
ದ ಫೆಡರಲ್ ಸಂವಾದ | ಗ್ಯಾರಂಟಿ ಯೋಜನೆಗಳಿಂದ ಹಾದಿ ತಪ್ಪುತ್ತಿದೆಯಾ ರಾಜ್ಯದ ಆರ್ಥಿಕ ಸ್ಥಿತಿ?
ಜನಪ್ರಿಯ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಆರ್ಥಿಕ ಶಿಸ್ತು ಹಾದಿ ತಪ್ಪುತ್ತಿದೆಯಾ? ಇಂಥದ್ದೊಂದು ಚರ್ಚೆ ಇದೀಗ ರಾಜ್ಯದೆಲ್ಲೆಡೆ ಇದೆ. ಗ್ಯಾರಂಟಿ ಯೋಜನೆಗಳಿಗೆ ಸಂಬಂಧಿಸಿದಂತೆ ರಾಜಕೀಯ ಪಕ್ಷಗಳಲ್ಲಿಯೇ ಒಮ್ಮತದ ಅಭಿಪ್ರಾಯ ಇಲ್ಲ.
ಜನಪ್ರಿಯ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಆರ್ಥಿಕ ಶಿಸ್ತು ಹಾದಿ ತಪ್ಪುತ್ತಿದೆಯಾ? ಇಂಥದ್ದೊಂದು ಚರ್ಚೆ ಇದೀಗ ರಾಜ್ಯದೆಲ್ಲೆಡೆ ಇದೆ.
ಗ್ಯಾರಂಟಿ ಯೋಜನೆಗಳಿಗೆ ಸಂಬಂಧಿಸಿದಂತೆ ರಾಜಕೀಯ ಪಕ್ಷಗಳಲ್ಲಿಯೇ ಒಮ್ಮತದ ಅಭಿಪ್ರಾಯ ಇಲ್ಲ. ಈ ಯೋಜನೆಗಳಿಂದ ರಾಜ್ಯಗಳ ಆರ್ಥಿಕ ಶಿಸ್ತು ಹಾಳಾಗುತ್ತದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ್ ಹೇಳಿದ್ದರು. ಆದರೆ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಗ್ಯಾರಂಟಿ ಯೋಜನೆಗಳನ್ನು ಮುಂದಿಟ್ಟುಕೊಂಡೆ ಬಿಜೆಪಿ ಚುನಾವಣೆ ಎದುರಿಸಿದೆ ಎಂಬುದೂ ಸುಳ್ಳಲ್ಲ. ಹೀಗಾಗಿ ಜೊತೆಗೆ ನಾವು ಮಾಡಿದರೆ ಸರಿ, ಬೇರೆಯವರು ಮಾಡಿದರೆ ಅದು ತಪ್ಪು ಎನ್ನುವ ಭಾವನೆ ರಾಜಕಾರಣಿಗಳಲ್ಲಿ ಕಂಡು ಬರುತ್ತದೆ.
ಗ್ಯಾರಂಟಿ ಯೋಜನೆಗಳಿಂದ ಆರ್ಥಿಕ ಶಿಸ್ತು ಹಾಳಾಗುತ್ತಿದೆ ಎಂದು ರಾಜ್ಯ ಬಿಜೆಪಿ ವಕ್ತಾರ ಬಿ.ವಿ. ಗಣೇಶ್ ಪ್ರತಿಪಾದಿಸಿದ್ದಾರೆ. ಆದರೆ ಕೇಂದ್ರ ಸರ್ಕಾರ ರಾಜ್ಯದ ಪಾಲಿನ ತೆರಿಗೆ ಹಣವನ್ನು ಕೊಡದೇ ಇರುವುದರಿಂದ ಆರ್ಥಿಕ ಕೊರತೆ ಕಂಡು ಬಂದಿದೆ. ಗ್ಯಾರಂಟಿ ಯೋಜನೆಗಳಿಂದ ಯಾವುದೇ ತೊಂದರೆ ಆಗಿಲ್ಲ ಎಂದು ಕೆಪಿಸಿಸಿ ವಕ್ತಾರ ಎ.ಎನ್. ನಟರಾಜ್ ಗೌಡ ಅವರು ಬಿಜೆಪಿ ಆರೋಪಕ್ಕೆ ಪ್ರತ್ಯುತ್ತರ ಕೊಟ್ಟಿದ್ದಾರೆ. ‘ದ ಫೆಡರಲ್ ಕರ್ನಾಟಕ’ದ ಸಂವಾದದಲ್ಲಿ ಭಾಗವಹಿಸಿ ಇಬ್ಬರೂ ಗಣ್ಯರು ತಮ್ಮ ಅಭಿಪ್ರಾಯ ಹಂಚಿಕೊಂಡರು.
ರಾಜ್ಯದ ಗ್ಯಾರಂಟಿ ಯೋಜನೆಗಳಾದ ಗೃಹಲಕ್ಷ್ಮಿ, ಗೃಹಜ್ಯೋತಿ, ಯುವನಿಧಿ, ಅನ್ನಭಾಗ್ಯ ಹಾಗೂ ಶಕ್ತಿ ಯೋಜನೆಗಳಿಂದ ನಾಡಿನ ಜನರಿಗೆ ಸಹಾಯವಾಗುತ್ತಿದೆ. ಈ ಯೋಜನೆಗಳನ್ನು ರಾಜ್ಯ ಸರ್ಕಾರ ನಿಲ್ಲಿಸುವುದಿಲ್ಲ. ಗ್ಯಾರಂಟಿ ಯೋಜನೆಗಳು ಸರಿಯಲ್ಲ ಎನ್ನುವುದಾದರೆ? ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ‘ಮೋದಿ ಕಾ ಗ್ಯಾರಂಟಿ’ ಕೊಟ್ಟಿದ್ಯಾಕೆ? ಎಂದು ಕೆಪಿಸಿಸಿ ವಕ್ತಾರ ಎ.ಎನ್. ನಟರಾಜ್ ಗೌಡ ಚರ್ಚೆಯಲ್ಲಿ ಪ್ರತಿಪಾದಿಸಿದರು.
ಯಾವುದೇ ಪಕ್ಷವಿರಲಿ ಇಂತಹ ಯೋಜನೆಗಳ ಭರವಸೆ ಕೊಡುವುದು ಸರಿಯಲ್ಲ. ಆದರೆ ನಮ್ಮ ಪಕ್ಷ ಕೂಡ ದೆಹಲಿ ಚುನಾವಣೆಯಲ್ಲಿ ಗ್ಯಾರಂಟಿಗಳ ಭರವಸೆ ನೀಡಿತ್ತು. ಅದಕ್ಕೆ ಕಾರಣ ಕಾಂಗ್ರೆಸ್ ಹಾಗೂ ಆಮ್ ಆದ್ಮಿ ಪಾರ್ಟಿ. ಅವುಗಳು ಗ್ಯಾರಂಟಿ ಭರವಸೆಗಳನ್ನು ಕೊಟ್ಟಿದ್ದರಿಂದ ನಾವೂ ಅಂತಹ ವಿಷಯಗಳನ್ನು ಪ್ರಣಾಳಿಕೆಯಲ್ಲಿ ಸೇರಿಸಬೇಕಾಯಿತು. ಇದು ನೀವು ರೋಮ್ನಲ್ಲಿರುವಾಗ ರೋಮನ್ನರಂತೆಯೆ ಇರಬೇಕು ಎಂಬುದಕ್ಕೆ ಉದಾಹರಣೆ ಎಂದು ರಾಜ್ಯ ಬಿಜೆಪಿ ವಕ್ತಾರ ಬಿ.ವಿ. ಗಣೇಶ ಗ್ಯಾರಂಟಿ ಯೋಜನೆಗಳಿಗೆ ವಿರೋಧ ವ್ಯಕ್ತಪಡಿಸಿದರು.
ಇನ್ನು ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳ ಕುರಿತು ನೋಡುವುದಾದರೆ ಪರಿಸ್ಥಿತಿ ಭಿನ್ನವಾಗಿದೆ. ಗ್ಯಾರಂಟಿ ಯೋಜನೆಗಳ ಕುರಿತು ರಾಜ್ಯ ಸರ್ಕಾರ ಹೇಳುತ್ತಿರುವುದು ಏನೇ ಇದ್ದರೂ ಆರ್ಥಿಕ ಹೊರೆ ಆಗಿದೆ ಎಂಬುದನ್ನು ತಳ್ಳಿಹಾಕುವಂತಿಲ್ಲ. ಇದಕ್ಕೆ ಕಳೆದ 3 ತಿಂಗಳುಗಳಿಂದ ಗೃಹಲಕ್ಷ್ಮೀ ಯೋಜನೆಯ ಹಣ ಫಲಾನುಭವಿಗಳಿಗೆ ಸಂದಾಯವಾಗದಿರುವುದು, ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಕಳೆದ 5 ತಿಂಗಳುಗಳಿಂದ ಹಣ ಸಂದಾಯ ಮಾಡುವುದಕ್ಕೆ ಹರಸಾಹಸ ಪಡುತ್ತಿರುವುದು ಸಾಕ್ಷಿಯಾಗಿದೆ.
ಒಟ್ಟು 1.5 ಕೋಟಿ ಮಹಿಳೆಯರು ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಾಗಿದ್ದು, ಮಾಸಿಕವಾಗಿ 2.5 ಸಾವಿರ ಕೋಟಿ ರೂ.ಗಳಷ್ಟು ಹಣವನ್ನು ಅವರಿಗೆ ಸಂದಾಯ ಮಾಡಬೇಕಾಗಿದೆ. ಆದರೆ ಕಳೆದ 3 ತಿಂಗಳುಗಳಿಂದ ಅವರಿಗೆ ಹಣ ಸಂದಾಯವಾಗಿಲ್ಲ. ಒಟ್ಟು 7,517 ಕೋಟಿ ರೂ. ಭಾಗ್ಯಲಕ್ಷ್ಮಿ ಹಣವನ್ನು ಸರ್ಕಾರ ಬಾಕಿ ಉಳಿಸಿಕೊಂಡಿದೆ. ಇನ್ನು ಅನ್ನಭಾಗ್ಯ ಯೋಜನೆಯ ಸ್ಥಿತಿ ಕೂಡ ಇದಕ್ಕಿಂತ ಭಿನ್ನವಾಗಿಲ್ಲ. ಕಳೆದ 5 ತಿಂಗಳುಗಳಿಂದ ಅನ್ನಭಾಗ್ಯ ಯೋಜನೆಯ ಹಣವನ್ನು ಸರ್ಕಾರ ಬಿಡುಗಡೆ ಮಾಡಿಲ್ಲ ಎಂಬ ಮಾಹಿತಿಯಿದೆ.
ಜೊತೆಗೆ ಹಲವು ಯೋಜನೆಗಳ ಅನುದಾನವನ್ನು ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಳ್ಳುತ್ತಿದೆ ಎಂಬ ಆರೋಪಗಳೂ ಇವೆ. ಇದೇ ವಿಷಯದ ಮೇಲೆ ‘ದ ಫೆಡರಲ್ ಕರ್ನಾಟಕ’ ನಡೆಸಿದ ಸಂದರ್ಶನದ ಪೂರ್ಣ ವಿಡಿಯೋ ಇಲ್ಲಿದೆ.