
ಡಿ.ಕೆ. ಸುರೇಶ್ ಸೋಲಿಸಿದ್ದ ಸ್ವಾಮೀಜಿ! ತಪ್ಪು ಮರೆಮಾಚಲು ಡಿಕೆಶಿ ಸಿಎಂ ಆಗಬೇಕು ಎನ್ನುತ್ತಿದ್ದಾರೆ: ಸಚಿವ ರಾಜಣ್ಣ ಆರೋಪ
ʻʻಬೆಂಗಳೂರು ಗ್ರಾಮಾಂತರ ಲೋಕಸಭಾ ಚುನಾವಣೆಯಲ್ಲಿ ಡಿಕೆ ಸುರೇಶ್ ಅವರನ್ನು ಸೋಲಿಸಿದ್ದು ಇದೇ ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ಸ್ವಾಮೀಜಿಯಾದ ಶ್ರೀ ಚಂದ್ರಶೇಖರ ಸ್ವಾಮೀಜಿ, ಈಗ ಆ ತಪ್ಪನ್ನು ಮರೆಮಾಚಲು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಸಿಎಂ ಮಾಡಬೇಕೆಂದು ಹೇಳುತ್ತಿದ್ದಾರೆʼʼ ಎಂದು ಸಚಿವ ಕೆ.ಎನ್. ರಾಜಣ್ಣ ಅವರು ನೇರ ಆರೋಪ ಮಾಡಿದ್ದಾರೆ.
ತುಮಕೂರಿನಲ್ಲಿ ಮಾಧ್ಯಮಗಳೊದಂದಿಗೆ ಮಾತನಾಡಿರುವ ರಾಜಣ್ಣ, ʻʻಡಿಕೆಶಿಯವರ ಸಹೋದರ ಡಿಕೆ ಸುರೇಶ್ ಅವರು ಸೋಲಲು ಇದೇ ಸ್ವಾಮೀಜಿಯೇ ಕಾರಣ. ದೇವೇಗೌಡರು ಪ್ರಧಾನಿಯಾಗಿದ್ದಾಗ ಆದಿಚುಂಚನಗಿರಿ ಮಠಕ್ಕೆ ಪರ್ಯಾಯವಾಗಿ ಈ ಮಠವನ್ನು ನಿರ್ಮಾಣ ಮಾಡಲಾಗಿತ್ತು. ಈಗ ಶ್ರೀ ಚಂದ್ರೇಶೇಖರ ಸ್ವಾಮೀಜಿಯವರೇ ಈ ಮಠದ ಪೀಠಾಧ್ಯಕ್ಷರಾಗಿದ್ದಾರೆ. ಆ ಋಣ ಇವರ ಮೇಲಿದೆ. ಹಾಗಾಗಿಯೇ ಇವರು ಡಿಕೆ ಸುರೇಶ್ ವಿರುದ್ಧ ಚುನಾವಣೆಯಲ್ಲಿ ನಿಂತಿದ್ದ ಡಾ. ಮಂಜುನಾಥ್ ಅವರ ಗೆಲುವಿಗೆ ಶ್ರಮ ಹಾಕಿ ಗೆಲ್ಲಿಸಿದ್ದಾರೆ. ಆ ತಪ್ಪನ್ನು ಮುಚ್ಚಿಹಾಕಿಕೊಳ್ಳಲು ಈಗ ಎಲ್ಲರ ಮುಂದೆ ಡಿಕೆಶಿಯವರಿಗೆ ಮುಖ್ಯಮಂತ್ರಿ ಪಟ್ಟ ಕೊಡಿಸಲು ಪ್ರಯತ್ನಿಸುತ್ತಿದ್ದಾರೆ’’ ಎಂದು ನೇರವಾಗಿ ಆರೋಪಿಸಿದ್ದಾರೆ.
ʻʻನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮವನ್ನು ಎಲ್ಲರೂ ಆಸಕ್ತಿಯಿಂದ, ಶ್ರದ್ಧಾಭಕ್ತಿಯಿಂದ ಆಚರಣೆ ಮಾಡುತ್ತಿದ್ದರು. ಇಂತಹ ಸಂದರ್ಭದಲ್ಲಿ ರಾಜಕೀಯ ಎಲ್ಲಾ ಮಾತನಾಡುವುದು ಸ್ವಾಮೀಜಿಗೆ ಮಾತ್ರವಲ್ಲ, ಯಾರಿಗೂ ಶೋಭೆ ತರುವಂತಹದಲ್ಲ’’ ಎಂದು ಅವರು ಹೇಳಿದರು.
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯ ಬಗ್ಗೆ ಪರೋಕ್ಷವಾಗಿ ಕೂಗೆತ್ತಿದ್ದ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ,,ʻʻಸಿದ್ದರಾಮಯ್ಯ ಅವರು ಈ ಹಿಂದೆ ಹೇಳಿದಂತೆ, ʻಸಿದ್ದರಾಮಯ್ಯ ವಿಲ್ ಬಿ ದಿ ಲೀಡರ್ ಅಂಡ್ ಚೀಫ್ ಮಿನಿಸ್ಟರ್ ಆಫ್ ಕರ್ನಾಟಕ, ಡಿಕೆಶಿ ವಿಲ್ ಬಿ ದಿ ಅಲೋನ್ ಡಿಸಿಎಂ, ಡಿಕೆಶಿ ವಿಲ್ ಕಂಟಿನ್ಯೂ ಪ್ರೆಸಿಡೆಂಟ್ ಟಿಲ್ ದಿ ಪಾರ್ಲಿಮೆಂಟ್ ಎಲೆಕ್ಷನ್ʼ ಎಂದು ಹೇಳಿದ್ದರು. ಹಾಗಾಗಿ ಈಗ ಲೋಕಸಭಾ ಚುನಾವಣೆ ಮುಗಿದಿದೆ ಅದನ್ನು ಅವರಿಗೆ ಜ್ಞಾಪಿಸಿದೆ. ಅದು ನನ್ನ ಡಿಮ್ಯಾಂಡ್ ಅಲ್ಲ, ಆದರೆ ಇದರಲ್ಲಿ ನನ್ನ ಒತ್ತಾಯವೇನೂ ಇಲ್ಲ’’ ಎಂದು ಸ್ಪಷ್ಟನೆ ನೀಡಿದರು.