
ಒಂದು ರಾಷ್ಟ್ರ- ಒಂದು ಚುನಾವಣೆ ಹಾಸ್ಯಾಸ್ಪದ: ಕರ್ನಾಟಕ ಕಾಂಗ್ರೆಸ್
ನಮ್ಮ ಸಂವಿಧಾನ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಂದು ರಾಷ್ಟ್ರ, ಒಂದು ಚುನಾವಣೆ ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ. ಅವರು “ಆಪರೇಷನ್ ಕಮಲಕ್ಕೆ ಮೂಲದಾತರುಗಳಾದ ಬಿಜೆಪಿಯವರೇ ಒಂದು ರಾಷ್ಟ, ಒಂದು ಚುನಾವಣೆ ಎಂದು ಹೇಳುತ್ತಿರುವುದು ಹಾಸ್ಯಾಸ್ಪದ ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ಕುಮಾರಪಾರ್ಕ್ ಸರ್ಕಾರಿ ಅತಿಥಿ ಗೃಹದಲ್ಲಿ ಮಾಧ್ಯಮದವರನ್ನು ಉದ್ದೇಶಿಸಿ ಬುಧವಾರ ಮಾತನಾಡಿದ ಅವರು, “ಅನೇಕ ರಾಜ್ಯಗಳಲ್ಲಿ ಸರ್ಕಾರಗಳನ್ನು ಅಸ್ಥಿರಗೊಳಿಸಲು ಬಿಜೆಪಿಯವರು ಮುಂದಾಗಿದ್ದಾರೆ. ಪ್ರಾದೇಶಿಕ ಪಕ್ಷಗಳು ಬೆಳೆಯುತ್ತಿರುವುದನ್ನು ತಡೆಯಲು ಕೇಂದ್ರ ಬಿಜೆಪಿ ಸರ್ಕಾರ ಈ ಹುನ್ನಾರ ಮಾಡಿದೆ” ಎಂದರು.
“ದೇಶದಲ್ಲಿ ಎಲ್ಲಾ ಪಕ್ಷಗಳಿಗೂ ಅವಕಾಶ ಸಿಗಬೇಕು. ಈ ಹಿಂದೆಯೂ ಒಂದು ರಾಷ್ಡ್ರ, ಒಂದು ಚುನಾವಣೆ ವ್ಯವಸ್ಥೆ ನಮ್ಮಲ್ಲಿತ್ತು. ನಮ್ಮ ರಾಜ್ಯದಲ್ಲಿಯೂ ಒಟ್ಟಿಗೆ ಚುನಾವಣೆ ಮಾಡಲಾಯಿತು. ಆನಂತರ ಸಾಧ್ಯವಾಯಿಯೇ? ಆಗಲಿಲ್ಲ. ಏಕೆಂದರೆ ಒಂದಷ್ಟು ಸರ್ಕಾರಗಳು ಆರು ಹಾಗೂ ಮೂರು ತಿಂಗಳು ಮುಂಚಿತವಾಗಿ ಚುನಾವಣೆಗೆ ಹೋಗುತ್ತೇವೆ ಎಂದರು, ಒಂದಷ್ಟು ರಾಜ್ಯಗಳಲ್ಲಿ ಸರ್ಕಾರಗಳೇ ವಿಸರ್ಜನೆಗೊಂಡವು. ಹೀಗಿರುವಾಗ ಈ ವ್ಯವಸ್ಥೆಯನ್ನು ಜಾರಿಗೆ ತರಲು ಹೇಗೆ ಸಾಧ್ಯ?” ಎಂದರು.
ಮಹಿಳಾ ಮೀಸಲಾತಿ ಬಗ್ಗೆ ಮಾತನಾಡಲಿ
“ಬಿಜೆಪಿ ಈ ಪ್ರಯತ್ನ ಮಾಡುತ್ತಿರುವುದು ಸರಿಯಿಲ್ಲ. ಅಲ್ಲದೇ ಮೂರನೇ ಒಂದರಷ್ಟು ಬಹುಮತವು ಅವರಿಗಿಲ್ಲ. ಹೀಗಿರುವಾಗ ಕೇಂದ್ರ ಸರ್ಕಾರ ಸರ್ವಪಕ್ಷ ಸಭೆ ಕರೆದು ಒಮ್ಮತದ ಅಭಿಪ್ರಾಯ ಕೇಳಲಿ. ಇದರ ಹೊರತು ಇಂತಹ ಪ್ರಸ್ತಾವನೆಗಳು ವ್ಯರ್ಥ. ಮೊದಲು ಮಹಿಳಾ ಮೀಸಲಾತಿ ಬಗ್ಗೆ ಕ್ರಮ ತೆಗೆದುಕೊಳ್ಳಲಿ. ಕ್ಷೇತ್ರ ವಿಂಗಡಣೆಗೆ ಕ್ರಮ ತೆಗೆದುಕೊಳ್ಳಲಿ. ಒಂದು ಚುನಾವಣೆ ವಿಚಾರವಾಗಿ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಹಾಗೂ ಲೋಕಸಭಾ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ ಅವರ ಅರ್ಥಪೂರ್ಣವಾದ ಮಾತಿಗೆ ನಮ್ಮ ಒಮ್ಮತದ ಒಪ್ಪಿಗೆಯಿದೆ” ಎಂದರು.