Prelude to IT-BT revolution in Kalaburagi, establishment of Agricultural Excellence Centre at a cost of Rs 50 crore - Priyank Kharge
x

ಸಚಿವ ಪ್ರಿಯಾಂಕ್‌ ಖರ್ಗೆ ಮಾತನಾಡಿದರು.

ಕಲಬುರಗಿಯಲ್ಲಿ ಐಟಿ-ಬಿಟಿ ಕ್ರಾಂತಿಗೆ ಮುನ್ನುಡಿ, 50 ಕೋಟಿ ರೂ. ವೆಚ್ಚದಲ್ಲಿ ಕೃಷಿ ಶ್ರೇಷ್ಠತಾ ಕೇಂದ್ರ ಸ್ಥಾಪನೆ - ಪ್ರಿಯಾಂಕ್ ಖರ್ಗೆ

ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (KDEM) ಮತ್ತು ಕೃಷಿಕಲ್ಪ ಸಂಸ್ಥೆಯ ಸಹಯೋಗದೊಂದಿಗೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ನವೋದ್ಯಮಗಳ ಬೆಳವಣಿಗೆಗೆ ಕೈಗೊಂಡಿರುವ ಕ್ರಮಗಳನ್ನು ಸಚಿವ ಪ್ರಿಯಾಂಕ್ ಖರ್ಗೆ ವಿವರಿಸಿದರು.


Click the Play button to hear this message in audio format

ಬೆಂಗಳೂರಿನ ಆಚೆಗೆ ಐಟಿ-ಬಿಟಿ ವಲಯವನ್ನು ವಿಸ್ತರಿಸುವ ಮಹತ್ವಾಕಾಂಕ್ಷೆಯ ಭಾಗವಾಗಿ, ರಾಜ್ಯ ಸರ್ಕಾರದ 'ಸ್ಥಳೀಯ ಆರ್ಥಿಕ ವೇಗವರ್ಧಕ ಕಾರ್ಯಕ್ರಮ' (LEAP) ಅಡಿಯಲ್ಲಿ ಕಲಬುರಗಿ ಸೇರಿದಂತೆ ರಾಜ್ಯದ ಆರು ಕಡೆಗಳಲ್ಲಿ ಬಲವರ್ಧನೆ ಕೇಂದ್ರಗಳನ್ನು ಸ್ಥಾಪಿಸಲು ಐಟಿ-ಬಿಟಿ ಇಲಾಖೆ ನಿರ್ಧರಿಸಿದೆ. ಇದರೊಂದಿಗೆ, ಕೃಷಿ ಸಂಸ್ಕರಣೆ ಮತ್ತು ಮೌಲ್ಯವರ್ಧನೆಗಾಗಿ ಕಲಬುರಗಿಯಲ್ಲಿ ಅಂದಾಜು 50 ಕೋಟಿ ರೂ. ವೆಚ್ಚದಲ್ಲಿ 'ಕೃಷಿ ಶ್ರೇಷ್ಠತಾ ಕೇಂದ್ರ'ವನ್ನು ಆರಂಭಿಸಲಾಗುವುದು ಎಂದು ಐಟಿ-ಬಿಟಿ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಘೋಷಿಸಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (KDEM) ಮತ್ತು ಕೃಷಿಕಲ್ಪ ಸಂಸ್ಥೆಯ ಸಹಯೋಗದೊಂದಿಗೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ನವೋದ್ಯಮಗಳ ಬೆಳವಣಿಗೆಗೆ ಕೈಗೊಂಡಿರುವ ಕ್ರಮಗಳನ್ನು ವಿವರಿಸಿದರು. ಈ ಯೋಜನೆಯಡಿ ಕಲ್ಯಾಣ ಕರ್ನಾಟಕದ ಯುವ ಉದ್ಯಮಿಗಳನ್ನು ಪ್ರೋತ್ಸಾಹಿಸಲು ಜಿಲ್ಲಾಡಳಿತವು 15,000 ಚದರ ಅಡಿ ವಿಸ್ತೀರ್ಣದ ಸಿದ್ಧ ಕಾರ್ಯಸ್ಥಳವನ್ನು ಒದಗಿಸುತ್ತಿದೆ. ಇಲ್ಲಿ ಗ್ರಾಮೀಣ ನಾವೀನ್ಯತೆ ಮತ್ತು ಉದ್ಯಮಶೀಲತೆಯನ್ನು ಉತ್ತೇಜಿಸಲು ಉತ್ಕೃಷ್ಟತಾ ಕೇಂದ್ರ ಹಾಗೂ ಯುವ ಮತ್ತು ಧ್ಯೇಯಚೇತನ (ವಿಕಲಚೇತನ) ಉದ್ಯಮಿಗಳಿಗೆ ತಮ್ಮ ಉತ್ಪನ್ನಗಳ ವಿನ್ಯಾಸ, ನಿರ್ಮಾಣ ಮತ್ತು ಜಾಗತಿಕ ಮಟ್ಟದ ಪರೀಕ್ಷೆಗಾಗಿ ಅತ್ಯಾಧುನಿಕ ಪ್ರೋಟೋಟೈಪಿಂಗ್ ಲ್ಯಾಬ್ ಸ್ಥಾಪನೆಯಾಗಲಿದೆ ಎಂದು ತಿಳಿಸಿದರು.

ನಾವಿನ್ಯತೆ ಒತ್ತು

ಕೃಷಿಕಲ್ಪ ಸಂಸ್ಥೆಯ ಸಿಇಒ ಸಿ.ಎಂ. ಪಾಟೀಲ್ ಮಾತನಾಡಿ, ಈ ಯೋಜನೆಯು ಕೃಷಿ ಮತ್ತು ಸಂಬಂಧಿತ ಕ್ಷೇತ್ರಗಳ ನಾವೀನ್ಯತೆಗೆ ಒತ್ತು ನೀಡಲಿದ್ದು, ಆರಂಭಿಕ ಹಂತದ ಉದ್ಯಮಿಗಳಿಗೆ ಮಾರ್ಗದರ್ಶನ, ಮಾರುಕಟ್ಟೆ ಪ್ರವೇಶ ಮತ್ತು ಆರ್ಥಿಕ ನೆರವು ಒದಗಿಸುವ ನಿಟ್ಟಿನಲ್ಲಿ ಸಂಸ್ಥೆ ಕಾರ್ಯನಿರ್ವಹಿಸಲಿದೆ ಎಂದರು. ಹುಬ್ಬಳ್ಳಿ ಮೂಲದವರಾದ ಅವರು, ಕಲಬುರಗಿ ಮತ್ತು ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಪ್ರಗತಿಪರ ಉದ್ಯಮಶೀಲ ವಾತಾವರಣ ನಿರ್ಮಿಸುವುದು ತಮ್ಮ ಗುರಿಯಾಗಿದ್ದು, 2026ರ ಜನವರಿಯಲ್ಲಿ ಈ ಯೋಜನೆಯ ಭವ್ಯ ಉದ್ಘಾಟನೆ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಇದೊಂದು ಕೇವಲ ಕಾರ್ಯಕ್ರಮವಲ್ಲದೆ ದೀರ್ಘಕಾಲೀನ ಬದ್ಧತೆಯಾಗಿದೆ. ಮುಂದಿನ ಪೀಳಿಗೆಗೆ ಸೃಜನಶೀಲ ಮತ್ತು ಭವಿಷ್ಯದ ಆರ್ಥಿಕತೆಗೆ ಪೂರಕವಾದ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು ಕಲ್ಯಾಣ ಕರ್ನಾಟಕದ ಜನರು ಒಗ್ಗೂಡಿ ಈ ಬದಲಾವಣೆಯ ಭಾಗವಾಗಬೇಕು ಎಂದು ಕರೆ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ಕೆಡಿಇಎಂ ಸಿಇಒ ಸಂಜೀವ್ ಗುಪ್ತಾ, ಶಾಸಕರಾದ ಅಲ್ಲಮಪ್ರಭು ಪಾಟೀಲ್, ಕನೀಜ್ ಫಾತಿಮಾ, ವಿಧಾನ ಪರಿಷತ್ ಸದಸ್ಯರಾದ ತಿಪ್ಪಣ್ಣಪ್ಪ ಕಮಕನೂರು, ಜಗದೇವ್ ಗುತ್ತೇದಾರ್, ಕುಡಾ ಅಧ್ಯಕ್ಷ ಮಜರ್ ಅಹಮದ್ ಖಾನ್, ಜೆಸ್ಕಾಂ ಅಧ್ಯಕ್ಷ ಪ್ರವೀಣ್ ಹರವಾಳ್, ಎನ್‌ಇಕೆಆರ್‌ಟಿಸಿ ಅಧ್ಯಕ್ಷ ಅರುಣ್ ಕುಮಾರ್ ಪಾಟೀಲ್, ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಮತ್ತಿತರರು ಉಪಸ್ಥಿತರಿದ್ದರು.

Read More
Next Story