BJP Infighting | ಶ್ರೀರಾಮುಲು ಬಗ್ಗೆ ಜನಾರ್ದನ ರೆಡ್ಡಿ ಸ್ಫೋಟಕ ಹೇಳಿಕೆ
ರಾಮುಲು ಪಕ್ಷ ಬಿಟ್ಟು ಹೋಗುತ್ತೇನೆ ಎನ್ನುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಪಕ್ಷ ಕಟ್ಟಿದ್ರು. ಇದೆಲ್ಲ ಮೀರಿಯೂ ಅವರ ಜೊತೆಗಿದ್ದೆ. 14 ವರ್ಷ ನಾನು ಬಳ್ಳಾರಿಯಲ್ಲಿ ಇರಲಿಲ್ಲ.
ಬಿಜೆಪಿಯಲ್ಲಿ ಗಾಲಿ ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ನಡುವೆ ವೈಮಸ್ಸು ಉಂಟಾಗಿದ್ದು, ಇಬ್ಬರು ನಾಯಕರು ಒಬ್ಬರ ವಿರುದ್ದ ಮತ್ತೊಬ್ಬರು ಆರೋಪ- ಪ್ರತ್ಯಾರೋಪದಲ್ಲಿ ಮುಳುಗಿದ್ದಾರೆ.
ಗುರುವಾರ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜನಾರ್ದನ ರೆಡ್ಡಿ, ತಮ್ಮ ರಾಜಕೀಯ ಎದುರಾಳಿ ಸತೀಶ್ ಜಾರಕಿಹೊಳಿಯನ್ನು ಮಣಿಸಲು ಡಿ ಕೆ ಶಿವಕುಮಾರ್ ಅವರು ಹೇಗಾದರೂ ಮಾಡಿ ಶ್ರೀರಾಮುಲು ಅವರನ್ನು ಕಾಂಗ್ರೆಸ್ಸಿಗೆ ಸೇರಿಸಿಕೊಳ್ಳಬೇಕೆಂದು ಪ್ರಯತ್ನ ಮಾಡುತ್ತಿದ್ದಾರೆ ಎಂದು ಬಳ್ಳಾರಿ ಭಾಗದಲ್ಲಿ ಜನರು ಮಾತನಾಡುತ್ತಿದ್ದಾರೆ. ಪಕ್ಷ ಬಿಟ್ಟು ಹೋಗುವ ಉದ್ದೇಶ ಇದ್ದರೆ ಹೋಗಲಿ. ನೇರವಾಗಿ ನನ್ನ ಮೇಲೆ ಆಪಾದನೆ ಮಾಡಿ, ಹೋಗೋದು ಸರಿ ಅಲ್ಲ ಎಂದಿದ್ದಾರೆ.
ಸಾಯುವವರೆಗೂ ಶ್ರೀರಾಮುಲು ಸ್ನೇಹಿತನೇ ಹೊರತು; ಶತ್ರು ಆಗುವುದಿಲ್ಲ. ಆದರೆ ಶತ್ರುಗಳೊಂದಿಗೆ ಅವರು ಕೈ ಜೋಡಿಸಿದ್ದಾರೆ. ಪಕ್ಷ ಬಿಡುವುದು, ಇರೋದು ಅವರ ವೈಯುಕ್ತಿಕ ವಿಚಾರ. ಅವರಿಗೆ ಹೋಗಬೇಕು ಎಂದಾದರೆ ಹೋಗಲಿ. ನನ್ನ ಮೇಲೆ ಆರೋಪ ಯಾಕೆ? ಇದು ಎಷ್ಟು ಸರಿ? ಸತೀಶ್ ಜಾರಕಿಹೊಳಿ ಅವರನ್ನು ಮಣಿಸಲು ಡಿಕೆಶಿ ಅವರು ಶ್ರೀರಾಮುಲುರನ್ನು ಕರೆದುಕೊಳ್ಳಬೇಕೆಂದು ಪ್ರಯತ್ನ ಮಾಡುತ್ತಿದ್ದಾರೆ ಎಂದು ಟಿವಿ ಮಾಧ್ಯಮಗಳಲ್ಲೇ ವರದಿಯಾಗಿದೆ. ಇವರು ಇರೋದು ಹೋಗೋದು ಅವರ ವಿಚಾರ. ಭಗವಂತನ ಮುಂದೆ ಹೋಗಿ, ಬಳ್ಳಾರಿ ದುರ್ಗಮ್ಮನ ದೇವಸ್ಥಾನಕ್ಕೆ ಹೋಗಿ. ದೇವರ ಬಳಿ ಹೋಗಿ ಪ್ರಾರ್ಥನೆ ಮಾಡಿಕೊಳ್ಳಲಿ. ನಾನು ಕರ್ಮದ ಮೇಲೆ ನಂಬಿಕೆ ಇಟ್ಟಿರುವ ವ್ಯಕ್ತಿ. ಕರ್ಮ, ಭಗವದ್ಗೀತೆಯಲ್ಲಿ ನಂಬಿಕೆ ಇಟ್ಟವನು ನಾನು. ಕರ್ಮ ಯಾರನ್ನೂ ಬಿಡುವುದಿಲ್ಲ. ಪಕ್ಷ ಯಾವ ಕೆಲಸ ಮಾಡು ಅಂದರೆ ನಾನು ಅದನ್ನು ಮಾಡುತ್ತೇನೆ. ನಾನು ಶ್ರೀರಾಮುಲು ಸೇರಿ ಎಲ್ಲರು ಒಗ್ಗಟ್ಟಾಗಿ ಕೆಲಸ ಮಾಡುತ್ತೇವೆ ಎಂದರು.
ಜನಾರ್ದನ ರೆಡ್ಡಿ ಬೆಳೆಸಿದ ರೀತಿ ಗೊತ್ತು
ಲೋಕಸಭೆ ಚುನಾವಣೆಗೆ ಒಂದು ತಿಂಗಳ ಹಿಂದೆಯೇ ಬಿಜೆಪಿ ಪಕ್ಷಕ್ಕೆ ಪುನಃ ಸೇರ್ಪಡೆಯಾದೆ. ಬಳ್ಳಾರಿ ಬಿಟ್ಟು ಉಳಿದ ಎಲ್ಲ ಜಿಲ್ಲೆಗಳಿಗೂ ಸಂಚರಿಸುವ ಅನುಮತಿ ಇತ್ತು. ಸಂಡೂರು ಉಪಚುನಾವಣೆ ಟಿಕೆಟ್ ನೀಡುವ ವೇಳೆ ಚರ್ಚೆ ಮಾಡಿದ್ದರು. ಪಕ್ಷ ಯಾರಿಗೆ ಟಿಕೆಟ್ ಕೊಟ್ಟರೂ ಗೆಲುವಿಗೆ ಪ್ರಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದ್ದೆ. ಬಂಗಾರು ಹನುಮಂತ ನನ್ನ ಅಭ್ಯರ್ಥಿ ಅಲ್ಲ. ಅದು ಎಸ್‌ಟಿ ಮೀಸಲು ಕ್ಷೇತ್ರ, ಹೀಗಾಗಿ ಪಕ್ಷ ಅವರಿಗೆ ಟಿಕೆಟ್ ಕೊಟ್ಟಿತ್ತು. ಯಡಿಯೂರಪ್ಪ ಸೇರಿದಂತೆ ಹಲವು ಬಿಜೆಪಿ ನಾಯಕರು ಪ್ರಚಾರ ಮಾಡಿದರು. ಶ್ರೀರಾಮುಲು ಕೂಡ ಮೂರು ದಿನ ತಡವಾಗಿ ಬಂದು ಪ್ರಚಾರ ಮಾಡಿದ್ದರು. ಆದರೆ ಉಪಚುನಾವಣೆಯಲ್ಲಿ ಮುಖ್ಯಮಂತ್ರಿಗಳೇ ಅಲ್ಲಿ ಮೂರು ದಿನ ಉಳಿದು ಪ್ರಚಾರ ಮಾಡಿದ್ದರು. ಹೀಗಾಗಿ ಸೋಲು ಆಯ್ತು. ನಾನು ಯಾರ ವಿರುದ್ಧವೂ ಚಾಡಿ ಹೇಳುವ ಅವಶ್ಯಕತೆ ಇಲ್ಲ. ಜನಾರ್ದನ ರೆಡ್ಡಿ, ಶ್ರೀರಾಮುಲು ಬಗ್ಗೆ ಬಳ್ಳಾರಿ ಜನತೆಗೆ ಗೊತ್ತಿದೆ. ಶ್ರೀರಾಮುಲು ಅವರನ್ನು ಜನಾರ್ದನ ರೆಡ್ಡಿ ಬೆಳೆಸಿದ ರೀತಿ ಗೊತ್ತು ಎಂದು ಅವರು ಹೇಳಿದರು.
ಶ್ರೀರಾಮುಲು ಚಿಕ್ಕ ವಯಸ್ಸಿನವಿನಿದ್ದಾಗ ಹಾದಿಬೀದಿಯಲ್ಲಿದ್ದರು. ಅವರ ಭಾವನನ್ನು ಹೀನಾಯವಾಗಿ ಕೊಲೆ ಮಾಡಲಾಗಿತ್ತು. ಅವತ್ತಿನ ಪರಿಸ್ಥಿತಿ, ಸೋದರ ಮಾವನ ಕೊಲೆ ನಂತರ ಶ್ರೀರಾಮುಲು ಮೇಲೆ ಟಾರ್ಗೆಟ್ ಇತ್ತು. ಅವತ್ತು ನನ್ನನ್ನು ಭೇಟಿಯಾಗಲು ಶ್ರೀರಾಮುಲು ನನ್ನ ಮನೆಗೆ ಬಂದಿದ್ರು. ತಮ್ಮ ರಕ್ಷಣೆಗಾಗಿ ಚಾಕು ಹಿಡಿದುಕೊಂಡು ಬಂದಿದ್ರು ಶ್ರೀರಾಮುಲು. 2004ರಲ್ಲಿ ರಾಘವೇಂದ್ರ ಎಂಬ ಕಾರ್ಪೊರೇಟ್ ಕೊಲೆ ಆಗಿತ್ತು. ಆ ಕೊಲೆ ರಾಮುಲು ಮೇಲೆ ಬಂದಿತ್ತು. ನಮ್ಮ ತಾಯಿ ಆಗ ಧೈರ್ಯ ತುಂಬಿದ್ರು ಎಂದು ಜನಾರ್ದನ ರೆಡ್ಡಿ ಹೇಳಿದರು.
ಈಗ ಕಾಂಗ್ರೆಸ್ನಲ್ಲಿರುವ ಸೂರ್ಯ ನಾರಾಯಣ ರೆಡ್ಡಿ, ದಿವಾಕರ್ ಬಾಬು ಅವರನ್ನು ಕೊಲೆ ಮಾಡೋಕೆ ಶ್ರೀರಾಮುಲು ದಿನ ಎಣಿಕೆ ಮಾಡ್ತಿದ್ರು. ಸೂರ್ಯನಾರಾಯಣ ರೆಡ್ಡಿ ರಾಮುಲು ಅವರ ಸೋದರ ಮಾವನ ಕೊಲೆಗೆ ಫೈನಾನ್ಸ್ ಮಾಡಿದ್ದರು ಎಂಬ ಆರೋಪ ಇತ್ತು. ಸೂರ್ಯನಾರಾಯಣ ರೆಡ್ಡಿಯನ್ನು ಕೊಲೆ ಮಾಡುತ್ತೇನೆ ಎಂದು ರಾಮುಲು ನನ್ನ ಬಳಿ ಹೇಳಿದ್ದರು. ಆಗ ನಾನು ರಾಮಾಯಣ ಕಥೆಗಳು, ಪುರಾಣ ಕಥೆಗಳು ಹೇಳುವ ಮೂಲಕ ಸನ್ಮಾರ್ಗದಲ್ಲಿ ರಾಮುಲುರನ್ನು ಕರೆತಂದೆ. ಒಳ್ಳೆಯ ಮಾರ್ಗದಲ್ಲಿ ಕರೆ ತಂದು, ಈ ಮಟ್ಟಿಗೆ ಬೆಳೆಸಿದ್ದೇವೆ. ಮೊಳಕಾಲ್ಮುರಿನಲ್ಲಿ 35 ಸಾವಿರ ಅಂತರದಿಂದ ಅವನನ್ನು ಗೆಲ್ಲಿಸಿದ್ದು ನಂದು ಇನ್ನೊಂದು ತಪ್ಪು ಎಂದು ಶ್ರೀರಾಮುಲು ವಿರುದ್ಧ ರೆಡ್ಡಿ ಕಿಡಿಕಾರಿದರು.
ರಾಮುಲು ಪಕ್ಷ ಬಿಟ್ಟು ಹೋಗುತ್ತೇನೆ ಎನ್ನುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಪಕ್ಷ ಕಟ್ಟಿದ್ರು. ಇದೆಲ್ಲ ಮೀರಿದ್ರೂ ಅವರ ಜೊತೆಗಿದ್ದೆ. 14 ವರ್ಷ ನಾನು ಬಳ್ಳಾರಿಯಲ್ಲಿ ಇರಲಿಲ್ಲ. ನಾನು ಇಲ್ಲದ ವೇಳೆ ಎಷ್ಟು ಜನರ ವಿಶ್ವಾಸ ಗಳಿಸಿಕೊಳ್ಳಬಹುದಿತ್ತು. ಇದನ್ನು ಶ್ರೀರಾಮುಲು ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ಯಾರೋ ಶಿಫಾರಸು ಮಾಡಿ ಬೆಳೆದ ವ್ಯಕ್ತಿ ನಾನಲ್ಲ ಎಂದು ರೆಡ್ಡಿ ಹೇಳಿದರು.