
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ
ಜಾತಿ ಜನಗಣತಿ: ವಿಜಯೇಂದ್ರ ಆಕ್ರೋಶ; ಸಮಾಜ ಒಡೆಯುವ ದುರ್ದೈವ ಎಂದ ಬಿಜೆಪಿ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿಂದೂ ಸಮಾಜವನ್ನು ಒಡೆಯುವ ಕೆಲಸಕ್ಕೆ ಕೈ ಹಾಕಿರುವುದು ನಮ್ಮ ನಾಡಿನ ದುರ್ದೈವ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ ವಿಜಯೇಂದ್ರ ಅವರು ಟೀಕಿಸಿದ್ದಾರೆ.
ರಾಜ್ಯ ಸರ್ಕಾರದ ಜಾತಿ ಜನಗಣತಿ ನಡೆಸುವ ತೀರ್ಮಾನವು ಇದೀಗ ರಾಜ್ಯ ಹೈಕೋರ್ಟ್ ಮೆಟ್ಟಿಲೇರಿದ್ದು, ಈ ವಿಚಾರವಾಗಿ ಬಿಜೆಪಿ ರಾಜ್ಯ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ. "ರಾಜ್ಯದ ಅಭಿವೃದ್ಧಿ ಬಗ್ಗೆ ಚಿಂತಿಸಬೇಕಾದ ಮುಖ್ಯಮಂತ್ರಿಗಳು, ಅಧಿಕಾರವಿಲ್ಲದಿದ್ದರೂ ಸಮಾಜವನ್ನು ಒಡೆಯುವ ಹುಡುಗಾಟಿಕೆಗೆ ಕೈ ಹಾಕಿದ್ದಾರೆ. ಇದು ನಮ್ಮ ನಾಡಿನ ದುರ್ದೈವ," ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ಜಾತಿ ಜನಗಣತಿ ನಡೆಸುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ. ಆದರೂ, ಹಿಂದೂ ಸಮಾಜವನ್ನು ಒಡೆಯುವ ಕೆಲಸಕ್ಕೆ ಸರ್ಕಾರ ಮುಂದಾಗಿದೆ. ಇದನ್ನು ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ. ಜನರು ಮತ್ತು ಸಮಾಜ ಈಗ ಜಾಗೃತರಾಗಿದ್ದಾರೆ, ಹಿಂದೂ ಸಮಾಜವು ಇನ್ನಷ್ಟು ಜಾಗೃತವಾಗಬೇಕಿದೆ. ಈ ಪ್ರಕರಣ ಈಗಾಗಲೇ ನ್ಯಾಯಾಲಯದಲ್ಲಿದ್ದು, ತೀರ್ಪು ಏನಾಗಲಿದೆ ಎಂಬುದನ್ನು ನಾವು ಕಾದು ನೋಡುತ್ತೇವೆ," ಎಂದು ಹೇಳಿದರು.
ಜಿಎಸ್‌ಟಿ ಸುಧಾರಣೆ ಬಗ್ಗೆ ಮೆಚ್ಚುಗೆ
ಇದೇ ವೇಳೆ, ಜಿಎಸ್‌ಟಿ ಸುಧಾರಣೆಗಳ ಕುರಿತು ಮಾತನಾಡಿದ ವಿಜಯೇಂದ್ರ, "ಜಿಎಸ್‌ಟಿ ಸುಧಾರಣೆಯ ಮೂಲಕ ಜನಸಾಮಾನ್ಯರಿಗೆ ಪ್ರಯೋಜನ ಲಭಿಸಬೇಕೆಂಬುದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆಶಯವಾಗಿದೆ. ಇದರಲ್ಲಿನ ಸಣ್ಣಪುಟ್ಟ ಗೊಂದಲಗಳನ್ನು ನಿವಾರಿಸಲು ಕೇಂದ್ರ ಸರ್ಕಾರ ಗಮನ ಹರಿಸಲಿದೆ. ಜಿಎಸ್‌ಟಿ ಸರಳೀಕರಣದ ಲಾಭ ಜನರಿಗೆ ತಲುಪುವಂತೆ ಅದನ್ನು ಅನುಷ್ಠಾನಗೊಳಿಸಲಾಗುವುದು," ಎಂದು ತಿಳಿಸಿದರು.
ಐತಿಹಾಸಿಕ ದಿನ
ನಾಡಿನ ಜನತೆಗೆ ನವರಾತ್ರಿ ಹಬ್ಬದ ಶುಭಾಶಯ ಕೋರಿದ ಅವರು, "ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿ, ನವರಾತ್ರಿ ಶುಭಾಶಯ ಕೋರಿದ್ದಾರೆ. ಜೊತೆಗೆ, ಇಂದಿನಿಂದ ಜಾರಿಗೆ ಬಂದಿರುವ ಜಿಎಸ್‌ಟಿ ಸುಧಾರಣೆಯ ಅನುಷ್ಠಾನದ ವಿಚಾರವನ್ನೂ ತಿಳಿಸಿದ್ದಾರೆ. ಇದು ದೇಶದ ಪಾಲಿಗೆ ಒಂದು ಐತಿಹಾಸಿಕ ದಿನ," ಎಂದು ವಿಶ್ಲೇಷಿಸಿದರು.