
IT Raid |ಪಿಇಎಸ್ ಶಿಕ್ಷಣ ಸಂಸ್ಥೆಗಳ ಮೇಲೆ ಐಟಿ ದಾಳಿ; ದಾಖಲೆಗಳ ಪರಿಶೀಲನೆ
ಹೊಸಕೆರೆಹಳ್ಳಿಯಲ್ಲಿರುವ ಪಿಇಎಸ್ ಕಾಲೇಜು ಸೇರಿದಂತೆ ಹಲವು ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಲಾಗಿದೆ.
ಬೆಂಗಳೂರಿನ ಪ್ರತಿಷ್ಠಿತ ಪಿಇಎಸ್ (PES) ಶಿಕ್ಷಣ ಸಂಸ್ಥೆಗಳ ಮೇಲೆ ಆದಾಯ ತೆರಿಗೆ (ಐಟಿ) ಇಲಾಖೆಯ ಅಧಿಕಾರಿಗಳು ಬುಧವಾರ ಬೆಳ್ಳಂಬೆಳಗ್ಗೆ ದಾಳಿ ನಡೆಸಿದ್ದಾರೆ. ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ ಹಾಗೂ ಹಣಕಾಸು ವ್ಯವಹಾರಗಳಲ್ಲಿನ ಅಕ್ರಮಗಳ ಆರೋಪದ ಮೇಲೆ ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.
ಮಂಗಳೂರು, ಚೆನ್ನೈ ಹಾಗೂ ಆಂಧ್ರಪ್ರದೇಶದಿಂದ ಆಗಮಿಸಿರುವ 200ಕ್ಕೂ ಹೆಚ್ಚು ಅಧಿಕಾರಿಗಳ ಬೃಹತ್ ತಂಡವು, ಬೆಂಗಳೂರಿನ ಹೊಸಕೆರೆಹಳ್ಳಿಯಲ್ಲಿರುವ ಪಿಇಎಸ್ ಯುನಿವರ್ಸಿಟಿ, ಎಲೆಕ್ಟ್ರಾನಿಕ್ ಸಿಟಿ ಕ್ಯಾಂಪಸ್, ಹನುಮಂತನಗರ ಕಾಲೇಜು ಸೇರಿದಂತೆ ಹಲವು ಕಡೆ ಏಕಕಾಲದಲ್ಲಿ ದಾಳಿ ನಡೆಸಿದೆ. ಇದರ ಜೊತೆಗೆ, ಆಂಧ್ರಪ್ರದೇಶದ ಕುಪ್ಪಂನಲ್ಲಿರುವ ಪಿಇಎಸ್ ವೈದ್ಯಕೀಯ ಕಾಲೇಜು, ಸಂಸ್ಥೆಯ ಸ್ಥಾಪಕರಾದ ದಿವಂಗತ ದೊರೆಸ್ವಾಮಿ ನಾಯ್ಡು ಅವರ ಬನಶಂಕರಿಯ ನಿವಾಸ ಹಾಗೂ ಅವರ ಸಂಬಂಧಿಕರ ಮನೆಗಳ ಮೇಲೂ ಶೋಧ ಕಾರ್ಯ ನಡೆಯುತ್ತಿದೆ.
ಆದಾಯ ತೆರಿಗೆ ಇಲಾಖೆಯ ಮೂಲಗಳ ಪ್ರಕಾರ, ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ ಮತ್ತು ತೆರಿಗೆ ವಂಚನೆಯ ಗಂಭೀರ ಆರೋಪಗಳ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ. ಅಧಿಕಾರಿಗಳು ಶಿಕ್ಷಣ ಸಂಸ್ಥೆಯ ಹಣಕಾಸು ವ್ಯವಹಾರಗಳು, ಅಭಿವೃದ್ಧಿ ಯೋಜನೆಗಳಿಗೆ ಮಾಡಲಾದ ಖರ್ಚು-ವೆಚ್ಚಗಳು, ಪೀಠೋಪಕರಣಗಳು ಮತ್ತು ಇತರ ಉಪಕರಣಗಳ ಖರೀದಿಯ ವಿವರಗಳು, ಹಾಗೂ ವಿದ್ಯಾರ್ಥಿಗಳಿಂದ ಸಂಗ್ರಹಿಸಿದ ಶುಲ್ಕ ಮತ್ತು ಅದರ ವಹಿವಾಟುಗಳಿಗೆ ಸಂಬಂಧಿಸಿದ ಕಡತಗಳನ್ನು ಕೂಲಂಕಷವಾಗಿ ಪರಿಶೀಲಿಸುತ್ತಿದ್ದಾರೆ.
ದಿವಂಗತ ಎಂ.ಆರ್. ದೊರೆಸ್ವಾಮಿ ನಾಯ್ಡು ಅವರು ಸ್ಥಾಪಿಸಿದ್ದ ಈ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯನ್ನು, ಕಳೆದ ಮಾರ್ಚ್‌ನಲ್ಲಿ ಅವರ ನಿಧನದ ನಂತರ, ಅವರ ಪುತ್ರ ಜವಾಹರ್ ದೊರೆಸ್ವಾಮಿ ಅವರು ನಿರ್ವಹಿಸುತ್ತಿದ್ದಾರೆ. ಅವರೇ ಈಗ ಸಂಸ್ಥೆಯ ಮುಖ್ಯಸ್ಥರಾಗಿದ್ದು, ಅವರನ್ನೂ ಅಧಿಕಾರಿಗಳು ವಿಚಾರಣೆಗೊಳಪಡಿಸುವ ಸಾಧ್ಯತೆಯಿದೆ.
ಇತ್ತೀಚೆಗಷ್ಟೇ ಬೆಂಗಳೂರಿನ ಪೋಥಿಸ್ ಬಟ್ಟೆ ಶೋರೂಮ್‌ಗಳ ಮೇಲೂ ಐಟಿ ದಾಳಿ ನಡೆದಿದ್ದು, ಇದೀಗ ಮತ್ತೊಂದು ದೊಡ್ಡ ದಾಳಿ ನಡೆದಂತಾಗಿದೆ. ಪಿಇಎಸ್ ಶಿಕ್ಷಣ ಸಂಸ್ಥೆಗಳ ಮೇಲಿನ ದಾಳಿ ಮುಂದುವರಿದಿದೆ.