
ಮಸಾಲೆ ದೋಸೆಗೆ ಫಿದಾ ಆದ ಇಟಲಿ ರಾಯಭಾರಿ
ನಾನು ಪ್ರತಿದಿನ ಮಸಾಲೆ ದೋಸೆ ತಿನ್ನಬಲ್ಲೆ": ಇಟಲಿ ರಾಜತಾಂತ್ರಿಕ ಅಧಿಕಾರಿಯ ಮನಗೆದ್ದ ಬೆಂಗಳೂರಿನ ದೋಸೆ!
ಇಟಾಲಿಯನ್ ಪಾಕಪದ್ಧತಿಯನ್ನು 2025ರ ಯುನೆಸ್ಕೋ ಪಟ್ಟಿಗೆ ಸೇರಿಸಲು ನಾಮನಿರ್ದೇಶನ ಮಾಡಲಾಗಿದೆ ಎಂದು ತಿಳಿಸಿದ ಅವರು, ನೆನಪು ಮತ್ತು ಭವಿಷ್ಯದ ನಡುವಿನ ಸೇತುವೆಯಾಗಿರುವ ಇಟಾಲಿಯನ್ ಆಹಾರವು ಕೇವಲ ರುಚಿ ಮಾತ್ರವಲ್ಲ, ಇದು ಆರೋಗ್ಯಕರ ಮತ್ತು ಪರಿಸರ ಸ್ನೇಹಿಯಾಗಿರಬೇಕು.
ಜಗತ್ತಿನಾದ್ಯಂತ ಪಿಜ್ಜಾ ಮತ್ತು ಪಾಸ್ತಾಗಳಿಗೆ ಹೆಸರಾಗಿರುವ ಇಟಲಿಯ ಖ್ಯಾತ ರಾಜತಾಂತ್ರಿಕ ಅಧಿಕಾರಿಯೊಬ್ಬರು, ಸಿಲಿಕಾನ್ ಸಿಟಿ ಬೆಂಗಳೂರಿನ ಸಾಂಪ್ರದಾಯಿಕ ರುಚಿಗೆ ಮನಸೋತಿದ್ದಾರೆ. ಇಟಾಲಿಯನ್ ಆಹಾರದ ಶ್ರೇಷ್ಠತೆಯನ್ನು ಸಾರುವ ವೇದಿಕೆಯಲ್ಲಿಯೇ ಅವರು ಬೆಂಗಳೂರಿನ 'ಮಸಾಲೆ ದೋಸೆ'ಯ ಗುಣಗಾನ ಮಾಡುವ ಮೂಲಕ ಕನ್ನಡಿಗರ ಪ್ರೀತಿಗೆ ಪಾತ್ರರಾಗಿದ್ದಾರೆ.
ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ 10ನೇ ಆವೃತ್ತಿಯ 'ಸೆಟ್ಟಿಮಾನಾ ಡೆಲ್ಲಾ ಕುಕಿನಾ ಇಟಾಲಿಯಾನಾ ನೆಲ್ ಮೊಂಡೋ' (ಇಟಾಲಿಯನ್ ಪಾಕಪದ್ಧತಿಯ ವಾರ) ಉದ್ಘಾಟನಾ ಸಮಾರಂಭದಲ್ಲಿ ಈ ಆಸಕ್ತಿದಾಯಕ ಘಟನೆ ನಡೆದಿದೆ. ಇಟಲಿಯ ಕಾನ್ಸಲ್ ಜನರಲ್ ಗಿಯಾಂಡೊಮೆನಿಕೋ ಮಿಲಾನೋ ಅವರು ಸಮಾರಂಭವನ್ನು ಉದ್ದೇಶಿಸಿ ಮಾತನಾಡುತ್ತಾ, ತಾನು ಬೆಂಗಳೂರಿನ ಐಕಾನಿಕ್ ತಿನಿಸು ದೋಸೆಯ ಗುಂಗಿನಲ್ಲಿ ಬಿದ್ದಿರುವುದಾಗಿ ಹೇಳಿಕೊಂಡಿದ್ದಾರೆ.
ದೋಸೆ ಪ್ರೇಮ ಮತ್ತು ಕರತಾಡನ
ತಮ್ಮ ಭಾಷಣದ ವೇಳೆ ಮಿಲಾನೋ ಅವರು, "ನಾನು ಪ್ರತಿದಿನ ಮಸಾಲೆ ದೋಸೆ ತಿನ್ನಬಲ್ಲೆ. ಇದು ಬೆಂಗಳೂರಿನಲ್ಲಿ ನನ್ನ ಅತ್ಯಂತ ನೆಚ್ಚಿನ ಉಪಹಾರ," ಎಂದು ಹೇಳುತ್ತಿದ್ದಂತೆಯೇ, ಸಭೆಯಲ್ಲಿದ್ದ ಪ್ರೇಕ್ಷಕರು ಮಾತನ್ನು ಹರ್ಷೋದ್ಗಾರದಿಂದ ಸ್ವಾಗತಿಸಿದರು. ಇಟಾಲಿಯನ್ ಪಾಕಪದ್ಧತಿಯ ಬಗ್ಗೆ ಮಾತನಾಡಲು ಬಂದ ಅತಿಥಿಯೊಬ್ಬರು, ಸ್ಥಳೀಯ ರುಚಿಗೆ ನೀಡಿದ ಈ ಗೌರವವು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಯಿತು.
ಆರೋಗ್ಯ ಮತ್ತು ಸಂಪ್ರದಾಯದ ಸಂಗಮ
ಇಟಲಿಯ ಜಾಗತಿಕ ಪಾಕಶಾಲೆಯ ಪರಂಪರೆಯನ್ನು ಎತ್ತಿಹಿಡಿಯುವ ಈ ವಾರ್ಷಿಕ ಆಚರಣೆಯು ಈ ಬಾರಿ 'ಸಂಪ್ರದಾಯ ಮತ್ತು ನಾವೀನ್ಯತೆ, ಆರೋಗ್ಯ ಮತ್ತು ಸುಸ್ಥಿರತೆ' ಎಂಬ ಧ್ಯೇಯವಾಕ್ಯದೊಂದಿಗೆ ನಡೆಯುತ್ತಿದೆ. ಈ ಕುರಿತು ವಿವರಿಸಿದ ಮಿಲಾನೋ, ಇಟಾಲಿಯನ್ ಪಾಕಪದ್ಧತಿಯು ಕೇವಲ ಹಳೆಯದನ್ನು ಉಳಿಸಿಕೊಳ್ಳುವುದಲ್ಲ, ಬದಲಾಗಿ ಮೂಲ ಪರಂಪರೆಗೆ ಧಕ್ಕೆ ಬಾರದಂತೆ ಹೊಸತನವನ್ನು ಮತ್ತು ಪ್ರಗತಿಪರ ಚಿಂತನೆಯನ್ನು ಮೈಗೂಡಿಸಿಕೊಳ್ಳುವ ಕಲೆಯಾಗಿದೆ ಎಂದು ಅಭಿಪ್ರಾಯಪಟ್ಟರು.
ವಿಶೇಷವೆಂದರೆ, ಇಟಾಲಿಯನ್ ಪಾಕಪದ್ಧತಿಯನ್ನು 2025ರ ಯುನೆಸ್ಕೋ ಪಾರಂಪರಿಕ ಪಟ್ಟಿಗೆ ಸೇರಿಸಲು ನಾಮನಿರ್ದೇಶನ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಮಾತನಾಡಿದ ಅವರು, ಆಹಾರವು ಕೇವಲ ನಾಲಿಗೆಯ ರುಚಿಗೆ ಸೀಮಿತವಾಗಬಾರದು. ಅದು ಗತಕಾಲದ ನೆನಪು ಮತ್ತು ಭವಿಷ್ಯದ ಜೀವನಶೈಲಿಯ ನಡುವಿನ ಸೇತುವೆಯಾಗಬೇಕು. ಜೊತೆಗೆ ಆರೋಗ್ಯಕರ ಮತ್ತು ಪರಿಸರ ಸ್ನೇಹಿಯಾಗಿರಬೇಕಾದ ಜವಾಬ್ದಾರಿಯನ್ನು ಇಟಾಲಿಯನ್ ಅಡುಗೆ ಪದ್ಧತಿ ಹೊಂದಿದೆ ಎಂದು ಪ್ರತಿಪಾದಿಸಿದರು.
ಮಿಚೆಲಿನ್ ಸ್ಟಾರ್ ಚೆಫ್ ಇಟಾಲೋ ಬಸ್ಸಿ ಆಗಮನ
ಈ ವಿಶೇಷ ಪಾಕಶಾಲೆ ತತ್ವಶಾಸ್ತ್ರವನ್ನು ಬೆಂಗಳೂರಿನ ಜನರಿಗೆ ಮತ್ತು ವಿದ್ಯಾರ್ಥಿಗಳಿಗೆ ಪರಿಚಯಿಸಲು, ಕಾನ್ಸುಲೇಟ್ ಜನರಲ್ ಅವರು ಅಂತರರಾಷ್ಟ್ರೀಯ ಖ್ಯಾತಿಯ 'ಮಿಚೆಲಿನ್-ಸ್ಟಾರ್' ಚೆಫ್ ಇಟಾಲೋ ಬಸ್ಸಿ ಅವರನ್ನು ನಗರಕ್ಕೆ ಆಹ್ವಾನಿಸಿದ್ದಾರೆ. ಚೆಫ್ ಬಸ್ಸಿ ಅವರು ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗೆ ಇಟಾಲಿಯನ್ ಅಡುಗೆಯ ಶಾಸ್ತ್ರೀಯ ತಂತ್ರಗಳು ಹಾಗೂ ಆಧುನಿಕ ಶೈಲಿಗಳ ಬಗ್ಗೆ ವಿಶೇಷ ಮಾಸ್ಟರ್‌ಕ್ಲಾಸ್ ನಡೆಸಲಿದ್ದಾರೆ. ಇದು ಹೋಟೆಲ್ ಮ್ಯಾನೇಜ್ಮೆಂಟ್ ವಿದ್ಯಾರ್ಥಿಗಳಿಗೆ ಜಾಗತಿಕ ಮಟ್ಟದ ಅಡುಗೆ ಕಲೆಯನ್ನು ಕಲಿಯಲು ಸುವರ್ಣಾವಕಾಶವಾಗಿದೆ.
ನಗರದಾದ್ಯಂತ ಇಟಾಲಿಯನ್ ಫುಡ್ ಟ್ರಯಲ್
ಡಿಸೆಂಬರ್ 1 ರಿಂದ ನಗರದಾದ್ಯಂತ ಆರಂಭಗೊಳ್ಳುವ 'ಇಟಾಲಿಯನ್ ಫುಡ್ ಟ್ರಯಲ್'ನೊಂದಿಗೆ ಈ ಸಂಭ್ರಮ ಮುಂದುವರಿಯಲಿದೆ. ಬೆಂಗಳೂರಿನ ಆಹಾರಪ್ರಿಯರಿಗಾಗಿ ಆಲ್ಟೋ ವಿನೋ, ಎಲ್'ಇಟಾಲಿಯಾ, ಚಿಯಾಂಟಿ, ಕಾಪ್ರೆಸ್, ಟೋಸ್ಕಾನೋ, ಮತ್ತು ಟಿ ಅಮೋ ಸೇರಿದಂತೆ ನಗರದ ಪ್ರಮುಖ ರೆಸ್ಟೋರೆಂಟ್‌ಗಳಲ್ಲಿ ವಿಶೇಷ ಮೆನು ಸಿದ್ಧಪಡಿಸಲಾಗಿದೆ.

