IPL Cricket | ಐಪಿಎಲ್‌ ಕ್ರಿಕೆಟ್‌ ಬೆಟ್ಟಿಂಗ್‌; ಸಿಸಿಬಿ ಪೊಲೀಸರಿಂದ 1.15 ಕೋಟಿ ರೂ. ಜಪ್ತಿ
x

IPL Cricket | ಐಪಿಎಲ್‌ ಕ್ರಿಕೆಟ್‌ ಬೆಟ್ಟಿಂಗ್‌; ಸಿಸಿಬಿ ಪೊಲೀಸರಿಂದ 1.15 ಕೋಟಿ ರೂ. ಜಪ್ತಿ

ಟಾಸ್‌ನಿಂದ ಹಿಡಿದು ಇಡೀ ಪಂದ್ಯದವರೆಗೆ ವಿವಿಧ ಅಂಶಗಳ ಮೇಲೆ ಬೆಟ್ಟಿಂಗ್‌ ಅಪ್ಲಿಕೇಶನ್‌ಗಳು ಬಳಕೆದಾರರಿಗೆ ಅವಕಾಶ ಮಾಡಿಕೊಟ್ಟಿವೆ. ಇವು ಬಾಲ್‌ ಟು ಬಾಲ್‌ ಅಥವಾ ಕೇವಲ ಒಂದು ಬಾಲ್‌ಗಾಗಿ ನಡೆಯುವುದರಿಂದ ಪಂಟರ್‌ಗಳು ಈ ಖಾತೆಗಳನ್ನು 10-20 ನಿಮಿಷಗಳಿಗಷ್ಟೇ ಖರೀದಿಸುತ್ತಿದ್ದರು.


ಐಪಿಎಲ್ ಪಂದ್ಯಗಳ ವೇಳೆ ಬೆಟ್ಟಿಂಗ್ ದಂಧೆ ಭರ್ಜರಿಯಾಗಿ ನಡೆಯುತ್ತಿದೆ. ಅಂತೆಯೇ, ಬೆಂಗಳೂರಿನ ಸಿಸಿಬಿ ಪೊಲೀಸರು ಒಂದು ವಾರದ ಅವಧಿಯಲ್ಲಿ ಬೆಟ್ಟಿಂಗ್‌ನಲ್ಲಿ ತೊಡಗಿದ್ದವರ ಮೇಲೆ ದಾಳಿ ನಡೆಸಿ, ಐದು ಪ್ರಕರಣ ದಾಖಲಿಸಿಕೊಂಡು1.15 ಕೋಟಿ ರೂಪಾಯಿ ವಶಪಡಿಸಿಕೊಂಡಿದ್ದಾರೆ.

ಆರ್​​ಸಿಬಿ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯದ ದಿನ (ಏ.10) 86 ಲಕ್ಷ ರೂ. ವಶಪಡಿಸಿಕೊಳ್ಳಲಾಗಿದೆ. ಪಾರ್ಕರ್, ರಿಲೆಕ್ಸ್, ದುಬೈ ಎಕ್ಸ್‌ಚೇಂಜ್‌, ಲೋಟಸ್ ಮತ್ತು ಬಿಗ್‌ಬುಲ್‌ 24/7 ಸೇರಿದಂತೆ ಹಲವಾರು ಸಂಶಯಾಸ್ಪದ ನಕಲಿ ವೆವ್‌ಸೈಟ್‌ಗಳು ಮತ್ತು ಮೊಬೈಲ್ ಫೋನ್ ಅಪ್ಲಿಕೇಶನ್‌ಗಳನ್ನು ಪತ್ತೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಸಿದ್ಧ ಬ್ರ್ಯಾಂಡ್‌ಗಳ ಹೆಸರಿನಲ್ಲಿ ಈ ಆ್ಯಪ್, ವೆವ್‌ಸೈಟ್‌ಗಳನ್ನು ತೆರೆಯಲಾಗುತ್ತಿದೆ. ಸಾವಿರಾರು ಜನರು ಈ ಅಪ್ಲಿಕೇಶನ್‌ಗಳಿಗೆ ಲಾಗಿನ್ ಆಗುತ್ತಾರೆ. ಟಾಸ್‌ನಿಂದ ಹಿಡಿದು ಇಡೀ ಪಂದ್ಯದವರೆಗೆ ವಿವಿಧ ಅಂಶಗಳ ಮೇಲೆ ಬೆಟ್ಟಿಂಗ್‌ ಅಪ್ಲಿಕೇಶನ್‌ಗಳು ಬಳಕೆದಾರರಿಗೆ ಅವಕಾಶ ಮಾಡಿಕೊಟ್ಟಿವೆ ಎಂದು ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ.

ಅಪ್ಲಿಕೇಶನ್‌ನಲ್ಲಿ ಬೆಟ್ಟಿಂಗ್‌ಗೆ ಡಿಜಿಟಲ್ ನಾಣ್ಯ ಬಳಸಲಾಗುತ್ತದೆ. ಇದನ್ನು ‘ಚಿಪ್ಸ್’ ಎಂದು ಕರೆಯುತ್ತಾರೆ. ಅಪ್ಲಿಕೇಶನ್‌ಗಳು ಪ್ರೀಮಿಯಂ ಮತ್ತು ಸಾಮಾನ್ಯ ಮಟ್ಟದ ಬೆಟ್ಟಿಂಗ್ ಸಹ ನೀಡುತ್ತವೆ. ಮಧ್ಯವರ್ತಿಗಳು ಪಂಟರ್‌ಗಳಿಗೆ ಪ್ರೀಮಿಯಂ ಖಾತೆಗಳನ್ನು ನೀಡುತ್ತಾರೆ ಎಂದು ಬಂಧಿತ ರಾಮಕೃಷ್ಣ ಎನ್ ಎಂಬ ಮಧ್ಯವರ್ತಿ ಸಿಸಿಬಿ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾನೆ.

ಈತ ಕೂಡ ಬೆಟ್ಟಿಂಗ್ ಅಪ್ಲಿಕೇಶನ್‌ಗಳು ಮತ್ತು ‘ಚಿಪ್’ಗಳಿಗಾಗಿ ಪ್ರೀಮಿಯಂ ಖಾತೆಗಳ ವಿತರಣೆಯ ಮೇಲ್ವಿಚಾರಣೆ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಬೆಟ್ಟಿಂಗ್‌ ದಂಧೆಯು ಬಾಲ್-ಟು-ಬಾಲ್ ಅಥವಾ ಕೇವಲ ಒಂದು ಬಾಲ್‌ಗಾಗಿ ನಡೆಯುವುದರಿಂದ ಪಂಟರ್‌ಗಳು ಈ ಖಾತೆಗಳನ್ನು 10-20 ನಿಮಿಷಗಳಿಗಷ್ಟೇ ಖರೀದಿಸುತಿದ್ದರು ಎಂದು ಸಿಸಿಬಿಯ ವಿಶೇಷ ವಿಚಾರಣಾ ವಿಭಾಗದ ಅಧಿಕಾರಿ ತಿಳಿಸಿರುವುದಾಗಿ ವರದಿ ಹೇಳಿದೆ.

Read More
Next Story