ಬಳ್ಳಾರಿ ಶೂಟೌಟ್ ಬೆನ್ನಲ್ಲೇ ಅಮಿತ್ ಶಾ, ಸಿಎಂಗೆ ಜನಾರ್ದನ ರೆಡ್ಡಿ ಪತ್ರ: ಝಡ್ ಭದ್ರತೆಗೆ ಆಗ್ರಹ
x

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹಾಗೂ ಶಾಸಕ ಜನಾರ್ದನ ರೆಡ್ಡಿ

ಬಳ್ಳಾರಿ ಶೂಟೌಟ್ ಬೆನ್ನಲ್ಲೇ ಅಮಿತ್ ಶಾ, ಸಿಎಂಗೆ ಜನಾರ್ದನ ರೆಡ್ಡಿ ಪತ್ರ: 'ಝಡ್' ಭದ್ರತೆಗೆ ಆಗ್ರಹ

ನನ್ನ ಜೀವಕ್ಕೆ ಹೆಚ್ಚಿನ ಬೆದರಿಕೆ ಇದೆ. ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಅತ್ಯಂತ ಕೆಟ್ಟ ಸ್ಥಿತಿಯಲ್ಲಿದೆ, ರಾಜ್ಯ ಪೊಲೀಸರು ನನ್ನ ಜೀವವನ್ನು ರಕ್ಷಿಸುವಲ್ಲಿ ನಿಷ್ಕ್ರಿಯತೆ ತೋರಿಸಿದ್ದಾರೆ ಎಂದು ಪತ್ರದಲ್ಲಿ ಆರೋಪಿಸಿದ್ದಾರೆ.


Click the Play button to hear this message in audio format

ಗಣಿ ನಗರಿ ಬಳ್ಳಾರಿಯಲ್ಲಿ ಹೊಸ ವರ್ಷದ ದಿನದಂದೇ ನಡೆದ ಭೀಕರ ಶೂಟೌಟ್ ಹಾಗೂ ಪೆಟ್ರೋಲ್ ಬಾಂಬ್ ದಾಳಿ ಪ್ರಕರಣವು ಈಗ ರಾಜ್ಯ ರಾಜಕಾರಣದ ಗಡಿ ಮೀರಿ ರಾಷ್ಟ್ರ ರಾಜಧಾನಿ ದೆಹಲಿಯ ಅಂಗಳ ತಲುಪಿದೆ. ತಮ್ಮ ನಿವಾಸದ ಮೇಲೆ ನಡೆದ ದಾಳಿಯು ಕೇವಲ ರಾಜಕೀಯ ಸಂಘರ್ಷವಲ್ಲ, ಬದಲಾಗಿ ತಮ್ಮನ್ನು ಮುಗಿಸಲು ನಡೆದ "ಪೂರ್ವನಿಯೋಜಿತ ಹತ್ಯೆಯ ಸಂಚು" ಎಂದು ಹೇಳಿರುವ ಶಾಸಕ ಗಾಲಿ ಜನಾರ್ದನ ರೆಡ್ಡಿ, ಈಗ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೊರೆ ಹೋಗಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದ್ದು, 'ಜಂಗಲ್ ರಾಜ್' ನಿರ್ಮಾಣವಾಗಿದೆ ಎಂದು ಆರೋಪಿಸಿರುವ ಅವರು, ತಮಗೆ ಕೇಂದ್ರ ಪಡೆಗಳಿಂದ 'ಝಡ್' (Z) ಶ್ರೇಣಿಯ ಭದ್ರತೆ ಒದಗಿಸುವಂತೆ ತುರ್ತು ಮನವಿ ಮಾಡಿದ್ದಾರೆ.

ಶೂಟೌಟ್​​ ಘಟನೆಯಿಂದ ಮತ್ತಷ್ಟು ಅವಘಡಗಳು ಸಂಭವಿಸಬಹುದು ಎಂಬ ಮುಂಜಾಗ್ರತಾ ದೃಷ್ಟಿಯಿಂದ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರು ಕೇಂದ್ರ ಸಚಿವ ಅಮಿತ್‌ ಶಾ, ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ಹಾಗೂ ರಾಜ್ಯ ಪೊಲೀಸ್‌ ಮಹಾನಿರ್ದೇಶಕರಿಗೆ ಪತ್ರ ಬರೆದು ಝಡ್‌ ಶ್ರೇಣಿಯ ಭದ್ರತೆ ನೀಡುವಂತೆ ಮನವಿ ಮಾಡಿದ್ದಾರೆ.

ನನ್ನ ಜೀವಕ್ಕೆ ಹೆಚ್ಚಿನ ಬೆದರಿಕೆ ಇದೆ. ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಅತ್ಯಂತ ಕೆಟ್ಟ ಸ್ಥಿತಿಯಲ್ಲಿದೆ, ರಾಜ್ಯ ಪೊಲೀಸರು ನನ್ನ ಜೀವವನ್ನು ರಕ್ಷಿಸುವಲ್ಲಿ ನಿಷ್ಕ್ರಿಯತೆ ತೋರಿಸಿದ್ದಾರೆ. ಆದ್ದರಿಂದ, ದಯವಿಟ್ಟು ಕೇಂದ್ರ ಪಡೆಗಳ ಮೂಲಕ ನನ್ನ ಜೀವಕ್ಕೆ ಸಾಧ್ಯವಾದಷ್ಟು ಬೇಗ ಭದ್ರತೆ ಒದಗಿಸಬೇಕು. ಸಂವಿಧಾನದ 21 ನೇ ವಿಧಿಯ ಅಡಿಯಲ್ಲಿ ನನ್ನ ಜೀವವನ್ನು ಬದುಕಲು ಮತ್ತು ರಕ್ಷಿಸಲು ನನಗೆ ಮೂಲಭೂತ ಹಕ್ಕುಗಳಿವೆ. ರಾಜ್ಯ ಸರ್ಕಾರವು ನನ್ನ ಜೀವವನ್ನು ರಕ್ಷಿಸಲು ಮತ್ತು ಖಾತರಿಪಡಿಸಲು ವಿಫಲವಾದ ಕಾರಣ ನನಗೆ ಕೇಂದ್ರ ಪಡೆಗಳಿಂದ ರಕ್ಷಣೆ ಬೇಕು ಎಂದು ಅಮಿತ್‌ ಶಾಗೆ ಬರೆದ ಪತ್ರದಲ್ಲಿ ಮನವಿ ಮಾಡಿದ್ದಾರೆ.

ಸಿಎಂಗೆ ಬರೆದ ಪತ್ರದಲ್ಲೇನಿದೆ ?

"ಅತ್ಯಂತ ಆಘಾತ ಮತ್ತು ಆಕ್ರೋಶದೊಂದಿಗೆ ಈ ಪತ್ರವನ್ನು ಬರೆಯುತ್ತಿದ್ದೇನೆ, ಜ.1 ರಂದು, ಹೊಸ ವರ್ಷದ ದಿನದಂದೇ ಬಳ್ಳಾರಿಯ ನನ್ನ ನಿವಾಸದ ಮೇಲೆ ನಡೆದ ಭೀಕರ ದಾಳಿಯು ಸಾಮಾನ್ಯ ರಾಜಕೀಯ ಘರ್ಷಣೆಯಲ್ಲ, ಬದಲಾಗಿ, ಬಳ್ಳಾರಿ ಶಾಸಕ ನಾರಾ ಭರತ್ ರೆಡ್ಡಿ ಮತ್ತು ಅವರ ಗೂಂಡಾ ಪಡೆಯು ನನ್ನನ್ನು ವ್ಯವಸ್ಥಿತವಾಗಿ ಮುಗಿಸಲು ನಡೆಸಿದ ಪೂರ್ವನಿಯೋಜಿತ ʼಹತ್ಯೆಯ ಸಂಚುʼ ಇದಾಗಿದೆ" ಎಂದು ತಿಳಿಸಿದ್ದಾರೆ.

ಒಬ್ಬ ಹಾಲಿ ಶಾಸಕನ ಮನೆಗೆ ಪೆಟ್ರೋಲ್ ಬಾಂಬ್ ಮತ್ತು ಬಂದೂಕುಗಳೊಂದಿಗೆ ಬಂದು, ಪೊಲೀಸರ ಎದುರೇ ಗಂಟೆಗಟ್ಟಲೆ ದಾಂಧಲೆ ನಡೆಸಿ, ಸಾವಿರಾರು ಜನರ ಎದುರುಗಡೆಯೇ ಗುಂಡು ಹಾರಿಸಿ ಹತ್ಯೆಗೆ ಯತ್ನಿಸುವುದು ರಾಜ್ಯದಲ್ಲಿ "ಜಂಗಲ್ ರಾಜ್" ಇದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಇಲ್ಲಿ ಸ್ಥಳೀಯ ಪೊಲೀಸರ ವೈಫಲ್ಯ ಎದ್ದು ಕಾಣುತ್ತಿದೆ. ನನ್ನ ಪ್ರಾಣಕ್ಕೆ ಇರುವ ಅಪಾಯ ಈಗ ಅತ್ಯಂತ ಗರಿಷ್ಠ ಮಟ್ಟದಲ್ಲಿದೆ. ನನ್ನನ್ನು ಹತ್ಯೆ ಮಾಡಲು ಸಂಚು ರೂಪಿಸಿರುವ ವಿರೋಧಿಗಳು ಎಂತಹ ಕೃತ್ಯಕ್ಕೂ ಹೇಸುವುದಿಲ್ಲ ಎಂಬುದು ಸಾಬೀತಾಗಿದೆ. ಆದುದರಿಂದ ಮುಂದಿನ ದಿನಗಳಲ್ಲಿ ಮತ್ತೆ ಇಂತಹ ದಾಳಿ ಸಂಭವಿಸುವ ಸಾಧ್ಯತೆ ಇದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಜನರ್ದಾನ ರೆಡ್ಡಿ ಬೇಡಿಕೆ ಏನು ?

* ನನಗೆ ಮತ್ತು ನನ್ನ ಕುಟುಂಬಕ್ಕೆ ತಕ್ಷಣದಿಂದ ಜಾರಿಗೆ ಬರುವಂತೆ 'ಝಡ್' ಅಥವಾ ತತ್ಸಮಾನವಾದ ಉನ್ನತ ಪೊಲೀಸ್ ಭದ್ರತೆಯನ್ನು ಒದಗಿಸಬೇಕು.

* ಘಟನೆಯಲ್ಲಿ ಮೃತಪಟ್ಟ ವ್ಯಕ್ತಿಯ ಸಾವಿಗೆ ಕಾರಣರಾದ ಮತ್ತು ಪೆಟ್ರೋಲ್ ಬಾಂಬ್ ಬಳಸಿದ ಶಾಸಕ ಭರತ್ ರೆಡ್ಡಿ, ಸತೀಶ್ ರೆಡ್ಡಿ ಮತ್ತು ಅವರ ಸಹಚರರ ಮೇಲೆ ಕೊಲೆ ಮೊಕದ್ದಮೆ ದಾಖಲಿಸಿ ಬಂಧಿಸಬೇಕು.

* ಕರ್ತವ್ಯಲೋಪ ಹಾಗೂ ನಿರ್ಲಕ್ಷ್ಯ ತೋರಿದ ಪೊಲೀಸ್ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.

ಒಂದು ವೇಳೆ ನನಗೆ ಸೂಕ್ತ ಭದ್ರತೆ ಒದಗಿಸುವಲ್ಲಿ ಸರ್ಕಾರ ವಿಫಲವಾಗಿ, ಮುಂದಿನ ದಿನಗಳಲ್ಲಿ ನನ್ನ ಅಥವಾ ನನ್ನ ಕುಟುಂಬದ ಮೇಲೆ ಯಾವುದೇ ದಾಳಿ ನಡೆದರೆ, ಅದಕ್ಕೆ ನೇರವಾಗಿ ರಾಜ್ಯ ಸರ್ಕಾರವೇ ಹೊಣೆಯಾಗುತ್ತದೆ ಎಂದು ಈ ಮೂಲಕ ಎಚ್ಚರಿಸಲು ಬಯಸುತ್ತೇನೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಏನಿದು ಝಡ್ ಭದ್ರತೆ ?

ಝಡ್ (Z) ಭದ್ರತೆ ಎಂಬುದು ಭಾರತದಲ್ಲಿ ಗಣ್ಯ ವ್ಯಕ್ತಿಗಳಿಗೆ ನೀಡಲಾಗುವ ಅತ್ಯುನ್ನತ ಮಟ್ಟದ ಭದ್ರತಾ ಶ್ರೇಣಿಗಳಲ್ಲಿ ಒಂದಾಗಿದೆ. ವ್ಯಕ್ತಿಯ ಮೇಲೆ ಇರುವ ಅಪಾಯದ ಮಟ್ಟವನ್ನು ಆಧರಿಸಿ ಕೇಂದ್ರ ಗುಪ್ತಚರ ಇಲಾಖೆ ಈ ಭದ್ರತೆಯನ್ನು ಶಿಫಾರಸು ಮಾಡುತ್ತದೆ. ಈ ಭದ್ರತಾ ಶ್ರೇಣಿಯಲ್ಲಿ ಸುಮಾರು 22 ಸಿಬ್ಬಂದಿಗಳಿದ್ದು, ಇದರಲ್ಲಿ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ITBP), ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ (CRPF) ಅಥವಾ ಸ್ಥಳೀಯ ಪೊಲೀಸರು ಇರುತ್ತಾರೆ. ಈ ತಂಡದಲ್ಲಿ ಕನಿಷ್ಠ 4 ರಿಂದ 5 ಕಮಾಂಡೋಗಳು ಇರುತ್ತಾರೆ. ಇವರು ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿರುತ್ತಾರೆ ಜೊತೆಗೆ ರಕ್ಷಣೆ ಪಡೆಯುವ ವ್ಯಕ್ತಿಯ ಜೊತೆಗೆ ಸದಾ ಒಂದು 'ಎಸ್‌ಕಾರ್ಟ್' ವಾಹನ ಇರುತ್ತದೆ.

ಭಾರತದಲ್ಲಿನ ಭದ್ರತಾ ಶ್ರೇಣಿಗಳು

ದೇಶದಲ್ಲಿ ರಾಷ್ಟ್ರಪತಿ, ಪ್ರಧಾನಿ, ಸುಪ್ರೀಂ ಕೋರ್ಟ್ ನ್ಯಾಯಾಧೀಶರು, ಮುಖ್ಯಮಂತ್ರಿಗಳು, ಜೀವ ಬೆದರಿಕೆ ಇರುವ ಪ್ರಮುಖ ರಾಜಕೀಯ ನಾಯಕರು ಸೇರಿದಂತೆ ವಿವಿಧ ಗಣ್ಯರಿಗೆ ಒಟ್ಟು 6 ಹಂತದ ಭದ್ರತೆಗಳನ್ನು ಒದಗಿಸಲಾಗುತ್ತದೆ.

* ಎಸ್‌ಪಿಜಿ ಇದು ಕೇವಲ ಪ್ರಧಾನ ಮಂತ್ರಿಗಳಿಗೆ ಮಾತ್ರ ನೀಡಲಾಗುವ ಅತ್ಯುನ್ನತ ಭದ್ರತೆ.

* ಝಡ್ ಪ್ಲಸ್ ಭದ್ರತೆಯಲ್ಲಿ ಎನ್‌ಎಸ್‌ಜಿ ಕಮಾಂಡೋಗಳು ಸೇರಿದಂತೆ 55 ಸಿಬ್ಬಂದಿಗಳಿರುತ್ತಾರೆ.

* ಝಡ್ ಭದ್ರತೆಯಲ್ಲಿ 22 ಸಿಬ್ಬಂದಿಗಳಿದ್ದು ಕನಿಷ್ಠ 4 ರಿಂದ 5 ಕಮಾಂಡೋಗಳು ಇರುತ್ತಾರೆ.

* ವೈ ಪ್ಲಸ್ ಭದ್ರತೆಯಲ್ಲಿ 11 ಸಿಬ್ಬಂದಿಗಳು ಮತ್ತು 2 ರಿಂದ 3 ಕಮಾಂಡೋಗಳು ಇರುತ್ತಾರೆ.

* ವೈ ಭದ್ರತೆಯಲ್ಲಿ 8 ಸಿಬ್ಬಂದಿಗಳು ಮತ್ತು 2 ಕಮಾಂಡೋಗಳು ಇರುತ್ತಾರೆ.

* ಎಕ್ಸ್ ಭದ್ರತೆಯಲ್ಲಿ ಕೇವಲ 2 ಪೊಲೀಸರು ಇರುತ್ತಾರೆ ಇದರಲ್ಲಿ ಯಾವುದೇ ಕಮಾಂಡೋಗಳಿರುವುದಿಲ್ಲ.


Read More
Next Story