ಓಬಳಾಪುರಂ ಅಕ್ರಮ ಗಣಿಗಾರಿಕೆ | ಶಾಸಕ ಸ್ಥಾನದಿಂದ ಗಾಲಿ ಜನಾರ್ಧನ ರೆಡ್ಡಿ ಅನರ್ಹ
x

ಓಬಳಾಪುರಂ ಅಕ್ರಮ ಗಣಿಗಾರಿಕೆ | ಶಾಸಕ ಸ್ಥಾನದಿಂದ ಗಾಲಿ ಜನಾರ್ಧನ ರೆಡ್ಡಿ ಅನರ್ಹ

ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಜನಾರ್ಧನ ರೆಡ್ಡಿಯನ್ನು ಪ್ರಜಾ ಪ್ರತಿನಿಧಿ ಕಾಯ್ದೆ 1951ರ ಕಲಂ 191(1) (ಇ) ಅನ್ವಯ ಶಾಸಕ ಸ್ಥಾನದಿಂದ ಅನರ್ಹಗೊಳಿಸಲಾಗಿದೆ.


ಓಬಳಾಪುರಂ ಗಣಿ ಪ್ರಕಾರಣದಲ್ಲಿ ( ಒಎಂಸಿ) ಏಳು ವರ್ಷ ಶಿಕ್ಷೆಗೆ ಗುರಿಯಾಗಿರುವ ಬಿಜೆಪಿ ಶಾಸಕ ಗಾಲಿ ಜನಾರ್ಧನ ರೆಡ್ಡಿಯನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಲಾಗಿದೆ.

ಅಕ್ರಮ ಗಣಿ ಹಗರಣದಲ್ಲಿ ಶಿಕ್ಷೆ ಪ್ರಕಟಿಸಿದ್ದ ಹೈದರಾಬಾದ್‌ನ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶರು ಗಂಗಾವತಿ ಶಾಸಕ ಜನಾರ್ಧನ ರೆಡ್ಡಿಗೆ ಮಂಗಳವಾರ ಶಿಕ್ಷೆ ವಿಧಿಸಿದ್ದರು.

ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಜನಾರ್ಧನ ರೆಡ್ಡಿಯನ್ನು ಪ್ರಜಾ ಪ್ರತಿನಿಧಿ ಕಾಯ್ದೆ 1951ರ ಕಲಂ 191(1) (ಇ) ಅನ್ವಯ ಶಾಸಕ ಸ್ಥಾನದಿಂದ ಅನರ್ಹಗೊಳಿಸಲಾಗಿದೆ.

ಸಕ್ಷಮ ನ್ಯಾಯಾಲಯದಿಂದ ಶಿಕ್ಷೆಗೆ ತಡೆ ಸಿಗದೇ ಹೋದಲ್ಲಿ ಆರು ವರ್ಷಗಳವರೆಗೆ ಶಾಸಕ ಸ್ಥಾನಕ್ಕೆ ಸ್ಪರ್ಧೆ ಮಾಡುವಂತಿಲ್ಲ. ಜನಾರ್ಧನ ರೆಡ್ಡಿ ಅನರ್ಹತೆಯಿಂದ ವಿಧಾನಸಭೆಯ ಒಂದು ಸ್ಥಾನ ತೆರವಾಗಿದೆ ಎಂದು ವಿಧಾನಸಭೆ ಕಾರ್ಯದರ್ಶಿ ಎಂ.ಕೆ. ವಿಶಾಲಾಕ್ಷಿ ಆದೇಶದಲ್ಲಿ ತಿಳಿಸಿದ್ದಾರೆ.

2008ರಿಂದ 2013ರ ಅವಧಿಯಲ್ಲಿ ನಡೆದ ಅಕ್ರಮ ಗಣಿಗಾರಿಕೆ ಆರೋಪದಲ್ಲಿ ನ್ಯಾಯಾಲಯ ಶಿಕ್ಷೆ ವಿಧಿಸಿತ್ತು. ಕರ್ನಾಟಕ ಮತ್ತು ಆಂಧ್ರಪ್ರದೇಶದ ಗಡಿಭಾಗದಲ್ಲಿ ಗಣಿಗಾರಿಕೆ ನಡೆಸುತ್ತಿದ್ದ ಓಬಳಾಪುರಂ ಕಂಪನಿಯು ಕಾನೂನುಬಾಹಿರವಾಗಿ ಗಣಿಗಾರಿಕೆ ನಡೆಸಿದೆ ಎಂದು ಆರೋಪಿಸಲಾಗಿತ್ತು. ಈ ಅಕ್ರಮ ಚಟುವಟಿಕೆಗಳಿಂದ ಪರಿಸರ ನಾಶ, ಸರ್ಕಾರ ಬೊಕ್ಕಷಕ್ಕೆ ನಷ್ಟ ಮಾಡಿತ್ತು.

ಅನಂತಪುರ ಜಿಲ್ಲೆಯ ಕರ್ನಾಟಕದ ಗಡಿಯಲ್ಲಿರುವ(ಬಳ್ಳಾರಿ) ಓಬಳಾಪುರಂನಲ್ಲಿ ನಡೆದ ಅಕ್ರಮ ಗಣಿಗಾರಿಕೆ ಪ್ರಕರಣವನ್ನು ಸಿಬಿಐ ತನಿಖೆ ನಡೆಸಿತ್ತು. ಈ ಪ್ರಕರಣದಲ್ಲಿ ಒಟ್ಟು ಒಂಬತ್ತು ಆರೋಪಿಗಳಿದ್ದಾರೆ. ಆರೋಪಿಯಾಗಿರುವ ಐಎಎಸ್ ಅಧಿಕಾರಿ ಶ್ರೀಲಕ್ಷ್ಮಿ ಅವರನ್ನು ಹೈಕೋರ್ಟ್ ಈಗಾಗಲೇ ಖುಲಾಸೆಗೊಳಿಸಿದೆ. ಈ ಆರೋಪಿಗಳಲ್ಲಿ ಒಬ್ಬ (ಲಿಂಗರೆಡ್ಡಿ) ಸಾವನ್ನಪ್ಪಿದ್ದಾನೆ. ಉಳಿದ ಏಳು ಜನರಲ್ಲಿ ಇಬ್ಬರಿಗೆ ಸಿಬಿಐ ನ್ಯಾಯಾಲಯ ಇದೀಗ ಕ್ಲೀನ್ ಚಿಟ್ ನೀಡಿದ್ದು, ಉಳಿದ ಐದು ಜನರನ್ನು ದೋಷಿಗಳು ಎಂದು ತೀರ್ಪು ನೀಡಿತು. ನ್ಯಾಯಾಲಯವು ಎಲ್ಲಾ 5 ಅಪರಾಧಿಗಳಿಗೆ 7 ವರ್ಷ ಜೈಲು ಶಿಕ್ಷೆ ಪ್ರಕಟಿಸಿತ್ತು.

Read More
Next Story