BNS 85 | ಮಹಿಳೆಯರಿಗೆ ಪೂರಕ, ಪುರುಷರಿಗೆ ಮಾರಕವೇ? : ಒಂದು ಚರ್ಚೆ
ಅತುಲ್ ಸುಭಾಷ್ ಆತ್ಮಹತ್ಯೆ ಬೆನ್ನಲ್ಲೇ ವರದಕ್ಷಿಣೆ ಹಾಗೂ ಕೌಟುಂಬಿಕ ದೌರ್ಜನ್ಯ ವಿರೋಧಿ ಕಾನೂನು ಬದಲಾಗಬೇಕು ಎಂಬ ಕೂಗೆದ್ದಿದೆ. ಈ ಹಿನ್ನೆಲೆಯಲ್ಲಿ 'ದ ಫೆಡರಲ್ ಕರ್ನಾಟಕ' ನಡೆಸಿದ ವಿಶೇಷ ಚರ್ಚೆಯ ಸಾರಾಂಶ ಇಲ್ಲಿದೆ.
ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣ ರಾಷ್ಟ್ರದಾದ್ಯಂತ ಚರ್ಚೆಗೆ ಕಾರಣವಾಗಿದೆ. ವರದಕ್ಷಿಣೆ ಕಿರುಕುಳಕ್ಕೆ ಸಂಬಂಧಿಸಿದ ಐಪಿಸಿ ಸೆಕ್ಷನ್ 498 ಎ (ಭಾರತೀಯ ನ್ಯಾಯ ಸಂಹಿತೆ 85) ದುರುಪಯೋಗವಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಅಲ್ಲದೇ ಕೌಟುಂಬಿಕ ದೌರ್ಜನ್ಯ ಕಾಯ್ದೆ, ವರದಕ್ಷಿಣೆ ಕಿರುಕುಳದ 498ಎ ಸೆಕ್ಷನ್ ತಿದ್ದುಪಡಿ ತರಬೇಕೆಂಬ ಕೂಗು ಸಹ ಕೇಳಿಬರುತ್ತಿದೆ. ಆದರೆ, ಇಂತಹ ಆಗ್ರಹಗಳಿಗೆ ಮಹಿಳೆಯರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಅತುಲ್ ಸುಭಾಷ್ ಆತ್ಮಹತ್ಯೆ ಬೆನ್ನಲ್ಲೇ ಬೆಂಗಳೂರಿನ ಇಕೋಸ್ಪೇಸ್ ಸೇರಿದಂತೆ ಹಲವು ಐಟಿ ಕಂಪನಿಗಳ ಉದ್ಯೋಗಿಗಳು ಪ್ರತಿಭಟನೆ ನಡೆಸಿ, ಮಹಿಳಾ ಕೇಂದ್ರೀತ ಕಾನೂನುಗಳ ಪರಿಷ್ಕರಣೆಗೆ ಒತ್ತಾಯಿಸಿದ್ದಾರೆ. ಕೌಟುಂಬಿಕ ದೌರ್ಜನ್ಯ ಕಾನೂನುಗಳು ಪುರುಷರ ಮೇಲಿನ ದೌರ್ಜನ್ಯಕ್ಕೆ ಅಸ್ತ್ರವಾಗಿವೆ. ಇದರಿಂದ ಪುರುಷರು ಮಾನಸಿಕವಾಗಿ ಕುಗ್ಗಿ ಹೋಗುತ್ತಿದ್ದು, ಆತ್ಮಹತ್ಯೆ ದಾರಿ ಹಿಡಿದಿದ್ದಾರೆ. ಹಾಗಾಗಿ ಕಾನೂನು ಬದಲಾವಣೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಮಹಿಳೆಯರಂತೆ ಪುರುಷರಿಗೂ ಇಂಥ ಕಾನೂನುಗಳು ಅಗತ್ಯ. ವರದಕ್ಷಿಣೆ ಕಾನೂನು ಹೆಚ್ಚು ದುರುಪಯೋಗವಾಗುತ್ತಿದೆ. ಈ ಕಾನೂನಿಗೆ ತಿದ್ದುಪಡಿ ತರಬೇಕೆಂಬುದು ಕಾರ್ಪೊರೇಟ್ ವಲಯದ ಉದ್ಯೋಗಿಗಳ ಬೇಡಿಕೆಯಾಗಿದೆ. ಲಿಂಗ ಆಧಾರಿತ ಕಾನೂನಿಂದಾಗಿ ಇಂದು ಪುರುಷರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಆದರೆ, ನಿಜವಾಗಿಯೂ ಕೌಟುಂಬಿಕ ದೌರ್ಜನ್ಯ ಕಾನೂನು ದುರ್ಬಳಕೆ ಆಗುತ್ತಿದೆಯಾ? ಮಜಿಳಾ ಪರವಾದ ಕಾನೂನಿಗೆ ತಿದ್ದುಪಡಿ ಅಗತ್ಯವಿದೆಯೇ ಎಂಬ ಚರ್ಚೆ ಜೋರು ನಡೆಯುತ್ತಿದೆ.
ಪುರುಷ ಪ್ರಧಾನ ಸಮಾಜ ಬೇಡಿಕೆಗೆ ತಿರುಗೇಟು ನೀಡಿರುವ ಹಲವು ಮಹಿಳಾ ಚಿಂತಕರು, ಕೋಟ್ಯಂತರ ಮಹಿಳೆಯರ ಮೇಲೆ ನಿತ್ಯ ನಡೆಯುವ ದೌರ್ಜನ್ಯ ತಡೆಗಾಗಿ ಸರ್ಕಾರ ಕಾನೂನು ರೂಪಿಸಿದೆ. ಅತುಲ್ ಸುಭಾಷ್ ಪ್ರಕರಣವನ್ನು ಕೇಂದ್ರೀಕರಿಸಿ ಕಾನೂನುಗಳ ತಿದ್ದಪಡಿಗೆ ಆಗ್ರಹಿಸುವುದು ಸಮಂಜಸ ಅಲ್ಲ ಎಂದು ವಾದಿಸಿದ್ದಾರೆ.
ʻದ ಫೆಡರಲ್ ಕರ್ನಾಟಕʼ ಚರ್ಚೆಯ ಸಾರಾಂಶ ಇಲ್ಲಿದೆ
ಕಾನೂನು ತಿದ್ದುಪಡಿ ಮಾಡಬಾರದು ಎಂದು ಹಿರಿಯ ಪತ್ರಕರ್ತೆ ಶಾಂತಲಾ ಧರ್ಮರಾಜ್ ಅವರು ಅಭಿಪ್ರಾಯ ಪಟ್ಟಿದ್ದಾರೆ. ಇಂದು ಐಪಿಸಿ ಸೆಕ್ಷನ್ 498 ಎ ಇದ್ದರೂ ಹೆಚ್ಚಿನ ಮಹಿಳೆಯರು ಅದನ್ನು ಸದುಪಯೋಗ ಮಾಡಿಕೊಳ್ಳುತ್ತಿಲ್ಲ. ಮಹಿಳೆಯರು ಕೌಟುಂಬಿಕ ದೌರ್ಜನ್ಯಕ್ಕೆ ಒಳಾಗದರೂ ದೂರು ಕೊಡಲು ಹಿಂಜರಿಯುತ್ತಾರೆ. ಎಷ್ಟೋ ಹೆಣ್ಣುಮಕ್ಕಳು ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾಗಿದ್ದರೂ ಕೆಲಸಕ್ಕೆ ಬರುವಾಗ ಮೈತುಂಬಾ ಬಟ್ಟೆ ಹೊದ್ದುಕೊಂಡು ಆಗಿರುವ ಅನ್ಯಾಯವನ್ನು ಮರೆಮಾಚಲು ಯತ್ನಿಸುತ್ತಿದ್ದಾರೆ ಎಂದು ಹೇಳಿದರು.
ಐಟಿ ಉದ್ಯೋಗಿಯಾಗಿರುವ ಪತ್ನಿಯ ಕಾಟಕ್ಕೆ ಬೇಸತ್ತು ಅತುಲ್ ಆತ್ಮಹತ್ಯೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತದೆ. ಟೆಕ್ಕಿಯು ಬರೆದಿಟ್ಟಿರುವ ಡೆತ್‌ನೋಟ್ ಮುಂದಿಟ್ಟುಕೊಂಡು ಕಾನೂನು ತಿದ್ದುಪಡಿ ಬಗ್ಗೆ ಕೆಲವು ಪುರುಷರು ಮಾತನಾಡುತ್ತಿದ್ದಾರೆ. ಆದರೆ ಎಲ್ಲಾ ಮಹಿಳೆಯರು ಐಟಿ ಉದ್ಯೋಗಿಗಳು ಆಗಲು ಸಾಧ್ಯವಿಲ್ಲ. ಮಹಿಳೆ ತನಗಿಂತ ಹೆಚ್ಚಿನ ವೇತನ, ಬಡ್ತಿ ಪಡೆದರೆ ಪುರುಷ ಸಮಾಜ ಅದನ್ನು ಸಹಿಸುವುದಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ಹೆಣ್ಣು ಮಕ್ಕಳು ವಿದ್ಯಾಭ್ಯಾಸದಿಂದ ಹೊರಗುಳಿದು ಚಿಕ್ಕ ವಯಸ್ಸಿನಲ್ಲೇ ಮದುವೆಯಾಗಿ ದೌರ್ಜನ್ಯಗಳನ್ನು ಅನುಭವಿಸುತ್ತಾರೆ. ಅವರಿಗಾಗಿ ಕಾನೂನುಗಳು ಇದ್ದರೂ ಸರಿಯಾಗಿ ಉಪಯೋಗ ಮಾಡಲಾಗುತ್ತಿಲ್ಲ.ಪರಿಸ್ಥಿತಿ ಹೀಗಿರುವಾಗ ಕಾನೂನು ತಿದ್ದುಪಡಿ ಮಾಡಲೇಬಾರದು ಎಂದು ಚರ್ಚೆಯಲ್ಲಿ ಪಾಲ್ಗೊಂಡವರು ಅಭಿಪ್ರಾಯಪಟ್ಟಿದ್ದಾರೆ.
ಬ್ರಾಂಡ್ ಮಾರ್ಕೆಟಿಂಗ್ ಮತ್ತು ಕಮ್ಯೂನಿಕೇಶನ್ ಸ್ಪೆಷಲಿಸ್ಟ್ ಆಗಿರುವ ರೇಷ್ಮಾ ಬಾಲಕೃಷ್ಣ ಮಾತನಾಡಿ, ಇವತ್ತು ಹಲವಾರು ಕಡೆ ಮಹಿಳೆಯರಂತೆ ಪುರುಷರು ಕೂಡ ದೌರ್ಜನ್ಯಕ್ಕೆ ಒಳಗಾಗುತ್ತಾರೆ. ಹಾಗಾಗಿ ಮಹಿಳೆಯರಿಗೂ ಪುರುಷರಿಗೂ ಸಮಾನ ಕಾನೂನು ಜಾರಿಯಾದರೆ ಉತ್ತಮ ಎಂದರು, .
ವಕೀಲೆ ಹಾಗೂ ಹೋರಾಟಗಾರ್ತಿ ರಾಜಲಕ್ಷೀ ಅಂಕಲಗಿ ಅವರು ಮಾತನಾಡಿ, ಮಹಿಳೆಯರ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು, ಅಧ್ಯಯನ ಮಾಡಿ ಮಾಡಿಕೊಂಡಿರುವ ಕಾನೂನು ಜಾರಿಯಲ್ಲಿದೆ. ಕಾನೂನನ್ನು ತಿದ್ದುಪಡಿ ಮಾಡಬೇಕು ಎಂಬುದು ಸುಲಭದ ಮಾತಲ್ಲ. ತಿದ್ದುಪಡಿ ಮಾಡುವುದು ಸರಿಯಾದ ಕ್ರಮವಲ್ಲ. ಸಮಾನ ಕಾನೂನು ಬೇಕೆಂದರೆ ಅದಕ್ಕೆ ಅಧ್ಯಯನ ಮುಖ್ಯ ಹಾಗೂ ಅದಕ್ಕೊಂದು ಅಡಿಪಾಯ ಬೇಕು. ಒಂದು ಪ್ರಕರಣ ಆದ ತಕ್ಷಣವೇ ಕಾನೂನು ಸರಿಯಿಲ್ಲ ಎನ್ನುವುದು ಅಥವಾ ಕಾನೂನು ತಿದ್ದುಪಡಿ ಬಗ್ಗೆ ಮಾತನಾಡುವುದು ಬೇಡ ಎಂದು ಅವರು ಅಭಿಪ್ರಾಯಪಟ್ಟರು.