
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮಾತನಾಡಿದರು.
"ಯತೀಂದ್ರ ಸಿದ್ದರಾಮಯ್ಯ ಕಾಂಗ್ರೆಸ್ ಹೈಕಮಾಂಡೇ?": ರಾಜ್ಯ ಸರ್ಕಾರದ ವಿರುದ್ಧ ಬಿ.ವೈ. ವಿಜಯೇಂದ್ರ ವಾಗ್ದಾಳಿ
ಬೆಳಗಾವಿ ಅಧಿವೇಶನದಲ್ಲಿ ನಾಡಿನ ಜ್ವಲಂತ ಸಮಸ್ಯೆಗಳಾದ ರೈತರು, ಬಡವರು ಮತ್ತು ನೇಕಾರರ ಸಂಕಷ್ಟಗಳ ಬಗ್ಗೆ ಗಂಭೀರ ಚರ್ಚೆಯಾಗಬೇಕು ಎಂದು ಅಧಿವೇಶನ ಆರಂಭಕ್ಕೂ ಮುನ್ನವೇ ಮುಖ್ಯಮಂತ್ರಿಗಳ ಗಮನ ಸೆಳೆದಿದ್ದೆ ಎಂದು ಸ್ಮರಿಸಿದರು.
ಮುಖ್ಯಮಂತ್ರಿ ಹುದ್ದೆಗಾಗಿ ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ಆಂತರಿಕ ಪೈಪೋಟಿಯಿಂದಾಗಿ ರಾಜ್ಯದಲ್ಲಿ ಆಡಳಿತ ಯಂತ್ರ ಸಂಪೂರ್ಣವಾಗಿ ಕುಸಿದುಬಿದ್ದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಗಂಭೀರ ಆರೋಪ ಮಾಡಿದ್ದಾರೆ. "ಮುಖ್ಯಮಂತ್ರಿ ಕುರ್ಚಿಗಾಗಿ ನಡೆಯುತ್ತಿರುವ ಈ ಕಿತ್ತಾಟ ಸದ್ಯಕ್ಕೆ ಬಗೆಹರಿಯುವ ಲಕ್ಷಣ ಕಾಣುತ್ತಿಲ್ಲ. ಹೀಗಿರುವಾಗ ಯಾವ ಪುರುಷಾರ್ಥಕ್ಕೆ ಅಧಿವೇಶನ ನಡೆಸುತ್ತೀರಿ? ಸಾಧ್ಯವಾದರೆ ಮುಂದೂಡಿ ಎಂದು ಮೊದಲೇ ಸಲಹೆ ನೀಡಿದ್ದೆ," ಎಂದು ಅವರು ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು.
ಶನಿವಾರ ಶಿವಮೊಗ್ಗದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗಾವಿ ಅಧಿವೇಶನದಲ್ಲಿ ನಾಡಿನ ಜ್ವಲಂತ ಸಮಸ್ಯೆಗಳಾದ ರೈತರು, ಬಡವರು ಮತ್ತು ನೇಕಾರರ ಸಂಕಷ್ಟಗಳ ಬಗ್ಗೆ ಗಂಭೀರ ಚರ್ಚೆಯಾಗಬೇಕು ಎಂದು ಅಧಿವೇಶನ ಆರಂಭಕ್ಕೂ ಮುನ್ನವೇ ಮುಖ್ಯಮಂತ್ರಿಗಳ ಗಮನ ಸೆಳೆದಿದ್ದೆ ಎಂದು ಸ್ಮರಿಸಿದರು.
"ಯತೀಂದ್ರರೇ ಹೈಕಮಾಂಡ್ ಆಗಿದ್ದಾರಾ?"
ಕಾಂಗ್ರೆಸ್‌ನಲ್ಲಿನ ನಾಯಕತ್ವದ ಗೊಂದಲವನ್ನು ಪ್ರಸ್ತಾಪಿಸಿದ ವಿಜಯೇಂದ್ರ, "ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೈಕಮಾಂಡ್ ಹೇಳಿದಂತೆ ಕೇಳುತ್ತೇನೆ ಎನ್ನುತ್ತಾರೆ. ಆದರೆ, ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರೇ ಬೆಂಗಳೂರಿಗೆ ಬಂದಾಗ ನಿಸ್ಸಹಾಯಕರಂತೆ ಮಾತನಾಡುತ್ತಾರೆ. ಇತ್ತ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಅವರು, ತಮ್ಮ ತಂದೆಯೇ ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿರುತ್ತಾರೆ ಎಂದು ಹೇಳಿಕೆ ನೀಡುತ್ತಾರೆ. ಹಾಗಾದರೆ, ಕಾಂಗ್ರೆಸ್‌ನ ಹೈಕಮಾಂಡ್ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಮತ್ತು ಖರ್ಗೆಯವರೋ ಅಥವಾ ಯತೀಂದ್ರ ಸಿದ್ದರಾಮಯ್ಯ ಅವರೋ?" ಎಂದು ಖಾರವಾಗಿ ಪ್ರಶ್ನಿಸಿದರು.
"ಈ ಪ್ರಶ್ನೆಯನ್ನು ನಾನಷ್ಟೇ ಅಲ್ಲ, ಕಾಂಗ್ರೆಸ್‌ನ ಶಾಸಕರೇ ಕೇಳುತ್ತಿದ್ದಾರೆ. ಈ ಆಂತರಿಕ ಗೊಂದಲದಿಂದಾಗಿ ರಾಜ್ಯದಲ್ಲಿ ಅಭಿವೃದ್ಧಿ ಸಂಪೂರ್ಣವಾಗಿ ಸ್ಥಗಿತಗೊಂಡಿದೆ," ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದರು.
ಸಚಿವರಿಗೆ ವಿಪಕ್ಷಗಳ ಮಾತು ಕೇಳುವ ವ್ಯವಧಾನವಿಲ್ಲ
"ಕಾಂಗ್ರೆಸ್ ನಾಯಕರು ಮೊದಲು ತಮ್ಮ ನಾಯಕತ್ವದ ಸಮಸ್ಯೆಯನ್ನು ಬಗೆಹರಿಸಿಕೊಂಡು ನಂತರ ಅಧಿವೇಶನ ನಡೆಸಲಿ. ಆಗ ಮಾತ್ರ ರಾಜ್ಯದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದು ನಾವು ಮೊದಲೇ ಹೇಳಿದ್ದೆವು. ಆದರೆ ಆಡಳಿತ ಪಕ್ಷದ ಸಚಿವರಿಗೆ ವಿರೋಧ ಪಕ್ಷದ ನಾಯಕರ ಮಾತುಗಳನ್ನು ಆಲಿಸುವ ಅಥವಾ ಜನರ ಸಮಸ್ಯೆಗಳಿಗೆ ಸ್ಪಂದಿಸುವ ವ್ಯವಧಾನವೇ ಇಲ್ಲದಿರುವುದು ನಿಜಕ್ಕೂ ದುರ್ದೈವ," ಎಂದು ವಿಜಯೇಂದ್ರ ಟೀಕಿಸಿದರು.
ಸಿಎಂ-ಡಿಸಿಎಂ ನಡುವೆ ಕತ್ತಿ ಮಸೆತ
"ಕಳೆದ ಎರಡು ವರ್ಷಗಳಿಂದ ಒಗ್ಗಟ್ಟಿನ ಮಂತ್ರ ಜಪಿಸುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈಗ ಪರಸ್ಪರ ಕತ್ತಿ ಮಸೆಯುತ್ತಿದ್ದಾರೆ. ಇದರ ನೇರ ಪರಿಣಾಮ ರಾಜ್ಯದ ಆಡಳಿತದ ಮೇಲೆ ಆಗುತ್ತಿದೆ. ಮುಖ್ಯಮಂತ್ರಿ ಹುದ್ದೆಯ ವಿಚಾರ ಅವರ ಆಂತರಿಕ ವಿಷಯವಲ್ಲ, ಅವರು ಇಡೀ ರಾಜ್ಯಕ್ಕೆ ಮುಖ್ಯಮಂತ್ರಿ," ಎಂದು ವಿಶ್ಲೇಷಿಸಿದರು.
ರೈತರ ಸಮಸ್ಯೆಗಳಿಗೆ ಸ್ಪಂದಿಸದ ಸರ್ಕಾರ
ರಾಜ್ಯ ಸರ್ಕಾರದ ರೈತ ವಿರೋಧಿ ನೀತಿಗಳ ಬಗ್ಗೆ ಮಾತನಾಡಿದ ಅವರು, "ಕಬ್ಬು ಬೆಳೆಗಾರರ ಸಮಸ್ಯೆ ಇತ್ಯರ್ಥವಾಗಿಲ್ಲ. ಮೆಕ್ಕೆಜೋಳ ಬೆಳೆಗಾರರು ಖರೀದಿ ಕೇಂದ್ರ ಆರಂಭಿಸುವಂತೆ ಒತ್ತಾಯಿಸುತ್ತಿದ್ದರೂ ಸರ್ಕಾರ ಸ್ಪಂದಿಸುತ್ತಿಲ್ಲ. ಕೇಂದ್ರ ಸರ್ಕಾರ 2,400 ರೂ. ಬೆಂಬಲ ಬೆಲೆ ನಿಗದಿಪಡಿಸಿದ್ದರೂ, ರೈತರು ಕೇವಲ 1,600-1,700 ರೂ.ಗಳಿಗೆ ದಲ್ಲಾಳಿಗಳಿಗೆ ಮಾರಾಟ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ," ಎಂದು ಆರೋಪಿಸಿದರು.
"ಬೆಳೆ ಪರಿಹಾರ ಘೋಷಿಸಿ ಮೂರು ತಿಂಗಳಾದರೂ ಸಂತ್ರಸ್ತರಿಗೆ ತಲುಪಿಲ್ಲ. ಭೀಕರ ಮಳೆಯಿಂದಾಗಿ ರಾಜ್ಯದ ರಸ್ತೆಗಳು ಗುಂಡಿಗಳಿಂದ ತುಂಬಿಹೋಗಿವೆ. ಅಭಿವೃದ್ಧಿ ಶೂನ್ಯವಾಗಿದೆ ಮತ್ತು ಭ್ರಷ್ಟಾಚಾರ ಮಿತಿ ಮೀರಿದೆ," ಎಂದು ಅವರು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

