. ಈಶ್ವರಪ್ಪ ಅವರೂ ನೇರವಾಗಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೇಂದ್ರ ನಾಯಕತ್ವದ ವಿರುದ್ಧ ಟಿಕೆಟ್‌ ವಂಚಿತ ರಾಜ್ಯ ನಾಯಕರಾರೂ ತುಟಿ ಬಿಚ್ಚಿರಲಿಲ್ಲ. ಪ್ರತಾಪ್‌ ಸಿಂಹ, ಸಿಟಿ ರವಿ, ನಳಿನ್‌ ಕುಮಾರ್ ಕಟೀಲ್‌ ಮೊದಲಾದವರಿಗೂ ಟಿಕೆಟ್‌ ಕೈ ತಪ್ಪಿದೆಯಾದರೂ ಮೋದಿ ಗೆಲುವಿಗಾಗಿ ಬಿಜೆಪಿ ಅಭ್ಯರ್ಥಿ ಪರವಾಗಿ ಕೆಲಸ ಮಾಡುವುದಾಗಿ ಘೋಷಿಸಿದ್ದಾರೆ. ಮೋದಿ ವಿರುದ್ಧ ಮಾತನಾಡುವ ಧೈರ್ಯ ತೋರದ ಅತೃಪ್ತರು ಒಳಗೊಳಗೇ ಕುದಿಯುತ್ತಿದ್ದಾರೆ. ಬಿಎಸ್‌ವೈ ವಿರುದ್ಧ ಗುಟುರು ಹಾಕಿರುವ ಈಶ್ವರಪ್ಪ ತನ್ನ ಎದೆ ಬಗೆದರೆ ರಾಮ ಮತ್ತು ಮೋದಿ ಕಾಣುತ್ತಾರೆ ಎಂದಿದ್ದಾರೆ. ಆದರೆ, ಬಿಎಸ್‌ವೈ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ ಮತ್ತು ಅವರ ಚಿಂತಕರ ಚಾವಡಿಯ ಪ್ರಮುಖ ಹಾಗೂ ಮಾಜಿ ಸಚಿವ ಜೆ.ಸಿ. ಮಾಧುಸ್ವಾಮಿ ಅವರು ಒಂದು ಹೆಜ್ಜೆ ಮುಂದೆ ಹೋಗಿ ʼನಾನು ಮೋದಿ ಮುಖ ನೋಡಿ ಬಿಜೆಪಿಗೆ ಕೆಲಸ ಮಾಡಲ್ಲʼ ಎಂದಿದ್ದಾರೆ. ಯಾಕೆಂದರೆ ತುಮಕೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಲು ಬಿಎಸ್‌ವೈ ಅವರಿಂದ ʼಒಪ್ಪಿಗೆʼ ಪಡೆದಿದ್ದರೂ ತನ್ನ ಪರ ಅವರು ಗಟ್ಟಿಯಾಗಿ ದನಿಯೆತ್ತದೆ ರಾಜಕೀಯ ಭವಿಷ್ಯಕ್ಕೆ ಕುತ್ತಾದರು ಎಂಬ ಬೇಗುದಿ ಮಾಧುಸ್ವಾಮಿ ಅವರದು.

ಯಾರಿವರು ಮಾಧುಸ್ವಾಮಿ?

ಜನತಾ ಪರಿವಾರ ಮೂಲದ ಮಾಧುಸ್ವಾಮಿ 1988 ರವರೆಗೂ ಜನತಾ ಪರಿವಾರದಲ್ಲಿ ಗುರುತಿಸಿಕೊಂಡಿದ್ದರು. 1988ರಲ್ಲಿ ಜನತಾ ಪಕ್ಷ ಒಡೆದಾಗ ಜನತಾ ದಳ ಸೇರಿಕೊಂಡಿದ್ದರು. ನಂತರ ಪಕ್ಷೇತರರಾಗಿಯೂ ನಿಂತಿದ್ದ ಚುನಾವಣೆಗೆ ಸ್ಪರ್ಧಿಸಿದ್ದ ಅವರು, 1999ರಲ್ಲಿ ಜೆಡಿಯು ಸೇರಿಕೊಂಡಿದ್ದರು. 2013ರವರೆಗೂ ಜೆಡಿಯುನಲ್ಲಿ ಮುಂದುವರೆದಿದ್ದ ಅವರು 2013 ರಲ್ಲಿ ಬಿಜೆಪಿ ಸೇರಿದ್ದರು. ನಂತರ ಬಿಎಸ್‌ವೈ ಅವರು ಕೆಜೆಪಿ ರಚಿಸಿದಾಗ ಅವರ ಜತೆ ಹೋಗಿದ್ದರು. ನಂತರ ಮರಳಿ ಬಿಜೆಪಿಗೆ ಬಿಎಸ್‌ವೈ ಅವರ ಜತೆ ವಾಪಸಾಗಿದ್ದರು. ಬಳಿಕ ಬಿಎಸ್‌ವೈ ಅಂತರಂಗದ ಚಿಂತಕರ ಚಾವಡಿಯಲ್ಲಿ ಮಾಧುಸ್ವಾಮಿ ಮತ್ತು ಬಸವರಾಜ ಬೊಮ್ಮಾಯಿ ಗುರುತಿಸಿಕೊಂಡಿದ್ದರು.

ಜನತಾ ಪರಿವಾರ ಹಿನ್ನೆಲೆಯ ಜೆಸಿ ಮಾಧುಸ್ವಾಮಿ, ಸಮಾಜವಾದಿ ಸಿದ್ಧಾಂತ ಮತ್ತು ಪ್ರಗತಿಪರ ಸಾಹಿತ್ಯದ ಓದು, ಅರಿವಿರುವವರು. ಅವರು ಎಲ್ಎಲ್‌ಬಿ ಪದವೀಧರರಾಗಿದ್ದು, ಉತ್ತಮ ಸಂಸದೀಯ ಪಟು. ತಮ್ಮ ಒರಟು ನಡೆಯಿಂದ ಹಲವಾರು ಬಾರಿ ಸುದ್ದಿಯಾಗುತ್ತಲೇ ಬಂದಿರುವ ಮಾಧುಸ್ವಾಮಿ ಇದೀಗ, ಟಿಕೆಟ್ ತಪ್ಪಿದ್ದಕ್ಕಾಗಿ ಬಿಎಸ್‌ವೈ ವಿರುದ್ಧ ಹರಿ ಹಾಯ್ದು ಆಕ್ರೋಶ ಹೊರ ಹಾಕಿದ್ದಾರೆ.

“ನಾನು ದೆಹಲಿಗೆ ಹೋಗಲು ಸಿದ್ಧವಿದ್ದರೂ ಯಡಿಯೂರಪ್ಪ ಅದನ್ನು ತಡೆದಿದ್ದರು. ಬಿಫಾರ್ಮ್ ತಂದುಕೊಡುವ ಜವಾಬ್ದಾರಿ ನನ್ನದು ಎಂದು ಭರವಸೆ ಕೊಟ್ಟಿದ್ದರು. ಯಡಿಯೂರಪ್ಪ ನನಗೆ ಭರವಸೆ ನೀಡಿದ ಮೇಲೆ ಎಲ್ಲರ ಮುಂದೆ ನಾನೇ ತುಮಕೂರು ಬಿಜೆಪಿ ಅಭ್ಯರ್ಥಿ ಎಂದು ಹೇಳಿದ್ದೆ. ನಾನು ಬಿಜೆಪಿಗೆ ಬರಲು ಯಡಿಯೂರಪ್ಪ ಕಾರಣ. ಕೆಜೆಪಿ ಮಾಡಿದಾಗಲೂ ಯಡಿಯೂರಪ್ಪಗೆ ಶಕ್ತಿ ಕೊಟ್ಟೆವು. ಅವರನ್ನು ಪ್ರಶ್ನಿಸದೆ ಅವರ ಹಿಂದೆ ಹೋಗಿದ್ದೆವು” ಎಂದು ಮಾಧುಸ್ವಾಮಿ ತಮ್ಮ ಬಿಎಸ್ವೈ ಕಡೆಗಿದ್ದ ತಮ್ಮ ನಿಷ್ಠೆಯನ್ನು ನೆನಪಿಸಿದ್ದಾರೆ.

ಬಿಎಸ್‌ವೈ ಅವರ ರಾಜಕೀಯ ಸಂದಿಗ್ಧ ಕಾಲದಲ್ಲಿ, ಆಪರೇಷನ್‌ ಕಮಲ ಸಂದರ್ಭದಲ್ಲಿ ಮತ್ತು ಬಿಎಸ್‌ವೈ ಸರ್ಕಾರ ರಚನೆ ಸಂದರ್ಭದಲ್ಲಿ ಅವರ ಜತೆ ಗಟ್ಟಿಯಾಗಿ ನಿಂತಿದ್ದ ಮಾಧುಸ್ವಾಮಿ ತಮ್ಮ ಕಾನೂನು ಮತ್ತು ರಾಜಕೀಯ ತಂತ್ರಗಾರಿಕೆಯಿಂದ ಸರ್ಕಾರ ಪತನವಾಗದಂತೆ ನೋಡಿಕೊಳ್ಳುವಲ್ಲಿ ಮತ್ತು ಕಾನೂನು ಹೋರಾಟದಲ್ಲಿ ಬಿಎಸ್‌ವೈಗೆ ಸಾಥ್‌ ನೀಡಿದ್ದರು. ಒಂದು ಸಂದರ್ಭದಲ್ಲಿ ದೆಹಲಿಯ ಬಿಜೆಪಿ ಹೈಕಮಾಂಡ್‌ಗೆ ಕರ್ನಾಟಕದ ಆಗುಹೋಗುಗಳ ಮೇಲೆ ಮಾಹಿತಿ ನೀಡಲು ಬೊಮ್ಮಾಯಿ-ಮಾಧುಸ್ವಾಮಿ ಜೋಡಿ ಬಿಎಸ್‌ವೈ ಅವರ ಜತೆಗೆ ಸದಾ ಇರುತ್ತಿತ್ತು.

ಆದರೆ, ಸರ್ಕಾರದಲ್ಲಿ ತಮಗಿಷ್ಟವಾದ ನೀರಾವರಿ ಖಾತೆ ತಪ್ಪಿದಾಗ ಅವರು ನೊಂದುಕೊಂಡಿದ್ದರೂ, ಬಿಎಸ್‌ವೈ ವಿರುದ್ಧವಾಗಿ ನಡೆದುಕೊಳ್ಳಲಿಲ್ಲ. ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿರೋಧ ಪಕ್ಷ ನಾಯಕರಾಗಿದ್ದಾಗ ʼಆತ್ಮೀಯ ಗೆಳೆಯ ಹಾಗೂ ಉತ್ತಮ ಸಂಸದೀಯ ಪಟುʼ ಎಂದು ಹೊಗಳಿಸಿಕೊಂಡರೂ, ಸಿದ್ದರಾಮಯ್ಯ ವಿರುದ್ಧ ಪ್ರಬಲ ಟೀಕಾಕಾರಾಗಿಯೇ ಗುರುತಿಸಿಕೊಂಡಿದ್ದರು. ಕೆಲವು ಸಲ ಒರಟು ಹೇಳಿಕೆಗಳು ಅವರನ್ನು ವಿವಾದಕ್ಕೆ ಈಡು ಮಾಡಿದ್ದವು.

ಬೊಮ್ಮಾಯಿ ಸಂಪುಟದಲ್ಲಿ ಸಂಸದೀಯ ವ್ಯವಹಾರಗಳ ಖಾತೆ ಸಚಿವರಾಗಿದ್ದ ಮಾಧುಸ್ವಾಮಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಚಿಕ್ಕನಾಯಕನಹಳ್ಳಿ ಕ್ಷೇತ್ರದಿಂದ ಸೋಲನುಭವಿಸಿದ್ದರು. ಈಗ ತುಮಕೂರಿನಿಂದ ಟಿಕೆಟ್ ಆಕಾಂಕ್ಷಿಯಾಗಿದ್ದರು. ತುಮಕೂರಿನಿಂದ ತಾನೇ ಬಿಜೆಪಿ ಅಭ್ಯರ್ಥಿ ಎಂದು ಅವರು ಹೇಳಿಕೊಂಡಿದ್ದರು.

ಇಂತಹ ಮಾಧುಸ್ವಾಮಿ ಬಿಎಸ್‌ವೈ ಅವರನ್ನು ಗುರುವಿನ ಸ್ಥಾನದಲ್ಲಿಟ್ಟು ನಂಬಿಕೊಂಡಿದ್ದರು. ಅದಕ್ಕೆ "ನಾನು ಏಕಲವ್ಯನಂತೆ, ಬಿಎಸ್‌ವೈ ದ್ರೋಣರಂತೆ" ಎಂಬರ್ಥ ಬರುವ ಮಾತನಾಡಿ, ಮಹಾಭಾರತದಲ್ಲಿ ಗುರು ದ್ರೋಣ ಏಕಲವ್ಯನ ಹೆಬ್ಬೆರಳನ್ನೇ ದಕ್ಷಿಣೆಯಾಗಿ ಪಡೆದು ಆತನ ಬಿಲ್ವಿದ್ಯೆಗೆ ಕುಂದು ತಂದಂತೆ ತಮ್ಮ ರಾಜಕೀಯ ಜೀವನಕ್ಕೂ ಕುಂದು ತಂದರು" ಎಂದು ನೋವು ತೋಡಿಕೊಂಡಿದ್ದಾರೆ.

ಲಿಂಗಾಯತ ಪ್ರಾಬಲ್ಯದ ತುಮಕೂರು ಲೋಕಸಭಾ ಕ್ಷೇತ್ರದಿಂದ ಮಾಜಿ ಸಚಿವ ವಿ ಸೋಮಣ್ಣ ಅವರಿಗೆ ಮಣೆ ಹಾಕಿರುವುದು ಮಾಧುಸ್ವಾಮಿ ಕೆಂಗಣ್ಣಿಗೆ ಗುರಿಯಾಗಿದೆ. ಟಿಕೆಟ್ ಕೈ ತಪ್ಪಿದ್ದಕ್ಕೆ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ವಿರುದ್ಧ ಅನಿವಾರ್ಯವಾಗಿ ಆಕ್ರೋಶ ಹೊರ ಹಾಕಿರುವ ಮಾಧುಸ್ವಾಮಿ “ಬಿಎಸ್‌ವೈ ಟಿಕೆಟ್ ಕೊಡಿಸುತ್ತೇನೆ ಎಂದು ಹೇಳುತ್ತಾ ಮೋಸ ಮಾಡಿದರು. ಮನೆಯಲ್ಲಿ ಕೂತಿದ್ದವನನ್ನು ಸ್ಪರ್ಧೆಗೆ ಸಿದ್ದರಾಗಿ ಎಂದು ಹೇಳಿ ಇದೀಗ ನಡು ನಿರಿನಲ್ಲಿ ಕೈಬಿಟ್ಟಿದ್ದಾರೆ” ಎಂದಿದ್ದಾರೆ.

ಸೋಮಣ್ಣ ವಿರುದ್ಧ ಗರಂ

ತುಮಕೂರಿನಲ್ಲಿ ಸೋಮಣ್ಣ ಅವರಿಗೆ ಟಿಕೆಟ್ ನೀಡುತ್ತಿದ್ದಂತೆ ಮಾಧುಸ್ವಾಮಿ ಅವರ ಮನವೊಲಿಕೆಗೆ ಮುಂದಾಗಿದ್ದ ವಿ ಸೋಮಣ್ಣ ಅವರಿಗೆ ಮಾಧುಸ್ವಾಮಿ ಕಟುವಾಗಿ ಪ್ರತಿಕ್ರಿಯಿಸಿದ್ದಾರೆ. “ಮಾಧುಸ್ವಾಮಿ ಮನೆಗೆ ಭೇಟಿ ನೀಡಲು ನಾನು ಮುಂದಾಗಿದ್ದೆ ಅವರು ಮನೆಗೆ ಬರುವುದು ಬೇಡ ಅಂದರು” ಎಂದು ಸೋಮಣ್ಣ ಅವರು ತಿಳಿಸಿದ್ದಾರೆ. ಆದರೆ, "ಮನೆಗೆ ಬರಬೇಡ ಎಂದು ತಾನು ಹೇಳಿಲ್ಲ" ಎಂದು ಮಾಧುಸ್ವಾಮಿ ನಿರಾಕರಿಸಿದ್ದಾರೆ. "ನನ್ನ ಮನಸ್ಸು ಸರಿಯಿಲ್ಲ, ಕೋಪದಲ್ಲಿ ಮಾತನಾಡುವುದು ಬೇಡ ಎಂದು ಈಗ ಮಾತುಕತೆ ಬೇಡ ಎಂದಿದ್ದೆ, ಎಂದಿಗೂ ಮನೆಗೆ ಬರಬೇಡ ಎಂದು ಹೇಳಿಲ್ಲ" ಎಂದು ಮಾಧುಸ್ವಾಮಿ ಹೇಳಿದ್ದಾರೆ. ಅದಾಗ್ಯೂ, ಸೋಮಣ್ಣರಿಗೆ ಬೆಂಬಲ ನೀಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

"ಸೋಮಣ್ಣ ಪರವಾಗಿ ನಾನು ಎಂದಿಗೂ ಪ್ರಚಾರ ಮಾಡುವುದಿಲ್ಲ. ಹೊರಗಿನಿಂದ ಬಂದವರು ನಮ್ಮ ಜಿಲ್ಲೆಯಲ್ಲಿ ಆಡಳಿತ ಮಾಡುವುದು ಬೇಡ. ಅವರು ಗೆಲ್ಲೋದು ಇಲ್ಲಿಯ ಮತದಾರರಿಗೆ ಬೇಡ. ಸೋಮಣ್ಣ ಬಿಟ್ಟು ಬೇರೆಯವರಿಗೆ ಟಿಕೆಟ್ ಕೊಟ್ಟರೆ ನಾನು ಕೆಲಸ ಮಾಡುತ್ತಿದ್ದೆ ," ಎಂದು ಮಾಧುಸ್ವಾಮಿ ಹೇಳಿದ್ದಾರೆ.

ಮೋದಿ ಮುಖ ನೋಡಿ ಕೆಲಸ ಮಾಡಲ್ಲ

"ವಿ.ಸೋಮಣ್ಣ ಅವರಿಗೆ ತುಮಕೂರಿನಿಂದ ಟಿಕೆಟ್ ನೀಡಿರುವುದೇ ಅವರನ್ನು ಬಲಿ ಕೊಡಲು" ಎಂದು ಮಾಧುಸ್ವಾಮಿ ಹೇಳಿದ್ದಾರೆ. "ಸೋಮಣ್ಣರನ್ನು ಬಲಿ ಕೊಡಲು ಅವರನ್ನು ಸಂಸದ ಜಿ.ಎಸ್‌. ಬಸವರಾಜು ಕರೆದುಕೊಂಡು ಬಂದಿದ್ದಾರೆ. ಕಾಂಗ್ರೆಸ್ ಜೊತೆ ಬಸವರಾಜು ಸಂಬಂಧ ಚೆನ್ನಾಗಿದೆ. ಕಾಂಗ್ರೆಸ್‌ ಸಚಿವ ಕೆ.ಎನ್. ರಾಜಣ್ಣ ತಮಗೆ ಎರಡೂ ಪಕ್ಷದಲ್ಲಿ ಸ್ನೇಹಿತರಿದ್ದಾರೆ, ನಾವು ಗೆಲ್ಲುತ್ತೇವೆ ಎಂದು ಹೇಳಿದ್ದರು. ಜಿ.ಎಸ್. ಬಸವರಾಜರಿಗೆ ರಾಜಣ್ಣರ ಋಣ ತೀರಿಸಬೇಕಾಗಿದೆ. ಹಾಗಾಗಿ ಸೋಮಣ್ಣರನ್ನು ಇಲ್ಲಿಗೆ ಕರೆದುಕೊಂಡು ಬಂದಿದ್ದಾರೆ. ಇವರೆಲ್ಲರೂ ಸೇರಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರಲಿದ್ದಾರೆ" ಎಂದು ಟಾಂಗ್‌ ನೀಡಿದರು.

ಜೆಸಿ ಮಾಧುಸ್ವಾಮಿ ಅವರು ತಾನು "ನರೇಂದ್ರ ಮೋದಿ ಮುಖ ನೋಡಿ ಎಲ್ಲಾ ಕೆಲಸ ಮಾಡಲ್ಲ" ಎಂದು ಕಟುವಾಗಿ ಹೇಳಿದ್ದಾರೆ. ನಿಷ್ಠುರ ವರ್ತನೆಯ ಮಾಧುಸ್ವಾಮಿ ಅವರು ಮೂಲತಃ ಸಂಘಪರಿವಾರದವರಲ್ಲ. ಹಾಗಾಗಿ, ಅವರು ನರೇಂದ್ರ ಮೋದಿ ಅಥವಾ ಬಿಜೆಪಿ ಹೈಕಮಾಂಡ್ಗೆ ಅಷ್ಟೇನೂ ನಿಷ್ಠೆ ತೋರಿಸುತ್ತಿಲ್ಲ. ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಮಾಧುಸ್ವಾಮಿ, "ಸಿಟಿ ರವಿ, ಪ್ರತಾಪ ಸಿಂಹ ಎಲ್ಲಾ ಮೋದಿ ಮುಖ ನೋಡಿ ಕೆಲಸ ಮಾಡಬಹುದು. ಆದರೆ ನಾನು ಮೋದಿ ಮುಖ ನೋಡಿ ಕೆಲಸ ಮಾಡಲ್ಲ" ಎಂದಿದ್ದಾರೆ

ನೇರ ನಡೆ ನುಡಿಗೆ ಹೆಸರಾಗಿರುವ ಮಾಧುಸ್ವಾಮಿ ಅವರು ಈಗ ತಮ್ಮ ರಾಜಕೀಯ ಗುರುವಿನ ವಿರುದ್ಧವೇ ತಿರುಗಿಬಿದ್ದಿದ್ದಾರೆ. ತಿರುಮಂತ್ರ ಹಾಕಿ ಗುರುವಿಗೇ ಸವಾಲು ಹಾಕುತ್ತಾರೋ ಅಥವಾ ತಮ್ಮ ರಾಜಕೀಯ ಏಳಿಗೆಗೆ ತನ್ನದೇ ರೀತಿಯಲ್ಲಿ ಪ್ರಯತ್ನಿಸಿ ಹೊಸ ದಾರಿ ಕಂಡುಕೊಳ್ಳುತ್ತಾರೆಯೆ? ಮುಂದಿನ ನಡೆ ಹೇಗಿದೆ? ಎಂಬುದು ಈ ಚುನಾವಣೆ ಬಳಿಕ ಗೊತ್ತಾಗಲಿದೆ.

Read More
Next Story