ಮಹತ್ವದ ಬೆಳವಣಿಗೆ | ಕುತೂಹಲ ಮೂಡಿಸಿದ ಜಾರಕಿಹೊಳಿ-ಡಿಕೆಶಿ ಭೇಟಿ
x

ಮಹತ್ವದ ಬೆಳವಣಿಗೆ | ಕುತೂಹಲ ಮೂಡಿಸಿದ ಜಾರಕಿಹೊಳಿ-ಡಿಕೆಶಿ ಭೇಟಿ


ಮುಡಾ ಹಗರಣ ರಾಜ್ಯ ರಾಜಕೀಯದಲ್ಲಿ ಕೋಲಾಹಲ ಎಬ್ಬಿಸಿರುವ ಮಧ್ಯೆಯೇ ಕುತೂಹಲಕರ ವಿದ್ಯಮಾನವೊಂದು ಸೋಮವಾರ ಕಾಂಗ್ರೆಸ್ ನಲ್ಲಿ ನಡೆದಿದೆ. ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರನ್ನು ಕುಮಾರಪಾರ್ಕ್ ಗೃಹಕಚೇರಿಯಲ್ಲಿ ಸೋಮವಾರ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ಬೆಳಗಾವಿ ಜಿಲ್ಲಾ ರಾಜಕಾರಣದ ಹಿನ್ನೆಲೆಯಲ್ಲಿ ಈ ಇಬ್ಬರು ನಾಯಕರ ನಡುವೆ ವರ್ಷಗಳ ಕಾಲ ಇದ್ದ ವೈಮನಸ್ಯದ ಹಿನ್ನೆಲೆಯಲ್ಲಿ ಈ ಭೇಟಿ ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಮೂಡಿಸಿದೆ.

ಈ ಹಿಂದೆ ಜಾರಕಿಹೊಳಿ ಅವರು ತಮ್ಮ ತವರು ಜಿಲ್ಲೆ ಬೆಳಗಾವಿಯ ವಿಷಯದಲ್ಲಿ ಡಿ ಕೆ ಶಿವಕುಮಾರ್‌ ಹಸ್ತಕ್ಷೇಪದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಜಿಲ್ಲೆಯಲ್ಲಿ ಜಾರಕಿಹೊಳಿ ಕುಟುಂಬದ ಪ್ರಾಬಲ್ಯಕ್ಕೆ ಸವಾಲು ಹಾಕಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರಿಗೆ ಶಿವಕುಮಾರ್‌ ಪ್ರಾಮುಖ್ಯತೆ ನೀಡುತ್ತಿರುವುದಕ್ಕೆ ಜಾರಕಿಹೊಳಿ ಅಸಮಾಧಾನಗೊಂಡಿದ್ದರು. ಕಳೆದ ಬಾರಿಯ ಕಾಂಗ್ರೆಸ್-‌ ಜೆಡಿಎಸ್‌ ಸಮ್ಮಿಶ್ರ ಸರ್ಕಾರದ ಪತನಕ್ಕೂ ಡಿ ಕೆ ಶಿವಕುಮಾರ್‌ ಅವರು ಬೆಳಗಾವಿ ಸಹಕಾರ ಸಂಘದ ಚುನಾವಣೆಯ ವಿಷಯದಲ್ಲಿ ಮಧ್ಯಪ್ರವೇಶ ಮಾಡಿದ್ದೇ ನೆನಪಾಗಿತ್ತು. ಸಹಕಾರ ಸಂಘದ ಚುನಾವಣೆಯಿಂದ ಆರಂಭವಾಗಿದ್ದ ಜಾರಕಿಹೊಳಿ ಮತ್ತು ಡಿಕೆ ಶಿವಕುಮಾರ್‌ ನಡುವಿನ ರಾಜಕೀಯ ಮೇಲಾಟ ಅಂತಿಮವಾಗಿ ಮೈತ್ರಿ ಸರ್ಕಾರದ ಪತನದಲ್ಲಿ ಪರ್ಯಾವಸಾನ ಕಂಡಿತ್ತು.

ಕಳೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲುವಿಗೆ ʼನಿರ್ದೇಶಕರು, ನಿರ್ಮಾಪಕರುʼ ಸರಿಯಾಗಿ ಕೆಲಸ ಮಾಡಲಿಲ್ಲ ಎಂದು ಜಾರಕಿಹೊಳಿ ಹೇಳಿಕೆ ನೀಡಿದ್ದರು. ಈ ವಿಷಯವನ್ನು ಸುದ್ದಿಗಾರರು ಗಮನಕ್ಕೆ ತಂದಾಗ, ಆ ರೀತಿ ಹೇಳಿಕೆ ನೀಡಿದವರನ್ನು ಹುಚ್ಚಾಸ್ಪತ್ರೆಗೆ ಕಳುಹಿಸಿಕೊಡೋಣ ಎಂದು ಶಿವಕುಮಾರ್ ತಿರುಗೇಟು ನೀಡಿದ್ದರು.

ಇತ್ತೀಚೆಗೆ ಬಿಜೆಪಿ ಶಾಸಕ ಬಸನಗೌಡ ಯತ್ನಾಳ್‌ ಅವರು ಡಿಕೆಶಿ ಸಿಎಂ ಮಾಡಲು ಒಳಒಪ್ಪಂದ ಆಗಿದೆ ಎಂದು ಆರೋಪ ಮಾಡಿದ್ದರು. ಈ ಹೇಳಿಕೆಗೆ ಪ್ರತಿಕ್ರಿಯಿಸಲು ನಿರಾಕರಿಸಿ, ಅವರು ಹೇಳಿದ್ದಕ್ಕೆ ಯಾವುದೇ ದಾಖಲೆಗಳಿಲ್ಲ, ಹೀಗಾಗಿ ಈ ವಿಷಯದ ಬಗ್ಗೆ ಮಾತನಾಡಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದರು.

ಮುಡಾ ವಿರೋಧಿಸಿ ಬಿಜೆಪಿ ಜೆಡಿಎಸ್‌ ನಾಯಕರು ಮಾಡಿದ್ದ ಪಾದಯಾತ್ರೆ ವೇಳೆ ಡಿಕೆಶಿ-ಹೆಚ್ಚಿಕೆ ನಡುವಿನ ವಾಕ್ಸಮರ ಅತಿರೇಕಕ್ಕೆ ಹೋಗಿತ್ತು. ಆಗ ಹೆಚ್‌ಡಿಕೆ, ಡಿಕೆಶಿ ಇಷ್ಟೊಂದು ಆವೇಶಭರಿತವಾಗಿ ಮಾತನಾಡುವುದು ತಪ್ಪು ಎನ್ನುತ್ತಲೇ, ಸತೀಶ್‌ ಜಾರಕಿಹೊಳಿ ಅವರು ಡಿಕೆಶಿ ಹೇಳಿಕೆಗಳನ್ನು ನಯವಾಗಿ ಖಂಡಿಸಿದ್ದರು. ಇಬ್ಬರು ನಾಯಕರ ನಡುವೆ ಹಲವು ದಿನಗಳಿಂದ ಮುಸುಕಿನ ಗುದ್ದಾಟ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಇದೀಗ ಈ ಇಬ್ಬರ ಭೇಟಿ ಭಾರೀ ಕುತೂಹಲಕ್ಕೆ ಕಾರಣವಾಗಿದೆ.

Read More
Next Story