
'ಗುಂಪುಗಾರಿಕೆ ಇಲ್ಲ' ಎನ್ನುವ ಡಿಕೆಶಿ ಮಾತಿನ ಹಿಂದೆ ಹತಾಶೆಯ ಛಾಯೆ?
ಒಂದು ಕಾಲದಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿ ಪಕ್ಷದ ಪ್ರತಿಯೊಂದು ನಡೆಯನ್ನೂ ನಿಯಂತ್ರಿಸುತ್ತಿದ್ದ ಶಿವಕುಮಾರ್, ಇದೀಗ ತಮ್ಮದೇ ಪಕ್ಷದಲ್ಲಿ, ತಮ್ಮದೇ ಸರ್ಕಾರದ ಅವಧಿಯಲ್ಲಿ ಕೊಂಚ ಏಕಾಂಗಿಯಾಗುತ್ತಿದ್ದಾರೆಯೇ ಎಂಬ ಅನುಮಾನ ಮೂಡುತ್ತಿದೆ.
"ನನ್ನ ಬಳಿ ಯಾವುದೇ ಬಣವಿಲ್ಲ, ಗುಂಪುಗಾರಿಕೆ ನನ್ನ ರಕ್ತದಲ್ಲೇ ಇಲ್ಲ, ನಾನು 140 ಶಾಸಕರ ಅಧ್ಯಕ್ಷ."
ಶುಕ್ರವಾರ ಸದಾಶಿವನಗರದ ತಮ್ಮ ನಿವಾಸದ ಬಳಿ ಮಾಧ್ಯಮಗಳ ಮುಂದೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಡಿದ ಈ ಮಾತುಗಳು, ಮೇಲ್ನೋಟಕ್ಕೆ ಅವರ ಪಕ್ಷನಿಷ್ಠೆ ಮತ್ತು ಶಿಸ್ತಿನ ಸಿಪಾಯಿಯ ಮನೋಭಾವವನ್ನು ಎತ್ತಿ ಹಿಡಿಯುವಂತೆ ಕಂಡರೂ, ರಾಜಕೀಯ ಪಡಸಾಲೆಯಲ್ಲಿ ಇದನ್ನು ಬೇರೆಯದೇ ದೃಷ್ಟಿಕೋನದಿಂದ ನೋಡಲಾಗುತ್ತಿದೆ. ರಾಜ್ಯ ರಾಜಕಾರಣದ ಚಾಣಕ್ಯ, ಕಾಂಗ್ರೆಸ್‌ನ 'ಟ್ರಬಲ್ ಶೂಟರ್' ಎಂದೇ ಬಿಂಬಿತರಾಗಿರುವ ಡಿಕೆಶಿ ಅವರ ಇತ್ತೀಚಿನ ನಡೆ ಮತ್ತು ನುಡಿಗಳಲ್ಲಿ, ಹಿಂದೆಂದೂ ಕಾಣದ ಒಂದು ರೀತಿಯ ಅಸಹಾಯಕತೆ ಅಥವಾ 'ಹತಾಶೆ'ಯ ಛಾಯೆ ಎದ್ದು ಕಾಣುತ್ತಿದೆಯೇ ಎಂಬ ಚರ್ಚೆ ಈಗ ಜೋರಾಗಿದೆ.
ಒಂದು ಕಾಲದಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿ ಪಕ್ಷದ ಪ್ರತಿಯೊಂದು ನಡೆಯನ್ನೂ ನಿಯಂತ್ರಿಸುತ್ತಿದ್ದ ಶಿವಕುಮಾರ್, ಇದೀಗ ತಮ್ಮದೇ ಪಕ್ಷದಲ್ಲಿ, ತಮ್ಮದೇ ಸರ್ಕಾರದ ಅವಧಿಯಲ್ಲಿ ಕೊಂಚ ಏಕಾಂಗಿಯಾಗುತ್ತಿದ್ದಾರೆಯೇ ಎಂಬ ಅನುಮಾನ ಮೂಡುತ್ತಿದೆ. "ನಾನು ಯಾವುದೇ ಬಣದ ನಾಯಕನಲ್ಲ" ಎಂದು ಹೇಳುವ ಮೂಲಕ, ಅವರು ಪರೋಕ್ಷವಾಗಿ ತಮ್ಮ ಬಣವನ್ನೇ ಕಳೆದುಕೊಂಡಿದ್ದಾರೆಯೇ? ಅಥವಾ ಅವರ ಕಟ್ಟಾ ಬೆಂಬಲಿಗರೆಂದು ಗುರುತಿಸಿಕೊಂಡಿದ್ದ ಶಾಸಕರು ಈಗ ಮೆಲ್ಲಗೆ ಸಿದ್ದರಾಮಯ್ಯ ಅವರ ಪಾಳಯದತ್ತ ಜಾರುತ್ತಿದ್ದಾರೆಯೇ?
ಶಸ್ತ್ರತ್ಯಾಗವೇ?
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇತ್ತೀಚೆಗೆ, "ಐದು ವರ್ಷ ನಾನೇ ಸಿಎಂ" ಎಂದು ಆತ್ಮವಿಶ್ವಾಸದಿಂದ ಘೋಷಿಸಿದಾಗ, ಅದಕ್ಕೆ ಪ್ರತಿಯಾಗಿ ಡಿಕೆಶಿ ತೋರಿದ ಪ್ರತಿಕ್ರಿಯೆ ಗಮನಾರ್ಹ. "ಐ ವಿಶ್ ಹಿಮ್ ಆಲ್ ದ ಬೆಸ್ಟ್" ಎನ್ನುವ ಮೂಲಕ ಅವರು ಯುದ್ಧಕ್ಕೂ ಮುನ್ನವೇ ಶಸ್ತ್ರತ್ಯಾಗ ಮಾಡಿದರೇ ಎಂಬ ಪ್ರಶ್ನೆ ಕಾಡುತ್ತಿದೆ. ಹಿಂದೆಲ್ಲಾ ಅಧಿಕಾರ ಹಂಚಿಕೆಯ ಬಗ್ಗೆ ಅಥವಾ ಸಿಎಂ ಬದಲಾವಣೆಯ ಬಗ್ಗೆ ಪ್ರಶ್ನೆ ಬಂದಾಗ, "ಹೈಕಮಾಂಡ್ ತೀರ್ಮಾನ" ಎಂದು ಗುಡುಗುತ್ತಿದ್ದ ಡಿಕೆಶಿ, ಈಗ ಅದೇ ಮಾತನ್ನು ಬಹಳ ಮೃದುವಾಗಿ, ಅನಿವಾರ್ಯತೆಯಿಂದ ಹೇಳುತ್ತಿರುವಂತೆ ಭಾಸವಾಗುತ್ತಿದೆ.
ದೆಹಲಿ ಯಾತ್ರೆ ಮತ್ತು ಹಿಡಿತದ ಪ್ರಶ್ನೆ
ರಾಜ್ಯದಲ್ಲಿ ಸಚಿವ ಸಂಪುಟ ಪುನಾರಚನೆಯ ಮಾತುಗಳು ಕೇಳಿಬರುತ್ತಿದ್ದಂತೆ, ಸಚಿವ ಸ್ಥಾನದ ಆಕಾಂಕ್ಷಿಗಳು ಸಾಲು ಸಾಲಾಗಿ ದೆಹಲಿಗೆ ಹಾರುತ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷರಾಗಿ, ಉಪಮುಖ್ಯಮಂತ್ರಿಯಾಗಿ ಈ ಬೆಳವಣಿಗೆಗಳ ಮೇಲೆ ಡಿಕೆಶಿ ಹಿಡಿತ ಹೊಂದಿರಬೇಕಿತ್ತು. ಆದರೆ, "ಅವರು ಸಿಎಂ ಜೊತೆ ಹೋಗಿರಬಹುದು ಅಥವಾ ತಾವಾಗಿಯೇ ಹೋಗಿರಬಹುದು, ನಾನು ಯಾರನ್ನೂ ತಡೆಯಲು ಆಗಲ್ಲ," ಎಂದು ಕೈಚೆಲ್ಲುವ ಅವರ ಮಾತುಗಳು, ದೆಹಲಿ ಮಟ್ಟದಲ್ಲೂ ಅವರ ಪ್ರಭಾವ ಕುಗ್ಗುತ್ತಿದೆಯೇ ಎಂಬ ಸಂಶಯಕ್ಕೆ ಎಡೆಮಾಡಿಕೊಟ್ಟಿದೆ. ತಮ್ಮ ಗಮನಕ್ಕೆ ಬಾರದೆ ಅಥವಾ ತಮ್ಮ ಒಪ್ಪಿಗೆ ಇಲ್ಲದೆ ಶಾಸಕರು ಹೈಕಮಾಂಡ್ ಅನ್ನು ಭೇಟಿ ಮಾಡುತ್ತಿದ್ದಾರೆ ಎಂದರೆ, ಪಕ್ಷದ ಸಂಘಟನೆಯ ಮೇಲಿನ ಹಿಡಿತ ಸಡಿಲವಾಗುತ್ತಿದೆ ಎಂದೇ ಅರ್ಥೈಸಬಹುದು ಎಂದು ರಾಜಕೀಯ ಕಾರಿಡಾರ್ನಲ್ಲಿ ಚರ್ಚೆಗಳು ಶುರುವಾಗಿವೆ.
'ಡಿನ್ನರ್ ಪಾಲಿಟಿಕ್ಸ್' ಮತ್ತು ಮೌನ ಸಮ್ಮತಿ
ಸತೀಶ್ ಜಾರಕಿಹೊಳಿ ಸೇರಿದಂತೆ ಪ್ರಬಲ ನಾಯಕರು ನಡೆಸುತ್ತಿರುವ 'ಡಿನ್ನರ್ ಮೀಟಿಂಗ್'ಗಳು ರಾಜ್ಯ ಕಾಂಗ್ರೆಸ್‌ನಲ್ಲಿ ಹೊಸ ಸಂಚಲನ ಮೂಡಿಸಿವೆ. ಈ ಸಭೆಗಳ ಅಜೆಂಡಾ ಏನೆಂಬುದು ಗುಟ್ಟಾಗಿ ಉಳಿದಿಲ್ಲ. ಮೂರು-ನಾಲ್ಕು ಡಿಸಿಎಂ ಹುದ್ದೆಗಳ ಸೃಷ್ಟಿ ಮತ್ತು ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯ ಕೂಗು ಈ ಸಭೆಗಳ ಪ್ರಮುಖ ವಿಷಯ. ಇದರ ಬಗ್ಗೆ ಕೇಳಿದಾಗ, "ಎರಡೂವರೆ ವರ್ಷಗಳಿಂದ ಡಿನ್ನರ್ ನಡೆಯುತ್ತಲೇ ಇದೆ, ಇನ್ನೂ ನಡೆಯಲಿ ಬಿಡಿ," ಎಂದು ಡಿಕೆಶಿ ವ್ಯಂಗ್ಯವಾಗಿ ಉತ್ತರಿಸಿದರೂ, ಆ ಮಾತಿನಲ್ಲಿ ಅಸಮಾಧಾನದ ಹೊಗೆಯಾಡುತ್ತಿದೆ. ತಮ್ಮದೇ ಕುರ್ಚಿಗೆ ಕುತ್ತು ತರುವ ಬೆಳವಣಿಗೆಗಳನ್ನು ತಡೆಯಲಾಗದ ಸ್ಥಿತಿ ನಿರ್ಮಾಣವಾಗಿದೆಯೇ?
140ರ ಲೆಕ್ಕಾಚಾರ
"ನಾನು 140 ಶಾಸಕರ ಅಧ್ಯಕ್ಷ" ಎಂದು ಅವರು ಪದೇ ಪದೇ ಪುನರುಚ್ಚರಿಸುತ್ತಿರುವುದು, ಬಹುಶಃ ತಾವಿನ್ನೂ ಆ ಹುದ್ದೆಯಲ್ಲಿದ್ದೇನೆ ಎಂದು ತಮಗೆ ತಾವೇ, ಮತ್ತು ಹೈಕಮಾಂಡ್‌ಗೆ ನೆನಪಿಸುವ ಪ್ರಯತ್ನದಂತೆ ಕಾಣುತ್ತಿದೆ. ಲೋಕಸಭಾ ಚುನಾವಣೆಯ ಫಲಿತಾಂಶದ ನಂತರ ಮತ್ತು ಮೈಸೂರು ಚಲೋ ಪಾದಯಾತ್ರೆಯ ಯಶಸ್ಸಿನ ನಂತರ ಸಿದ್ದರಾಮಯ್ಯ ಅವರ ಕೈ ಮೇಲಾಗಿರುವುದು ಸ್ಪಷ್ಟ. ಈ ಬದಲಾದ ರಾಜಕೀಯ ಸಮೀಕರಣದಲ್ಲಿ, ಡಿಕೆಶಿ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡುತ್ತಿರುವಂತೆ ಕಾಣುತ್ತಿದೆ.

