
The Federal Exclusive: ಬೆಂಗಳೂರಿನಲ್ಲಿ ಚದರ ಅಡಿಗೆ 100 ರೂ. ಲಂಚ ಫಿಕ್ಸ್: ಐಟಿ ದಿಗ್ಗಜ ಟಿ.ವಿ. ಮೋಹನದಾಸ್ ಪೈ
ತಮಗಾದ ಅನುಭವಗಳನ್ನು ದ ಫೆಡರಲ್ ಕರ್ನಾಟಕಕ್ಕೆ ಹಂಚಿಕೊಂಡಿರುವ ಪೈ, RERA ಗೆ ಪ್ರತಿ ಚದರ ಅಡಿಗೆ 100 ರೂ ಲಂಚ, ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಲಂಚ, ಮನೆ ಕಟ್ಟಲು ಲಂಚ ಎಂದು ಆರೋಪಿಸಿದ್ದಾರೆ.
ಖ್ಯಾತ ಉದ್ಯಮಿ, ಐಟಿ ದಿಗ್ಗಜ ಟಿ.ವಿ. ಮೋಹನದಾಸ್ ಪೈ ಅವರಿಗೇ ಅಧಿಕಾರಿಗಳು ಲಂಚದ ಬೇಡಿಕೆಯಿಟ್ಟ ಸ್ಪೋಟಕ ವಿಚಾರ ಬಯಲಿಗೆ ಬಂದಿದೆ.
ಈ ಬಗ್ಗೆ ಪೈ ಅವರೇ ತಮಗಾದ ಕೆಲವು ಕೆಟ್ಟ ಅನುಭವಗಳನ್ನು ದ ಫೆಡರಲ್ ಕರ್ನಾಟಕಕ್ಕೆ ಹಂಚಿಕೊಂಡಿದ್ದಾರೆ. ರಿಯಲ್ ಎಸ್ಟೇಟ್‌ನಲ್ಲಿ RERA ಗೆ ಪ್ರತಿಚದರಡಿಗೆ 100 ರೂ ಲಂಚ, ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಲಂಚ, ಮನೆ ಕಟ್ಟಲು ಲಂಚ .. ಹೀಗೆ ಬೆಂಗಳೂರಿನ ಲಂಚಾವತಾರವನ್ನು ಎಳೆಎಳೆಯಾಗಿ ಬಿಡಿಸಿ ಹೇಳಿದ್ದಾರೆ.
ಬೆಂಗಳೂರಿನ ರಸ್ತೆ ಗುಂಡಿಗಳ ಮತ್ತು ಸಂಚಾರ ಅವ್ಯವಸ್ಥೆಯ ಬಗ್ಗೆ ಸರ್ಕಾರದ ಗಮನಸೆಳೆದು ಚರ್ಚೆಗೆ ಕಾರಣವಾಗಿದ್ದ ಮೋಹನದಾಸ್ ಪೈ, ದ ಫೆಡರಲ್ ಕರ್ನಾಟಕಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ತಮಗಾದ ಅನುಭವವನ್ನು ಹೇಳಿಕೊಂಡಿದ್ದು, ಸರ್ಕಾರಿ ಅಧಿಕಾರಿಗಳು ಲಂಚ ಕೇಳಿರುವ ಬಗ್ಗೆ ಮತ್ತು ಪ್ರತಿ ಹೆಜ್ಜೆಗೂ ಲಂಚ ಕೊಡಬೇಕಾದ ವ್ಯವಸ್ಥೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಚದರಡಿಗೆ 100 ರೂ ಲಂಚ ನಿಗದಿ
"ಲಂಚ ವ್ಯವಹಾರಗಳು ವ್ಯಾಪಕವಾಗಿ ನಡೆಯುತ್ತಿವೆ. ನೀವು ಹೋಗಿ ಚೆಕ್ ಮಾಡಿ. ರಿಯಲ್ ಎಸ್ಟೇಟ್ ನವರಿಗೆ ಕೇಳಿ ಎಷ್ಡು ಲಂಚಕೊಡುತ್ತೀರಾ? ಯಾರಿಗೆ ಕೊಡುತ್ತೀರಾ? ರೆರಾ(RERA)ಗೆ, ಮಾಲಿನ್ಯ ನಿಯಂತ್ರಣ ಮಂಡಳಿಗೆ ಎಷ್ಟು ಕೊಡುತ್ತೀರಾ ಅಂತಾ ಕೇಳಿ. ಆಗ ಗೊತ್ತಾಗುತ್ತದೆ," ಎಂದು ಪೈ ನೊಂದು ಹೇಳಿದ್ದಾರೆ."
"ರಿಯಲ್ ಎಸ್ಟೇಟ್ ನಲ್ಲಿ ಪ್ರತಿ ಚದರ ಅಡಿಗೆ 100 ರೂ ನಿಗದಿಪಡಿಸಿದ್ದಾರೆ. ರಿಯಲ್ ಎಸ್ಟೇಟ್ ಸ್ನೇಹಿತರು ನನಗೆ ಖುದ್ದು ಹೇಳಿದ್ದಾರೆ. ಪ್ಲಾನ್ ಅನುಮತಿಗೆ ವೆಬ್‌ಸೈಟಿನಲ್ಲಿ ಅಪ್‌ಲೋಡ್ ಮಾಡಿದರೆ ಅದು ಸ್ವೀಕಾರ ಆಗಲ್ಲ. ಶನಿವಾರದಂದು ಪೂನಾ ಕಂಪನಿಯವರು ಇದನ್ನು ಹ್ಯಾಂಡಲ್ ಮಾಡುತ್ತಿದ್ದು ಇಷ್ಡುದುಡ್ಡುಕೊಡಿ ಅಂತಾ ಕೇಳುತ್ತಿದ್ದಾರೆ. ರೆರಾ ಹೋಗಿ ನೋಡಿ, ಪ್ರತಿ ಅಪಾರ್ಟ್‌ಮೆಂಟಿಗೆ ಎಷ್ಟು ಲಂಚಕೊಡಬೇಕು ಅಂತಾ ಗೊತ್ತಾಗುತ್ತದೆ," ಎಂದು ನೇರವಾಗಿ ಮೋಹನದಾಸ್ ಪೈ ಆರೋಪಿಸಿದ್ದಾರೆ.
"ಹಿಂದಿನ ಬಿಜೆಪಿ ಸರ್ಕಾರದ ವೇಳೆ, ನಾನು ಮನೆ ಕಟ್ಟುತ್ತಿದ್ದೆ, ಆಗ 10 ಲಕ್ಷ ಲಂಚವನ್ನು ಅಧಿಕಾರಿಗಳು ಕೇಳಿದರು. ನಾನು ಕೇಳಿದೆ ಯಾಕೆ ಲಂಚ ಕೊಡಬೇಕು ಎಂದು. ಅದಕ್ಕೆ ಅಧಿಕಾರಿ, ನಾನು ದುಡ್ಡುಕೊಟ್ಟು ಹುದ್ದೆ ಪಡೆದಿದ್ದೇನೆ ಅಂತಾ ಹೇಳಿದರು. ನಾನು ಆಗ ಸಚಿವರಾಗಿದ್ದ ಅಶ್ವತ್ಥನಾರಾಯಣ ಅವರಿಗೆ ಮಾಹಿತಿ ನೀಡಿದೆ. ಆಗ ಅಶ್ವಥ್ ನಾರಾಯಣ ಅವರು ಅಧಿಕಾರಿಗಳಿಗೆ ಕರೆ ಮಾಡಿ ತರಾಟೆಗೆ ತೆಗೆದುಕೊಂಡರು," ಎಂದು ಸಂದರ್ಶನದಲ್ಲಿ ನೆನಪಿಸಿಕೊಂಡರು.
ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಹಣ ಬೇಡಿಕೆ
"ನನ್ನ ಕಂಪನಿಯ ವಾರ್ಷಿಕ ವರದಿಯನ್ನು ಮಾಲಿನ್ಯ ನಿಯಂತ್ರಣ ಮಂಡಳಿಗೆ ನೀಡಬೇಕು. ವರದಿ ತಗೊಬೇಕಾದರೆ 15 ಸಾವಿರ ರೂ. ಲಂಚವನ್ನು ಮಾಲಿನ್ಯ ನಿಯಂತ್ರಣ ಮಂಡಳಿಯವರು ಕೇಳಿದರು. ಈ ಬಗ್ಗೆ ವರದಿ ಸಲ್ಲಿಕೆ ಮಾಡಲು ಹೋದ ನನ್ನ ಸಿಬ್ಬಂದಿಗೆ ಲಂಚ ಕೇಳಿದ ಬಗ್ಗೆ ಮೆಸೇಜ್ ಮಾಡಿದ್ದಾರೆ," ಎಂದು ಗಂಭೀರ ಆರೋಪವನ್ನೂ ಪೈ ಮಾಡಿದ್ದಾರೆ.
20 ಲಕ್ಷ ಲಂಚ ಕೇಳಿದ್ದಾರೆ
"ನನ್ನ ಒಂದು ಕಂಪನಿಗೆ ಅಗ್ನಿಶಾಮಕ ಹಾಗು ಮಾಲಿನ್ಯ ನಿಯಂತ್ರಣ ಮಂಡಳಿಯ ಅನುಮತಿಗೆ 20 ಲಕ್ಷದವರೆಗೂ ಲಂಚ ಕೇಳಿದ್ದಾರೆ ಏನು ಮಾಡಬೇಕು ಹೇಳಿ. ಈ ದುಡ್ಡು ಎಲ್ಲಿಗೆ ಹೋಗುತ್ತದೆ ಯಾರಿಗೆ ಕೊಡುತ್ತಾರೆ?" ಎಂದು ಅವರು ಪ್ರಶ್ನಿಸಿದ್ದಾರೆ.
ಸರ್ಕಾರ ಮಟ್ಟದಲ್ಲಿ ಲಂಚದ ವ್ಯವಹಾರ ಜನಸಾಮಾನ್ಯರ ಮೇಲೆ ಯಾವ ರೀತಿ ಪರಿಣಾಮ ಬೀರುತ್ತಿದೆ? ತಾವೇ ಈ ಲಂಚ ವ್ಯವಸ್ಥೆಗೆ ಹೇಗೆ ಬಲಿಯಾಗಿದ್ದೆ ಎಂದು ಮೋಹನದಾಸ್ ಪೈ ಅವರು ವಿವರವಾಗಿ ಹೇಳಿರುವ ವಿಡಿಯೋ ಈ ಲಿಂಕ್‌ನಲ್ಲಿದೆ.