IPL 2025| ಈ ಸಲ ಕಪ್ ನಮ್ದು ; RCB ಗೆ ಅಭಿನಂದನೆಗಳ ಮಹಾಪೂರ
x

IPL 2025| ಈ ಸಲ ಕಪ್ ನಮ್ದು ; RCB ಗೆ ಅಭಿನಂದನೆಗಳ ಮಹಾಪೂರ

ಐಪಿಎಲ್ ಫೈನಲ್ ಪಂದ್ಯದಲ್ಲಿ ಪಂಜಾಬ್ ತಂಡವನ್ನು ಬಗ್ಗುಬಡಿದು ಕಪ್ ಮುಡಿಗೇರಿಸಿಕೊಂಡ ಆರ್ ಸಿ ಬಿ ಗೆ ಅಭಿನಂದನೆಗಳ ಮಹಪೂರವೇ ಹರಿದುಬರುತ್ತಿದೆ.


ಐಪಿಎಲ್ -2025 ಟೂರ್ನಿಯಲ್ಲಿ ರಣ ರೋಚಕ ಗೆಲುವು ಸಾಧಿಸಿ 'ಈ ಸಲ ಕಪ್ ನಮ್ದು' ಎಂದ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡದ ಸಾಧನೆಗೆ ಗಣ್ಯರಿಂದ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ಅದರಲ್ಲೂ ಕರ್ನಾಟಕದಲ್ಲಿ ಆರ್ ಸಿ ಬಿ ಗೆಲುವಿನ ವಿಜಯೋತ್ಸವಗಳು ಇಮ್ಮಡಿಗೊಂಡಿವೆ.

ಐಪಿಎಲ್ ಫೈನಲ್ ಪಂದ್ಯದಲ್ಲಿ ಪಂಜಾಬ್ ತಂಡವನ್ನು ಬಗ್ಗುಬಡಿದು ಕಪ್ ಮುಡಿಗೇರಿಸಿಕೊಂಡ ಆರ್‌ಸಿಬಿ ತಂಡಕ್ಕೆ ಅಭಿನಂದನೆಗಳು. ಇಡೀ ಪಂದ್ಯಾವಳಿಯಲ್ಲಿ ಒಂದು ತಂಡವಾಗಿ ಸಂಘಟಿತ ಪ್ರದರ್ಶನ ನೀಡುವ ಮೂಲಕ ಕೋಟ್ಯಂತರ ಅಭಿಮಾನಿಗಳ ಕನಸನ್ನು ಆರ್‌ಸಿಬಿಯ ಹುಡುಗರು ನನಸಾಗಿಸಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಿನಂದನೆ ಸಲ್ಲಿಸಿದ್ದಾರೆ.

ಆರ್‌ಸಿಬಿಯ ವಿಜಯದಲ್ಲಿ ವಿರಾಟ್ ಕೋಹ್ಲಿಯ 18 ವರ್ಷಗಳ ಕಾಲದ ತಪಸ್ಸಿದೆ, ನಿಷ್ಠೆ, ಬದ್ಧತೆಯಿದೆ. ಬೌಲಿಂಗ್, ಬ್ಯಾಟಿಂಗ್, ಫೀಲ್ಡಿಂಗ್ ಹೀಗೆ ಎಲ್ಲಾ ವಿಭಾಗದಲ್ಲೂ ಆರ್‌ಸಿಬಿಯ ಪ್ರತಿ ಆಟಗಾರರು ಚಾಂಪಿಯನ್ ಗಳಂತೆ ಪ್ರದರ್ಶನ ನೀಡಿದ್ದಾರೆ ಎನ್ನುವುದರಲ್ಲಿ ಅನುಮಾನವೇ ಇಲ್ಲ ಎಂದು ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ಜೂನ್ 3 ಇತಿಹಾಸ ಸೃಷ್ಟಿಸಿದ ದಿನ.

ಅಂತಿಮವಾಗಿ, ಈ ಸಲ ಕಪ್ ನಮ್ದೆ ಎಂದು ಆರ್ ಸಿ ಬಿ ಹುಡುಗರು ಗೆದ್ದು ಬಿಗಿರುವುದು ಸಂಭ್ರಮದ ವಿಚಾರ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅಭಿನಂದನೆ ಸಲ್ಲಿಸಿದ್ದಾರೆ.

ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ತಂಡ ಸ್ಪೂರ್ತಿಯಿಂದ ಆಡಿದ ಪಟಿದಾರ್ ಪಡೆಯನ್ನು ಹಾಗೂ ವಿಶೇಷವಾಗಿ ಹಿರಿಯ ಆಟಗಾರ ವಿರಾಟ್ ಕೊಹ್ಲಿ ಅವರನ್ನು ಅಭಿನಂದಿಸಿದ್ದಾರೆ.

ಆರೂವರೆ ಕೋಟಿ ಕನ್ನಡಿಗರ ಕನಸನ್ನು ನನಸು ಮಾಡಿದ ಪಟಿದಾರ್ ಪಡೆಯ ಶ್ರೇಷ್ಠ ಕ್ರಿಕೆಟ್ ಕನ್ನಡಿಗರು ಮಾತ್ರವಲ್ಲದೆ ಇಡೀ ಜಗತ್ತಿನ ಕ್ರಿಕೆಟ್ ಪ್ರೇಮಿಗಳ ಮನಸೂರೆಗೊಂಡಿದೆ. ಕರ್ನಾಟಕದ ಕ್ರಿಕೆಟ್ ಇತಿಹಾಸದಲ್ಲಿಯೇ ಈ ಗೆಲುವು ಮಹೋನ್ನತ ಮೈಲುಗಲ್ಲು ಎಂಬುದು ನನ್ನ ಅಭಿಪ್ರಾಯ. ಮುಖ್ಯವಾಗಿ 18 ವರ್ಷಗಳಷ್ಟು ಸುದೀರ್ಘ ಕಾಲ ತಂಡ ಶ್ರೇಯಸ್ಸಿಗಾಗಿ ತಮ್ಮನ್ನು ಸಮರ್ಪಣೆ ಮಾಡಿಕೊಂಡ ಹಿರಿಯ ಆಟಗಾರ ವಿರಾಟ್ ಕೊಹ್ಲಿ ಅವರನ್ನು ಅಭಿನಂದಿಸುತ್ತೇನೆ ಎಂದು ಸಚಿವರು ಸಂತಸ ವ್ಯಕ್ತಪಡಿಸಿದ್ದಾರೆ.

ಆರ್ ಸಿ ಬಿ ಗೆಲುವಿಗೆ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಅಭಿನಂದನೆ ಸಲ್ಲಿಸಿದ್ದಾರೆ.

18 ವರ್ಷಗಳ ಕನಸು ನನಸು ಮಾಡಿದ ಆರ್ ಸಿ ಬಿ ತಂಡದ ಸಾಧನೆ ಶ್ಲಾಘನೀಯ ಎಂದು ಸಂಭ್ರಮ ಆಚರಿಸಿದರು.

ಈ ಒಂದು ಶುಭ ದಿನ, ಶುಭ ಘಳಿಗೆಗಾಗಿ ಇಡೀ ಕರ್ನಾಟಕ ಹಂಬಲಿಸಿತ್ತು. ಇದನ್ನು ಸಾಕಾರಗೊಳಿಸಿದ ರಜತ್ ಪಟೀದಾರ್ ಹಾಗೂ ವಿರಾಟ್ ಕೊಹ್ಲಿ ಅವರ ತಂಡಕ್ಕೆ ಶುಭ ಹಾರೈಸಿದ್ದಾರೆ.

Read More
Next Story