ಅಧಿಕಾರಿ ಆತ್ಮಹತ್ಯೆ: ತಪ್ಪಿತಸ್ಥರಿಗೆ ಶಿಕ್ಷೆ ಎಂದ ಸಚಿವ ನಾಗೇಂದ್ರ; ಪುರಾವೆ ಬೇಕೆಂದ ಗೃಹ ಸಚಿವ
x

ಅಧಿಕಾರಿ ಆತ್ಮಹತ್ಯೆ: ತಪ್ಪಿತಸ್ಥರಿಗೆ ಶಿಕ್ಷೆ ಎಂದ ಸಚಿವ ನಾಗೇಂದ್ರ; ಪುರಾವೆ ಬೇಕೆಂದ ಗೃಹ ಸಚಿವ


ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮದ ಅಧೀಕ್ಷಕ ಚಂದ್ರಶೇಖರನ್.ಪಿ (52) ಆತ್ಮಹತ್ಯೆ ಪ್ರಕರಣವನ್ನು ಈಗಾಗಲೇ ಸಿಐಡಿ ತನಿಖೆಗೆ ವಹಿಸಲಾಗಿದೆ. ಸಿಐಡಿ ಅಧಿಕಾರಿಗಳು ಸೂಕ್ಷ್ಮವಾಗಿ ತನಿಖೆ ಮಾಡುತ್ತಿದ್ದಾರೆ. ತನಿಖಾ ವರದಿ ಬಂದ ತಕ್ಷಣ ಕಾನೂನು ರೀತಿಯಲ್ಲಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಸಚಿವ ಬಿ.ನಾಗೇಂದ್ರ ತಿಳಿಸಿದ್ದಾರೆ.

ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ʻʻನಮ್ಮ ಸರಕಾರದ ಹಣ ನಾವು ದುರುಪಯೋಗ ಆಗಲು ಬಿಡುವುದಿಲ್ಲ. ದುರುಪಯೋಗವಾಗಿರುವ ಅಂದಾಜು 89 ಕೋಟಿ ರೂ.ಗಳನ್ನು ಈಗಾಗಲೇ ಮುಖ್ಯ ಖಾತೆಗೆ ವಾಪಸ್ ಪಡೆಯಲು ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ಇಲ್ಲಿ ಯಾರನ್ನೂ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲʼʼ ಎಂದು ಹೇಳಿದ್ದಾರೆ.

ʻʻಸರಕಾರದ ಪೂರ್ವ ಅನುಮತಿ ಪಡೆದು ಬ್ಯಾಂಕ್ ಅಧಿಕಾರಿಗಳ ವಿರುದ್ಧ ನಮ್ಮ ಅಧಿಕಾರಿಗಳು ಎಫ್‌ಐಆರ್ ದಾಖಲು ಮಾಡಿದ್ದಾರೆ. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ, ಸಿಇಒ ಹಾಗೂ ನಿರ್ದೇಶಕರು ಸೇರಿದಂತೆ ಒಟ್ಟು 6 ಮಂದಿ ಬ್ಯಾಂಕ್ ಅಧಿಕಾರಿಗಳ ಮೇಲೆ ಎಫ್‌ಐಆರ್ ದಾಖಲು ಮಾಡಲಾಗಿದೆ. ಎಫ್‌ಎಸ್ಎಲ್ ಹಾಗೂ ಸಿಐಡಿ ತನಿಖಾ ವರದಿ ಬಂದ ತಕ್ಷಣ ಕಾನೂನು ರೀತಿಯಲ್ಲಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಲು ಕ್ರಮ ಕೈಗೊಳ್ಳಲಾಗುವುದುʼʼ ಎಂದು ನಾಗೇಂದ್ರ ಹೇಳಿದರು.

ಪ್ರರಕರಣಕ್ಕೆ ಸಂಬಂಧಿಸಿದಂತೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಜೆ.ಜಿ.ಪದ್ಮನಾಭ್ ಹಾಗೂ ಲೆಕ್ಕಾಧಿಕಾರಿ ಪರಶುರಾಮ್ ಜಿ.ದುರ್ಗಣ್ಣನವರ್ ಅವರನ್ನು ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ, ತಕ್ಷಣದಿಂದಲೆ ಜಾರಿಗೆ ಬರುವಂತೆ ಅಮಾನತುಗೊಳಿಸಿ ಸರಕಾರ ಆದೇಶ ಹೊರಡಿಸಿದೆ.

ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಡಾ.ಕೆ.ಆರ್.ರಾಜ್‌ಕುಮಾರ್ ಅವರನ್ನು ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರ ಹುದ್ದೆಗೆ ಹೆಚ್ಚುವರಿ ಪ್ರಭಾರದಲ್ಲಿರಿಸಿ ಸರಕಾರ ಆದೇಶ ಹೊರಡಿಸಿದೆ.

ಸಚಿವರ ತಲೆದಂಡಕ್ಕೆ ಪುರಾವೆಗಳು ಬೇಕಲ್ಲವೇ?: ಗೃಹ ಸಚಿವರ ಪ್ರಶ್ನೆ

ಅಕ್ರಮ ಪ್ರಕರಣದ ಹಿನ್ನೆಲೆ ಬಿಜೆಪಿ ನಾಯಕರು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಸಚಿವ ಬಿ.ನಾಗೇಂದ್ರ ಅವರ ರಾಜೀನಾಮೆಗೆ ಆಗ್ರಹಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಗೃಹ ಸಚಿವ ಡಾ. ಜಿ ಪರಮೇಶ್ವರ್, ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದೆ. ಆದರೆ ಈ ಸಂದರ್ಭದಲ್ಲಿ ಸಚಿವರ ತಲೆದಂಡ ಮಾಡಬೇಕು ಎಂಬ ಆಗ್ರಹಕ್ಕೆ ಪುರಾವೆಗಳು ಬೇಕಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ಡೆತ್ ನೋಟ್ ನಲ್ಲಿ ಸಚಿವರು ಮೌಖಿಕ ಆದೇಶ ಕೊಟ್ಟಿದ್ದಾರೆ ಎಂದು ಉಲ್ಲೇಖ ಮಾಡಲಾಗಿದೆ. ನಾನು ಡೆತ್ ನೋಟ್ ನೋಡಿಲ್ಲ, ಅದನ್ನು ಪೊಲೀಸರು ಪರಿಶೀಲನೆ ಮಾಡುತ್ತಾರೆ. ಡೆತ್ ನೋಟ್ ಸತ್ಯಾಸತ್ಯತೆ ಪರಿಶೀಲನೆ ಮಾಡಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದರು.

Read More
Next Story